ಭಟ್ಕಳ: ಗೃಹಬಳಕೆ ಸಾಮಗ್ರಿಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಲಕ್ಷಾಂತರ ರೂ. ವಂಚನೆ ಆರೋಪ; ಮೂವರ ಬಂಧನ

ಭಟ್ಕಳ: ಗೃಹ ಬಳಕೆಯ ಸಾಮಗ್ರಿಗಳನ್ನು ಅರ್ಧ ಬೆಲೆಗೆ ನೀಡುವುದಾಗಿ ಜನರಿಗೆ ಮೋಸಮಾಡಿ ಲಕ್ಷಾಂತರ ರೂ. ವಂಚನೆ ನಡೆಸಿದ ಗ್ಯಾಂಗ್‌ನ ಮೂವರು ಆರೋಪಿಗಳನ್ನು ಪೊಲೀಸರು ಮಂಗಳವಾರ ಮಂಗಳೂರಿನಲ್ಲಿ ಬಂಧಿಸಿದ್ದಾರೆ.
ನ. 4ರಂದು ರಾತ್ರಿ ಲಕ್ಷಾಂತರ ರೂಪಾಯಿಗಳೊಂದಿಗೆ ಪರಾರಿಯಾಗಿದ್ದ ನಾಲ್ವರಲ್ಲಿ ಮೂವರನ್ನು ಪೊಲೀಸರು ಗುರುತಿಸಿದ್ದು, ಎಂ. ಗಣೇಶ್ (ಮತಯ್ಯ), ತ್ಯಾಗರಾಜನ್ (ಶಿವಕಡಸಂ) ಮತ್ತು ಮೈನಾದನ್ (ಕೃಪಯ್ಯ) ಎಂದು ತಿಳಿದುಬಂದಿದೆ.
ಬಿಗಿ ಭದ್ರತೆಯೊಂದಿಗೆ ಆರೋಪಿಗಳನ್ನು ಭಟ್ಕಳಕ್ಕೆ ಕರೆತಂದು ಗ್ಲೋಬಲ್ ಎಂಟರ್ಪ್ರೈಸಸ್ ಶೋರೂಮ್‌ನಲ್ಲಿ ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು, ಶೋರೂಮ್ ಹಾಗೂ ಕಚೇರಿಯಿಂದ ಮಹತ್ವದ ದಾಖಲೆಗಳು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸಿ, ಅಲ್ಲಿ ನಡೆದ ಚಟುವಟಿಕೆಗಳ ಕುರಿತು ಮಾಹಿತಿ ಪಡೆದರು. ಆರೋಪಿಗಳ ಬಾಡಿಗೆ ಮನೆಯನ್ನೂ ಪರಿಶೀಲಿಸಿದ ಪೊಲೀಸರು, ಅವರ ಚಟುವಟಿಕೆಗಳು, ಸ್ಥಳೀಯ ಸಂಪರ್ಕಗಳು ಹಾಗೂ ವರ್ತನೆ ಕುರಿತಂತೆ ವಿವರಗಳನ್ನು ದಾಖಲಿಸಿದರು.
ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಇವರನ್ನು ಬಂಧಿಸಿದ ನಂತರ ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನಂತರ ಪೊಲೀಸ್ ರಿಮಾಂಡ್ ಪಡೆದು ಹೆಚ್ಚಿನ ತನಿಖೆ ಮುಂದುವರಿಸಲಾಗಿದೆ.
ಆರೋಪಿಗಳ ಬ್ಯಾಂಕ್ ಖಾತೆಗಳನ್ನು ಈಗಾಗಲೇ ಫ್ರೀಝ್ ಮಾಡಲಾಗಿದ್ದು, ಖಾತೆಗಳಲ್ಲಿ ಇರುವ ಹಣ, ನಡೆದಿರುವ ವ್ಯವಹಾರಗಳು ಹಾಗೂ ಶಂಕಾಸ್ಪದ ಟ್ರಾನ್ಸಾಕ್ಷನ್‌ಗಳ ಪರಿಶೀಲನೆ ನಡೆಯುತ್ತಿದೆ ಎಂದು ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ದಿವಾಕರ್ ಹೇಳಿದ್ದಾರೆ.
ಈ ಕಾರ್ಯಾಚರಣೆಗೆ ಡಿವೈಎಸ್ಪಿ ಮಹೇಶ್ ನೇತೃತ್ವ ವಹಿಸಿದ್ದು, ಸಿಪಿಐ ದಿವಾಕರ್, ಪಿಎಸ್‌ಐ ನವೀನ್, ಪಿಎಸ್‌ಐ ತಂಪ ಮುಗೇರ ಹಾಗೂ ಇತರೆ ಸಿಬ್ಬಂದಿ ತಂಡದಲ್ಲಿ ಭಾಗಿಯಾಗಿದ್ದರು.
ಇದಲ್ಲದೆ, ಈ ಮೋಸ ಕೃತ್ಯದ ಮುಖ್ಯ ಆರೋಪಿ ಉದಯ್ ಕುಮಾರ ರಂಗರಾಜು ಪರಾರಿಯಾಗಿದ್ದು, ಆತನನ್ನು ಬಂಧಿಸಲು ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ ಎಂದು ತಿಳಿದು ಬಂದಿದೆ.







