ಭಟ್ಕಳ: ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತ; ರಸ್ತೆ ಜಲಾವೃತ, ಗೋಡೆ ಕುಸಿತದಿಂದ ಮನೆಗೆ ಹಾನಿ

ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಬುಧವಾರ ಸಂಜೆ 4 ಗಂಟೆಯಿಂದ ಆರಂಭವಾದ ಭಾರೀ ಮಳೆ ಗುರುವಾರವೂ ಮುಂದುವರೆದಿದ್ದರು ಇದರಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಾ. ಹೆ.66 ರಲ್ಲಿ ರಂಗೀಕಟ್ಟೆ ಜಲಾವೃತಗೊಂಡಿದ್ದು, ಶಂಸುದ್ದೀನ್ ಸರ್ಕಲ್ ಮತ್ತು ಸಾಗರ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ಸಂಗ್ರಹವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದ ರೆಯಾಗಿದೆ. ಮದೀನಾ ಕಾಲೋನಿ ಮತ್ತು ತೆಂಗಿನಗುಂಡಿ ಕ್ರಾಸ್‌ನಂತಹ ಪ್ರದೇಶಗಳು ಕೆರೆಯಂತಾಗಿದ್ದು, ವಾಹನಗಳು ನೀರಿನಲ್ಲಿ ತೇಲಾಡಿಕೊಂಡು ಪ್ರಯಾಣಿಸುತ್ತಿದ್ದ ದೃಶ್ಯ ಕಂಡುಬಂದಿದೆ.
ಸಾಗರ ರಸ್ತೆಯಲ್ಲಿ ಒಂದೆಡೆ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ನೀರಿನ ಹರಿವಿಗೆ ಸೂಕ್ತ ವ್ಯವಸ್ಥೆಯಿಲ್ಲ. ಇನ್ನೊಂದೆಡೆ, ಮಳೆನೀರಿನ ಒಡ್ಡುಗೋಡೆಗಳ ಮೇಲಿನ ಅಕ್ರಮ ಗೂಡಂಗಡಿಗಳು ಒಕ್ಕರಿಸಿಕೊಂಡು ಒಳಚರಂಡಿ ವ್ಯವಸ್ಥೆಗೆ ಅಡ್ಡಿಯನ್ನುಂಟು ಮಾಡುತ್ತಿವೆ. ಇದರ ಪರಿಣಾಮವಾಗಿ ಸಾಗರ ರಸ್ತೆಯಿಂದ ಶಂಸುದ್ದೀನ್ ಸರ್ಕಲ್‌ವರೆಗಿನ ರಸ್ತೆಯು ಕೆರೆಯಂತಾಗಿದೆ. ಈ ಸಮಸ್ಯೆಯಿಂದ ಸ್ಥಳೀಯ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೀವ್ರ ತೊಂದರೆಯಾಗಿದೆ.
ಭಾರೀ ಮಳೆಯಿಂದಾಗಿ ಮಕ್ದೂಂ ಕಾಲೋನಿಯ ಸಫಾ ಸ್ಟ್ರೀಟ್‌ನಲ್ಲಿ ಮೊಹಮ್ಮದ್ ಅಲ್ತಾಫ್ ಖಲೀಫಾ ಅವರಿಗೆ ಸೇರಿದ ಕಾಂಪೌಂಡ್ ಗೋಡೆ ಕುಸಿದು ಅವರ ಮನೆಯ ಮೇಲ್ಛಾವಣಿಯ ಮೇಲೆ ಬಿದ್ದಿದೆ. ಇದರಿಂದ ಛಾವಣಿಗೆ ಹಾನಿಗೊಂಡು ಸಾಕಷ್ಟು ಆರ್ಥಿಕ ನಷ್ಟವಾಗಿದೆ. ಘಟನೆ ಸಂಭವಿಸಿದ ಸಮಯದಲ್ಲಿ ಮನೆಯಲ್ಲಿ 10-12 ಜನರಿದ್ದರೂ ಯಾವುದೇ ಜೀವಹಾನಿಯಾಗಿಲ್ಲ ಎಂದು ವರದಿಯಾಗಿದೆ.
ಹವಾಮಾನ ಇಲಾಖೆಯು ಬುಧವಾರ ಕರಾವಳಿ ಪ್ರದೇಶಕ್ಕೆ ಆರೆಂಜ್ ಅಲರ್ಟ್ ಘೋಷಿಸಿತ್ತು. ಬೆಳಗಿನಿಂದಲೂ ತುಂತುರು ಮಳೆ ಮುಂದುವರಿದಿತ್ತಾದರೂ, ಸಂಜೆ 4:30 ಗಂಟೆಯ ಸುಮಾರಿಗೆ ದಟ್ಟ ಮೋಡಗಳು ಆವರಿಸಿ, ಗುಡುಗು ಮಿಂಚಿನೊಂದಿಗೆ ಬಿರುಗಾಳಿಯಿಂದ ಕೂಡಿದ ಭಾರೀ ಮಳೆ ಆರಂಭವಾಯಿತು. ಕೆಲವೇ ನಿಮಿಷಗಳಲ್ಲಿ ರಸ್ತೆಗಳು ನೀರಿನಿಂದ ತುಂಬಿ, ಒಳಚರಂಡಿಗಳು ತುಂಬಿ ಹರಿಯುವ ಸ್ಥಿತಿಗೆ ತಲುಪಿದವು.
ರೆಡ್ ಅಲರ್ಟ್ ಘೋಷಣೆ
ಹವಾಮಾನ ಇಲಾಖೆಯು ಉತ್ತರ ಕನ್ನಡ ಜಿಲ್ಲೆಗೆ ಗುರುವಾರ, ಶುಕ್ರವಾರ, ಮತ್ತು ಶನಿವಾರಕ್ಕೆ ರೆಡ್ ಅಲರ್ಟ್ ಘೋಷಿಸಿದ್ದು, ಮುಂದಿನ ಮೂರು ದಿನಗಳ ಕಾಲ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತವು ತುರ್ತು ಸನ್ನದ್ಧತೆಗೆ ಕ್ರಮ ಕೈಗೊಂಡಿದೆ.
ಇದೇ ವೇಳೆ, ಬೆಳಕೆ ಕಟಗೇರಿಯಲ್ಲಿ ವೆಂಕಟೇಶ ದುರ್ಗಪ್ಪ ನಾಯಕರ ದನದ ಕೊಟ್ಟಿಗೆಗೆ ಸಿಡಿಲು ಬಡಿದ ಪರಿಣಾಮ ಕೊಟ್ಟಿಗೆ ಸಂಪೂರ್ಣ ಸುಟ್ಟು ಲಕ್ಷಾಂತರ ರೂಪಾಯಿಗಳ ಹಾನಿಯಾಗಿದೆ. ಜಾನವಾರುಗಳನ್ನು ರಕ್ಷಿಸಲಾಗಿದ್ದು, ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿತ್ತು.
ನಿರಂತರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸತಗೊಂಡಿದ್ದು, ಒಳಚರಂಡಿ ವ್ಯವಸ್ಥೆ ಸುಧಾ ರಣೆ, ರಸ್ತೆ ಕಾಮಗಾರಿಗಳನ್ನು ಶೀಘ್ರದವಾಗಿಯೇ ಪೂರ್ಣಗೊಳಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಸರಕಾರ ಮತ್ತು ಸ್ಥಳೀಯ ಆಡಳಿತವು ತಕ್ಷಣದ ಸಹಾಯಕ ಕ್ರಮಗಳಿಗೆ ಒತ್ತು ನೀಡಬೇಕೆಂದು ಕೋರಿದ್ದಾರೆ.
ಚೌಥನಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚೌಥನಿ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಸಂಪೂರ್ಣ ಜಲಾವೃತಗೊಂಡಿವೆ. ಈ ಪರಿಸ್ಥಿತಿಯಿಂದಾಗಿ ನಿವಾಸಿಗಳು ಮನೆಯಿಂದ ಹೊರಬರಲಾಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಥಳೀಯರಿಗೆ ತಕ್ಷಣದ ಸಹಾಯದ ಅಗತ್ಯವಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ಕಂಬ, ಟ್ರಾನ್ಸ್‌ಫಾರ್ಮರ್‌ಗೆ ಹಾನಿ
ಹೆಸ್ಕಾಂ ಅಧಿಕಾರಿ ಮಂಜುನಾಥ್ ನಾಯ್ಕ ಅವರ ಪ್ರಕಾರ, ಭಾರೀ ಮಳೆ ಮತ್ತು ಸಿಡಿಲಿನಿಂದ 26 ವಿದ್ಯುತ್ ಕಂಬಗಳು ಮತ್ತು 2 ಟ್ರಾನ್ಸ್‌ಫಾರ್ಮರ್ ಗಳಿಗೆ ಹಾನಿಯಾಗಿದ್ದು, ಒಟ್ಟು 3.84 ಲಕ್ಷ ರೂಪಾಯಿಗಳ ನಷ್ಟ ಸಂಭವಿಸಿದೆ. ಈ ಹಾನಿಯಿಂದ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದ್ದು, ತಾತ್ಕಾಲಿಕ ದುರಸ್ತಿ ಕಾರ್ಯ ನಡೆಯುತ್ತಿದೆ.







