ಭಟ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆ: ಎಸ್.ಡಿ.ಪಿ.ಐ. ಪ್ರತಿಭಟನೆ

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಅಸಮರ್ಪಕ ಕಾಮಗಾರಿ, ರಸ್ತೆಯ ಅವ್ಯವಸ್ಥೆ ಮತ್ತು ಇದರಿಂದಾಗಿ ಸಂಭವಿಸುತ್ತಿರುವ ಪ್ರಾಣಹಾನಿಯನ್ನು ಖಂಡಿಸಿ, ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ.) ಭಟ್ಕಳದಲ್ಲಿ ಪ್ರತಿಭಟನೆ ನಡೆಸಿತು.
ಐ.ಆರ್.ಬಿ. ಗುತ್ತಿಗೆದಾರರು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್.ಎಚ್.ಎ.ಐ.)ದ ಬೇಜವಾಬ್ದಾರಿತನ ದಿಂದ ಅಮಾಯಕರ ಪ್ರಾಣಕ್ಕೆ ಕುತ್ತು ಬಂದಿದೆ ಎಂದು ಆರೋಪಿಸಿ, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಎಸ್.ಡಿ.ಪಿ.ಐ. ಆಗ್ರಹಿಸಿದೆ.
ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ. ಮುಖಂಡ ತೌಸೀಫ್ ಬ್ಯಾರಿ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆಯಿಂದ ದಿನನಿತ್ಯದ ಅಪಘಾತಗಳು ಸಂಭವಿಸುತ್ತಿವೆ ಎಂದು ದೂರಿದರು. ಇತ್ತೀಚೆಗೆ ಈಶ್ವರ್ ನಾಯ್ಕ ಎಂಬುವವರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಇದು ರಸ್ತೆಯ ಕಾಮಗಾರಿಯಲ್ಲ, ಐ.ಆರ್.ಬಿ.ಯವರು ನಮ್ಮನ್ನು ಕೊಲೆ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ದೀಪಗಳು, ಬೈಕ್ ಪಾರ್ಕಿಂಗ್ ಸ್ಥಳಗಳು ಮತ್ತು ಸೂಚನಾ ಫಲಕಗಳ ಕೊರತೆ ಯಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. 2013ರಲ್ಲಿ ಆರಂಭವಾದ ಕಾಮಗಾರಿಯು 2025ರಲ್ಲೂ ಅಪೂರ್ಣ ವಾಗಿದ್ದು, 70% ಕೆಲಸ ಪೂರ್ಣಗೊಂಡ ನಂತರವೇ ಟೋಲ್ ಸಂಗ್ರಹಿಸಬೇಕೆಂಬ ನಿಯಮವಿದ್ದರೂ, ಅದಕ್ಕೂ ಮುನ್ನವೇ ಟೋಲ್ ವಸೂಲಿಯಾಗುತ್ತಿದೆ. ರಸ್ತೆಯ ಗುಂಡಿಗಳಿಂದ ವಾಹನ ಸವಾರರು ಮತ್ತು ಶಾಲಾ ಮಕ್ಕಳಿಗೆ ತೊಂದರೆಯಾಗಿದ್ದು, ಭಟ್ಕಳದಲ್ಲಿ ಟ್ರಾಫಿಕ್‌ನಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಸಿಲುಕುವಂತಾಗಿದೆ. ಕುಮಟಾ ಮತ್ತು ಹೊನ್ನಾವರ ಜನರಿಗೆ ಟೋಲ್ ವಿನಾಯಿತಿ ಇದ್ದರೆ, ಭಟ್ಕಳದ ಜನರಿಗೆ ಶಿರೂರು ಟೋಲ್‌ನಲ್ಲಿ ಯಾವುದೇ ರಿಯಾಯಿತಿ ಇಲ್ಲ, ಇದನ್ನು ಎಸ್.ಡಿ.ಪಿ.ಐ. ಹೆದ್ದಾರಿ ಪ್ರಾಧಿಕಾರದವರು ಮಾಡುತ್ತಿರುವ ಲೂಟಿಯಾಗಿದೆ ಎಂದು ಕರೆದಿದ್ದಾರೆ
ಎಸ್.ಡಿ.ಪಿ.ಐ. ಉಪವಿಭಾಗಾಧಿಕಾರಿಗಳಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಈ ಕೆಳಗಿನ ಬೇಡಿಕೆ ಗಳನ್ನು ಒತ್ತಾಯಿಸಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು 10 ದಿನಗಳಲ್ಲಿ ಪೂರ್ಣಗೊಳಿಸುವುದು. ಅಪಘಾತದಲ್ಲಿ ಮೃತಪಟ್ಟ ಈಶ್ವರ ನಾಯ್ಕ ಕುಟುಂಬಕ್ಕೆ 20 ಲಕ್ಷ ರೂ. ಪರಿಹಾರ. ಐ.ಆರ್.ಬಿ. ಕಂಪನಿಯ ವಿರುದ್ಧ ಕಾನೂನು ಕ್ರಮ. ಶಿರೂರು ಟೋಲ್‌ನಲ್ಲಿ ಭಟ್ಕಳ ಜನರಿಗೆ ಉಚಿತ ಪ್ರವೇಶ ಅಥವಾ ಟೋಲ್ ಮುಚ್ಚುವುದು.
“ಈ ಬೇಡಿಕೆಗಳು 10 ದಿನಗಳಲ್ಲಿ ಈಡೇರದಿದ್ದರೆ, ಉತ್ತರ ಕನ್ನಡದಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು” ಎಂದು ಎಸ್.ಡಿ.ಪಿ.ಐ. ಎಚ್ಚರಿಕೆ ನೀಡಿದೆ. “ಅಪಘಾತದ ನಂತರ ರಸ್ತೆಗೆ ಪ್ಯಾಚ್‌ವರ್ಕ್ ಮಾಡಿರುವುದು ಕಣ್ಣಿಗೆ ಮಣ್ಣೆರಚುವ ಕೆಲಸ” ಎಂದು ಪಕ್ಷವು ಆಕ್ಷೇಪಿಸಿದೆ.







