ಭಟ್ಕಳದಲ್ಲಿ ವಿದೇಶಿ ನಕಲಿ ಕರೆನ್ಸಿ ಚಲಾವಣೆ ಆರೋಪ: ಮಂಗಳೂರು ಮೂಲದ ರವೀನ್ ಪ್ರಕಾಶ್ ಬಂಧನ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಬಂದರ್ ರಸ್ತೆಯಲ್ಲಿ ನಕಲಿ ವಿದೇಶಿ ಕರೆನ್ಸಿ ಚಲಾವಣೆ ನಡೆಸಿದ ಆರೋಪದಲ್ಲಿ ಮಂಗಳೂರು ಮೂಲದ ರವೀನ್ ಪ್ರಕಾಶ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕೃತ್ಯಕ್ಕೆ ಸಂಬಂಧಿಸಿ ಒಂದು ಕಾರು, ಮೊಬೈಲ್ ಫೋನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನ (UAE) ದಿರ್ಹಮ್ ಕರೆನ್ಸಿಯ 1000, 500, ಮತ್ತು 100 ಮುಖಬೆಲೆಯ ಒಟ್ಟು 17 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ಭಟ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಭಟ್ಕಳದ ಬಂದರ್ ರಸ್ತೆಯಲ್ಲಿ ಶಂಕಾಸ್ಪದ ಚಲನವಲನದ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು, ತನಿಖೆ ಆರಂಭಿಸಿದರು. ಈ ವೇಳೆ, ಮಂಗಳೂರಿನಿಂದ ಭಟ್ಕಳಕ್ಕೆ ಆಗಮಿಸಿದ್ದ ರವೀನ್ ಪ್ರಕಾಶ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದಾಗ, ಆತನ ಬಳಿಯಿಂದ ಯುಎಇ ದಿರ್ಹಮ್ ನ ನಕಲಿ ಕರೆನ್ಸಿಗಳು ದೊರೆತಿವೆ. ತನಿಖೆಯ ಸಂದರ್ಭದಲ್ಲಿ, ರವೀನ್ ಪ್ರಕಾಶ್ನಿಂದ ಒಂದು ಕಾರು ಮತ್ತು ಮೊಬೈಲ್ ಫೋನ್ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಇತರ ಶಂಕಿತರ ಭಾಗಿತ್ವದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.







