ಶಿರಸಿ | ಪಶ್ಚಿಮ ಘಟ್ಟ ಅಧ್ಯಯನಕ್ಕೆ ಸುಪ್ರೀಂ ಕೋರ್ಟ್ ನೇಮಿಸಿದ ಸಿಇಸಿ ತಂಡ ಭೇಟಿ

ಉತ್ತರ ಕನ್ನಡ: ಪಶ್ಚಿಮ ಘಟ್ಟದ ಅರಣ್ಯ ಹಾಗೂ ಪರಿಸರ ಸಂರಕ್ಷಣೆ ಕುರಿತಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸೆಂಟ್ರಲ್ ಎಂಪವರ್ಡ್ ಕಮಿಟಿ - ಸಿಇಸಿ) ಜೂನ್ 1ರಿಂದ 4ರವರೆಗೆ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅಧ್ಯಯನ ನಡೆಸಿತು.
ಜೂನ್ 2 ಮತ್ತು 3ರಂದು ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸಂಚರಿಸಿದ ಸಿ.ಇ.ಸಿ. ತಂಡ ಅರಣ್ಯ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು, ಪರಿಸರ ತಜ್ಞರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿತು. ಶರಾವತಿ ಹಾಗೂ ಗೇರುಸೊಪ್ಪ ಕಣಿವೆ ಪ್ರದೇಶಗಳಿಗೂ ಭೇಟಿ ನೀಡಿತು.
ಸಿ.ಇ.ಸಿ. ತಂಡದ ಮುಖ್ಯಸ್ಥ ಡಾ. ಸುನೀಲ್ ಲಿಮಯೆ ಅವರೊಂದಿಗೆ ಶಿರಸಿಯಲ್ಲಿ ಬೇಡ್ತಿ–ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಹಾಗೂ ವೃಕ್ಷಲಕ್ಷ ಆಂದೋಲನದ ಪ್ರಮುಖರು ವಿಶೇಷ ಸಭೆ ನಡೆಸಿದರು. ಸಭೆಯಲ್ಲಿ ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್ ಹಾಗೂ ಡಿ.ಸಿ.ಎಫ್. ಸೂರ್ಯವಂಶಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ, ಸುಪ್ರೀಂ ಕೋರ್ಟ್ ವ್ಯಾಪ್ತಿಯ ಸಿ.ಇ.ಸಿ. ಮೊದಲ ಬಾರಿಗೆ ಶಿರಸಿಗೆ ಭೇಟಿ ನೀಡಿ ಪರಿಸರ ತಜ್ಞರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿರುವುದನ್ನು ಸ್ವಾಗತಿಸಿದರು. ಬೇಡ್ತಿ–ಅಘನಾಶಿನಿ ಹಾಗೂ ಶರಾವತಿ ಕಣಿವೆಗಳ ಸಂರಕ್ಷಣೆ ಕುರಿತು ಸಮಗ್ರ ಮನವಿ ಸಲ್ಲಿಸಲಾಯಿತು.
ವಿಜ್ಞಾನಿ ಡಾ. ಕೇಶವ ಕೊರ್ಸೆ ಬೇಡ್ತಿ, ಅಘನಾಶಿನಿ ಹಾಗೂ ಶರಾವತಿ ಕಣಿವೆಗಳ ಜಲ, ಅರಣ್ಯ ಮತ್ತು ರೈತರ ಬದುಕಿನ ಸ್ಥಿತಿಗತಿಗಳ ಕುರಿತು ವಿವರಿಸಿದರು. ಪರಿಸರ ಕಾನೂನುಗಳ ಅನುಷ್ಠಾನ, ಅರಣ್ಯ ಸಂರಕ್ಷಣೆ ಹಾಗೂ ವಿವಿಧ ಅಭಿವೃದ್ಧಿ ಯೋಜನೆಗಳಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಅಧ್ಯಯನ ವರದಿಗಳನ್ನು ಸಿ.ಇ.ಸಿ. ತಂಡಕ್ಕೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿ.ಇ.ಸಿ. ಮುಖ್ಯಸ್ಥ ಡಾ. ಸುನೀಲ್ ಲಿಮಯೆ, ಪರಿಸರ ಸಂರಕ್ಷಣೆಗೆ ಸಾರ್ವಜನಿಕ ಒತ್ತಡ ಅತ್ಯಂತ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಡಾ. ಮಾಧವ ಗಾಡ್ಗೀಳ್ ಅವರ ಪರಿಸರ ಸಂರಕ್ಷಣೆಯ ಕೊಡುಗೆಯನ್ನು ಸ್ಮರಿಸಿದ ಅವರು, ಬೇಡ್ತಿ–ಅಘನಾಶಿನಿ ಹಾಗೂ ಶಾಲ್ಮಲಾ ವನ್ಯಜೀವಿ ಸಂರಕ್ಷಿತ ಪ್ರದೇಶ ಘೋಷಣೆಗೆ ನಡೆದ ಜನಾಂದೋಲನವನ್ನು ಶ್ಲಾಘಿಸಿದರು.
ಬೇಡ್ತಿ–ಅಘನಾಶಿನಿ ಜನಾಂದೋಲನದ ಬಗ್ಗೆ ಬಹಳ ವರ್ಷಗಳಿಂದ ಕೇಳುತ್ತಿದ್ದೆವು. ಇಂದು ನೇರವಾಗಿ ಭೇಟಿ ನೀಡಿ ಅದರ ಪರಿಚಯವಾಗಿರುವುದು ಸಂತಸದ ವಿಷಯ ಎಂದು ಡಾ. ಲಿಮಯೆ ಹೇಳಿದರು. ಸಾರ್ವಜನಿಕರು ನೇರವಾಗಿ ಸಿ.ಇ.ಸಿ.ಗೆ ದೂರು ಹಾಗೂ ಮನವಿಗಳನ್ನು ಸಲ್ಲಿಸಬಹುದಾಗಿದೆ ಎಂದು ಮಾಹಿತಿ ನೀಡಿದರು. ಸಭೆಯ ಅಂತ್ಯದಲ್ಲಿ ಬೇಡ್ತಿ–ಅಘನಾಶಿನಿ ಸಮಿತಿಯ ವತಿಯಿಂದ ಸಿ.ಇ.ಸಿ. ತಂಡಕ್ಕೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.






