ಭಟ್ಕಳ: ಶ್ರೀ ಮಾರುತಿ ಪತ್ತಿನ ಸಂಘಕ್ಕೆ ಉತ್ತಮ ಸಹಕಾರಿ ಪತ್ತಿನ ಸಂಘ ಪ್ರಶಸ್ತಿ

ಭಟ್ಕಳ: ಹಾವೇರಿಯಲ್ಲಿ ನಡೆದ 72ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿ ಶ್ರೀಮಾರುತಿ ಸಹಕಾರಿ ಪತ್ತಿನ ಸಂಘಕ್ಕೆ ಜಿಲ್ಲೆಯ ಉತ್ತಮ ಸಹಕಾರಿ ಪತ್ತಿನ ಸಂಘ – 2025 ಪ್ರಶಸ್ತಿ ಲಭಿಸಿದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆ, ರಾಜ್ಯ ಸಹಕಾರ ಮಹಾಮಂಡಲ ಮತ್ತು ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಲ ಜಂಟಿಯಾಗಿ ಆಯೋಜಿಸಿತ್ತು.
ಮಹಾಮಂಡಲದ ನಿರ್ದೇಶಕ ಡಾ. ಸಂಜಯ ಹೊಸಮಠ ಅವರು ಸಂಘದ ಪರವಾಗಿ ಅಧ್ಯಕ್ಷ ಅಶೋಕ ಪೈ, ಉಪಾಧ್ಯಕ್ಷ ಉಮೇಶ್ ಕಾಮತ್ ಮತ್ತು ಮುಖ್ಯ ಕಾರ್ಯನಿರ್ವಾಹಕ ರಾಜೇಂದ್ರ ಶಾನಭಾಗ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ನಿರ್ದೇಶಕ ರವೀಂದ್ರ ಪ್ರಭು, ಅನಂತ ಕಾಮತ್ ಹಾಗೂ ಶಾಖಾ ಪ್ರಬಂಧಕ ಪ್ರಸನ್ನ ಪ್ರಭು ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
26 ವರ್ಷಗಳ ಇತಿಹಾಸ ಹೊಂದಿರುವ ಶ್ರೀ ಮಾರುತಿ ಪತ್ತಿನ ಸಂಘವು ನಾಲ್ಕು ಶಾಖೆಗಳ ಮೂಲಕ 116 ಕೋಟಿಗೂ ಹೆಚ್ಚು ಠೇವಣಿ, ಸದಸ್ಯರಿಗೆ 103.62 ಕೋಟಿ ಸಾಲ ನೀಡಿಕೆ, 98.49% ಸಾಲ ವಸೂಲಾತಿ, ಮತ್ತು 2.53 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ 12% ಲಾಭಾಂಶ ವಿತರಿಸಿರುವ ಸಂಘವು ಸತತ 14 ವರ್ಷಗಳಿಂದ ’ಎ’ ಗ್ರೇಡ್ (ಂ ಉಡಿಚಿಜe) ಪಡೆಯುತ್ತಿರುವುದು ಈ ಪ್ರಶಸ್ತಿಗೆ ಕಾರಣವಾಗಿದೆ.
ಕಾರ್ಯಕ್ರಮದಲ್ಲಿ ಸಚಿವ ಹೆಚ್.ಕೆ. ಪಾಟೀಲ್, ಸಭಾಪತಿ ಬಸವರಾಜ ಹೊರಟ್ಟಿ ಮತ್ತು ರಾಜ್ಯ ಸಹಕಾರ ಮಹಾಮಂಡಲದ ಅಧ್ಯಕ್ಷ ಜಿ.ಟಿ. ದೇವೇಗೌಡ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಶ್ರೀ.ಮಾರುತಿ ಪತ್ತಿನ ಸಂಘಕ್ಕೆ ಇದು ಮೂರನೇ ಬಾರಿ ಲಭ್ಯವಾಗಿರುವ ಪ್ರಶಸ್ತಿ. ಇದಕ್ಕೂ ಮೊದಲು 2017 ಮತ್ತು 2024ರಲ್ಲಿ ಇದೇ ಪ್ರಶಸ್ತಿ ದೊರೆತಿತ್ತು. ಸಂಘವು 2023–24ರಲ್ಲಿ ತೋರಿದ ಉತ್ತಮ ಕಾರ್ಯಕ್ಷಮತೆಗೆ ಕೆಡಿಸಿಸಿ ಬ್ಯಾಂಕ್ ನೀಡುವ ಜಿಲ್ಲಾಮಟ್ಟದ ಉತ್ತಮ ಸಹಕಾರಿ ಸಂಘ – 2025 ಪ್ರಶಸ್ತಿಗೂ ಭಾಜನವಾಗಿದೆ.







