ಭಟ್ಕಳದಲ್ಲಿ ಮಳೆ | ಹೆದ್ದಾರಿ ಕಾಮಗಾರಿ ಪ್ರದೇಶಗಳಲ್ಲಿ ನೀರು ನಿಲುಗಡೆ : ಸಾರ್ವಜನಿಕರ ಪರದಾಟ

ಭಟ್ಕಳ: ಶನಿವಾರ ಸಂಜೆ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿ-66 ಚತುಷ್ಪಥ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ನೀರು ನಿಂತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು.
ಶಂಸುದ್ದೀನ್ ಸರ್ಕಲ್, ರಂಗಿನಕಟ್ಟೆ ಸೇರಿದಂತೆ ಹೆದ್ದಾರಿಯ ವಿವಿಧ ಭಾಗಗಳಲ್ಲಿ ಮಳೆ ನೀರು ಸಂಗ್ರಹಗೊಂಡ ಪರಿಣಾಮ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು. ರಸ್ತೆ ಬದಿಗಳಲ್ಲಿ ಕೆಸರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತಗೊಂಡ ದೃಶ್ಯ ಕಂಡುಬಂತು.
ಮಳೆಗೂ ಮುನ್ನ ಉಂಟಾಗಿದ್ದ ತೀವ್ರ ಬಿಸಿಗಾಳಿಯಿಂದ ಜನರಿಗೆ ತುಸು ನಿರಾಳತೆ ದೊರೆತಿದ್ದರೂ, ಕಾಮಗಾರಿ ಪ್ರದೇಶಗಳಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ಹರಿದು ಹೋಗದೆ ರಸ್ತೆಯಲ್ಲೇ ನಿಂತಿತು ಎಂದು ಸ್ಥಳೀಯರು ದೂರಿದ್ದಾರೆ.
ಮುಂಗಾರು ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಹೆದ್ದಾರಿ ಪಕ್ಕದ ಚರಂಡಿ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಳೆಯ ಬಳಿಕ ಪಟ್ಟಣದ ಹಲವೆಡೆ ವಿದ್ಯುತ್ ವ್ಯತ್ಯಯವೂ ಉಂಟಾಯಿತು. “ಮಳೆ ಬಂದರೂ, ಬರದಿದ್ದರೂ ವಿದ್ಯುತ್ ಕಡಿತ ಸಾಮಾನ್ಯವಾಗಿದೆ” ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.




