ಭಟ್ಕಳ: ‘ಮತ್ಸ್ಯ- ಸಂಜೀವಿನಿ’ ಯೋಜನೆ ಜಾರಿ

ಭಟ್ಕಳ: ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮೀನುಗಾರ ಮಹಿಳೆಯರ ಉತ್ಪಾದಕ ಕಂಪನಿಯನ್ನು ರಚಿಸುವ ಮೂಲಕ ಮೀನುಗಾರಿಕೆ ಮೌಲ್ಯ ಸರಪಳಿಯನ್ನು ಅಭಿವೃದ್ಧಿಪಡಿ ಸಲು ‘ಮತ್ಸ್ಯ-ಸಂಜೀವಿನಿ’ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ.
ಈ ನವೀನ ಮತ್ತು ಪ್ರಭಾವಶಾಲಿ ಮತ್ಸ್ಯ ಸಾಕಾಣಿಕೆ ಆಧಾರಿತ ಯೋಜನೆಯು ಗ್ರಾಮೀಣ ಮೀನುಗಾರ ಸಮುದಾಯಗಳ ಸುಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಮೀನುಗಾರಿಕೆ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಭಟ್ಕಳದ ಅಳವೆಕೋಡಿಯ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ಶನಿವಾರ ನಡೆದ ‘ಜಲಶ್ರೀ ಮತ್ಸ್ಯ ಸಂಜೀವಿನಿ ಮಹಿಳಾ ಕಿಸಾನ್ ಪ್ರೊಡ್ಯುಸರ್ ಕಂಪನಿ ಲಿಮಿಟೆಡ್’ನ ಪ್ರಥಮ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. “ಇದು ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದ ನನ್ನ ಜಿಲ್ಲೆಯ ಐದು ತಾಲೂಕುಗಳಲ್ಲಿ ಜಾರಿಗೊಂಡಿದೆ. ಮಹಿಳೆಯರಿಗಾಗಿ ವಿವರವಾದ ಯೋಜನಾ ವರದಿಯನ್ನು ತಯಾರಿಸಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಈ ಯೋಜನೆಯು ಆಹಾರ ಮತ್ತು ಪೌಷ್ಟಿ ಕಾಂಶದ ಭದ್ರತೆಯನ್ನು ಸುಧಾರಿಸುವುದು, ಸಮುದ್ರಾಹಾರ ಮೌಲ್ಯ ಸರಪಳಿಯನ್ನು ಬಲಪಡಿಸುವುದು, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಉತ್ತೇಜಿಸುವುದು ಮತ್ತು ಮೀನುಗಾರ ಮಹಿಳೆಯರ ಆದಾಯವನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ” ಎಂದು ಸಚಿವರು ತಿಳಿಸಿದರು.
‘ಜಲಶ್ರೀ ಮತ್ಸ್ಯ ಸಂಜೀವಿನಿ ಮಹಿಳಾ ಕಿಸಾನ್ ಉತ್ಪಾದಕರ ಕಂಪನಿ ಲಿಮಿಟೆಡ್’ ಎಂಬ ಈ ಕಂಪನಿಯು 6,000ಕ್ಕೂ ಹೆಚ್ಚು ಮಹಿಳಾ ಶೇರುದಾರರನ್ನು ಒಳಗೊಂಡಿದ್ದು, ಇದು ದೇಶದ ಮೊದಲ ಮಹಿಳಾ ಸ್ವಾಮ್ಯದ ಮೀನುಗಾರಿಕೆ ಉತ್ಪಾದಕರ ಕಂಪನಿಯಾಗಿದೆ. ಈ ಕಂಪನಿಯು ತಾಜಾ ಮತ್ತು ಒಣಗಿಸಿದ ಮೀನಿನ ಸಂಗ್ರಹಣೆ, ಪ್ರಾಥಮಿಕ ಸಂಸ್ಕರಣೆ, ಮೌಲ್ಯವರ್ಧಿತ ಉತ್ಪನ್ನಗಳ ಉತ್ಪಾದನೆ, ಮಾರುಕಟ್ಟೆ ಜೋಡಣೆ, ಜಲಕೃಷಿ ಪ್ರವಾಸೋದ್ಯಮ, ಬೈವಾಲ್ವ್ ಕೃಷಿ (ಮಸ್ಸೆಲ್ಸ್/ಸಿಂಪಿ), ಕಡಲಕಳೆ ಕೃಷಿ, ಪಂಜರ ಕೃಷಿ ಮತ್ತು ಹಿತ್ತಲಿನ ಅಲಂಕಾರಿಕ ಮೀನು ಸಾಕಾಣಿಕೆಯಂತಹ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಿದೆ.
ಉತ್ತರ ಕನ್ನಡ ಜಿಲ್ಲೆಯ ಐದು ತಾಲೂಕುಗಳಲ್ಲಿ ತಾಜಾ ಮೀನು ಸಂಗ್ರಹಣಾ ಕೇಂದ್ರಗಳು, ಶೈತ್ಯಾಗಾರ ಘಟಕಗಳು, ಆಧುನಿಕ ಮೀನು ಒಣಗಿಸುವ ಘಟಕಗಳು, ಮೀನುಗಾರ ಮಹಿಳೆಯರ ಉತ್ಪಾದಕರ ಕಂಪನಿಯ ಕಚೇರಿ, ಮಂಜುಗಡ್ಡೆ ಉತ್ಪಾದನಾ ಘಟಕಗಳು, ಜಲಕೃಷಿ ಪ್ರವಾಸೋದ್ಯಮ ಚಟುವಟಿಕೆಗಳು ಮತ್ತು ತೂಕದ ಯಂತ್ರಗಳಿಗೆ ಭೂಮಿ/ಸೈಟ್‌ಗಳನ್ನು ಗುರುತಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ. ಈ ಯೋಜನೆಯ ಮೂಲ ಸಮೀಕ್ಷೆಯನ್ನು ಆಯಾ ತಾಲೂಕಿನ ಆಯ್ದ ಗ್ರಾಮ ಪಂಚಾಯಿತಿ ಒಕ್ಕೂಟದ ಕೃಷಿ ಸಖಿ ಮತ್ತು ಪಶು ಸಖಿಯರ ಮೂಲಕ ನಡೆಸಲು ಸೂಚಿಸಲಾಗಿದೆ.
ಇದಕ್ಕಾಗಿ 13 ಸದಸ್ಯರನ್ನೊಳಗೊಂಡ ನಿರ್ದೇಶಕರ ಮಂಡಳಿಯನ್ನು ರಚಿಸಿ, ಕಂಪನಿಯ ನೋಂದಣಿಗೆ ವಿವಿಧ ಹಂತದ ಸಿದ್ಧತೆಗಳನ್ನು ಜಿಲ್ಲಾ ಅಭಿಯಾನ ಘಟಕಕ್ಕೆ ಸೂಚಿಸಲಾಗಿದೆ. “ಈ ಯೋಜನೆಯು ಮೀನುಗಾರ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆಯನ್ನು ಒದಗಿಸುವ ಜೊತೆಗೆ ಗ್ರಾಮೀಣ ಆರ್ಥಿಕತೆ ಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಇದು ದೇಶಕ್ಕೆ ಮಾದರಿಯಾಗಲಿದೆ” ಎಂದು ಸಚಿವ ವೈದ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಐದು ತಾಲೂಕುಗಳಿಂದ ಸಾವಿರಾರು ಮೀನುಗಾರರು, ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ ದೈಮನೆ, ಸಿಎಒ ಈಶ್ವರ ಕಾಂದೂ, ಅಪರ ಅಭಿಯಾನ ನಿರ್ದೇಶಕ ಅರ್ಜುನ್ ಒಡೇಯರ್, ಯೋಜನಾ ನಿರ್ದೇಶಕ ಕರೀಮ್ ಅಸಾದಿ, ಇಒ ವೆಂಕಟೇಶ ನಾಯಕ, ಸ್ಥಳೀಯ ಮೀನುಗಾರ ಮುಖಂಡ ರಾಮಾ ಮೊಗೇರ, ಜಲಶ್ರೀ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಮತ್ತು ಇತರರು ಉಪಸ್ಥಿತರಿ ದ್ದರು. ಕಾರ್ಯಕ್ರಮವನ್ನು ರಮ್ಯಾ ನಾಯಕ, ಕರೀಮ್ ಅಸಾದಿ ಮತ್ತು ವೆಂಕಟೇಶ ನಾಯಕ ನಿರ್ವಹಿಸಿದರು.







