ಮುರ್ಡೇಶ್ವರ : ಹೆತ್ತವರ ಪಕ್ಕದಲ್ಲೇ ಮಲಗಿದ್ದ ಮಗು ನಾಪತ್ತೆ; ದೂರು ದಾಖಲು

ಸಾಂದರ್ಭಿಕ ಚಿತ್ರ Photo: chatgpt
ಭಟ್ಕಳ, ಮೇ 31: ಮುರ್ಡೇಶ್ವರದಲ್ಲಿ ತಂದೆ–ತಾಯಿಯ ಪಕ್ಕದಲ್ಲೇ ಮಲಗಿದ್ದ ಎರಡು ವರ್ಷದ ಮಗು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.
ಗುಜರಿ ವಸ್ತುಗಳನ್ನು ಸಂಗ್ರಹಿಸಿ ಜೀವನ ಸಾಗಿಸುತ್ತಿರುವ ಮಹಾರಾಷ್ಟ್ರದ ಸೊಲ್ಲಾಪುರ ಮೂಲದ ಶೋಭಾ ಕುಮಾರಿ ಅವರ ಕುಟುಂಬವು ಕೆಲಸದ ನಿಮಿತ್ತ ವಿವಿಧ ಊರುಗಳಲ್ಲಿ ಸಂಚರಿಸುತ್ತಿದ್ದು, ಸುಮಾರು ಎರಡು ವಾರಗಳ ಹಿಂದೆ ಮುರ್ಡೇಶ್ವರಕ್ಕೆ ಬಂದಿತ್ತು. ಕುಟುಂಬವು ರೈಲು ನಿಲ್ದಾಣದ ಸಮೀಪದ ರಸ್ತೆ ಬದಿಯ ಗೂಡಂಗಡಿಯೊಂದರ ಮುಂದೆ ತಾತ್ಕಾಲಿಕವಾಗಿ ವಾಸ್ತವ್ಯ ಹೂಡಿತ್ತು ಎನ್ನಲಾಗಿದೆ.
ಶನಿವಾರ ರಾತ್ರಿ ದಂಪತಿ ತಮ್ಮ ಮಗುವಿನೊಂದಿಗೆ ಊಟ ಮುಗಿಸಿ ಮಲಗಿದ್ದರು. ಮುಂಜಾನೆ ಸುಮಾರು 3 ಗಂಟೆ ವೇಳೆಗೆ ಎಚ್ಚರವಾದಾಗ ಮಗು ತಮ್ಮ ನಡುವೆಯೇ ಮಲಗಿರುವುದನ್ನು ಗಮನಿಸಿದ್ದರು. ಆದರೆ ಬೆಳಿಗ್ಗೆ 6 ಗಂಟೆ ಸುಮಾರಿಗೆ ಎಚ್ಚರಗೊಂಡಾಗ ಮಗು ಕಾಣೆಯಾಗಿರುವುದು ತಿಳಿದುಬಂದಿದೆ.
ತಾವು ಗಾಢ ನಿದ್ರೆಯಲ್ಲಿದ್ದ ವೇಳೆ ಅಪರಿಚಿತರು ಮಗುವನ್ನು ಕರೆದೊಯ್ದಿರಬಹುದು ಎಂದು ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕುಟುಂಬದವರು ಹಾಗೂ ಸ್ಥಳೀಯರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವ್ಯಾಪಕ ಹುಡುಕಾಟ ನಡೆಸಿದರೂ ಮಗುವಿನ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಶೋಭಾ ಕುಮಾರಿ ಅವರು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಮುರ್ಡೇಶ್ವರ ಪೊಲೀಸರು, ನಾಪತ್ತೆಯಾದ ಮಗುವಿನ ಪತ್ತೆಗಾಗಿ ತನಿಖೆ ಕೈಗೊಂಡಿದ್ದು, ಅಪಹರಣ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.






