ಯಲ್ಲಾಪುರ: ಮರ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು; ಮಕ್ಕಳು ಸೇರಿ 7 ಮಂದಿಗೆ ಗಾಯ

ಕಾರವಾರ:ಯಲ್ಲಾಪುರ ತಾಲೂಕಿನ ಡೊಮಗೇರಿ ಬಳಿಯ ಕಿರವತ್ತಿ ಗ್ರಾಮದಲ್ಲಿ ಆಲದ ಮರ ಬಿದ್ದು ಐದು ತಿಂಗಳ ಗರ್ಭಿಣಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಈ ದುರ್ಘಟನೆಯಲ್ಲಿ ಮಕ್ಕಳು ಮತ್ತು ಯುವತಿಯರೂ ಸೇರಿದಂತೆ ಏಳು ಜನರಿಗೆ ಗಾಯಗಳಾಗಿವೆ.
ಮೃತರನ್ನು 28 ವರ್ಷದ ಸಾವಿತ್ರಿ ಬಾಬು ಖರಾತ್ ಎಂದು ಗುರುತಿಸಲಾಗಿದೆ. ಅವರು ಅಂಗನವಾಡಿಯಿಂದ ತಮ್ಮ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ. ದಾರಿಯಲ್ಲಿ ದಿಢೀರನೆ ಆಲದ ಮರ ಧರೆಗೆ ಉರುಳಿದ ಪರಿಣಾಮ, ಮರದ ಕೆಳಗೆ ಸಿಲುಕಿ ಸಾವಿತ್ರಿ ಸ್ಥಳದಲ್ಲೇ ಮೃತಪಟ್ಟರು.
ಸ್ವಾತಿ ಬಾಬು ಖರಾತ್ (17), ಘಾಟು ಲಕ್ಕು ಕೊಕರೆ (5), ಶ್ರಾವಣಿ ಬಾಬು ಖರಾತ್ (2), ಮತ್ತು ಶಾಂಭವಿ ಬಾಬು ಖರಾತ್ (4). ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಸಾನ್ವಿ ಬಾಬು ಕೊಕರೆ (5), ವಿನಯ ಲಕ್ಕು ಕೊಕರೆ (5), ಮತ್ತು ಅನುಶ್ರೀ ಮಾಂಬು ಕೊಕರೆ (5). ಇವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಯಲ್ಲಾಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮರ ಬಿದ್ದ ರಭಸಕ್ಕೆ ಸಮೀಪದ ವಿದ್ಯುತ್ ಕಂಬಗಳೂ ಸಹ ತುಂಡಾಗಿ ನೆಲಕ್ಕುರುಳಿವೆ. ಈ ಘಟನೆ ಸಂಬಂಧ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





