ಭಟ್ಕಳದಲ್ಲಿ ಬೀದಿ ನಾಯಿಗಳ ಹಾವಳಿ: ಎಸ್.ಐ.ಓ ವತಿಯಿಂದ ತಹಶೀಲ್ದಾರ್‌ಗೆ ಮನವಿ
ಭಟ್ಕಳ: ಭಟ್ಕಳ ತಾಲೂಕಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ಜನರಲ್ಲಿ ಭೀತಿ ಹೆಚ್ಚಾಗಿದ್ದು, ಈ ಕುರಿತು ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ (SIO) ಭಟ್ಕಳ ಘಟಕವು ತಹಶೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿ, ತುರ್ತು ಕ್ರಮಕ್ಕೆ ಒತ್ತಾಯಿಸಿದೆ.
ಕಳೆದ ಕೆಲ ದಿನಗಳಲ್ಲಿ 15ಕ್ಕೂ ಹೆಚ್ಚು ಜನ, ಅದರಲ್ಲಿ ಶಾಲಾ ಮಕ್ಕಳು ಮತ್ತು ವೃದ್ಧರು, ವಸತಿ ಪ್ರದೇಶ ಗಳು ಹಾಗೂ ಮಾರುಕಟ್ಟೆಗಳಲ್ಲಿ ನಾಯಿಗಳ ದಾಳಿಗೆ ಒಳಗಾಗಿದ್ದಾರೆ. ಗಾಯಗೊಂಡವರು ರೇಬೀಸ್ ಲಸಿಕೆ ಪಡೆಯುತ್ತಿದ್ದಾರೆ. ಈ ಘಟನೆಗಳಿಂದ ಜನ, ವಿಶೇಷವಾಗಿ ಪೋಷಕರು, ಆತಂಕದಲ್ಲಿದ್ದಾರೆ ಎಂದು SIO ತನ್ನ ಮನವಿಯಲ್ಲಿ ತಿಳಿಸಿದ್ದು ಸೂಕ್ತಕ್ರಮಕ್ಕಾಗಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಐ.ಓ ಮಾಧ್ಯಮ ಕಾರ್ಯದರ್ಶಿ ಮಷಾಯಿಖ್ ತಾಲಿಷ್, ನಾಯಿಗಳ ಸಂಖ್ಯೆ ನಿಯಂತ್ರಣಕ್ಕೆ ತುರ್ತು ಬಂಜೆತನ ಕಾರ್ಯಕ್ರಮ, ಆಕ್ರಮಣಕಾರಿ ನಾಯಿಗಳ ಗುರುತಿಸುವಿಕೆ ಮತ್ತು ಸ್ಥಳಾಂತರ, ದೂರು ಸಲ್ಲಿಸಲು ಸಹಾಯವಾಣಿ ಅಥವಾ ಸ್ಥಳೀಯ ಸಂಪರ್ಕ ಕೇಂದ್ರ ಸ್ಥಾಪನೆ, ಪಂಚಾಯಿತಿ, ಪುರಸಭೆ ಸಹಯೋಗದೊಂದಿಗೆ ಮೇಲ್ವಿಚಾರಣೆ ಮತ್ತು ಲಸಿಕೆ ಕಾರ್ಯ ಹಾಗೂ ಗಾಯಾಳುಗಳಿಗೆ ರೇಬೀಸ್ ಲಸಿಕೆ ಮತ್ತು ಪ್ರಥಮ ಚಿಕಿತ್ಸೆ ಒದಗಿಸಬೇಕೆಂದು ಒತ್ತಾಯಿಸಿದ್ದು, ಈ ಸಮಸ್ಯೆಯನ್ನು ಮಾನವೀಯವಾಗಿ ಮತ್ತು ಕಾನೂನುಬದ್ಧವಾಗಿ ಪರಿಹರಿಸಲು SIO ಆಡಳಿತಕ್ಕೆ ಸಹಕಾರ ನೀಡಲು ಸಿದ್ಧವಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಝಯ್ಯಾನ್ ಬಂಗಾಲಿ, ಮುಹಮ್ಮದ್ ಗಿತ್ರೀಫ್, ಸಾಬಿಕ್ ಬರ್ಮಾವರ್, ಮುಹಮ್ಮದ್ ಉಮರ್ ಮತ್ತಿತರರು ಉಪಸ್ಥಿತರಿದ್ದರು.







