ಭಟ್ಕಳ ಮುರಿನಕಟ್ಟೆ ವಿವಾದ | ಪೊಲೀಸ್ ಠಾಣೆಯೆದುರು ಪ್ರತಿಭಟನೆ: 18 ಮಂದಿಯ ವಿರುದ್ಧ FIR

ಭಟ್ಕಳ ನಗರ ಠಾಣೆಯೆದುರು ನಡೆದ ಪ್ರತಿಭಟನೆಯ ಫೈಲ್ ಫೋಟೋ
ಭಟ್ಕಳ: ಪಟ್ಟಣದ ಮುರಿನಕಟ್ಟೆ ವಿವಾದಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಪೊಲೀಸ್ ಠಾಣೆ ಎದುರು ಅಕ್ರಮವಾಗಿ ಗುಂಪು ಸೇರಿ ಪ್ರತಿಭಟನೆ ನಡೆಸಿ, ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿ ಸಾರ್ವಜನಿಕ ಶಾಂತಿಗೆ ಭಂಗವುಂಟು ಮಾಡಿದ ಆರೋಪದ ಮೇಲೆ 18 ಮಂದಿಯ ವಿರುದ್ಧ ಭಟ್ಕಳ ನಗರ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ವಿಸ್ತರಣೆ ಕಾಮಗಾರಿಯ ಹಿನ್ನೆಲೆಯಲ್ಲಿ ಹೆದ್ದಾರಿಯ ಮಧ್ಯಭಾಗದಲ್ಲಿದ್ದ ಸಾಂಪ್ರದಾಯಿಕ ಧಾರ್ಮಿಕ ಸ್ಥಳವಾದ 'ಮುರಿನಕಟ್ಟೆ'ಯನ್ನು ಸ್ಥಳಾಂತರಿಸುವ ವಿಚಾರವಾಗಿ ಎರಡು ಸಮುದಾಯಗಳ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈ ವೇಳೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 2021ರಿಂದಲೇ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದರೆ 2026ರ
ಮೇ 24ರಂದು ಹೆದ್ದಾರಿ ಪ್ರಾಧಿಕಾರ ಗುರುತಿಸಿದ್ದ ಸ್ಥಳದಲ್ಲಿ 10×10 ಅಳತೆಯ ಕಟ್ಟೆ ನಿರ್ಮಿಸಲಾಗಿತ್ತು. ಇದಕ್ಕೆ ಒಂದು ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದರಿಂದ, ಅಧಿಕಾರಿಗಳು ಕಟ್ಟೆಯನ್ನು ತೆರವುಗೊಳಿಸಿದ್ದರು ಎನ್ನಲಾಗಿದೆ.
ಈ ಕ್ರಮವನ್ನು ಖಂಡಿಸಿ ಅದೇ ದಿನ ರಾತ್ರಿ ಸುಮಾರು 10:30ಕ್ಕೆ ನಾಗೇಶ ಕೃಷ್ಣಪ್ಪ ನಾಯ್ಕ, ಶ್ರೀನಿವಾಸ ಮಸ್ತಪ್ಪ ನಾಯ್ಕ ಸೇರಿದಂತೆ ಇತರರು ಭಟ್ಕಳ ನಗರ ಪೊಲೀಸ್ ಠಾಣೆಯ ಆವರಣದಲ್ಲಿ ಅಕ್ರಮವಾಗಿ ಗುಂಪು ಸೇರಿ ಪ್ರತಿಭಟನೆ ನಡೆಸಿದ್ದಾರೆ. “ಮತ್ತೆ ಅದೇ ಸ್ಥಳದಲ್ಲಿ ಕಟ್ಟೆ ನಿರ್ಮಿಸುತ್ತೇವೆ” ಎಂದು ಹೇಳುತ್ತಾ ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟುಮಾಡಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಭಟ್ಕಳ ನಗರ ಠಾಣೆಯ ಪಿಎಸ್ಸೈ ತಿಮ್ಮಪ್ಪ ಎಸ್. ನೀಡಿದ ದೂರಿನಂತೆ ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂ 189(2), 190, 292 ಹಾಗೂ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 35(1)(e) ಅಡಿಯಲ್ಲಿ 18 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ನಾಗೇಶ ಕೃಷ್ಣಪ್ಪ ನಾಯ್ಕ, ಶ್ರೀನಿವಾಸ ಮಸ್ತಪ್ಪ ನಾಯ್ಕ, ಮಹದೇವ ಕೃಷ್ಣಯ್ಯ ನಾಯ್ಕ, ಪರಮೇಶ್ವರ ಹೊನ್ನಪ್ಪ ನಾಯ್ಕ, ವಿವೇಕ್ ದುರ್ಗಪ್ಪ ನಾಯ್ಕ, ವಿನೋದ ವೆಂಕಟರಮಣ ನಾಯ್ಕ, ನವೀನ ಕೃಷ್ಣ ನಾಯ್ಕ, ಲಕ್ಷ್ಮಣ ನಾಚಮಯ್ಯ ನಾಯ್ಕ, ವಿನೋದ ರಾಮ ನಾಯ್ಕ, ಅಭಿಷೇಕ ತಿಮ್ಮಪ್ಪ ನಾಯ್ಕ, ಅಶೋಕ ಮಹಾದೇವ ನಾಯ್ಕ, ನಾಗರಾಜ ಕನ್ನ ನಾಯ್ಕ, ಈಶ್ವರ ಮಸ್ತಪ್ಪ ನಾಯ್ಕ, ಜಯಂತ ಬಾಲಿಂದ್ರ ನಾಯ್ಕ, ಸಂದೀಪ ಗುರು ಶೆಟ್ಟಿ, ಗೋವಿಂದ ಜತ್ತಪ್ಪ ನಾಯ್ಕ ಹಾಗೂ ಸುನೀಲ ಬಿಳಿಯ ನಾಯ್ಕ ಎಂಬವರು ಸೇರಿದಂತೆ 18 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.






