Madhya Pradesh | ತಿಂಗಳುಗಳಿಂದ ಆದಿವಾಸಿ ಮಕ್ಕಳ ಸರಣಿ ಮೃತ್ಯು ಪ್ರಕರಣ; ತಡವಾಗಿ ಎಚ್ಚೆತ್ತ ಸರ್ಕಾರ
►ತಬಸ್ಸುಮ್ ಬರ್ನಗರ್ ವಾಲಾ – scroll. in ವರದಿ

Photo Credit : scroll.in
ಮಹಾಸಿಂಗ್ ಪಾರ್ತೆ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢ ಗಡಿಯಲ್ಲಿರುವ ಹಳ್ಳಿಯ ಕೊನೆಯ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಮಾಟ್ಲಾ ಎಂಬ ಈ ಹಳ್ಳಿಯನ್ನು ತಲುಪಲು, ಕೆಸರಿನ ಹಾದಿ ಮತ್ತು ಜಾರುವ ಇಳಿಜಾರುಗಳಿರುವ ಬೆಟ್ಟವನ್ನು ಒಂದು ಕಿಲೋಮೀಟರ್ ದೂರ ಕಾಲ್ನಡಿಗೆಯಲ್ಲೇ ಹತ್ತಬೇಕು. ಪೂರ್ವ ಮಧ್ಯಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿರುವ ಈ ಹಳ್ಳಿ ಗುಡ್ಡಬೆಟ್ಟಗಳು ಮತ್ತು ಕಾಡುಗಳಿಂದ ಆವೃತವಾಗಿದೆ. ಹತ್ತಿರದ ಕಾನ್ಹಾ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ಇದು ಪ್ರಶಾಂತ ತಾಣದಂತೆ ಕಾಣುತ್ತದೆ.
ಆದರೆ ಈ ದೂರದ ಪ್ರದೇಶದಲ್ಲಿ ವಾಸಿಸುವ ಪಾರ್ತೆ ಮತ್ತು ಬೈಗಾ ಬುಡಕಟ್ಟಿನ ಇತರ ಜನರಿಗೆ ಜೀವನ ನಿತ್ಯದ ಹೋರಾಟವಾಗಿದೆ. ಸರ್ಕಾರದಿಂದಲೂ ಇವರಿಗೆ ಯಾವುದೇ ನೆರವು ಸಿಗುತ್ತಿಲ್ಲ.
ಪಾರ್ತೆ ತೆಂಡೂ ಎಲೆ ಹಾಗೂ ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಿ ಮಾರಿ, ಅಥವಾ ಇತರರ ಜಮೀನಿನಲ್ಲಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಾರೆ. ಸರ್ಕಾರದ ಪಡಿತರವನ್ನು ಹೊರತುಪಡಿಸಿ, ಅವರು ಸಿರಿಧಾನ್ಯಗಳನ್ನು ಬೆಳೆಯುತ್ತಾರೆ ಹಾಗೂ ಕಾಡಿನಲ್ಲಿ ಬೀಜಗಳನ್ನು ಹುಡುಕಿ ತರುತ್ತಾರೆ. ಅವರ ಕತ್ತಲೆಯ ಗುಡಿಸಲಿನಲ್ಲಿ ಕೆಲವು ಸ್ಟೀಲ್ ಪಾತ್ರೆಗಳನ್ನು ಹೊರತುಪಡಿಸಿದರೆ ಬೇರೇನೂ ಇಲ್ಲ.
"ಸಾಧ್ಯವಾದರೆ ನಾವು ದಿನಕ್ಕೆ ಎರಡು ಹೊತ್ತು ಊಟ ಮಾಡುತ್ತೇವೆ. ಅದೆಷ್ಟೋ ದಿನಗಳಲ್ಲಿ ನನ್ನ ಮಕ್ಕಳು ದಿನಕ್ಕೆ ಒಂದು ಹೊತ್ತು ಊಟ ಮಾಡುತ್ತಾರೆ" ಎಂದು ಅವರು ಹೇಳಿರುವುದಾಗಿ scroll.in ವರದಿ ಮಾಡಿದೆ.
Mahasingh Parte lost two children in May to the outbreak. Credit: Tabassum Barnagarwala.
ಮೇ ತಿಂಗಳಲ್ಲಿ ಪಾರ್ತೆ ಅವರ ನಾಲ್ಕು ವರ್ಷದ ಮಗ ಸಂಲುಗೆ ತೀವ್ರ ಜ್ವರ ಕಾಣಿಸಿಕೊಂಡಿತು. ಅದರ ಬೆನ್ನಲ್ಲೇ ಅವರ ಆರು ವರ್ಷದ ಮಗಳು ಶಂಕುವಿನ ದೇಹವೂ ಬಿಸಿಯಾಗತೊಡಗಿತು.
ಒಂದಾದ ಮೇಲೊಂದರಂತೆ ಅವರ ಐದೂ ಮಕ್ಕಳು ಅನಾರೋಗ್ಯಕ್ಕೀಡಾದರು. ಆದರೆ ಸಂಲು ಮತ್ತು ಶಂಕುವಿನ ಪರಿಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಇಬ್ಬರ ದೇಹದ ಮೇಲೆಯೂ ದದ್ದುಗಳಂತಹ ಕೆಂಪು ಗುಳ್ಳೆಗಳು ಎದ್ದಿದ್ದವು. ಕೆಮ್ಮು ಮತ್ತು ನೆಗಡಿ ಕಾಣಿಸಿಕೊಂಡು, ಕಣ್ಣುಗಳು ಊದಿಕೊಂಡಿದ್ದವು. ತಿಂದ ಆಹಾರ ಜೀರ್ಣವಾಗದೆ, ಮಕ್ಕಳು ವಾಂತಿ ಮಾಡುತ್ತಲೇ ಇದ್ದರು.
ಪಾರ್ತೆ ತಮ್ಮ ಹಳ್ಳಿಯ 'ಪಂಡಾ ಪೂಜಾರಿ' ಎಂಬ ನಾಟಿ ವೈದ್ಯರ ಬಳಿಗೆ ಹೋದರು. ಅವರು ಕೆಲವು ಮಂತ್ರಗಳನ್ನು ಹೇಳಿ, ಮಕ್ಕಳ ಬಳಿ ಇಡಲು ನೀರು ಕೊಟ್ಟು, ಮಕ್ಕಳು ಗುಣಮುಖರಾಗುತ್ತಾರೆ ಎಂದು ಧೈರ್ಯ ತುಂಬಿದರು.
ಬೈಗಾ ಬುಡಕಟ್ಟಿನ ಜನರು ನಾಟಿ ವೈದ್ಯರನ್ನು ಹೆಚ್ಚಾಗಿ ನಂಬುತ್ತಾರೆ. ಅಲ್ಲಿ ಹೆಸರಿಗಷ್ಟೇ ಇರುವ ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ನೆಚ್ಚಿಕೊಳ್ಳಲು ಅವರು ಹಿಂಜರಿಯುತ್ತಾರೆ.
ಪಾರ್ತೆ ಎಂದಿಗೂ ಆಸ್ಪತ್ರೆಗೆ ಹೋದವರಲ್ಲ. ತಮ್ಮ ಹೆಂಡತಿಯ ಐದೂ ಹೆರಿಗೆಗಳ ಸಮಯದಲ್ಲೂ ಅವರು ಆಸ್ಪತ್ರೆ ಮೆಟ್ಟಿಲೇರಿರಲಿಲ್ಲ. "ನಮಗೆ ಆಸ್ಪತ್ರೆಗಳ ಮೇಲೆ ನಂಬಿಕೆಯಿಲ್ಲ" ಎನ್ನುತ್ತಾರೆ ಅವರು. ಐದು ಕಿಲೋಮೀಟರ್ ದೂರದ ಮಚ್ಚುರ್ದಾ ಹಳ್ಳಿಯಲ್ಲಿ ಹತ್ತಿರದ ಆರೋಗ್ಯ ಕೇಂದ್ರವಿದೆಯಾದರೂ, ಅಲ್ಲಿ ವೈದ್ಯರಿಲ್ಲ.
ಆದರೆ, ಈ ಬಾರಿ ಮಂತ್ರಗಳು ಮಕ್ಕಳನ್ನು ಗುಣಪಡಿಸಲಿಲ್ಲ.
ಮೇ 18ರ ಬೆಳಿಗ್ಗೆ, ಕಾಯಿಲೆ ಬಿದ್ದ ನಾಲ್ಕೇ ದಿನಗಳಲ್ಲಿ ಸಂಲು ತೀರಿಕೊಂಡ. ಮರುದಿನ ಸಂಜೆ, ಶಂಕು ಕೂಡ ಕೊನೆಯುಸಿರೆಳೆದಳು.
ಕನಿಷ್ಠ ಎರಡು ತಿಂಗಳ ಕಾಲ ಆರೋಗ್ಯ ಇಲಾಖೆಯ ಯಾರೊಬ್ಬರೂ ಅವರ ಮನೆಗೆ ಭೇಟಿ ನೀಡಲಿಲ್ಲ ಅಥವಾ ಈ ಸಾವಿನ ಬಗ್ಗೆ ಅವರಿಗೆ ಮಾಹಿತಿಯೂ ಇರಲಿಲ್ಲ. ಗ್ರಾಮೀಣ ಜನರ ಆರೋಗ್ಯದ ಉಸ್ತುವಾರಿ ನೋಡಿಕೊಳ್ಳುವ ಆಶಾ ಕಾರ್ಯಕರ್ತೆಯರು ಈ ಹಳ್ಳಿಯಲ್ಲಿ ಇಲ್ಲವೇ ಇಲ್ಲ.
Parte stands near the graves of his children. Credit: Tabassum Barnagarwala.
ಇದಕ್ಕೂ ಒಂದು ವಾರದ ಮೊದಲು, ಅದೇ ಹಳ್ಳಿಯ 10 ವರ್ಷದ ಸದೇಶ್ ಎಂಬ ಮಗು ಕೂಡ ಇದೇ ರೀತಿಯ ರೋಗಲಕ್ಷಣಗಳಿಂದ, ಅಂದರೆ ಜ್ವರ, ಬಾಯಿ ಮತ್ತು ನಾಲಿಗೆಯ ಮೇಲೆ ಬಿಳಿ ಮಚ್ಚೆಗಳು, ದೇಹದ ಮೇಲೆ ದದ್ದುಗಳು ಹಾಗೂ ವಾಂತಿಯಿಂದ ಬಳಲಿ ಮೃತಪಟ್ಟಿತ್ತು.
ಸದೇಶ್ನ ಚಿಕ್ಕಪ್ಪ ಹಂಸು ಧುರ್ವೆ ಮಾತನಾಡಿ, ತಾವೂ ಕೂಡ ಮಗುವನ್ನು ಪಂಡಾ ಪೂಜಾರಿ ಬಳಿಗೇ ಕರೆದುಕೊಂಡು ಹೋಗಿದ್ದಾಗಿ 'ಸ್ಕ್ರಾಲ್'ಗೆ ತಿಳಿಸಿದ್ದಾರೆ. "ಅವನ ಸ್ಥಿತಿ ಸುಧಾರಿಸದಿದ್ದಾಗ, ಹತ್ತಿರದ ಖಾಡಿ (ಛತ್ತೀಸ್ಗಢದ ಒಂದು ಪಟ್ಟಣ) ನಗರದ ಖಾಸಗಿ ವೈದ್ಯರ ಬಳಿಗೆ ಕರೆದುಕೊಂಡು ಹೋದೆವು. ಆದರೆ ಮಗುವಿನ ಸ್ಥಿತಿ ಆಗಲೇ ಅತ್ಯಂತ ಗಂಭೀರವಾಗಿದೆ ಎಂದು ವೈದ್ಯರು ಹೇಳಿದರು. ಹಾಗಾಗಿ ನಾವು ಅವನನ್ನು ಮನೆಗೆ ಕರೆತಂದೆವು."
ಗ್ರಾಮಸ್ಥರು ಆ ಮೂವರೂ ಮಕ್ಕಳ ಮೃತದೇಹಗಳನ್ನು ಕೈಯಲ್ಲಿ ಹಿಡಿದುಕೊಂಡು ಬೆಟ್ಟವನ್ನು ಹತ್ತಿ, ಕಾಡಿನಲ್ಲಿ ದಫನ ಮಾಡಿದ್ದರು. ಆ ಜಾಗದ ಗುರುತಿಗಾಗಿ ದೊಡ್ಡ ಕಲ್ಲುಗಳನ್ನು ಇಡಲಾಯಿತು.
ಸರ್ಕಾರಕ್ಕೆ ತಿಳಿಯದಂತೆ, ಈ ಮೂವರು ಮಕ್ಕಳ ಸಾವು ಮಧ್ಯಪ್ರದೇಶದ ಈ ದೂರದ ಪ್ರದೇಶದಲ್ಲಿ ಕನಿಷ್ಠ ಎರಡು ತಿಂಗಳ ಕಾಲ ಯಾರಿಗೂ ತಿಳಿಯದೆ ಹರಡಿದ ರಹಸ್ಯಮಯ ದಡಾರ ಮತ್ತು ಮಲೇರಿಯಾ ಸಾಂಕ್ರಾಮಿಕ ರೋಗದ ಮೊದಲ ಬಲಿಗಳಾಗಿರಬಹುದು. ಈ ರೋಗದಿಂದಾಗಿ ಬೈಗಾ ಮತ್ತು ಗೋಂಡ್ ಬುಡಕಟ್ಟಿನ ಕನಿಷ್ಠ 25 ಮಕ್ಕಳು ಮೃತಪಟ್ಟಿದ್ದಾರೆ.
ಈ ರೋಗ ಹರಡಿದ ಹಾದಿಯನ್ನು ಪತ್ತೆಹಚ್ಚಲು ಸ್ಕ್ರಾಲ್ ತಂಡವು ಬಾಲಾಘಾಟ್ ಗೆ ಭೇಟಿ ನೀಡಿತು. ಮೊದಲ ಸಾವು ಸಂಭವಿಸಿದ ಮಾಟ್ಲಾ ಹಳ್ಳಿಯಿಂದ ಆರಂಭಿಸಿ, ಅಧಿಕೃತವಾಗಿ ರೋಗದ ಕೇಂದ್ರಬಿಂದುವಾದ ಬೋಂದಾರಿ ಹಾಗೂ ಈಗ ಸೋಂಕು ಹರಡುತ್ತಿರುವ ಇತರ ಹಳ್ಳಿಗಳಿಗೂ ಭೇಟಿ ನೀಡಿತು.
ಅನೇಕ ಮಕ್ಕಳು ಸಾಯುವ ಮೊದಲು ವಾರಗಟ್ಟಲೆ ಅನಾರೋಗ್ಯದಿಂದ ಬಳಲುತ್ತಿದ್ದರು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಕ್ಕಿದ್ದರೆ ಅವರ ಜೀವ ಉಳಿಸಬಹುದಿತ್ತು ಎಂಬುದನ್ನು ಇದು ತೋರಿಸುತ್ತದೆ. "ಇಲ್ಲಿ ಯಾವುದೇ ಆರೋಗ್ಯ ವ್ಯವಸ್ಥೆ ಇಲ್ಲದ ಕಾರಣ ನಾವು ಇಷ್ಟೊಂದು ಪ್ರಕರಣಗಳನ್ನು ಮತ್ತು ಸಾವುಗಳನ್ನು ನೋಡುತ್ತಿದ್ದೇವೆ" ಎಂದು ಕಾಂಗ್ರೆಸ್ ಶಾಸಕ ಸಂಜಯ್ ಉಯ್ಕೆ ಹೇಳಿದರು.
►‘ನನ್ನ ಮಕ್ಕಳು ಸತ್ತ ಮೇಲೆ ಈಗ ಆರೋಗ್ಯ ತಂಡಗಳು ಬರುತ್ತಿವೆ’
ಶಾಸಕ ಉಯ್ಕೆ ಅವರ ಮಾತುಗಳು scroll.in ತಂಡ ಸ್ಥಳದಲ್ಲಿ ಕಂಡ ವಾಸ್ತವ ಸ್ಥಿತಿಗೆ ಸರಿಹೊಂದುತ್ತಿದ್ದವು. ಬುಡಕಟ್ಟು ಹಳ್ಳಿಗಳ ಅತ್ಯಲ್ಪ ಸಂಖ್ಯೆಯ ಮಕ್ಕಳಿಗೆ ಮಾತ್ರ ದಡಾರ ವಿರುದ್ಧ ಲಸಿಕೆ ಹಾಕಿರುವುದು ಕಂಡುಬಂತು. ತಮ್ಮ ಐದೂ ಮಕ್ಕಳಿಗೆ ಯಾವುದೇ ರೋಗ ನಿರೋಧಕ ಲಸಿಕೆ ಹಾಕಿಸಿಲ್ಲ ಎಂದು ಪಾರ್ತೆ ಹೇಳಿದ್ದಾರೆ.
ಮೇ ತಿಂಗಳಲ್ಲಿ ಮಾಟ್ಲಾದಲ್ಲಿ ಮೂರು ಮಕ್ಕಳು ಮೃತಪಟ್ಟರೆ, ಜೂನ್ ನಲ್ಲಿ ಇನ್ನೂ ನಾಲ್ಕು, ಮತ್ತು ಜುಲೈನಲ್ಲಿ ಬಿರ್ಸಾ ತಾಲೂಕಿನ ಇತರ ಹಳ್ಳಿಗಳಲ್ಲಿ ಮೂರು ಮಕ್ಕಳು ತೀರಿಕೊಂಡರು. ಮಾಟ್ಲಾದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹಳ್ಳಿಯಲ್ಲಿ ಸಂಭವಿಸಿದ ಸಾವುಗಳ ಬಗ್ಗೆ ತಮಗೆ ತಿಳಿದಿತ್ತು, ಆದರೆ ಅವುಗಳನ್ನು ಮೇಲಧಿಕಾರಿಗಳಿಗೆ ವರದಿ ಮಾಡಲು ಸಾಧ್ಯವಾಗಲಿಲ್ಲ ಎಂದಿದ್ದಾರೆ.
ಜುಲೈ 22ರಂದು ಒಂಭತ್ತನೇ ಸಾವು ಸಂಭವಿಸಿದ ಬಳಿಕವಷ್ಟೇ ಆರೋಗ್ಯ ಇಲಾಖೆ ಕಾರ್ಯಪ್ರವೃತ್ತವಾಯಿತು.
ಮೃತಪಟ್ಟ 25 ಮಕ್ಕಳ ಬಗ್ಗೆ ಮಧ್ಯಪ್ರದೇಶ ಆರೋಗ್ಯ ಇಲಾಖೆಯ ಬಳಿ ಇರುವ ದಾಖಲೆಗಳನ್ನು ಸ್ಕ್ರಾಲ್ ಪರಿಶೀಲಿಸಿದ್ದು, ಅದರಲ್ಲಿ ಕೇವಲ ಒಂಭತ್ತು ಮಕ್ಕಳಿಗೆ ಮಾತ್ರ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಸ್ವಲ್ಪಮಟ್ಟಿನ ವೈದ್ಯಕೀಯ ಚಿಕಿತ್ಸೆ ಸಿಕ್ಕಿದೆ ಎಂಬುದು ತಿಳಿದುಬಂದಿದೆ. ರೋಗದಿಂದ ಮೃತಪಟ್ಟ ಮಕ್ಕಳ ಸಂಖ್ಯೆ 29 ಎಂದು ಸ್ಥಳೀಯ ಶಾಸಕರು ಮತ್ತು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.
ಆಗಸ್ಟ್ 29ರಂದು ಮುಖ್ಯಮಂತ್ರಿ ಮೋಹನ್ ಯಾದವ್ ಅವರು ರೋಗಪೀಡಿತ ಹಳ್ಳಿಗಳಿಗೆ ಭೇಟಿ ನೀಡಿ, ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾದ 22 ಮಕ್ಕಳ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದರು.
ಮೊದಲ ಏಳು ಸಾವುಗಳಲ್ಲಿ, 1ರಿಂದ 12 ವರ್ಷದ ಮಕ್ಕಳು ಯಾವುದೇ ವೈದ್ಯಕೀಯ ಆರೈಕೆಯಿಲ್ಲದೆ ಮನೆಯಲ್ಲೇ ಮೃತಪಟ್ಟಿದ್ದಾರೆ. ಇದರಲ್ಲಿ ಯಾರೊಬ್ಬರಿಗೂ ದಡಾರ ವಿರುದ್ಧ ಲಸಿಕೆ ಹಾಕಿಸಿರಲಿಲ್ಲ.
ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೊದಲ ಕೊಂಡಿಯಾಗಿರುವ ಜೂನಿಯರ್ ನರ್ಸ್ಗಳು ಮತ್ತು ಆಶಾ ಕಾರ್ಯಕರ್ತೆಯರು ನಾವು ಭೇಟಿ ನೀಡಿದ ಹಳ್ಳಿಗಳಲ್ಲಿ ಇರಲೇ ಇಲ್ಲ. ಮೃತಪಟ್ಟ ಅನೇಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದರು ಮತ್ತು ಮಲೇರಿಯಾ ಸೋಂಕಿಗೆ ಒಳಗಾಗಿದ್ದರು. ಇದು ದಡಾರ ಸೋಂಕನ್ನು ಇನ್ನಷ್ಟು ತೀವ್ರಗೊಳಿಸಿತು ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಬೈಗಾ ಸಮುದಾಯದವರು ಕಾಡಿನ ಸಮೀಪ ವಾಸಿಸುವ ಅತ್ಯಂತ ಸಂಕಷ್ಟದಲ್ಲಿರುವ ಬುಡಕಟ್ಟು ಗುಂಪಿಗೆ ಸೇರಿದವರಾಗಿದ್ದರೆ, ಗೋಂಡ್ ಸಮುದಾಯದವರು ಮಧ್ಯ ಭಾರತದ ಪ್ರಮುಖ ಬುಡಕಟ್ಟು ಗುಂಪುಗಳಲ್ಲಿ ಒಂದಾಗಿದ್ದಾರೆ. ನಂಬಿಕೆಯ ಕೊರತೆಯಿಂದಾಗಿ ಇವರು ಸರ್ಕಾರಿ ಆಸ್ಪತ್ರೆಗಳಿಂದ ದೂರ ಉಳಿಯುತ್ತಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ದೂರದ ಪ್ರದೇಶದಲ್ಲಿ ಸರ್ಕಾರಿ ಸೌಲಭ್ಯಗಳು ಹೆಸರಿಗಷ್ಟೇ ಇವೆ. "ನಮ್ಮ ಹಳ್ಳಿಯಲ್ಲಿ ರಸ್ತೆಯೇ ಇಲ್ಲ, ಆಂಬುಲೆನ್ಸ್ ಬರಲು ಸಾಧ್ಯವಿಲ್ಲ. ನಾವು ಅನಾರೋಗ್ಯಪೀಡಿತರನ್ನು ಬಿದಿರಿನ ಕೋಲುಗಳಿಗೆ ಕಟ್ಟಿ ಹೊರಬೇಕಾಗಿದೆ" ಎಂದು ದಡಾರ ಮತ್ತು ಮಲೇರಿಯಾ ಸೋಂಕಿಗೆ ತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಂಡ ಸಮರೂ ಧುರ್ವೆ ಹೇಳಿದರು.
ಆಗಸ್ಟ್ ಅಂತ್ಯದಲ್ಲಿ, ತಮ್ಮ ಹಳ್ಳಿಗೆ ಕ್ರಿಮಿನಾಶಕ ಸಿಂಪಡಿಸುವ ಯಂತ್ರದೊಂದಿಗೆ ಬಂದ ಆರೋಗ್ಯ ಕಾರ್ಯಕರ್ತರನ್ನು ನೋಡಿದ ಅವರು, "ನನ್ನ ಮಕ್ಕಳು ಸತ್ತ ಮೇಲೆ ಈಗ ಆರೋಗ್ಯ ತಂಡಗಳು ಸಿಂಪಡಣೆ ಮಾಡಲು ಬರುತ್ತಿವೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
Parte stands near the graves of his children. Credit: Tabassum Barnagarwala.
►ರೋಗ ಪತ್ತೆಯಾದದ್ದು ಹೇಗೆ?
ಮೇ ತಿಂಗಳಲ್ಲಿ, ಪಾರ್ತೆ ಅವರ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದ ಅದೇ ಸಮಯದಲ್ಲಿ, ಸಮರೂ ಧುರ್ವೆ ಅವರು ಬೋಂದಾರಿ ಹಳ್ಳಿಯಿಂದ 10 ಕಿಲೋಮೀಟರ್ ದೂರದಲ್ಲಿದ್ದ ಮಾಟ್ಲಾಗೆ ಪ್ರಯಾಣಿಸಿದ್ದರು.
"ನಾನು ಹಿಂತಿರುಗಿದ ಬಳಿಕ, ನನ್ನ ಏಳೂ ಮಕ್ಕಳು, ಹೆಂಡತಿ ಮತ್ತು ನಾನು ಎಲ್ಲರೂ ಕಾಯಿಲೆ ಬಿದ್ದೆವು" ಎಂದು 56 ವರ್ಷದ ಧುರ್ವೆ ಹೇಳಿದ್ದಾರೆ. ಕೆಲವು ದಿನಗಳ ಬಳಿಕ, ಹತ್ತಿರದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅವರ ಸಹೋದರನ ಕುಟುಂಬವೂ ರೋಗಕ್ಕೆ ತುತ್ತಾಯಿತು.
ಧುರ್ವೆ ಅವರ ಇಬ್ಬರು ಮಕ್ಕಳಾದ ಒಂದು ವರ್ಷದ ಸಾಹಿಲ್ ಮತ್ತು 12 ವರ್ಷದ ಲಮ್ನಿನ್ ಸ್ಥಿತಿ ಗಂಭೀರವಾಯಿತು. ಅವರ ದೇಹದ ಮೇಲೆ ದದ್ದುಗಳು, ಬಾಯಿಯಲ್ಲಿ ಬಿಳಿ ಮಚ್ಚೆಗಳು, ಆಹಾರ ಸೇವಿಸಲು ತೊಂದರೆ, ತೀವ್ರ ಜ್ವರ, ನೆಗಡಿ ಕಾಣಿಸಿಕೊಂಡು, ಕೊನೆಯಲ್ಲಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದರು. ಇವು ದಡಾರ ಮತ್ತು ಮಲೇರಿಯಾದ ಸ್ಪಷ್ಟ ಲಕ್ಷಣಗಳಾಗಿವೆ ಎಂದು ಇಬ್ಬರು ತಜ್ಞರು ಸ್ಕ್ರಾಲ್ಗೆ ತಿಳಿಸಿದ್ದಾರೆ.
ಮೇ ತಿಂಗಳಿಂದ ಜೂನ್ ವರೆಗೆ ಅವರು ಸುಮಾರು ಒಂದು ತಿಂಗಳ ಕಾಲ ಅನಾರೋಗ್ಯದಿಂದ ಬಳಲುತ್ತಿದ್ದರೂ, ಅವರನ್ನು ಆಸ್ಪತ್ರೆಗೆ ಸೇರಿಸಲಿಲ್ಲ. ಬೋಂದಾರಿ ಹಳ್ಳಿಯಲ್ಲಿ ಯಾವುದೇ ಆಶಾ ಕಾರ್ಯಕರ್ತೆಯರಿಲ್ಲ, ಹಾಗೂ ಸೋನ್ಗುಡ್ಡದಲ್ಲಿರುವ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇರಲಿಲ್ಲ.
ಜೂನ್ 26ರಂದು ಲಮ್ನಿನ್ ತೀರಿಕೊಂಡರೆ, ಮರುದಿನವೇ ಸಾಹಿಲ್ ಮೃತಪಟ್ಟ. ಮೂರು ವಾರಗಳ ಬಳಿಕ, ಅದೇ ಹಳ್ಳಿಯಲ್ಲಿ ಮೂರನೇ ಮಗು ಕೂಡ ಅಸು ನೀಗಿತು.
ಗ್ರಾಮಸ್ಥರನ್ನು ಹೊರತುಪಡಿಸಿ, ಸರ್ಕಾರದಲ್ಲಿದ್ದ ಯಾರಿಗೂ ಈ ಸಾವುಗಳ ಬಗ್ಗೆ ಮಾಹಿತಿ ಇರಲಿಲ್ಲ.
ಜುಲೈನಲ್ಲಿ, ಅದೋರಿ ಪಂಚಾಯತ್ ಸರಪಂಚ್ ಪರಶುರಾಮ ಧುರ್ವೆ ಅವರಿಗೆ ಬೋಂದಾರಿ ಹಳ್ಳಿಯಲ್ಲಿ ಮೂರು ಮಕ್ಕಳು ಮೃತಪಟ್ಟಿರುವ ಸುದ್ದಿ ತಿಳಿಯಿತು. "ಏನೋ ಸರಿ ಇಲ್ಲ ಅನಿಸಿತು" ಎನ್ನುತ್ತಾರೆ ಧುರ್ವೆ.
ಜುಲೈ 22ರಂದು, ಧುರ್ವೆ ಅವರು ಆಗಿನ ಉಪವಿಭಾಗಾಧಿಕಾರಿ ಅರ್ಪಿತ್ ಗುಪ್ತಾ ಅವರಿಗೆ ಮಾಹಿತಿ ನೀಡಿದರು. ಅವರು ಮರುದಿನವೇ ಹಳ್ಳಿಗೆ ತಂಡವೊಂದನ್ನು ಕಳುಹಿಸಿದರು. "ಆರಂಭದಲ್ಲಿ ಇದು ಸಾಮಾನ್ಯ ಜ್ವರ ಎಂದು ನಾವು ಭಾವಿಸಿದ್ದೆವು. ಆದರೆ ನಾವು ಮನೆ ಮನೆಗೆ ತೆರಳಿದಾಗ, ಪ್ರತಿ ಮನೆಯಲ್ಲೂ ಕಾಯಿಲೆ ಬಿದ್ದ ಮಕ್ಕಳು ಕಂಡುಬಂದರು" ಎಂದು ಗುಪ್ತಾ ಹೇಳಿದ್ದಾರೆ.
ಜುಲೈ ಅಂತ್ಯದ ವೇಳೆಗೆ, ರೋಗದ ಸೋಂಕು ಅತ್ಯಂತ ವ್ಯಾಪಕವಾಗಿ ಹರಡಿದೆ ಎಂಬ ಸುಳಿವು ಗುಪ್ತಾ ಅವರಿಗೆ ಸಿಕ್ಕಿತ್ತು.
ಬೋಂದಾರಿ ಹಳ್ಳಿ ಈ "ರಹಸ್ಯ ಸಾಂಕ್ರಾಮಿಕ ರೋಗದ" ಕೇಂದ್ರಬಿಂದುವಾಯಿತು. ಅಲ್ಲಿನ 103 ಮನೆಗಳ ಪೈಕಿ ಪ್ರತಿಯೊಂದು ಮನೆಯಲ್ಲೂ ಕನಿಷ್ಠ ಒಂದು ಮಗು ಕಾಯಿಲೆಯಿಂದ ಬಳಲುತ್ತಿತ್ತು. ಬೈಗಾ ಬುಡಕಟ್ಟು ಸಮುದಾಯದ ಜನರು ಇದರಿಂದ ಸಂಕಷ್ಟಕ್ಕೀಡಾದರು.
"ಪ್ರತಿ ವರ್ಷ ಮಳೆಗಾಲದಲ್ಲಿ ಕೆಲ ಸಾವುಗಳು ಸಂಭವಿಸುತ್ತವೆ. ಆದರೆ ನಾವು ಎಂದಿಗೂ ಇಂತಹ ಪರಿಸ್ಥಿತಿಯನ್ನು ನೋಡಿರಲಿಲ್ಲ. ಎಲ್ಲೆಲ್ಲೂ ಮಕ್ಕಳು ಅನಾರೋಗ್ಯಕ್ಕೆ ಒಳಗಾಗಿದ್ದರು" ಎಂದು ಧುರ್ವೆ ಹೇಳಿದ್ದಾರೆ.
ಆಗಸ್ಟ್ ಆರಂಭದಲ್ಲಿ ಆರೋಗ್ಯ ತಂಡಗಳು ಈ ಗುಡ್ಡಗಾಡು ಪ್ರದೇಶಕ್ಕೆ ಧಾವಿಸಿದವು. ಸಮೀಕ್ಷೆ ನಡೆಸಲು 100 ಕಿಲೋಮೀಟರ್ ದೂರದಲ್ಲಿದ್ದ ಕಾರ್ಯಕರ್ತರನ್ನೂ ಇಲ್ಲಿಗೆ ನಿಯೋಜಿಸಲಾಯಿತು. ಅವರು ಇತರ ಹಳ್ಳಿಗಳ ಮಕ್ಕಳಲ್ಲೂ ದಡಾರವನ್ನು ಹೋಲುವ ರೋಗಲಕ್ಷಣಗಳನ್ನು ವರದಿ ಮಾಡಲು ಪ್ರಾರಂಭಿಸಿದರು.
ಆಗಸ್ಟ್ ಮಧ್ಯದವರೆಗೆ, ಈ ರೋಗವು ಹೆಚ್ಚಾಗಿ ನಾಲ್ಕು ಗ್ರಾಮ ಪಂಚಾಯಿತಿಗಳ 18 ಹಳ್ಳಿಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಆಗಸ್ಟ್ ಕೊನೆಯ ವೇಳೆಗೆ, ಆ ಹಳ್ಳಿಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲೂ ಕಾಯಿಲೆ ಬಿದ್ದ ಮಕ್ಕಳು ಕಂಡುಬರತೊಡಗಿದರು.
"ಇಲ್ಲಿ ಮೊದಲ ಬಾರಿಗೆ ದಡಾರ ರೋಗ ಕಾಣಿಸಿಕೊಂಡಿದ್ದರಿಂದ, ರೋಗಲಕ್ಷಣಗಳನ್ನು ಗುರುತಿಸುವಲ್ಲಿ ಅನೇಕ ಆರೋಗ್ಯ ಕಾರ್ಯಕರ್ತರಿಗೆ ತರಬೇತಿ ಇರಲಿಲ್ಲ. ಇದು ವಿಳಂಬಕ್ಕೆ ಕಾರಣವಾಯಿತು" ಎಂದು ಬಳಿಕ ಬೇರೆಡೆಗೆ ವರ್ಗಾವಣೆಯಾದ ಉಪವಿಭಾಗಾಧಿಕಾರಿ ಅರ್ಪಿತ್ ಗುಪ್ತಾ ಹೇಳಿದರು.
ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವಂತೆ ಕುಟುಂಬಗಳ ಮನವೊಲಿಸುವ ಕಠಿಣ ಸವಾಲು ಆರೋಗ್ಯ ಕಾರ್ಯಕರ್ತರಿಗೆ ಎದುರಾಯಿತು. ಆರೋಗ್ಯ ತಂಡಗಳು ಬಂದಾಗ ಅನೇಕ ಬುಡಕಟ್ಟು ನಿವಾಸಿಗಳು ಕಾಡಿನಲ್ಲಿ ಅಡಗಿಕೊಳ್ಳುತ್ತಿದ್ದರು. ಅವರು ಈ ಅಪರಿಚಿತ ಸೋಂಕನ್ನು 'ಮಾತಾ' (ದೇವಿಯ ಕೋಪ) ಎಂದು ಕರೆದು, ಗುಣಮುಖರಾಗಲು ಪಂಡಾ ಅರ್ಚಕರ ಬಳಿಗೆ ಹೋಗುತ್ತಿದ್ದರು. ಇದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುವುದನ್ನು ಮತ್ತಷ್ಟು ವಿಳಂಬಗೊಳಿಸಿತು.
"ಮಕ್ಕಳನ್ನು ಆಸ್ಪತ್ರೆಗೆ ಸೇರಿಸುವುದು ಕೂಡ ಕಷ್ಟಕರವಾಗಿತ್ತು" ಎಂದು ಬಾಲಾಘಾಟ್ ನ ಮಾಜಿ ಮುಖ್ಯ ವೈದ್ಯಾಧಿಕಾರಿ ಡಾ. ಪರೇಶ್ ಉಪಲಾಪ್ ಹೇಳಿದರು. (ಉಪಲಾಪ್ ಅವರನ್ನು ಈ ವಾರದ ಆರಂಭದಲ್ಲಿ ಹುದ್ದೆಯಿಂದ ತೆಗೆದುಹಾಕಲಾಗಿತ್ತು.) "ಪೋಷಕರು ತಮ್ಮ ಮಕ್ಕಳೊಂದಿಗೆ ಆಸ್ಪತ್ರೆಯ ವಾರ್ಡ್ ಗಳಿಂದ ಓಡಿಹೋಗುತ್ತಿದ್ದರು." ಅಂತಿಮವಾಗಿ, ಜಿಲ್ಲಾಧಿಕಾರಿಗಳು ವಾರ್ಡ್ಗಳ ಹೊರಗೆ ಪೊಲೀಸ್ ಪೇದೆಗಳನ್ನು ಭದ್ರತೆಗೆ ನಿಯೋಜಿಸಲು ಆದೇಶಿಸಿದರು.
►ದಡಾರ ಮತ್ತು ಮಲೇರಿಯಾ
ಜುಲೈ 27ರಂದು, ರಾಷ್ಟ್ರೀಯ ಬುಡಕಟ್ಟು ಆರೋಗ್ಯ ಸಂಶೋಧನಾ ಸಂಸ್ಥೆಯ (NITHR) ಸದಸ್ಯರು ಜಿಲ್ಲಾ ಆರೋಗ್ಯ ಇಲಾಖೆಗೆ ಸಲಹೆ ನೀಡಲು ಬಾಲಾಘಾಟ್ ಗೆ ಭೇಟಿ ನೀಡಿದರು.
ಸಂಸ್ಥೆಯು ಸಿದ್ಧಪಡಿಸಿದ ವರದಿಯ ಪ್ರಕಾರ, ಈ ಹಳ್ಳಿಗಳಲ್ಲಿ ದಡಾರ ಪ್ರಕರಣಗಳು ಹೆಚ್ಚಿರುವುದು ಕಂಡುಬಂದಿದೆ. ಪರೀಕ್ಷಿಸಿದ 47 ರಕ್ತದ ಮಾದರಿಗಳಲ್ಲಿ 21 ಮಾದರಿಗಳಲ್ಲಿ ದಡಾರ ಪತ್ತೆಯಾಗಿದೆ. ಹಾಗೆಯೇ 16 ಮಾದರಿಗಳಲ್ಲಿ ಎಂಟರಲ್ಲಿ ಮಲೇರಿಯಾ ಪತ್ತೆಯಾಗಿದೆ.
ಜುಲೈ ಕೊನೆಯ ವಾರದಲ್ಲಿ, ಆರೋಗ್ಯ ಇಲಾಖೆಯು ಕಾಯಿಲೆ ಬಿದ್ದ ಮಕ್ಕಳ ರಕ್ತದ ಮಾದರಿಗಳನ್ನು ಜಬಲ್ಪುರ ವೈದ್ಯಕೀಯ ಕಾಲೇಜು ಮತ್ತು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿಕೊಟ್ಟಿತ್ತು.
ಜಬಲ್ಪುರ ವೈದ್ಯಕೀಯ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗವು, 64 ಸೀರಮ್ ಮಾದರಿಗಳಲ್ಲಿ 17ರಲ್ಲಿ ದಡಾರ ವೈರಸ್ ಮತ್ತು 96 ಮಾದರಿಗಳಲ್ಲಿ 50ರಲ್ಲಿ ಮಲೇರಿಯಾ ಕ್ರಿಮಿಗಳು ಕಂಡುಬಂದಿವೆ ಎಂದು ತಿಳಿಸಿದೆ. ಕೆಲವು ಪ್ರಕರಣಗಳಲ್ಲಿ ಮಕ್ಕಳಿಗೆ ಎರಡೂ ಸೋಂಕುಗಳು ತಗಲಿದ್ದವು.
ಮೃತಪಟ್ಟ ಮಕ್ಕಳನ್ನು ಹೂತುಹಾಕಿದ್ದರಿಂದ, ಅವರ ಸಾವಿಗೆ ನಿಖರವಾದ ಕಾರಣವನ್ನು ದೃಢಪಡಿಸಲು ಸಾಧ್ಯವಾಗಲಿಲ್ಲ. ಆದರೆ ಅವರ ರೋಗಲಕ್ಷಣಗಳ ವಿವರವಾದ ಮಾಹಿತಿಯು ದಡಾರ ಮಾದರಿಯ ಕಾಯಿಲೆಯನ್ನು ತೋರಿಸುತ್ತದೆ ಎಂದು ಬಾಲಾಘಾಟ್ ನ ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಸ್ಕ್ರಾಲ್ಗೆ ತಿಳಿಸಿದ್ದಾರೆ.
ಕನಿಷ್ಠ ಎರಡು ದಶಕಗಳಿಂದ ಯಾವುದೇ ಸಾಂಕ್ರಾಮಿಕ ರೋಗ ವರದಿಯಾಗದ ಬಿರ್ಸಾ ಪ್ರದೇಶಕ್ಕೆ ದಡಾರ ವೈರಸ್ ಹೇಗೆ ಪ್ರವೇಶಿಸಿತು ಎಂಬುದರ ಕುರಿತು ತನಿಖೆ ನಡೆಸುತ್ತಿರುವುದಾಗಿ ಐಸಿಎಂಆರ್ (ICMR) ಸಂಶೋಧಕರು ಹೇಳಿದ್ದಾರೆ. "ಇದು ನಮಗೆ ದೊಡ್ಡ ಪ್ರಶ್ನೆಯಾಗಿದೆ" ಎಂದು ಬಾಲಾಘಾಟ್ಗೆ ಭೇಟಿ ನೀಡಿದ್ದ ರಾಷ್ಟ್ರೀಯ ಬುಡಕಟ್ಟು ಆರೋಗ್ಯ ಸಂಶೋಧನಾ ಸಂಸ್ಥೆಯ ವಿಜ್ಞಾನಿ ಪ್ರೊಫೆಸರ್ ವಿಜಯ್ ನೇಮಾ ತಿಳಿಸಿದರು.
ಇಲ್ಲಿನ ಹಲವಾರು ನಿವಾಸಿಗಳು ಮೆಣಸು ಕೊಯ್ಲಿಗಾಗಿ ತೆಲಂಗಾಣಕ್ಕೆ ವಲಸೆ ಹೋಗುತ್ತಾರೆ. ಯಾವುದೇ ರೋಗಲಕ್ಷಣ ತೋರದ ವ್ಯಕ್ತಿಯ ಮೂಲಕ ಈ ವೈರಸ್ ಇಲ್ಲಿಗೆ ಹರಡಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಸಾಮಾನ್ಯವಾಗಿ ಪ್ರಾಣಾಪಾಯ ಉಂಟುಮಾಡದಿದ್ದರೂ, ದಡಾರ ವೈರಸ್ ಅತ್ಯಂತ ವೇಗವಾಗಿ ಹರಡುವ ಸೋಂಕಾಗಿದೆ. ಸೋಂಕಿತ ವ್ಯಕ್ತಿಯು ರೋಗಲಕ್ಷಣಗಳು ಕಾಣಿಸಿಕೊಳ್ಳುವ ಐದು ದಿನಗಳ ಮೊದಲೇ ಕೆಮ್ಮುವುದು, ಸೀನುವುದು ಅಥವಾ ಮಾತನಾಡುವುದರಿಂದಲೂ ವೈರಸ್ ಹರಡಬಹುದು. "ಕೋವಿಡ್-19 ಸಾಂಕ್ರಾಮಿಕ ರೋಗದ ತೀವ್ರತೆಯ ಸಮಯದಲ್ಲಿ ಕೊರೊನಾ ವೈರಸ್ನ 'ಆರ್ ನಾಟ್' (R naught) ಮೌಲ್ಯ 2.5 ಇತ್ತು" ಎಂದು ವೈರಾಣು ತಜ್ಞ ಶಾಹಿದ್ ಜಮೀಲ್ ವಿವರಿಸಿದ್ದಾರೆ.
ಆರ್ ನಾಟ್ ಎಂದರೆ ರೋಗನಿರೋಧಕ ಶಕ್ತಿ ಇಲ್ಲದ ಜನಸಂಖ್ಯೆಯಲ್ಲಿ ಒಬ್ಬ ಸೋಂಕಿತ ವ್ಯಕ್ತಿಯು ಸರಾಸರಿ ಎಷ್ಟು ಜನರಿಗೆ ಸೋಂಕು ಹರಡಬಹುದು ಎಂಬುದರ ಅಳತೆಯಾಗಿದೆ. "ದಡಾರಕ್ಕೆ ಈ ಮೌಲ್ಯ 18 ಆಗಿದೆ, ಹೀಗಾಗಿ ಇದು ಅತ್ಯಂತ ವೇಗವಾಗಿ ಹರಡುವ ರೋಗಗಳಲ್ಲಿ ಒಂದಾಗಿದೆ" ಎಂದು ಜಮೀಲ್ ಹೇಳಿದ್ದಾರೆ.
ಲಸಿಕೆ ಹಾಕಿಸದಿರುವುದು ವೈರಸ್ ಯಾರಿಗೂ ತಿಳಿಯದಂತೆ ಹರಡಲು ಕಾರಣವಾಯಿತು, ಕೊನೆಗೆ ಇದು ಸ್ಥಳೀಯ ಸಾಂಕ್ರಾಮಿಕ ರೋಗವಾಗಿ ಸ್ಫೋಟಿಸಿತು.
►ಸ್ಥಳೀಯ ವ್ಯವಸ್ಥೆಯ ವೈಫಲ್ಯ
ಈ ಸಾಂಕ್ರಾಮಿಕ ರೋಗವು ಸಾವುಗಳು ಸಂಭವಿಸಿದ ಬಾಲಾಘಾಟ್ ನ ಬಿರ್ಸಾ ತಾಲೂಕಿನಲ್ಲಿರುವ ಅತ್ಯಂತ ಕಳಪೆ ಆರೋಗ್ಯ ಮೂಲಸೌಕರ್ಯವನ್ನು ಬಯಲಿಗೆಳೆದಿದೆ. ವಾಸ್ತವವಾಗಿ, ಬಾಲಾಘಾಟ್ನಾದ್ಯಂತ ಖಾಲಿ ಇರುವ 72 ಆಶಾ ಕಾರ್ಯಕರ್ತೆಯರ ಹುದ್ದೆಗಳಲ್ಲಿ 48 ಹುದ್ದೆಗಳು ಬಿರ್ಸಾ ತಾಲೂಕಿನಲ್ಲೇ ಇವೆ.
ಮೊದಲ ಸಾವುಗಳು ಸಂಭವಿಸಿದ ಮಾಟ್ಲಾದ ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ಸುಹಾದ್ರಾ ಯಾದವ್, ರೋಗದ ಬಗ್ಗೆ ತಮಗೆ ಮಾಹಿತಿ ತಿಳಿದಿದ್ದರೂ ಅದನ್ನು ಆರೋಗ್ಯ ಅಧಿಕಾರಿಗಳಿಗೆ ವರದಿ ಮಾಡಲು ವಿಫಲರಾಗಿದ್ದಾಗಿ scroll.in ಎದುರು ಒಪ್ಪಿಕೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯು ತಮ್ಮ ಮಾಸಿಕ ಪ್ರಗತಿ ವರದಿಯಲ್ಲಿ ಸಾವುಗಳ ವಿವರವನ್ನು ತಮ್ಮ ಮೇಲ್ವಿಚಾರಕರಿಗೆ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ವರದಿ ಮಾಡಬೇಕಿರುತ್ತದೆ.
ಯಾದವ್ ಅವರ ರಿಜಿಸ್ಟರ್ ನಲ್ಲಿ ಪಾರ್ತೆ ಅವರ ಮಕ್ಕಳಾದ ಸಂಲು ಮತ್ತು ಶಂಕು ಹೆಸರನ್ನು ರಾಮ್ ಮತ್ತು ರೂಹಿ ಎಂದು ನಮೂದಿಸಲಾಗಿದೆ.
ಸರ್ಕಾರಿ ಅಧಿಕಾರಿಗಳು ಸಮುದಾಯದಲ್ಲಿ ಸಂಭವಿಸುವ ಸಾವುಗಳ ಸಂಖ್ಯೆಯನ್ನು ಕಡಿಮೆ ತೋರಿಸುವುದು ಸಾಮಾನ್ಯವಾಗಿದೆ ಎಂದು scroll.in ಗೆ ತಿಳಿದುಬಂದಿದೆ. "ಇಲ್ಲಿ ಆರೋಗ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಲುಪುವಿಕೆ ಅತ್ಯಂತ ಸೀಮಿತವಾಗಿದೆ" ಎಂದು ಆದಿವಾಸಿ ವಿಕಾಸ ಪರಿಷತ್ತಿನ ಜಿಲ್ಲಾಧ್ಯಕ್ಷ ದಿನೇಶ್ ಧುರ್ವೆ ಹೇಳಿದ್ದಾರೆ.
►‘ಇವರು ಬೈಗಾ ಬುಡಕಟ್ಟಿನವರು, ಇವರಿಗೇನೂ ತಿಳಿಯುವುದಿಲ್ಲ ಎನ್ನುತ್ತಾರೆ’
ಬೋಂದಾರಿ ಸೇರಿದಂತೆ ರೋಗಪೀಡಿತ ಇತರ ಹಳ್ಳಿಗಳನ್ನು ಒಳಗೊಂಡಿರುವ ಬಾಲಾಘಾಟ್ ನ ಬಿರ್ಸಾ ತಾಲೂಕನ್ನು ಡಿಸೆಂಬರ್ 2025ರಲ್ಲಿ ನಕ್ಸಲ್ ಮುಕ್ತ ಎಂದು ಘೋಷಿಸಲಾಗಿತ್ತು.
ಬಾಲಾಘಾಟ್ ನ ಮಾಜಿ ಮುಖ್ಯ ವೈದ್ಯಾಧಿಕಾರಿ ಉಪಲಾಪ್, ಸರ್ಕಾರಿ ಅಧಿಕಾರಿಗಳು ಇತ್ತೀಚೆಗಷ್ಟೇ ಬಿರ್ಸಾ ತಾಲೂಕಿನ ಹಳ್ಳಿಗಳನ್ನು ತಲುಪಲು ಪ್ರಾರಂಭಿಸಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. "ನಕ್ಸಲ್ ಚಟುವಟಿಕೆಗಳು ನಮ್ಮ ಕೆಲಸವನ್ನು ಕಷ್ಟಕರವಾಗಿಸಿದ್ದವು" ಎಂದು ಅವರು ಹೇಳಿದರು.
ಬಾಲಾಘಾಟ್ ಮೂಲದ ಸಾಮಾಜಿಕ ಕಾರ್ಯಕರ್ತ ಶುಭಂ ಉಯ್ಕೆ, ಈ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಯಾವುದೇ ಸಕ್ರಿಯ ನಕ್ಸಲ್ ಹಿಂಸಾಚಾರ ವರದಿಯಾಗಿಲ್ಲ ಎಂದಿದ್ದಾರೆ.
ಗ್ರಾಮಸ್ಥರು ಆಗಾಗ್ಗೆ ವೈದ್ಯಕೀಯ ಚಿಕಿತ್ಸೆಯನ್ನು ನಿರಾಕರಿಸುತ್ತಾರೆ ಎಂದು ಉಪಲಾಪ್ ಹೇಳಿದರು. ಅವರು ಸಮರೂ ಧುರ್ವೆ ಅವರ ಸಹೋದರ ದಶರಥ್ ಅವರ ಉದಾಹರಣೆಯನ್ನು ನೀಡಿದರು. ದಶರಥ್ ಅವರು ಆಗಸ್ಟ್ 13ರಂದು "ದಡಾರ ಮಾದರಿಯ ರೋಗಲಕ್ಷಣಗಳಿಗೆ" ತಮ್ಮ 13 ವರ್ಷದ ಮಗನನ್ನು ಕಳೆದುಕೊಂಡಿದ್ದರು. ಅವರ ಎರಡನೇ ಮಗ ಅನಾರೋಗ್ಯಕ್ಕೆ ಒಳಗಾದಾಗ, ದಶರಥ್ ಅವರನ್ನು ಆಸ್ಪತ್ರೆಗೆ ಸೇರಿಸಲು ನಿರಾಕರಿಸಿದ್ದರು.
ತಾವು "ಪಂಡಾ ಪೂಜಾರಿ ಹೇಳುವುದನ್ನು ಕೇಳುತ್ತೇವೆ. ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದರೆ ಅವರು ಸಾಯುತ್ತಾರೆ ಎಂದು ಪೂಜಾರಿ ನಮಗೆ ಹೇಳಿದ್ದರು" ಎನ್ನುತ್ತಾರೆ ಅವರ ಸಹೋದರ ಸಮರೂ.
ಸರ್ಕಾರಿ ಆರೋಗ್ಯ ವ್ಯವಸ್ಥೆಯ ಮೇಲಿನ ನಂಬಿಕೆಯ ಕೊರತೆಯು ಕೇವಲ ಪೂಜಾರಿಯ ಸಲಹೆಗೆ ಮಾತ್ರ ಸೀಮಿತವಾಗಿಲ್ಲ.
ನಾವು ಕ್ಲಿನಿಕ್ ಮತ್ತು ಆಸ್ಪತ್ರೆಗಳಿಗೆ ಭೇಟಿ ನೀಡಿದಾಗಲೂ ನಮ್ಮನ್ನು ಕೀಳಾಗಿ ಮತ್ತು ಅಸಡ್ಡೆಯಿಂದ ಕಾಣಲಾಗುತ್ತದೆ ಎಂದು ಬೈಗಾ ಸಮುದಾಯದ ಜನರು ದೂರಿದ್ದಾರೆ.
"ಇವರು ಬೈಗಾ ಬುಡಕಟ್ಟಿನವರು, ಇವರಿಗೇನೂ ತಿಳಿಯುವುದಿಲ್ಲ, ಯಾವುದೋ ಒಂದು ಔಷಧ ಕೊಡಿ ಎಂದು ಅಧಿಕಾರಿಗಳು ಹೇಳುತ್ತಾರೆ. ಜಾನುವಾರುಗಳಂತೆ ಆ ಔಷಧಿಯನ್ನು ಸೇವಿಸಬೇಕು ಎಂಬುದು ಅವರ ಭಾವನೆ" ಎಂದು ಆಗಸ್ಟ್ನಲ್ಲಿ ಈ ರೋಗಕ್ಕೆ ತಮ್ಮ ಸಹೋದರ ರೂಪಲಾಲ್ ಅವರನ್ನು ಕಳೆದುಕೊಂಡ ಬುಧನ್ ಸಿಂಗ್ ಹೇಳಿದರು.
ಸಾಂಕ್ರಾಮಿಕ ರೋಗದ ಬಳಿಕ ಪ್ರದೇಶದಲ್ಲಿ ಆರೋಗ್ಯ ತಂಡಗಳ ಉಪಸ್ಥಿತಿಯು ಜನರಲ್ಲಿ ಒಂದಿಷ್ಟು ನಂಬಿಕೆಯನ್ನು ಮೂಡಿಸಿರಬಹುದು.
ಕೆಲವು ಮಕ್ಕಳು ಗುಣಮುಖರಾಗಿ ಆಸ್ಪತ್ರೆಯಿಂದ ಹಿಂತಿರುಗಿದ ಬಳಿಕ, ಸ್ಥಳೀಯ ನಿವಾಸಿಗಳು ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ನಂಬಲು ಪ್ರಾರಂಭಿಸಿದ್ದಾರೆ. ಈಗ ಹೆಚ್ಚಿನ ಜನರು ತಮ್ಮ ಮಕ್ಕಳನ್ನು ಆಸ್ಪತ್ರೆಗೆ ಕಳುಹಿಸಲು ಸಿದ್ಧರಾಗಿದ್ದಾರೆ. ಸರ್ಕಾರ ಈ ಹಿಂದೆ ಎಂದೂ ಇಂತಹ ಪ್ರಯತ್ನಗಳನ್ನು ಮಾಡಿರಲಿಲ್ಲ ಎಂದು ಸರಪಂಚ್ ಪರಶುರಾಮ ಧುರ್ವೆ ಹೇಳಿದ್ದಾರೆ.
ಸೌಜನ್ಯ: scroll.in






