Karwar | ಅಕ್ರಮ ಹಣ ವರ್ಗಾವಣೆ ಪ್ರಕರಣ : ಉದ್ಯಮಿಗೆ ಸೇರಿದ ನಾಲ್ಕು ಫ್ಲಾಟ್‌ಗಳಲ್ಲಿ ಈಡಿ ಶೋಧ

ಕಾರವಾರ: ಗೋವಾದಲ್ಲಿ ನಡೆದಿರುವ ಭೂ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ಇದೀಗ ಕಾರವಾರಕ್ಕೂ ವಿಸ್ತರಿಸಿದ್ದು, ಜಾರಿ ನಿರ್ದೇಶನಾಲಯ (ಈಡಿ) ಅಧಿಕಾರಿಗಳು ನಗರದಲ್ಲಿ ಮಹತ್ವದ ಶೋಧ ಕಾರ್ಯ ನಡೆಸಿದ್ದಾರೆ.
ನಗರದ ಕೋಡಿಬಾಗದ ಅಬಕಾರಿ ಕಚೇರಿ ಎದುರಿನ ಅಪಾರ್ಟ್‌ಮೆಂಟ್‌ನಲ್ಲಿ ಒಂದೇ ಉದ್ಯಮಿಗೆ ಸೇರಿದ ನಾಲ್ಕು ಫ್ಲಾಟ್‌ಗಳನ್ನು ಈಡಿ ಅಧಿಕಾರಿಗಳು ಹಲವು ಗಂಟೆಗಳ ಕಾಲ ಪರಿಶೀಲಿಸಿದರು. ಗೋವಾದಿಂದ ಆಗಮಿಸಿದ್ದ ತನಿಖಾ ತಂಡ ದಾಖಲೆಗಳು ಹಾಗೂ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪರಿಶೀಲಿಸಿದೆ.
ಆಸ್ತಿಗಳ ಖರೀದಿಗೆ ಬಳಸಿದ ಹಣದ ಮೂಲವೇನು?, ಪ್ರಕರಣದಲ್ಲಿನ ಅಕ್ರಮ ಹಣದ ವಹಿವಾಟಿನೊಂದಿಗೆ ಈ ಫ್ಲಾಟ್‌ಗಳಿಗೆ ಯಾವುದೇ ಸಂಬಂಧವಿದೆಯೇ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ಸಂಗ್ರಹಿಸಿದ್ದಾರೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ಆರೋಪಿ ಶಿವಮೊಗ್ಗ ಮೂಲದ ಸುಲೇಮಾನ್ ಖಾನ್ ಅಲಿಯಾಸ್ ಸಿದ್ದಿಕ್ ಖಾನ್ ಎಂದು ಹೇಳಲಾಗಿದ್ದು, ಆತ ಹಿಂದೆ ಕಾರವಾರದಲ್ಲಿ ಸುಮಾರು ಐದು ವರ್ಷ ವಾಸವಿದ್ದು ನಂತರ ಗೋವಾಕ್ಕೆ ತೆರಳಿದ್ದ ಎನ್ನಲಾಗಿದೆ. ಗೋವಾದಲ್ಲಿ ಮೃತರ ಆಸ್ತಿಗಳನ್ನು ನಕಲಿ ದಾಖಲೆಗಳ ಮೂಲಕ ಕಬಳಿಸಿದ ಆರೋಪದಡಿ ಗೋವಾ ಎಸ್‌ಐಟಿ 2024ರಲ್ಲಿ ಆತನನ್ನು ಬಂಧಿಸಿತ್ತು. ಜೈಲಿನಿಂದ ಪರಾರಿಯಾದ ಬಳಿಕ ಕೇರಳದಲ್ಲಿ ಮತ್ತೆ ಬಂಧಿಸಲಾಗಿತ್ತು.
ಎಸ್‌ಐಟಿ ತನಿಖೆಯಲ್ಲಿ ಕಾರವಾರದಲ್ಲಿರುವ ಆತನ ಆಸ್ತಿಗಳ ಮೇಲೂ ಕ್ರಮ ಕೈಗೊಳ್ಳಲಾಗಿತ್ತು. ಬಳಿಕ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆಯ ಅಂಶ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಈಡಿ ತನಿಖೆ ಆರಂಭಿಸಿ, ಜುಲೈನಲ್ಲಿ ಸಿದ್ದಿಕ್ ಖಾನ್‌ನನ್ನು ಬಂಧಿಸಿತ್ತು.
ಸುಮಾರು 300 ಕೋಟಿ ರೂ. ಮೌಲ್ಯದ 25 ಹೆಕ್ಟೇರ್ ಭೂಮಿಯನ್ನು ಅಕ್ರಮ ಹಣದ ಮೂಲಕ ಖರೀದಿಸಿರುವ ಆರೋಪ ಕೂಡ ತನಿಖೆಯಲ್ಲಿದೆ. ಈ ಹಿನ್ನೆಲೆಯಲ್ಲಿ ಕಾರವಾರದಲ್ಲಿನ ನಾಲ್ಕು ಫ್ಲಾಟ್‌ಗಳ ಮೇಲೆ ನಡೆದಿರುವ ಈಡಿ ಶೋಧವನ್ನು ಪ್ರಕರಣದ ತನಿಖೆಯ ಮಹತ್ವದ ಹಂತವೆಂದು ಪರಿಗಣಿಸಲಾಗಿದೆ.
ಫ್ಲಾಟ್‌ಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಹಣಕಾಸಿನ ವಹಿವಾಟಿನ ಮಾಹಿತಿಯನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಆಸ್ತಿಗಳ ವಹಿವಾಟಿನ ಕುರಿತು ಮುಂದಿನ ತನಿಖೆ ಮುಂದುವರಿಸಿದ್ದಾರೆ.






