ಭ್ರಷ್ಟಾಚಾರ ಆರೋಪ: 6 ಆರ್‌ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ

ಬೆಂಗಳೂರು : ರಾಜಧಾನಿ ಬೆಂಗಳೂರಿನ ಆರು ಪ್ರಾದೇಶಿಕ ಸಾರಿಗೆ ಕಚೇರಿಗಳ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿ, ತೀವ್ರ ಪರಿಶೀಲನೆ ನಡೆಸಿದ್ದಾರೆ.
ಆರ್‌ಟಿಓ ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆ ಈ ದಿಢೀರ್ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ನ.7ರ ಶುಕ್ರವಾರ ಮಧ್ಯಾಹ್ನದಿಂದ ಯಶವಂತಪುರ, ರಾಜಾಜಿನಗರ, ಜಯನಗರ, ಯಲಹಂಕ, ಕಸ್ತೂರಿನಗರ ಹಾಗೂ ಕೆ.ಆರ್.ಪುರಂನ ಆರ್‍ಟಿಓ ಕಚೇರಿಗಳ ಮೇಲೆ ಲೋಕಾಯುಕ್ತ ಕಾರ್ಯಾಚರಣೆ ನಡೆಯಿತು. ದಾಳಿಯಲ್ಲಿ ಇಬ್ಬರು ಉಪಲೋಕಾಯುಕ್ತರು, 8 ಎಎಸ್ಪಿ, 2 ಎಸ್ಪಿ, 14 ಇನ್‍ಸ್ಪೆಕ್ಟರ್‍ಗಳು ಹಾಗೂ 6 ನ್ಯಾಯಾಂಗ ಅಧಿಕಾರಿಗಳನ್ನು ಒಳಗೊಂಡ ಬೃಹತ್ ತಂಡ ಪಾಲ್ಗೊಂಡಿತ್ತು.
ಪರಿಶೀಲನೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಅಧಿಕಾರಿಯೊಬ್ಬರು, ಆರ್‌ಟಿಓ ಕಚೇರಿಗಳಲ್ಲಿ ಆಡಳಿತ ವೈಫಲ್ಯ ಮತ್ತು ಸಾರ್ವಜನಿಕರಿಗೆ ಸೇವೆ ಸಿಗದಿರುವ ಬಗ್ಗೆ ದೂರುಗಳು ಬಂದಿದ್ದರಿಂದ ಪರಿಶೀಲನೆ ನಡೆಸಿದ್ದೇವೆ ಎಂದರು.
ರಾಜಾಜಿನಗರ ಆರ್ ಟಿಓ ಕಚೇರಿಯ ಪರಿಶೀಲನೆಯಲ್ಲಿ ಆಡಳಿತ ವೈಫಲ್ಯದ ಗಂಭೀರ ಪ್ರಕರಣಗಳು ಬೆಳಕಿಗೆ ಬಂದಿವೆ. 3,800 ಚಾಲನಾ ಪರವಾನಗಿ(ಡಿ.ಎಲ್.) ಮತ್ತು 6,300 ನೋಂದಣಿ ಪ್ರಮಾಣಪತ್ರ (ಆರ್.ಸಿ.) ಸ್ಮಾರ್ಟ್ ಕಾರ್ಡ್‍ಗಳು ವಿತರಣೆ ಆಗದೆ ಬಾಕಿ ಉಳಿದಿವೆ. ಸುಮಾರು 20 ದಿನಗಳಿಂದ ಮುದ್ರಣ ಕಾರ್ಯ ಸ್ಥಗಿತಗೊಂಡಿದೆ. ಇದಕ್ಕೆ ಹೊರಗುತ್ತಿಗೆ ಕಂಪೆನಿಯಿಂದ ಸಮಸ್ಯೆ ಆಗಿದೆ ಎಂದು ಆರ್‍ಟಿಓ ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಜನರಿಗೆ ತುರ್ತಾಗಿ ಸೇವೆ ಒದಗಿಸುವುದು ನಮ್ಮ ಆದ್ಯ ಕರ್ತವ್ಯ ಎಂದು ಲೋಕಾಯುಕ್ತರು ತಿಳಿಸಿದರು.
ಲೋಕಾಯುಕ್ತ ಅಧಿಕಾರಿಗಳು ಬರುತ್ತಿದ್ದಾರೆ ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಆರ್‌ಟಿಓ ಕಚೇರಿಗಳ ಸುತ್ತಮುತ್ತಲಿನ ಹಲವು ಜೆರಾಕ್ಸ್ ಅಂಗಡಿಗಳು ಮತ್ತು ಏಜೆಂಟರ ಕಚೇರಿಗಳು ತಮ್ಮ ಬಾಗಿಲುಗಳನ್ನು ಹಾಕಿಕೊಂಡು ಪರಾರಿಯಾಗಿವೆ. ಇದು ಆರ್ ಟಿಒ ಕಚೇರಿಗಳಲ್ಲಿ ಅಕ್ರಮ ಕೆಲಸಗಳು ನಡೆಯುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟರು.
ಇದೇ ರೀತಿ ಯಶವಂತಪುರ ಆರ್‍ಟಿಓ ಬಳಿಯೂ ಸುಮಾರು 30 ಜೆರಾಕ್ಸ್ ಅಂಗಡಿಗಳು ಮತ್ತು ಏಜೆಂಟರ ಕಚೇರಿಗಳು ಬೀಗ ಹಾಕಿಕೊಂಡು ಹೋಗಿದ್ದು, ಇದರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಒಟ್ಟಾರೆ ಆರೂ ಆರ್‍ಟಿಒ ಕಚೇರಿಗಳಲ್ಲಿನ ಪರಿಶೀಲನಾ ವರದಿ ಬಂದ ನಂತರ ಮುಂದಿನ ಕ್ರಮಗಳ ಕುರಿತು ತಿಳಿಸಲಾಗುವುದು ಎಂದು ಲೋಕಾಯುಕ್ತರು ತಿಳಿಸಿದರು.







