ಭಟ್ಕಳ| ವೆಂಕಟಾಪುರ ನದಿಯಲ್ಲಿ ಕೊಲೆಗೈದು ಮೃತದೇಹ ಎಸೆಯಲಾಗಿದೆ ಎಂಬ ಹುಸಿ ಕರೆ

ಭಟ್ಕಳ: ತಾಲೂಕಿನ ವೆಂಕಟಾಪುರ ನದಿಯಲ್ಲಿ ಯಾರೋ ಕೊಲೆ ಮಾಡಿ ಮೃತದೇಹವನ್ನು ಎಸೆದಿದ್ದಾರೆ ಎಂದು ತಹಶೀಲ್ದಾರ್ ಕಚೇರಿಯ ಕಂಟ್ರೋಲ್ ರೂಮ್‌ಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ ತಿಳಿಸಿದ್ದಾನೆ.
ಈ ಕರೆಯ ಆಧಾರದ ಮೇಲೆ ಸ್ಥಳಕ್ಕೆ ತೆರಳಿದ ತಹಶೀಲ್ದಾರ್, ಗ್ರಾಮೀಣ ಠಾಣೆಯ ಪೊಲೀಸರು, 112 ತುರ್ತು ವಾಹನದ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದ ಸುತ್ತಮುತ್ತಲಿನ ಪ್ರದೇಶವನ್ನು ಸಂಪೂರ್ಣವಾಗಿ ಪರಿಶೀಲಿಸಿದರೂ ಯಾವುದೇ ಮೃತದೇಹ ಸಿಗದ ಕಾರಣ, ಇದು ಹುಸಿ ಕರೆ ಎಂದು ದೃಢಪಟ್ಟಿದ್ದಾರೆ.
ಶನಿವಾರದಂದು ಭಟ್ಕಳ ತಾಲೂಕಿನ ತಹಶೀಲ್ದಾರ್ ಕಚೇರಿಯ ಕಂಟ್ರೋಲ್ ರೂಮ್‌ಗೆ ಅಪರಿಚಿತ ವ್ಯಕ್ತಿಯಿಂದ ಕರೆ ಬಂದಿದ್ದು, "ವೆಂಕಟಾಪುರ ನದಿಯಲ್ಲಿ ಕೊಲೆಗೈದು ಮೃತದೇಹವನ್ನು ಎಸೆಯಲಾಗಿದೆ" ಎಂದು ತಿಳಿಸಲಾಗಿತ್ತು. ಆದರೆ, ಹೆಚ್ಚಿನ ಮಾಹಿತಿಯನ್ನು ಕೇಳುವ ಮುಂಚೆ ಕರೆ ಕಡಿತಗೊಂಡಿತ್ತು. ತಕ್ಷಣ ಕಾರ್ಯಾಚರಣೆಗೆ ಇಳಿದ ತಹಶೀಲ್ದಾರ್, ಗ್ರಾಮೀಣ ಠಾಣೆಯ ಪೊಲೀಸರು, 112 ವಾಹನದ ಸಿಬ್ಬಂದಿ ಹಾಗೂ ಕಂದಾಯ ಇಲಾಖೆಯವರು ನದಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ವಿಸ್ತೃತವಾಗಿ ಶೋಧ ನಡೆಸಿದರೂ ಯಾವುದೇ ಸಾಕ್ಷ್ಯಾಧಾರಗಳು ದೊರಕಿಲ್ಲ. ನಂತರ ಇದು ಹುಸಿ ಕರೆ ಎಂದು ತೀರ್ಮಾನಿಸಿ ವಾಪಸಾಗಿದ್ದಾರೆ.
ನೆರೆ ಪ್ರವಾಹದ ನಿರ್ವಹಣೆಗಾಗಿ ತೆರೆಯಲಾಗಿದ್ದ ಕಂಟ್ರೋಲ್ ರೂಮ್‌ಗೆ ಇಂತಹ ಕರೆ ಮಾಡಿ, ಕೊಲೆಯಾಗಿದೆ ಎಂದು ತಿಳಿಸಿ ಆತಂಕ ಸೃಷ್ಟಿಸಿದ ಅಪರಿಚಿತ ವ್ಯಕ್ತಿಯ ಗುರುತು ಕುತೂಹಲಕಾರಿ ಯಾಗಿದೆ. "ಈ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗುವುದು" ಎಂದು ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ತಿಳಿಸಿದ್ದಾರೆ.







