ಭಟ್ಕಳದಲ್ಲಿ ರಾಜ್ಯ ಪತ್ರಕರ್ತರ ವಿಚಾರ ಸಂಕಿರಣ: ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಭಟ್ಕಳ: ಭಟ್ಕಳದ ನಾಗಯಕ್ಷೆ ಧರ್ಮಾರ್ಥ ಸಭಾಭವನದಲ್ಲಿ ಜ. 28ರಂದು ನಡೆಯಲಿರುವ ರಾಜ್ಯ ಪತ್ರಕರ್ತರ ವಿಚಾರ ಸಂಕಿರಣ ಹಾಗೂ ರಾಜ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹೊನ್ನಾವರ ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿ, ಶ್ರೀ ವಿಶ್ವ ವೀರಾಂಜನೇಯ ಮಹಾಸಂಸ್ಥಾನಮ್ ಹೇಮಪುರ ಮಹಾಪೀಠದ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿ ಅವರು ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ – ಭಟ್ಕಳ ಘಟಕದ ಆಶ್ರಯದಲ್ಲಿ ಆಯೋಜಿಸ ಲಾಗಿದ್ದು, ಶ್ರೀ ಮಾರುತಿ ಗುರೂಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಲಿದ್ದಾರೆ.
ಕಾರ್ಯಕ್ರಮವನ್ನು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ ಅವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಸ್ಥೆಯ ರಾಜ್ಯಾಧ್ಯಕ್ಷರ ಉಪಸ್ಥಿತಿಯಲ್ಲಿ, ಗ್ಯಾರಂಟಿ ನ್ಯೂಸ್ ಮುಖ್ಯಸ್ಥೆ ರಾಧಾ ಹಿರೇಗೌಡರ್ ಹಾಗೂ ಗಂಗಾಧರ್ ಮೊದಲಿಯಾರ್ ಅವರು ವಿಶೇಷ ಆಹ್ವಾನಿತರಾಗಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶಿವಾನಂದ ನಾಯ್ಕ್, ತಂಜಿಮ್ ಸಂಸ್ಥೆಯ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರೊಂದಿಗೆ ವಿದ್ಯಾರ್ಥಿಗಳ ಸಂವಾದ, ರಾಜ್ಯದ ಸಾಧಕರಿಗೆ ರಾಜ್ಯ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಪತ್ರಿಕಾ ವಿತರಕರಿಗೆ ವಿಶೇಷ ಪ್ರಶಸ್ತಿ ಪ್ರದಾನ ನಡೆಯಲಿದೆ.
ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಭಟ್ಕಳ ಘಟಕದ ಅಧ್ಯಕ್ಷ ಶಂಕರ್ ನಾಯ್ಕ್, ಖಜಾಂಚಿ ನಸೀಮ್ ಮುಲ್ ಘನಿ, ಕರಾವಳಿ ವಿಭಾಗದ ಅಧ್ಯಕ್ಷ ಕುಮಾರ್ ನಾಯ್ಕ್, ಉಡುಪಿ ಜಿಲ್ಲಾ ಅಧ್ಯಕ್ಷ ದಾಮೋದರ ಮೋಗವೀರ, ಶಿರಸಿ ಅಧ್ಯಕ್ಷ ರಾಜೇಶ್ ಮೋಗೇರ, ಉತ್ತರ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಆಚಾರ್ಯ, ಶಿರಸಿ ಸದಸ್ಯರಾದ ಶ್ರೀನಿವಾಸ್ ಆಚಾರ್ ಹಾಗೂ ರಮೇಶ್ ಉಪಸ್ಥಿತರಿದ್ದರು.







