ಮೀನುಗಾರಿಕಾ ಬೋಟ್ ಮುಳುಗಡೆ: ಆರು ಮಂದಿ ಪ್ರಾಣಾಪಾಯದಿಂದ ಪಾರು

ಭಟ್ಕಳ: ಮೀನುಗಾರಿಕೆ ಮಾಡಿ ಬರುತ್ತಿದ್ದ ವೇಳೆ ಬೋಟ್ ಮುಳುಗಡೆಗೊಂಡು ಆರು ಮಂದಿ ಮೀನುಗಾರರು ಅಪಾಯದಿಂದ ಪಾರಾದ ಘಟನೆ ಭಟ್ಕಳ ಬಂದರಿನಲ್ಲಿ ನಡೆದಿದೆ.
ಈ ದುರಂತದಲ್ಲಿ ಬೋಟ್ ಸೇರಿದಂತೆ ಬಲೆ, ಮೀನುಗಾರಿಕಾ ಸಾಮಗ್ರಿಗಳು ನೀರಿಗೆ ಬಿದ್ದು, ಸುಮಾರು 60 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಾಳೆಹಿತ್ತಲಿನ ಸುರೇಶ ಮತ್ತು ಪತ್ನಿ ಅಶ್ವಿನಿ ಅವರಿಗೆ ಸೇರಿದ ವಿನಾಶ್ ಬೋಟ್ ಇದಾಗಿದೆ. ಭಟ್ಕಳದ ಮಾವಿನಕುರುವೆಯ ಉಮೇಶ್ ಮೊಗೇರ ಬೋಟ್ ಚಾಲಕನಾಗಿದ್ದು, ಫೆ.2ರಂದು ಐದು ಮಂದಿ ಮೀನುಗಾರರನ್ನು ಕರೆದುಕೊಂಡು ಮೀನುಗಾರಿಕೆಗೆ ತೆರಳಿದ್ದರು.
ಫೆ.5ರಂದು ಬೆಳಿಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ಮುಗಿಸಿ ವಾಪಾಸಾಗುವ ಸಂದರ್ಭ, ಬೋಟ್ ಕಲ್ಲು ತಾಗಿ ಅದರ ಅಡಿಭಾಗ ಒಡೆದು ನೀರು ನುಗ್ಗಿ ಮುಳುಗಲು ಆರಂಭಿಸಿತು. ಈ ವೇಳೆ ಸಮೀಪದಲ್ಲಿದ್ದ ನಾಡದೋಣಿಯ ರಾಮಾ ಮೊಗೇರ ಮತ್ತು ಭರತ್ ಮೊಗೇರ ಧೈರ್ಯದಿಂದ ಮುನ್ನಡೆದು ಐದು ಮಂದಿಯನ್ನೂ ರಕ್ಷಿಸಿದರು.
ಈ ಘಟನೆಯಲ್ಲಿ ಬೋಟ್‌ನ ಜೊತೆಗೆ ಬಲೆ, ಪೋಲೋಕ್, ಡೈನಮ್, ಬ್ಯಾಟರಿ, ಗುಂಡು ಮುಂತಾದ ಮೀನುಗಾರಿಕಾ ಸಾಮಗ್ರಿಗಳು ನಷ್ಟವಾಗಿದ್ದು, ಇದರ ಮೊತ್ತವನ್ನು ಸುಮಾರು 50-60 ಲಕ್ಷ ರೂಪಾಯಿಯಾಗಿ ಅಂದಾಜಿಸಲಾಗಿದೆ ಎಂದು ಬೋಟ್ ಚಾಲಕ ಉಮೇಶ್ ಮೊಗೇರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.







