ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ ಚುನಾವಣಾ ಫಲಿತಾಂಶ ಪ್ರಕಟ

ಭಟ್ಕಳ: ಭಟ್ಕಳದ ಪ್ರತಿಷ್ಠಿತ ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ನಿರ್ದೇಶಕ ಮಂಡಳಿಯ 11 ಮತ ಕ್ಷೇತ್ರದ ಚುನಾವಣೆಯು ಭಾನುವಾರ ದಿ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ನಡೆಯಿತು. ಒಟ್ಟು 15 ನಿರ್ದೇಶಕ ಮಂಡಳಿಯ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ 4 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿದ್ದರೆ, ಉಳಿದ 11 ಸ್ಥಾನಗಳಿಗಾಗಿ ಭಾರೀ ಪೈಪೋಟಿಯ ನಡುವೆ ಮತದಾನ ಮತ್ತು ಎಣಿಕೆ ಪ್ರಕ್ರಿಯೆ ನಡೆಸಲಾಯಿತು.
ಉತ್ತರ ಕನ್ನಡ ಸಾಮಾನ್ಯ ಕ್ಷೇತ್ರದಲ್ಲಿ ಶ್ರೀಕಾಂತ ನಾರಾಯಣ ನಾಯ್ಕ 680 ಮತ, ಪದ್ಮನಾಭ ರಾಮಕೃಷ್ಣ ಪೈ 644 ಮತ, ಅಬ್ದುಲ್ ಖಾಲಿಕ್ ಅಬ್ದುಲ್ ಹಾದಿ ಸೌದಾಗರ್ 631 ಮತ, ವಸಂತ ತಿಮಯ್ಯ ದೇವಾಡಿಗ 589 ಮತ, ಶ್ರೀಧರ ಭೈರಪ್ಪ ನಾಯ್ಕ 574 ಮತ, ರಮೇಶ ಶುಕ್ರ ನಾಯ್ಕ 561 ಮತ, ರಾಮ ತಿಮ್ಮಣ್ಣ ನಾಯ್ಕ 500 ಮತ ಗಳಿಸಿ ಜಯಶಾಲಿಯಾದರು. ಉಡುಪಿ ಜಿಲ್ಲೆ ಸಾಮಾನ್ಯ ಕ್ಷೇತ್ರದಲ್ಲಿ ತುಳಸದಾಸ ಮಾಸ್ತಿ ಮೊಗೇರ 361 ಮತ, ಮೀಸಲಾತಿ ಹಿಂದುಳಿದ ವರ್ಗ "ಬಿ" ಕ್ಷೇತ್ರದಲ್ಲಿ ಮನ್ಯೂಯಲ್ ಎಂ. ಲಿಮಾ 1135 ಮತ, ಪರಿಶಿಷ್ಟ ಜಾತಿ ಮೀಸಲಾತಿ ಕ್ಷೇತ್ರದಲ್ಲಿ ಗಣಪತಿ ಗೋಯ್ದ ಮೊಗೇರ 867 ಮತ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಕ್ಷೇತ್ರದಲ್ಲಿ ಸಂತೋಷ ನಾಗಯ್ಯ ಗೊಂಡ 897 ಮತ ಪಡೆದು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ರವಿವಾರ ಬೆಳಗ್ಗೆಯಿಂದಲೇ ಬ್ಯಾಂಕಿನ ಶೇರುದಾರರು ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದರಲ್ಲದೆ, ಸಂಜೆ 5 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಈ ಚುನಾವಣೆಯಲ್ಲಿ ವಿಶೇಷವೆಂದರೆ, ಹಿಂದಿನ ನಿರ್ದೇಶಕ ಮಂಡಳಿಯ ಒಬ್ಬರನ್ನು ಹೊರತುಪಡಿಸಿ, ಉಳಿದ ಸದಸ್ಯರನ್ನು ಶೇರುದಾರರು ಬದಲಾಯಿಸಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದಾರೆ.
ಪಕ್ಷೇತರ ಅಭ್ಯರ್ಥಿ ಶ್ರೀಕಾಂತ ನಾಯ್ಕ ಭರ್ಜರಿ ಜಯಭೇರಿ: ಈ ಚುನಾವಣೆಯಲ್ಲಿ ಭಾರೀ ಗಮನ ಸೆಳೆದಿರುವುದು ಪಕ್ಷೇತರ ಅಭ್ಯರ್ಥಿ ಶ್ರೀಕಾಂತ ನಾಯ್ಕ ಅವರ ಭರ್ಜರಿ ಗೆಲುವು. ಯಾವುದೇ ತಂಡಕ್ಕೆ ಸೇರದೇ ಪಕ್ಷೇತರರಾಗಿ ಸ್ಪರ್ಧಿಸಿದ ಶ್ರೀಕಾಂತ ನಾಯ್ಕ 680 ಮತ ಗಳಿಸಿ, ಅತ್ಯಧಿಕ ಮತಗಳೊಂದಿಗೆ ವಿಜಯಶಾಲಿ ಆಗಿದ್ದಾರೆ. ಅವರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವುದಲ್ಲದೆ, ಹಲವಾರು ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಭಟ್ಕಳದ ಅಭಿವೃದ್ಧಿಗೆ ಶ್ರಮಿಸುತ್ತಿರುವ ವ್ಯಕ್ತಿ. ಅವರ ಗೆಲುವಿನ ಖುಷಿಯೊಂದಿಗೆ, ಅಭಿಮಾನಿಗಳು ಹೂವಿನ ಹಾರ ಹಾಕಿ, ತೆರೆದ ಜೀಪ್‌ನಲ್ಲಿ ಭವ್ಯ ವಿಜಯೋತ್ಸವ ರ್ಯಾಲಿ ನಡೆಸಿದರು.
ಅವಿರೋಧವಾಗಿ ಆಯ್ಕೆಯಾದ ಸದಸ್ಯರು: ಮೀಸಲಾತಿ ಹಿಂದುಳಿದ ವರ್ಗ "ಅ" – ಸುರೇಶ ಭಾಸ್ಕರ್ ಪೂಜಾರಿ, ಉತ್ತರ ಕನ್ನಡ ಮಹಿಳಾ ಮೀಸಲಾತಿ – ಮೆಹಬೂಬಿ ಬಾಬಾಲಾಲ್ ಸಾಹೇಬ್ ಪಟೇಲ್, ಉತ್ತರ ಕನ್ನಡ ಮಹಿಳಾ ಮೀಸಲಾತಿ – ಬೀನಾ ಮಂಕಾಳ್ ವೈದ್ಯ, ದಕ್ಷಿಣ ಕನ್ನಡ ಸಾಮಾನ್ಯ ಕ್ಷೇತ್ರ – ಮೊಹಮ್ಮದ್ ಅಯುಬ್ ಹಮ್ಜಾ
ಭಟ್ಕಳ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಈ ಚುನಾವಣೆಯಲ್ಲಿ ಜನತೆ ತಮ್ಮ ಮತದಾನದಿಂದ ಹೊಸ ನಿರ್ಧಾರ ತೆಗೆದುಕೊಂಡಿದ್ದು, ಮುಂದಿನ ದಿನಗಳಲ್ಲಿ ಹೊಸ ನಿರ್ದೇಶಕರಿಗೆ ಅವರ ಕರ್ತವ್ಯ ನಿರ್ವಹಣೆಯಲ್ಲಿ ಯಶಸ್ಸು ಲಭಿಸಲಿ ಎಂಬ ಹಾರೈಕೆ ವ್ಯಕ್ತವಾಗಿದೆ.







