ಮಾಲಿನ್ಯ, ಮದ್ಯ ಹಾಗೂ ಮಾದಕವಸ್ತುಗಳಿಂದ ಸಮಾಜ ಮುಕ್ತವಾಗಲಿ: ಅಬ್ದುಸ್ಸಲಾಮ್ ಪುತ್ತಿಗೆ
‘ಸೌಹಾರ್ದ–ಸಂವಾದ–ಸ್ನೇಹ’ ತಂಝೀಮ್ ಸ್ನೇಹಾಕೂಟ

ಭಟ್ಕಳ : ಪರಸ್ಪರ ಭಿನ್ನಾಭಿಪ್ರಾಯ ಮತ್ತು ಅನುಮಾನಗಳನ್ನು ಬದಿಗಿಟ್ಟು, ಸಮಾಜವನ್ನು ಮಾಲಿನ್ಯ, ಮದ್ಯ ಹಾಗೂ ಮಾದಕವಸ್ತುಗಳ ವ್ಯಸನದಿಂದ ಮುಕ್ತಗೊಳಿಸಿ ಸೌಹಾರ್ದಯುತ ವಾತಾವರಣ ನಿರ್ಮಿಸಲು ಎಲ್ಲ ಸಂಘ-ಸಂಸ್ಥೆಗಳು ಕೈಜೋಡಿಸಬೇಕು ಎಂದು ವಾರ್ತಾಭಾರತಿಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ ಕರೆ ನೀಡಿದರು.
ಇಲ್ಲಿನ ಜಾಲಿ ಬೀಚ್ನ ಕೋಕೋಸ್ ರಿಸೋರ್ಟ್ನಲ್ಲಿ ಮಜ್ಲಿಸೆ ಇಸ್ಲಾಹ್-ವ-ತಂಝೀಮ್ ವತಿಯಿಂದ ರವಿವಾರ ಆಯೋಜಿಸಿದ್ದ ‘ಸೌಹಾರ್ದ–ಸಂವಾದ–ಸ್ನೇಹ’ ಆಶಯದ ತಂಝೀಮ್ ಸ್ನೇಹಾಕೂಟದಲ್ಲಿ ಅವರು ಮಾತನಾಡಿದರು.
ಹತ್ತಿರವಿದ್ದರೂ ಪರಸ್ಪರ ಅಪರಿಚಿತರಂತೆ ಬದುಕುವ ವಾತಾವರಣ ಬದಲಾಗಬೇಕು. ಸಮಾಜದಲ್ಲಿ ಜಗಳವಾಡಲು ಹಲವು ಕಾರಣಗಳಿರಬಹುದು. ಆದರೆ, ಸಾಮಾಜಿಕ ಕೆಡುಕುಗಳನ್ನು ನಿವಾರಿಸಲು ಎಲ್ಲ ಸಂಘ-ಸಂಸ್ಥೆಗಳು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಊರನ್ನು ಮಾಲಿನ್ಯ, ಮದ್ಯ ಹಾಗೂ ಮಾದಕವಸ್ತುಗಳಿಂದ ಮುಕ್ತಗೊಳಿಸುವ ಪ್ರಯತ್ನಗಳಿಗೆ ಪ್ರವಾದಿ ಮುಹಮ್ಮದ್ (ಸ) ಅವರ ಜೀವನ ಸಂದೇಶ ಪ್ರೇರಣೆಯಾಗಬೇಕು ಎಂದು ಹೇಳಿದರು.
ಅಲಿಮಿಯಾ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಮೌಲಾನ ಮುಹಮ್ಮದ್ ಇಲಿಯಾಸ್ ನದ್ವಿ ಮಾತನಾಡಿ, ಪ್ರವಾದಿ ಮುಹಮ್ಮದ್ (ಸ) ಅವರು ಮನುಷ್ಯನ ಘನತೆ, ನ್ಯಾಯ, ಸಮಾನತೆ ಮತ್ತು ಸನ್ನಡತೆಗೆ ಮಹತ್ವ ನೀಡಿದ್ದಾರೆ. ತನ್ನ ಸಹೋದರನಿಗಾಗಿ ತಾನು ಬಯಸುವುದನ್ನೇ ಬಯಸುವವರೆಗೆ ಒಬ್ಬನ ನಂಬಿಕೆ ಪರಿಪೂರ್ಣವಾಗುವುದಿಲ್ಲ ಎಂಬುದು ಇಸ್ಲಾಂನ ಮಾನವೀಯ ಸಂದೇಶವಾಗಿದೆ ಎಂದು ಹೇಳಿದರು.
ಭಟ್ಕಳದ ಡಿವೈಎಸ್ಪಿ ಎಸ್.ವಿ. ಗಿರೀಶ್ ಮಾತನಾಡಿ, ವಿವಿಧ ಧರ್ಮ ಮತ್ತು ವರ್ಗಗಳ ಮುಖಂಡರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಸೌಹಾರ್ದ ಕಾರ್ಯಕ್ರಮ ಆಯೋಜಿಸಿರುವುದು ಸ್ವಾಗತಾರ್ಹ. ಇಂತಹ ಅನೌಪಚಾರಿಕ ಸಮಾಗಮಗಳು ಪರಸ್ಪರ ಅನುಮಾನಗಳನ್ನು ನಿವಾರಿಸಲು ನೆರವಾಗುತ್ತವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ವಿಶ್ವಾಸ ಅಗತ್ಯ ಎಂದು ತಿಳಿಸಿದರು.
ಮುರುಡೇಶ್ವರದಲ್ಲಿ ರೈಲಿಗೆ ಸಿಲುಕುವ ಅಪಾಯದಲ್ಲಿದ್ದ ವ್ಯಕ್ತಿಯೊಬ್ಬರನ್ನು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಗಣಪತಿ ನಾಯ್ಕ ಅವರಿಗೆ ‘ತಂಝೀಮ್ ಗೌರವ ಪುರಸ್ಕಾರ’ ನೀಡಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಂಝೀಮ್ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರು ಅವರು ಪುರಸ್ಕಾರ ಪ್ರದಾನ ಮಾಡಿದರು. ಸಮಾಜಸೇವಕ ಆದಂ ಪಣಂಬೂರು ಅಭಿನಂದನಾ ಪತ್ರ ವಾಚಿಸಿದರು.
ತಂಝೀಮ್ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಪೊಲಿಟಿಕಲ್ ಪ್ಯಾನೆಲ್ ಸಂಚಾಲಕ ಸೈಯದ್ ಇಮ್ರಾನ್ ಲಂಕಾ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ಪತ್ರಕರ್ತ ಎಂ.ಆರ್.ಮಾನ್ವಿ ಕಾರ್ಯಕ್ರಮ ನಿರೂಪಿಸಿದರು. ಸುಹೇಲ್ ಇಕ್ಬಾಲ್ ವಂದಿಸಿದರು.
ಕಾರ್ಯಕ್ರಮದಲ್ಲಿ ತಂಝೀಮ್ ಪ್ರಧಾನ ಕಾರ್ಯದರ್ಶಿ ಮೌಲಾನ ಅಝೀಝುರ್ ರಹ್ಮಾನ್ ನದ್ವಿ ರುಕ್ನುದ್ದೀನ್, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಮಿತಿ ಸಂಚಾಲಕ ಅಬ್ದುಲ್ ಮಾಜಿದ್ ರುಕ್ನುದ್ದೀನ್ ಹಾಗೂ ಭಟ್ಕಳ ನಗರಸಭೆ ಆಯುಕ್ತ ಬಾಬಾಸಾಹೇಬ್ ಮಾನೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ವೈದ್ಯರು, ವಕೀಲರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.






