ಪ್ರವಾದಿ ಮುಹಮ್ಮದ್‌ರ ಸಮಾನತೆಯ ಸಂದೇಶ ಎಲ್ಲರಿಗೂ ತಲುಪುವಂತಾಗಲಿ: ಕೆ.ಎಸ್. ದೇವಾಡಿಗ
ಭಟ್ಕಳ: ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕವು ಹಮ್ಮಿಕೊಂಡಿರುವ ಪ್ರವಾದಿ ಮುಹಮ್ಮದ್ ಪೈಗಂಬರರ ಸಮಾನತೆಯ ಸಂದೇಶ ಅಭಿಯಾನವು ಎಲ್ಲರಿಗೂ ತಲುಪುವಂತಾಗಬೇಕು ಎಂದು ಶಿರಾಲಿಯ ಕೃಷ್ಣ ಸುಬ್ರಾಯ ದೇವಾಡಿಗ ಹೇಳಿದರು.
ಅವರು ಮಂಗಳವಾರ ಸಂಜೆ ಶಿರಾಲಿಯ ತಟ್ಟಿಹಕ್ಕಲ್ ನ ರಹ್ಮಾನಿಯ ಮಸೀದಿಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯು ಆಯೋಜಿಸಿದ್ದ “ಸಮಾನತೆಯ ಸಮಾಜದ ಶಿಲ್ಪಿ ಪ್ರವಾದಿ ಮುಹಮ್ಮದ್(ಸ)” ಎಂಬ ವಿಷಯದ ಕುರಿತು ಮಾತ ನಾಡಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ನಾವು ಎಲ್ಲ ಧರ್ಮಗಳ ಕುರಿತು ಅದ್ಯಾಯನ ನಡೆಸಬೇಕು, ಈ ಮೂಲಕ ನಮ್ಮಲ್ಲಿರುವ ಅಂತರವನ್ನು ಕಡಿಮೆ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಬೋರ್ಡ್ ಆಫ್ ಇಸ್ಲಾಮಿಕ್ ಎಜ್ಯುಕೇಶನ್ ಕರ್ನಾಟಕ ದ ಕಾರ್ಯದರ್ಶಿ ರಿಯಾಝ್ ಆಹ್ಮದ್, ಪ್ರವಾದಿ ಮುಹಮ್ಮದ್ (ಸ) ಗಿಂತ ಮುಂಚೆ ಅನೇಕ ಪ್ರವಾದಿಗಳು, ದಾರ್ಶನಿಕರು ಜಗದುದ್ದಕ್ಕೂ ಬಂದು ಹೋಗಿದ್ದಾರೆ. ಮುಹಮ್ಮದ್ ಪೈಗಂಬರರು ತಮ್ಮನ್ನು ಎಂದಿಗೂ ದೇವನಾಗಲಿ, ದೇವಾಂಶ ಸಂಭೂತನಾಗಲಿ ಎಂದು ಎಲ್ಲಿಯೂ ಹೇಳಿಕೊಂಡಿಲ್ಲ. ಅವರು ಓರ್ವ ಮನುಷ್ಯರಾಗಿದ್ದರು. ಮನುಷ್ಯರಂತೆ ಬಾಳಿ ಬದುಕಿ ಜಗತ್ತಿಗೆ ಆದರ್ಶ ವ್ಯಕ್ತಿಯಾದರು. ಇವರ ಮೂರ್ತಿಯಾಗಲಿ, ಮಂದಿರವಾಗಲಿ ಯಾವುದೂ ಇಲ್ಲ. ಆದರೆ ಇವರು ಜಗತ್ತಿನ ಕೋಟ್ಯಾಂತರ ಹೃದಯದಲ್ಲಿ ಈಗಲೂ ನೆಲೆ ನಿಂತಿದ್ದಾರೆ ಇದಕ್ಕೆ ಕಾರಣ ಇವರು ಮನುಷ್ಯರನ್ನು ಪ್ರೀತಿಸಿದರು ಮತ್ತು ಎಲ್ಲರನ್ನೂ ತನ್ನ ಸಹೋದರನಂತೆ ಕಂಡರು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಂಜುಮನ್ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಂಶುಪಾಲ ಹಾಗೂ ಹಿರಿಯ ಸಾಹಿತಿ ಡಾ.ಸೈಯ್ಯದ್ ಝಮಿರುಲ್ಲಾ ಷರೀಫ್ ಮಾತನಾಡಿ, ಪ್ರವಾದಿ ಮುಹಮ್ಮದ್ ರನ್ನು ಮುಸ್ಲಿಮರಿಗಿಂತ ಮುಸ್ಲಿ ಮೇತರ ಬಂಧುಗಳೇ ಹೆಚ್ಚು ಪ್ರೀತಿಸುತ್ತಾರೆ. ಮೈಕಲ್ ಹಾರ್ಟ್ ಎಂಬುವವರು ಜಗತ್ತಿನ ನೂರು ಮಂದಿ ಪ್ರಭಾವಿತ ವ್ಯಕ್ತಿಗಳ ಸಾಲಿನಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರರಿಗೆ ಮೊದಲ ಸ್ಥಾನ ನೀಡಿದ್ದಾರೆ ಎಂದರು.
ಜಮಾಅತೆ ಇಸ್ಲಾಮಿ ಹಿಂದ್ ಭಟ್ಕಳ ಶಾಖೆಯ ಅಧ್ಯಕ್ಷ ಮೌಲಾನ ಸೈಯ್ಯದ್ ಝುಬೇರ್ ಎಸ್.ಎಂ, ಸೈನಿಕ ನಾಗರಾಜ್ ದೇವಾಡಿಗ, ರಹಮಾನಿಯ ಮಸೀದಿಯ ಉಪಾಧ್ಯಕ್ಷ ಮುಹಮ್ಮದ್ ಮನ್ಸೂರ್, ಕಾರ್ಯದರ್ಶಿ ಅಬ್ದುಲ್ ಗಫೂರ್, ಅನ್ವರ್ ಮೌಲಾನ, ಮುಹಮ್ಮದ್ ಜಾಫರ್ ಮೌಲಾನ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಸೀದಿಯ ಇಮಾಮ್ ಮತ್ತು ಖತೀಬ್ ಮುಸಾಬ್ ಮೌಲಾನ ಬಿಳಗಿ ಕಾರ್ಯಕ್ರಮ ನಿರೂಪಿಸಿದರು. ಮಸೀದಿಯ ಮುಖಂಡ ಮುಹಮ್ಮದ್ ನಜೀಬ್ ಶಿರಾಲಿ ಧನ್ಯವಾದ ಅರ್ಪಿಸಿದರು.