ಮಾನವೀಯತೆ, ಸೇವೆಯನ್ನೇ ಬದುಕಿನ ಧ್ಯೇಯವಾಗಿಸಿದ್ದ ಸೈಯ್ಯದ್ ಹಸನ್ ಬರ್ಮಾವರ್ ಸಾಹೇಬ್

ಸೈಯ್ಯದ್ ಹಸನ್ ಬರ್ಮಾವರ್
ಭಟ್ಕಳ: ಮಾನವೀಯತೆ, ಸಹಾನುಭೂತಿ ಮತ್ತು ಸೇವಾಭಾವನೆಯನ್ನೇ ಬದುಕಿನ ಧ್ಯೇಯವಾಗಿಸಿಕೊಂಡಿದ್ದ ಭಟ್ಕಳದ ಹಿರಿಯ ಸಮಾಜಸೇವಕ ಸೈಯ್ಯದ್ ಹಸನ್ ಬರ್ಮಾವರ್ (73) ಅವರು ಮಾರ್ಚ್ 25ರ ಮಧ್ಯಾಹ್ನ ನಿಧನರಾದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಭಟ್ಕಳದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಸೈಯ್ಯದ್ ಹಸನ್ ಬರ್ಮಾವರ್, ಸಾಮಾನ್ಯ ಜನರ ಕಷ್ಟ-ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಮುಖಂಡರಾಗಿ ಪರಿಚಿತರಾಗಿ ದ್ದರು. ಪುರಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಅವರು, ಜನತಾದಳ ಪಕ್ಷದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಜನತಾ ಪರಿವಾರದ ಹಿನ್ನೆಲೆಯುಳ್ಳ ಇವರಿಗೆ ರಾಜಕೀಯ ವಲಯದಲ್ಲೂ ಉತ್ತಮ ಗೌರವವಿದ್ದು, ಬಸವರಾಜ ಹೊರಟ್ಟಿ, ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಹಿರಿಯ ನಾಯಕ ರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು.
ಸಾಮಾಜಿಕ ಕ್ಷೇತ್ರದಲ್ಲಿ ಅವರು ಇಸ್ಲಾಮಿಕ್ ವೆಲ್ಫೇರ್ ಸೊಸೈಟಿ, ವೆಲ್ಫೇರ್ ಆಸ್ಪತ್ರೆ ಹಾಗೂ ಶಮ್ಸ್ ಸ್ಕೂಲ್ ಗಳಂತಹ ಸಂಸ್ಥೆಗಳ ಸ್ಥಾಪಕ ಸದಸ್ಯರಾಗಿದ್ದರು. ಜಾಮಿಯಾಬಾದ್ನ ನ್ಯೂ ಶಮ್ಸ್ ಶಾಲೆಗೆ ಭೂಮಿ ಒದಗಿಸುವಲ್ಲಿ ಅವರ ಪಾತ್ರ ವಿಶೇಷವಾಗಿ ಸ್ಮರಣೀಯವಾಗಿದೆ. ಶಿಕ್ಷಣ ಹಾಗೂ ಸಮಾಜದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆ ಅಪಾರವಾಗಿದೆ.
ಸೈಯ್ಯದ್ ಹಸನ್ ಬರ್ಮಾವರ್ ಕೇವಲ ಸಂಘಟನೆಗಳಲ್ಲೇ ಸೀಮಿತವಾಗಿರದೆ, ಸಮಾಜದ ಒಳಿತಿಗಾಗಿ ಹೋರಾಟಗಾರರಾಗಿ ಕೂಡ ಗುರುತಿಸಿಕೊಂಡಿದ್ದರು. ಭಟ್ಕಳದಲ್ಲಿ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಅವರು ನಡೆಸಿದ ಹೋರಾಟ ಗಳು ಫಲಪ್ರದವಾಗಿದ್ದು, ರೈಲು ನಿಲ್ದಾಣಗಳ ಹೆಚ್ಚುವರಿ ನಿಲುಗಡೆಗಳಂತಹ ಅನೇಕ ಸಾರ್ವಜನಿಕ ಸೌಲಭ್ಯಗಳ ಸಾಧನೆಗೆ ಕಾರಣವಾಗಿದ್ದಾರೆ ಎಂದು ಅವರ ಸಹವರ್ತಿಗಳು ನೆನಪಿಸಿಕೊಳ್ಳುತ್ತಾರೆ. ಯಾವುದೇ ಸಮಸ್ಯೆ ಎದುರಾ ದರೂ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದು ಪರಿಹಾರ ಸಿಗುವವರೆಗೆ ಹೋರಾಡುವುದು ಅವರ ವೈಶಿಷ್ಟ್ಯವಾಗಿತ್ತು.
ಬಡವರ ನೆರವಿಗೆ ಸದಾ ಸಿದ್ಧರಾಗಿದ್ದ ಅವರು ಅನೇಕ ಕುಟುಂಬಗಳಿಗೆ ಮನೆ ನಿರ್ಮಿಸಲು ಸಹಾಯ ಮಾಡಿದ್ದಾರೆ. ವಿಶೇಷವಾಗಿ ಅನೇಕ ಬಡ ಹೆಣ್ಣುಮಕ್ಕಳ ಜೀವನಕ್ಕೆ ಆಸರೆಯಾಗಿದ್ದು, ಅವರಿಗೆ ಶಿಕ್ಷಣ ಮತ್ತು ಬದುಕಿನ ದಾರಿ ತೋರಿಸಿದ್ದಾರೆ. ಭಟ್ಕಳದಾಚೆಯೂ ಹಲವು ಶಿಕ್ಷಣ ಮತ್ತು ಧಾರ್ಮಿಕ ಸಂಸ್ಥೆಗಳಿಗೆ ಅವರು ಧನಸಹಾಯ ಮಾಡುತ್ತಿದ್ದರು.
ಮನೆಗೆ ಬಂದವರನ್ನು ಬರಿಗೈಯಲ್ಲಿ ಕಳುಹಿಸದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಸೈಯ್ಯದ್ ಹಸನ್ ಬರ್ಮಾವರ್, ಎಲ್ಲರ ಮನಗಳಲ್ಲಿ ಮಾನವೀಯತೆಗಾಗಿ ಬದುಕಿದ ವ್ಯಕ್ತಿಯಾಗಿ ಉಳಿದಿದ್ದಾರೆ. ಪ್ರಚಾರ ಬಯಸದೆ ನಿಸ್ವಾರ್ಥವಾಗಿ ಸಮಾಜ ಸೇವೆ ಮಾಡುತ್ತಿದ್ದ ಅವರನ್ನು ಸರ್ವಧರ್ಮೀಯರೂ ಗೌರವದಿಂದ ಸ್ಮರಿಸುತ್ತಾರೆ. ಭಟ್ಕಳದ ಸಾರ್ವಜನಿಕ ಬದುಕಿನಲ್ಲಿ ದೊಡ್ಡ ಗುರುತು ಬಿಟ್ಟು ತೆರಳಿರುವ ಸೈಯ್ಯದ್ ಹಸನ್ ಬರ್ಮಾವರ್ ಅಗಲಿಕೆ ಪಟ್ಟಣಕ್ಕೂ, ಇಡೀ ಸಮಾಜಕ್ಕೂ ತುಂಬಲಾರದ ನಷ್ಟವಾಗಿದೆ.






