ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ನರಸಿಂಹ ಅಡಿ ಆಯ್ಕೆ

ಶಿರಸಿ: ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯ ಮತ ಎಣಿಕೆ ರವಿವಾರ ಮುಕ್ತಾಯಗೊಂಡಿದ್ದು, ನರಸಿಂಹ ಅಡಿ ಅವರು 59 ಮತಗಳನ್ನು ಪಡೆದು ಹೊಸ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಅವರ ಪ್ರತಿಸ್ಪರ್ಧಿ ಪ್ರದೀಪ ರಾಮಚಂದ್ರ ಶೆಟ್ಟಿ 50 ಮತಗಳನ್ನು ಪಡೆದು ಪರಾಜಿತರಾಗಿದ್ದಾರೆ.
ಶಿರಸಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶಾಂತಿಯುತ ವಾತಾವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಮಾರುತಿ ನಾಯ್ಕ (ಹೊನ್ನಾವರ) 91 ಮತ, ಬಸವರಾಜ ವಿ. ಪಾಟೀಲ (ಮುಂಡಗೋಡ) 78 ಮತ, ಸುಮಂಗಲಾ ಹೊನ್ನೆಕೊಪ್ಪ (ಶಿರಸಿ) 63 ಮತ ಪಡೆದು ಆಯ್ಕೆಯಾಗಿದ್ದಾರೆ. ನರಸಿಂಹ ಸಾತೊಡ್ಡಿ (46 ಮತ) ಈ ಹಂತದಲ್ಲಿ ಸೋತಿದ್ದಾರೆ.
ಬೆಳಿಗ್ಗೆಯಿಂದಲೇ ಮತದಾನ ಪ್ರಕ್ರಿಯೆ ಪ್ರಾರಂಭವಾಗಿ, ಮಧ್ಯಾಹ್ನದ ವೇಳೆಗೆ ಮತ ಎಣಿಕೆ ಪೂರ್ಣಗೊಂಡಿತು. ಫಲಿತಾಂಶ ಘೋಷಣೆ ವೇಳೆ ಯಾವುದೇ ಅಶಾಂತಿಯ ಘಟನೆಗಳು ಸಂಭವಿಸಲಿಲ್ಲ.
ಅವಿರೋಧ ಆಯ್ಕೆಗಳು:
ಈ ಹಿಂದಿನ ಹಂತದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ರಾಘವೇಂದ್ರ ಬೆಟ್ಟಕೊಪ್ಪ, ಖಜಾಂಚಿಯಾಗಿ ರಾಜೇಂದ್ರ ಶಿಂಗನಮನೆ, ರಾಜ್ಯ ಕಾರ್ಯಕಾರಿಣಿ ಸದಸ್ಯರಾಗಿ ವಿಠ್ಠಲದಾಸ ಕಾಮತ್, ಕಾರ್ಯದರ್ಶಿಗಳಾಗಿ ಜೆ.ಆರ್. ಸಂತೋಷಕುಮಾರ್, ಪ್ರಭಾವತಿ ಗೋವಿ, ಅನಂತ ದೇಸಾಯಿ (ಜೋಯಿಡಾ) ಹಾಗೂ ಕಾರ್ಯಕಾರಿಣಿ ಸದಸ್ಯರಾಗಿ ಸಂದೇಶ ಭಟ್ (ಬೆಳಖಂಡ), ಪ್ರವೀಣ ಹೆಗಡೆ (ಕೊಂಬೆಮನೆ), ರವಿ ಹೆಗಡೆ (ಗಡಿಹಳ್ಳಿ), ಜಯರಾಜ ಗೋವಿ, ಫಯಾಜ್ ಮುಲ್ಲಾ, ಶಾಂತೇಶ್ ಬೆನಕನಕೊಪ್ಪ, ಸತೀಶ್ ತಾಂಡೇಲ, ಸುಧೀರ್ ಕಡ್ನೀರ್, ಶ್ರೀಧರ ಹೆಗಡೆ ಮತ್ತು ಹರೀಶ್ ಅವರು ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾ ಪ್ರಕ್ರಿಯೆಯನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಅಶೋಕ ಹಾಸ್ಯಗಾರ ಮತ್ತು ಸಹಾಯಕ ರಘುಪತಿ ಯಾಜಿ ನಡೆಸಿಕೊಟ್ಟರು. ಮತದಾನ ಸಂದರ್ಭದಲ್ಲಿ ಆರ್.ಪಿ. ಹೆಗಡೆ ಮತ್ತು ಅಶ್ವಿನಿ ಗೌಡ ಸಹಕಾರ ನೀಡಿದರು.







