ಭಟ್ಕಳ: ನೀರಿನ ಕಾಲುವೆಗೆ ಬಿದ್ದು ಎರಡು ವರ್ಷದ ಬಾಲಕಿ ಮೃತ್ಯು

ಭಟ್ಕಳ: ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಮಧ್ಯಾಹ್ನ ಎರಡು ವರ್ಷದ ಬಾಲಕಿ ನೀರಿನ ಕಾಲುವೆಗೆ ಬಿದ್ದು ಮೃತಪಟ್ಟ ಘಟನೆ ಸಂಭವಿಸಿದೆ.
ಈ ಘಟನೆಯು ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ರೆಡ್ ಅಲರ್ಟ್ ಘೋಷಣೆಯಾದ ಸಂದರ್ಭದಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದರೂ, ಭಟ್ಕಳದಲ್ಲಿ ಶುಕ್ರವಾರದಿಂದ ಶನಿವಾರದವರೆಗೆ ಮಳೆಯ ಪ್ರಮಾಣ ಸ್ವಲ್ಪ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ (ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ ಶನಿವಾರ ಬೆಳಗ್ಗೆ 8 ಗಂಟೆಯವರೆಗೆ) 36.9 ಮಿಮೀ ಮಳೆ ದಾಖಲಾಗಿದೆ.
ಬಾಲಕಿಯು ಮನೆಯ ಹೊರಗೆ ಕಾಲುವೆಯ ಸಮೀಪ ಓಡಾಡುತ್ತಿದ್ದಾಗ ನೀರಿನಿಂದ ತುಂಬಿದ ಕಾಲುವೆಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ. ಸ್ಥಳೀಯರು ತಕ್ಷಣ ಕುಟುಂಬಕ್ಕೆ ಮಾಹಿತಿ ನೀಡಿದ್ದು, ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರೂ ಉಳಿಸಲಾಗಲಿಲ್ಲ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಳೆಗಾಲದಲ್ಲಿ ಮಕ್ಕಳನ್ನು ಒಂಟಿಯಾಗಿ ಹೊರಗೆ ಬಿಡದಂತೆ ಮತ್ತು ಕಾಲುವೆ, ತೊರೆಗಳಂತಹ ಅಪಾಯಕಾರಿ ಸ್ಥಳಗಳಿಂದ ಮಕ್ಕಳನ್ನು ದೂರವಿಡುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಸ್ಥಳೀಯ ಆಡಳಿತವು ಕಾಲುವೆಗಳ ಸುರಕ್ಷತೆಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.







