ಭಟ್ಕಳದಲ್ಲಿ ಸರಣಿ ಅಪಘಾತ

ಭಟ್ಕಳ: ಏಕಾಏಕಿ ಹಸುವೊಂದು ರಸ್ತೆಗೆ ಅಡ್ಡ ಬಂದ ಪರಿಣಾಮ ನಾಲ್ಕು ವಾಹನಗಳು ಪರಸ್ಪರ ಢಿಕ್ಕಿ ಹೊಡೆದ ಘಟನೆ ತಾಲೂಕಿನ ಶೆಟ್ಟಿ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ.
ಕೇರಳದಿಂದ ಮಹಾರಾಷ್ಟ್ರದ ಕಡೆಗೆ ತೆರಳುತ್ತಿದ್ದ ಕಾರಿನ ಮುಂದೆ ಏಕಾಏಕಿ ಹಸು ಅಡ್ಡ ಬಂದಿದ್ದು, ಅದಕ್ಕೆ ಢಿಕ್ಕಿ ಹೊಡೆಯುವುದನ್ನು ತಪ್ಪಿಸಲು ಚಾಲಕ ವಾಹನವನ್ನು ಬದಿಗೆ ತಿರುಗಿಸಿದ್ದಾನೆ. ಈ ವೇಳೆ ಕಾರು ಮೊದಲು ಗೂಡ್ಸ್ ಆಟೊ ರಿಕ್ಷಾಗೆ ಢಿಕ್ಕಿ ಹೊಡೆದಿದೆ. ನಂತರ ಹೊಸದಾಗಿ ಖರೀದಿಸಿದ ಬೊಲೆರೊ ಪಿಕ್‌ಅಪ್, ನಂತರ ದುರಸ್ತಿ ಮುಗಿಸಿ ಗ್ಯಾರೇಜ್‌ನಿದ ಹೊರಬಂದ ಇನ್ನೊಂದು ಪಿಕ್‌ಅಪ್‌ಗೆ ಢಿಕ್ಕಿ ಹೊಡೆದಿದೆ. ಬಳಿಕ ವಾಹನಗಳ ವೇಗ ಸೂಚಿಸುವ ಸೈನ್ ಬೋರ್ಡ್ ಕಂಬಕ್ಕೂ ಢಿಕ್ಕಿ ಹೊಡೆದಿದೆ. ಢಿಕ್ಕಿಯ ಪರಿಣಾಮ ಎಲ್ಲ ವಾಹನಗಳು ರಸ್ತೆ ಕೆಳಗಿನ ಇಳಿಜಾರಿನೊಳಗೆ ಜಾರಿ ಬಿದ್ದವು ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಕಾರಿನಲ್ಲಿ ಕೇರಳದ ದಂಪತಿ ಹಾಗೂ ಅವರ ಮೂವರು ಮಕ್ಕಳು ಪ್ರಯಾಣಿಸುತ್ತಿದ್ದು, ಎಲ್ಲರೂ ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ, ಗೂಡ್ಸ್ ಆಟೊ ರಿಕ್ಷಾ ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಅಪಘಾತದ ಬಳಿಕ ವಾಹನಗಳನ್ನು ಇಳಿಜಾರಿನಿಂದ ಮೇಲಕ್ಕೆತ್ತಲು ಕ್ರೇನ್‌ನ ನೆರವು ಪಡೆಯಲಾಗಿತ್ತು.ಈ ವೇಳೆ ಕೆಲ ಸಮಯ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಈ ಘಟನೆ ಕುರಿತು ಆತಂಕ ವ್ಯಕ್ತಪಡಿಸಿದ ಸ್ಥಳೀಯರು, ಭಟ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೀದಿ ಪ್ರಾಣಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೀದಿ ಪ್ರಾಣಿಗಳು ರಸ್ತೆ ಮೇಲೆ ಬರದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ರಸ್ತೆಗಳಲ್ಲಿ ಸಂಚರಿಸುವ ಪ್ರಾಣಿಗಳನ್ನು ವಶಕ್ಕೆ ಪಡೆಯುವಂತೆ ನಗರಸಭೆ ಮತ್ತು ತಾಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.







