ಭಟ್ಕಳ: ಹಳೆ ವಿದ್ಯಾರ್ಥಿಯಿಂದ ಶಾಲೆಗೆ ಉಚಿತ ನೋಟ್ ಬುಕ್ ಗಳ ವಿತರಣೆ

ಭಟ್ಕಳ: ಭಟ್ಕಳ ತಾಲೂಕಿನ ಮಣ್ಕುಳಿಯ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಮಣ್ಕುಳಿ ನಿವಾಸಿ, ಪ್ರಸಕ್ತ ಮುಂಬೈನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಶ್ರೀಧರ ಆಚಾರ್ಯ ತಾವು ಕಲಿತ ಶಾಲೆಯ ವಿದ್ಯಾರ್ಥಿಗಳಿಗೆ ಪ್ರತೀ ವರ್ಷದಂತೆ ಈ ಬಾರಿಯೂ ನೋಟ್ ಬುಕ್ ಗಳನ್ನು ವಿತರಿಸಿದರು.
ಶ್ರೀಧರ ಆಚಾರ್ಯ ಕಳೆದ ಹತ್ತು ವರ್ಷಗಳಿಂದ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ಗಳನ್ನು ಉಚಿತವಾಗಿ ವಿತರಿಸುತ್ತಿದ್ದಾರೆ. ಈ ವರ್ಷ 77 ವಿದ್ಯಾರ್ಥಿಗಳಿಗೆ ಒಟ್ಟು 583 ನೋಟ್ ಬುಕ್‌ಗಳನ್ನು ವಿತರಿಸಿದ್ದಾರೆ. ಇದರ ಜೊತೆಗೆ, ಈ ಹಿಂದೆ ಶಾಲೆಯ ಒಂದು ಕೊಠಡಿಯ ನೆಲಕ್ಕೆ ಟೈಲ್ಸ್ ಅಳವಡಿಸಲು ಹಣಕಾಸಿನ ನೆರವು ನೀಡಿದ್ದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಧರ, 'ನಾವು ಎಷ್ಟೇ ಎತ್ತರಕ್ಕೆ ಬೆಳೆದರೂ, ನಮಗೆ ಪ್ರಾಥಮಿಕ ಶಿಕ್ಷಣ ನೀಡಿದ ಶಾಲೆಯನ್ನು ಮರೆಯಬಾರದು. ಸರ್ಕಾರಿ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು' ಎಂದರು.
ಈ ಸಂದರ್ಭದಲ್ಲಿ ಶಾಲೆಯ ಎಸ್‌ಡಿಎಂಸಿ ಮತ್ತು ಮುಖ್ಯ ಶಿಕ್ಷಕರು ಶ್ರೀಧರ ಆಚಾರ್ಯರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಹರೀಶ ದೇವಾಡಿಗ, ಉಪಾಧ್ಯಕ್ಷೆ ಸುಶೀಲಾ ಮೊಗೇರ, ಶಾಲೆಗೆ ಸ್ಮಾರ್ಟ್ ಕ್ಲಾಸ್ ದೇಣಿಗೆ ನೀಡಿದ ಹಳೆ ವಿದ್ಯಾರ್ಥಿ ಕಿರಣ್ ಚಂದಾವರ, ಪಾಲಕ-ಪೋಷಕ ಪ್ರತಿನಿಧಿ ದೇವೇಂದ್ರ ನಾಯ್ಕ ಹಾಗೂ ಹಳೆ ವಿದ್ಯಾರ್ಥಿ ಪದ್ಮಾ ಭಟ್ಟ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಲೆಯ ವಿದ್ಯಾರ್ಥಿಗಳು ಸ್ವಾಗತ ನೃತ್ಯದೊಂದಿಗೆ ಆರಂಭಿಸಿದರು. ಮುಖ್ಯ ಶಿಕ್ಷಕ ಜನಾರ್ದನ ಮೊಗೇರ ಕಾರ್ಯಕ್ರಮ ನಿರೂಪಿಸಿದರು.