ಬಾಂಗ್ಲಾದೇಶ: ಮಿಲಿಟರಿ ದಂಗೆಗಳೆಷ್ಟು? ಸರ್ವಾಧಿಕಾರಿಗಳೆಷ್ಟು ?

ಭಾಗ - 1
ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನವೇ ಬಾಂಗ್ಲಾದೇಶ ಮತ್ತೊಮ್ಮೆ ರಕ್ತಸಿಕ್ತ ಅಧ್ಯಾಯವೊಂದಕ್ಕೆ ಸಾಕ್ಷಿಯಾಗುತ್ತಿದೆ. ರಾಜಕೀಯ ಬಿಕ್ಕಟ್ಟು ಬಾಂಗ್ಲಾಕ್ಕೆ ಹೊಸದಲ್ಲವಾದರೂ, ಮಾಜಿ ಪ್ರಧಾನಿ ಶೇಕ್ ಹಸೀನಾ ಪದಚ್ಯುತಿ ಮತ್ತು ಪಲಾಯನಕ್ಕೆ ಕಾರಣವಾದ ಮೀಸಲಾತಿ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ 32 ವರ್ಷದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಹಾದಿ ಹತ್ಯೆಯ ಬೆನ್ನಲ್ಲೇ ಮತ್ತೊಬ್ಬ ಯುವ ನಾಯಕನಿಗೆ ಗುಂಡಿಕ್ಕಲಾಗಿದೆ. ಇಬ್ಬರೂ ಭಾರತ ವಿರೋಧಿಗಳು ಎಂಬುದನ್ನು ಇಲ್ಲಿನ ಮಾಧ್ಯಮಗಳು ಹೆಚ್ಚು ಒತ್ತಿಹೇಳುತ್ತಿವೆ. ಅಲ್ಲದೆ, ಬಾಂಗ್ಲಾದಲ್ಲಿನ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆಯೂ ಇಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ, ಅನೇಕ ಸುಳ್ಳು ಕಥೆಗಳನ್ನೂ ಹರಡಲಾಗುತ್ತಿದೆ. ಅದೇನೇ ಇದ್ದರೂ, ಬಾಂಗ್ಲಾದೇಶದಲ್ಲಿನ ಇಂಕ್ವಿಲಾಬ್ ಮಂಚ್ ವಕ್ತಾರ ಷರೀಫ್ ಉಸ್ಮಾನ್ ಹಾದಿ ಹತ್ಯೆಯ ನಂತರದ ವಿದ್ಯಮಾನಗಳು ಬಾಂಗ್ಲಾದ ರಾಜಕೀಯ ಯಾವುದೋ ತಿರುವಿನಲ್ಲಿದೆ ಎಂಬುದರ ಸೂಚನೆಯನ್ನಂತೂ ನೀಡಿದೆ. ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ ಹಂಗಾಮಿ ಅಧ್ಯಕ್ಷ ಮತ್ತು ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಪುತ್ರ ತಾರೀಕ್ ರಹಮಾನ್, ಸುದೀರ್ಘ 17 ವರ್ಷಗಳ ವನವಾಸದ ನಂತರ, ಬಾಂಗ್ಲಾದ ರಾಜಕೀಯ ಚದುರಂಗದಾಟಕ್ಕೆ ನಿರ್ಣಾಯಕ ಆಟಗಾರನಾಗಿ ಲಂಡನ್‌ನಿಂದ ಢಾಕಾಕ್ಕೆ ಮರಳಿರುವುದು ಅಂಥ ಒಂದು ಮಹತ್ವದ ಬೆಳವಣಿಗೆ. ಬಾಂಗ್ಲಾದೇಶದ ಮುಂದಿನ ಪ್ರಧಾನಿ ರೇಸ್‌ನಲ್ಲಿ ತಾರೀಕ್ ಮುಂಚೂಣಿಯಲ್ಲಿದ್ದಾರೆ. 2026 ರ ಫೆಬ್ರವರಿಯಲ್ಲಿ ಬಾಂಗ್ಲಾದಲ್ಲಿ ಚುನಾವಣೆ ನಡೆಯುವ ಬಗ್ಗೆ ಈಗಾಗಲೇ ಘೋಷಣೆಯಾಗಿದ್ದು, ಅದು ಬೇಡವಾಗಿರುವ ಅಲ್ಲಿನ ಮೂಲಭೂತವಾದಿ ಶಕ್ತಿಗಳು ಈ ಹಿಂಸಾಚಾರದ ಪಿತೂರಿಗೆ ಇಳಿದಿವೆಯೆ ಎಂಬ ಅನುಮಾನ ದೊಡ್ಡ ಮಟ್ಟದಲ್ಲಿ ವ್ಯಕ್ತವಾಗುತ್ತಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿನ ರಾಜಕೀಯ ಕ್ಷೋಭೆಗಳು ಮತ್ತು ಖಾಲಿದಾ ಝಿಯಾ, ಶೇಕ್ ಹಸೀನಾ ಥರದವರು ಸಾಧಿಸಿದ್ದ ಪ್ರಾಬಲ್ಯ, ಸೇನಾ ದಂಗೆಗಳು, ರಾಜಕೀಯದಲ್ಲಿ ಸೇನೆ ಮತ್ತೆ ಮತ್ತೆ ವಹಿಸುವ ಪಾತ್ರ ಇವೆಲ್ಲವೂ ಈಗ ಕುತೂಹಲದ ವಿಷಯಗಳಾಗಿವೆ.
ಸ್ವತಂತ್ರವಾಗುವವರೆಗೆ ಅನುಭವಿಸಿದ್ದ ಬಿಕ್ಕಟ್ಟು ಒಂದು ಬಗೆಯದಾಗಿದ್ದರೆ, ವಿಮೋಚನೆಯ ನಂತರ ಬಾಂಗ್ಲಾದೇಶ ಕಂಡ ಬಿಕ್ಕಟ್ಟು ಮತ್ತೊಂದು ಬಗೆಯದ್ದು. ಸ್ವಾತಂತ್ರ್ಯದ ನಂತರ, ಬಾಂಗ್ಲಾದೇಶ ಅಸ್ಥಿರತೆ, ಮಿಲಿಟರಿ ದಂಗೆಗಳು ಮತ್ತು ಪ್ರಜಾಪ್ರಭುತ್ವ ಪರಿವರ್ತನೆಗಳನ್ನು ಎದುರಿಸಿತು. ಆದರೆ ಇತ್ತೀಚಿನ ಬಿಕ್ಕಟ್ಟುಗಳು ರಾಜಕೀಯ ಅಶಾಂತಿ, ಮಾನವ ಹಕ್ಕುಗಳ ಕಾಳಜಿ ಮತ್ತು ಆರ್ಥಿಕ ಸವಾಲುಗಳನ್ನು ಒಳಗೊಂಡಿವೆ. ಕೇವಲ ರಾಜಕೀಯ ಅಧಿಕಾರಕ್ಕಾಗಿ ಮಾತ್ರವಲ್ಲ, ಕುಸಿಯುತ್ತಿರುವ ಆರ್ಥಿಕತೆ, ಗಗನಕ್ಕೇರುತ್ತಿರುವ ಬೆಲೆಗಳು ಮತ್ತು ಅಂತರ್‌ರಾಷ್ಟ್ರೀಯ ಸಾಲದ ಹೊರೆ ಕೂಡ ಜನರ ಆಕ್ರೋಶದ ಕಿಚ್ಚಿಗೆ ತುಪ್ಪ ಸುರಿಯುತ್ತಿವೆ. 2024 ರಲ್ಲಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳು ಹಸೀನಾ ಸರಕಾರದ ಪತನಕ್ಕೆ ಕಾರಣವಾದವು. ಈಗ ಅದೇ ವಿದ್ಯಾರ್ಥಿ ಚಳವಳಿಯ ಮುಂಚೂಣಿಯಲ್ಲಿದ್ದ ನಾಯಕನ ಹತ್ಯೆಯೊಂದಿಗೆ ಬಾಂಗ್ಲಾ ಮತ್ತೊಮ್ಮೆ ಹೊತ್ತಿ ಉರಿಯುತ್ತಿದೆ.
ಸಂಕ್ಷಿಪ್ತವಾಗಿ ನೋಡಬೇಕೆಂದರೆ, 1947 ರ ಆಗಸ್ಟ್ ನಲ್ಲಿ ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆ ಕೊನೆಗೊಂಡಾಗ, ದೇಶ ವಿಭಜನೆಯಾಗಿ, ಭಾರತ ಮತ್ತು ಪಾಕಿಸ್ತಾನ ಹುಟ್ಟಿಕೊಂಡವು ಮತ್ತು ಬಂಗಾಳ ಅವೆರಡರ ನಡುವೆ ಹಂಚಿಹೋಯಿತು. ಬಂಗಾಳ ವಿಭಜನೆಯಲ್ಲಿ ಪಶ್ಚಿಮ ಬಂಗಾಳ ಭಾರತದ ಪಾಲಾದರೆ, ಮುಸ್ಲಿಮ್ ಬಹುಸಂಖ್ಯಾತ ಪೂರ್ವ ಬಂಗಾಳ ಪೂರ್ವ ಪಾಕಿಸ್ತಾನವಾಯಿತು ಮತ್ತು ಭೌಗೋಳಿಕವಾಗಿ ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟಿತು. ಪಶ್ಚಿಮ ಪಾಕಿಸ್ತಾನಕ್ಕೆ ಹೋಲಿಸಿದರೆ ಪೂರ್ವ ಪಾಕಿಸ್ತಾನ ರಾಜಕೀಯವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಮಾತ್ರವಲ್ಲ, ಆರ್ಥಿಕ ನಿರ್ಲಕ್ಷ್ಯವನ್ನೂ ಎದುರಿಸಿತು. ಇದು ಅಸಮಾಧಾನಕ್ಕೆ ಕಾರಣವಾಯಿತು. 1970ರಲ್ಲಿ ಶೇಕ್ ಮುಜೀಬುರ‌್ರಹಮಾನ್ ಅವರ ಅವಾಮಿ ಲೀಗ್ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದಿತು. ಆದರೆ ಪಶ್ಚಿಮ ಪಾಕಿಸ್ತಾನದ ನಾಯಕರು ಅಧಿಕಾರ ಬಿಟ್ಟುಕೊಡಲು ನಿರಾಕರಿಸಿದರು. ಇದು ಸಾಮೂಹಿಕ ಪ್ರತಿಭಟನೆಗಳಿಗೆ ಕಾರಣವಾಯಿತು. 1971ರ ಮಾರ್ಚ್‌ನಲ್ಲಿ ಪಾಕಿಸ್ತಾನಿ ಮಿಲಿಟರಿ ಕ್ರೂರ ದಮನ ಶುರುಮಾಡಿತು. ಪೂರ್ವ ಪಾಕಿಸ್ತಾನಿಗಳ ವಿರುದ್ಧ ನರಮೇಧ ನಡೆಸಿತು. ಲಕ್ಷಾಂತರ ಜನರು ಭಾರತಕ್ಕೆ ಪಲಾಯನ ಮಾಡಿದಾಗ, ಅದು ಭಾರತೀಯ ಹಸ್ತಕ್ಷೇಪಕ್ಕೆ ಕಾರಣವಾಯಿತು. ಭಾರತದ ಸೇನಾ ಮಧ್ಯಪ್ರವೇಶದ ಪರಿಣಾಮವಾಗಿ 1971 ರ ಡಿಸೆಂಬರ್ 16 ರಂದು ಪಾಕಿಸ್ತಾನ ಶರಣಾಯಿತು ಮತ್ತು ಬಾಂಗ್ಲಾದೇಶದ ಉದಯವಾಯಿತು.
ವಿಮೋಚನೆಯ ಬೆನ್ನಲ್ಲೇ ಬಾಂಗ್ಲಾದೇಶದ ಸವಾಲುಗಳೂ ಶುರುವಾದವು. ಬಾಂಗ್ಲಾದೇಶ ಝಿಯಾವುರ್ ರಹಮಾನ್, ಇರ್ಷಾದ್ ಮೊದಲಾದವರ ಕಾರಣದಿಂದ ಮಿಲಿಟರಿ ದಂಗೆಗಳನ್ನು ಎದುರಿಸಿದೆ. ಹಾಗೆಯೇ ಸರ್ವಾಧಿಕಾರಿ ಆಡಳಿತವನ್ನು ಕೂಡ ಕಂಡಿದೆ. 1972 ರಿಂದ 1975 ರವರೆಗೆ ಮೊದಲ ಸಂಸದೀಯ ಯುಗವನ್ನು ಕಂಡಿದ್ದ ಬಾಂಗ್ಲಾ, 1975 ರಿಂದ 1990 ರವರೆಗೆ ಮಿಲಿಟರಿ ಆಡಳಿತದಲ್ಲಿತ್ತು. 1990 ರ ದಶಕದಲ್ಲಿ ಪ್ರಜಾಪ್ರಭುತ್ವದ ಪುನಃಸ್ಥಾಪನೆಯಾಯಿತು. ಅವಾಮಿ ಲೀಗ್ ಮತ್ತು ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿಯ (ಬಿಎನ್‌ಪಿ) ನಡುವೆ ಅಧಿಕಾರ ಬದಲಾಗುವುದು ನಡೆದುಬಂತು. 2006 ರಿಂದ 2008 ರವರೆಗೆ ರಾಜಕೀಯ ಬಿಕ್ಕಟ್ಟು ತಲೆದೋರಿತು. ಅಸ್ಥಿರತೆ, ಭ್ರಷ್ಟಾಚಾರವನ್ನು ನಿಭಾಯಿಸಲು ಮತ್ತು ಚುನಾವಣೆಗಳಿಗೆ ಸಿದ್ಧತೆ ನಡೆಸಲು ಉಸ್ತುವಾರಿ ಸರಕಾರ ಮಧ್ಯಪ್ರವೇಶಿಸಿತು. 2024 ರಲ್ಲಿ ಮೀಸಲಾತಿ ವಿರುದ್ಧ ನಡೆದ ವ್ಯಾಪಕವಾದ ವಿದ್ಯಾರ್ಥಿ ಪ್ರತಿಭಟನೆಗಳು ಕಡೆಗೆ ಸರಕಾರಿ ವಿರೋಧಿ ಪ್ರತಿಭಟನೆಗಳ ಸ್ವರೂಪ ಪಡೆದವು. ಅದು ಹಿಂಸಾಚಾರ, ದಮನಕ್ಕೆ ಕಾರಣವಾಗಿ, ಒಂದೂವರೆ ದಶಕದ ಕಾಲ ಬಾಂಗ್ಲಾವನ್ನು ಆಳಿದ್ದ ಶೇಕ್ ಹಸೀನಾ ಪದಚ್ಯುತರಾದರು. ಅವರ ಬಳಿಕ ಅಸ್ತಿತ್ವಕ್ಕೆ ಬಂದಿರುವ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರದ ಈ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪರಿಸ್ಥಿತಿ ಕೈಮೀರಿರುವ ಹಾಗೆ ಕಾಣುತ್ತಿದೆ.
ಈಗಿನ ಈ ಉದ್ವಿಗ್ನತೆಗಳು ಮುಂಬರುವ ಚುನಾವಣೆಗಳ ಬಗ್ಗೆ ಕಳವಳಗಳನ್ನು ಮೂಡಿಸಿರುವುದು ಮಾತ್ರವಲ್ಲ, ಮಾನವ ಹಕ್ಕುಗಳು ಮತ್ತು ರಾಜಕೀಯ ಧ್ರುವೀಕರಣದಂಥ ದೀರ್ಘಕಾಲದ ಸಮಸ್ಯೆಗಳೂ ಥಳುಕು ಹಾಕಿಕೊಳ್ಳುತ್ತಿವೆ. ಇಂದು ಬಾಂಗ್ಲಾದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅದರ ದೀರ್ಘ ಐತಿಹಾಸಿಕ ತಳಮಳ ಬಗೆಗಿನ ಗ್ರಹಿಕೆ ಅಗತ್ಯವಾಗುತ್ತದೆ. ಬಾಂಗ್ಲಾದಲ್ಲಿನ ಈಗಿನ ಪ್ರಕ್ಷುಬ್ಧತೆ ಹಠಾತ್ ಬಿಕ್ಕಟ್ಟಿಗಿಂತಲೂ ಹೆಚ್ಚಾಗಿ, ಪರಿಚಿತ ರಾಜಕೀಯ ಮಾದರಿಯಾಗಿದೆ. ಬಾಂಗ್ಲಾದಲ್ಲಿ ಅಧಿಕಾರ ಬದಲಾವಣೆ ಸುಲಲಿತವಾಗಿದ್ದುದೇ ಅಪರೂಪ. ಪ್ರಜಾಪ್ರಭುತ್ವ ಇದ್ದರೂ, ರಾಜಕೀಯ ಪೈಪೋಟಿ ಯುದ್ಧದ ಸ್ವರೂಪದಲ್ಲಿದ್ದುದೇ ಹೆಚ್ಚು. 1975ರಲ್ಲಿ ಶೇಕ್ ಮುಜೀಬುರ್ ರಹಮಾನ್ ಅವರ ಹತ್ಯೆಯ ನಂತರ, ಇವತ್ತಿನವರೆಗೂ ಬಾಂಗ್ಲಾದೇಶ ಶಾಂತಿಯುತ ಅಧಿಕಾರ ಹಸ್ತಾಂತರವನ್ನು ಕಾಣುವುದು ಸಾಧ್ಯವಾಗಿಯೇ ಇಲ್ಲ. ಚುನಾವಣೆಗಳು ನಡೆದಾಗಲೂ, ಗೆದ್ದ ಪಕ್ಷ ಸಾಮಾನ್ಯವಾಗಿ ವಿರೋಧ ಪಕ್ಷವನ್ನು ಮೂಲೆಗೆ ಸರಿಸುವ, ನಿಗ್ರಹಿಸುವ ಕೆಲಸ ಮಾಡಿಕೊಂಡೇ ಬಂದಿರುವುದು ಬಾಂಗ್ಲಾ ರಾಜಕೀಯದಲ್ಲಿ ಸಾಮಾನ್ಯ ಅಂಶವಾಗಿದೆ.
ದಶಕಗಳಿಂದಲೂ ಬಾಂಗ್ಲಾ ರಾಜಕೀಯ ಮಿಲಿಟರಿ ಆಡಳಿತಗಾರ ಝಿಯಾವುರ್ ರಹಮಾನ್ ಅವರ ಪತ್ನಿ, ಬಿಎನ್‌ಪಿ ನಾಯಕಿ ಖಾಲಿದಾ ಝಿಯಾ ಮತ್ತು ಬಾಂಗ್ಲಾದೇಶದ ಸಂಸದೀಯ ಸರಕಾರದ ಮೊದಲ ಪ್ರಧಾನಿ ಮುಜೀಬ್ ಅವರ ಪುತ್ರಿ, ಅವಾಮಿ ಲೀಗ್‌ನ ನಾಯಕಿ ಶೇಕ್ ಹಸೀನಾ ನಡುವಿನ ಕಹಿ ಪೈಪೋಟಿಯ ಸುತ್ತ ಸುತ್ತುತ್ತಿದೆ. ಅವರಿಬ್ಬರ ಮುಖಾಮುಖಿ ಬಾಂಗ್ಲಾದೇಶದ ರಾಜಕೀಯವನ್ನು ತೀರಾ ವೈಯಕ್ತಿಕಗೊಳಿಸಿದೆ ಮತ್ತು ಧ್ರುವೀಕರಿಸಿದೆ. ಶೇಕ್ ಹಸೀನಾ ಅವರ ರಾಜಕೀಯ ತೀಕ್ಷ್ಣವಾದ ಟೀಕೆಗೆ ಗುರಿಯಾಗಿದ್ದರೂ, ಪ್ರಜಾಪ್ರಭುತ್ವದ ಮೌಲ್ಯಗಳು ದುರ್ಬಲಗೊಳ್ಳಲು ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಖಾಲಿದಾ ಝಿಯಾ ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿ ಕಾರಣರಾಗಿದ್ದಾರೆ. ಅವರು ಸ್ವತಃ ತನ್ನ ಅವಧಿಯನ್ನು ಮೀರಿ ಆಡಳಿತವನ್ನು ವಿಸ್ತರಿಸಲು ವಿಫಲರಾದರು. ಅದಕ್ಕೆ ಪ್ರಯತ್ನದ ಕೊರತೆ ಕಾರಣವಲ್ಲ. ಪರಮ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪಗಳು ಅವರನ್ನು ರಾಜಕೀಯವಾಗಿ ಮುಗಿಸಿದವು. ಅದಕ್ಕಾಗಿ ಅವರ ಕುಟುಂಬವೂ ಬೆಲೆ ತೆರಬೇಕಾಯಿತು. ಅವರ ಮಗ ತಾರೀಕ್ ರೆಹಮಾನ್ ಅವರನ್ನು ಮಿಲಿಟರಿ ಒತ್ತಡದಲ್ಲಿ ಗಡಿಪಾರು ಮಾಡಲಾಯಿತು. ಈಗ, ಖಾಲಿದಾ ಝಿಯಾ ಅನಾರೋಗ್ಯದಿಂದ ಬಳಲುತ್ತಿರುವ ಹೊತ್ತಲ್ಲಿ ಅವರ ಪುತ್ರ ತಾರೀಕ್ ಮರಳಿದ್ದಾರೆ. ಮತ್ತೊಂದೆಡೆ, ದೇಶದಿಂದ ಪಲಾಯನ ಮಾಡಿರುವ ಶೇಕ್ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಈಗ, ಬಾಂಗ್ಲಾ ರಾಜಕೀಯದಲ್ಲಿ ಬೇರೇನೋ ಆಗಲಿದೆ ಎಂಬ ಸ್ಪಷ್ಟ ಸುಳಿವುಗಳಿವೆ.
ವಿಮೋಚನೆ ನಂತರದ ಬಾಂಗ್ಲಾ ರಾಜಕೀಯದಲ್ಲಿ ಏನೇನಾಯಿತು ಎಂದು ನೋಡುವುದಾದರೆ, 1972ರ ಜನವರಿಯಲ್ಲಿ ಹೊಸ ಸಂಸದೀಯ ಸರಕಾರದ ಮೊದಲ ಪ್ರಧಾನಿಯಾಗಿ ಮುಜೀಬ್ ಅವರನ್ನು ನೇಮಿಸಲಾಯಿತು ಮತ್ತು ಅಬು ಸಯೀಫ್ ಚೌಧರಿ ಅಧ್ಯಕ್ಷರಾದರು. ಆದರೂ, ಪಾಕಿಸ್ತಾನಿ ಉದ್ದೇಶವನ್ನು ಬೆಂಬಲಿಸಿದ ರಜಾಕರ್‌ಗಳು ಎಂದು ಕರೆಯಲಾಗುತ್ತಿದ್ದ ಸ್ಥಳೀಯ ಅರೆಸೈನಿಕ ಪಡೆಗಳ ಹಾವಳಿ ಇದ್ದೇ ಇತ್ತು. ಬಂಗಾಳಿ ರಜಾಕರ್ ಪಡೆಯನ್ನು ಅಲ್-ಬದರ್ ಎಂದು ಕರೆಯಲಾಗುತ್ತಿತ್ತು ಮತ್ತು ಉರ್ದು ಮಾತನಾಡುವ ಪಡೆಗೆ ಅಲ್-ಶಮ್ಸ್ ಎನ್ನಲಾಗುತ್ತಿತ್ತು. ಈ ಪಾಕಿಸ್ತಾನಿ ಪರ ಪಡೆಗಳ ವಿರುದ್ಧ ಬಾಂಗ್ಲಾದೇಶ ಪ್ರತೀಕಾರಕ್ಕೆ ಮುಂದಾಗುತ್ತಿದ್ದಂತೆ, ಉರ್ದು ಭಾಷಿಕರಲ್ಲಿ ಹೆಚ್ಚಿನವರು ಪಲಾಯನ ಮಾಡಿದರು.
ಅನೇಕರನ್ನು ಕೊಲ್ಲಲಾಯಿತು. ಲಕ್ಷಾಂತರ ಮಂದಿಯನ್ನು ನಿರಾಶ್ರಿತರ ಶಿಬಿರಗಳಲ್ಲಿ ಇರಿಸಲಾಯಿತು. ಅಲ್ಲಿ ದಶಕಗಳ ನಂತರವೂ ಅನೇಕರು ಪಾಕಿಸ್ತಾನದಲ್ಲಿ ಆಶ್ರಯಕ್ಕಾಗಿ ಕಾಯುತ್ತಿದ್ದರು.
1973ರ ಬಾಂಗ್ಲಾದೇಶದ ಸಂವಿಧಾನ ಜಾತ್ಯತೀತ ರಾಜ್ಯ, ಸಂಸದೀಯ ರೂಪದ ಸರಕಾರ, ಹಕ್ಕುಗಳ ಮಸೂದೆ ಮತ್ತು ಸ್ಥಳೀಯ ಸರಕಾರಕ್ಕೆ ಬಲವಾದ ಬದ್ಧತೆ ಒದಗಿಸಿತು. ವಿಶ್ವಸಂಸ್ಥೆಗೆ ಸೇರಲು ಬಾಂಗ್ಲಾದೇಶದ ಆರಂಭಿಕ ಅರ್ಜಿಯನ್ನು ಚೀನಾ ವಿಟೋ ಮಾಡಿತು. ವಿಶ್ವಸಂಸ್ಥೆಗೆ ಸೇರಲು 1974 ರವರೆಗೂ ಕಾಯಬೇಕಾಯಿತು. ಸಾರಿಗೆ, ಸಂವಹನ ಮತ್ತು ಅಂತರ್‌ರಾಷ್ಟ್ರೀಯ ವ್ಯಾಪಾರ ಜಾಲಗಳ ಪುನಃಸ್ಥಾಪನೆ, ವಿದ್ಯುತ್ ಪೂರೈಕೆ, ಶಿಕ್ಷಣ, ಆರೋಗ್ಯ ಮತ್ತು ಜನಸಂಖ್ಯಾ ಕಾರ್ಯಕ್ರಮಗಳು, ಕೃಷಿ ಮತ್ತು ಕೈಗಾರಿಕಾ ಉತ್ಪಾದನೆಯ ಪುನರಾರಂಭ ಸೇರಿದಂತೆ ಹಲವು ಇತರ ಸಮಸ್ಯೆಗಳನ್ನು ಎದುರಿಸಿತು. 1973ರಲ್ಲಿ ನಡೆದ ಚುನಾವಣೆಯಲ್ಲಿ ಮುಜೀಬ್ ಭಾರೀ ಬಹುಮತ ಪಡೆದರೂ, ಆ ವಿಜಯೋತ್ಸವ ಹೆಚ್ಚು ಸಮಯ ಉಳಿಯಲಿಲ್ಲ. ಆರ್ಥಿಕ ತೊಂದರೆಗಳು ಮುಂದುವರಿದವು. ಬೆಲೆಗಳು ಏರಿದವು ಮತ್ತು 1974ರಲ್ಲಿ ಭಾರೀ ಪ್ರಮಾಣದ ಸಾವುನೋವು, ದೊಡ್ಡ ಕ್ಷಾಮ ತಲೆದೋರಿತು. ಬಿಕ್ಕಟ್ಟನ್ನು ಎದುರಿಸಿದ ಮುಜೀಬ್ ಸ್ವಾತಂತ್ರ್ಯಗಳನ್ನು ಮೊಟಕುಗೊಳಿಸಿ, ಅಕ್ಷರಶಃ ಸರ್ವಾಧಿಕಾರಿಯಾದರು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತವೇ ಆಳತೊಡಗಿತು. 1975 ರ ಆಗಸ್ಟ್ 15 ರಂದು ಮುಜೀಬ್ ಮತ್ತವರ ಕುಟುಂಬದ ಹೆಚ್ಚಿನವರು ಹತ್ಯೆಗೀಡಾದರು. ಹತ್ಯೆಯ ಹಿಂದೆ ಬಲಪಂಥೀಯ ಪಾಕಿಸ್ತಾನ ಪರ ಸೇನಾಧಿಕಾರಿಗಳಿದ್ದರು. ಕೆಲ ರಾಜಕಾರಣಿಗಳು ಸಹ ಪಿತೂರಿಯಲ್ಲಿ ಭಾಗಿಯಾಗಿದ್ದರು. ಸಶಸ್ತ್ರ ಪಡೆಗಳು ಪ್ರತಿಸ್ಪರ್ಧಿ ಬಣಗಳಾಗಿ ವಿಭಜನೆಯಾದವು.
1975ರ ನವೆಂಬರ್‌ನಲ್ಲಿ ನಡೆದ ಮತ್ತೊಂದು ದಂಗೆ ಬಳಿಕ ಮೇಜರ್ ಜನರಲ್ ಝಿಯಾವುರ್ ರಹಮಾ ಅಧಿಕಾರಕ್ಕೇರಿದರು. ಒಮ್ಮೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಝಿಯಾ, ಭಾರತ ವಿರೋಧಿ ನಿಲುವು ತಳೆದು ಪಾಕಿಸ್ತಾನಕ್ಕೆ ಬೆಂಬಲ ನೀಡಿದರು. ಅವರು 1977 ರಲ್ಲಿ ಅಧ್ಯಕ್ಷರಾದ ಬಳಿಕ ರಾಜಕೀಯದಲ್ಲಿ ಭ್ರಷ್ಟಾಚಾರ ಹೆಚ್ಚಾಯಿತೆಂದು ಹೇಳಲಾಗುತ್ತದಾದರೂ, ಬಾಂಗ್ಲಾದೇಶದ ಪುನರ್ನಿರ್ಮಾಣ ಮತ್ತು ಅಭಿವೃದ್ಧಿಯಲ್ಲಿ ಅವರು ಗಮನಾರ್ಹ ಸಾಧನೆ ಮಾಡಿದರು. ಅವರು ಮಿಲಿಟರಿಯನ್ನು ಬಲಪಡಿಸಿದರು, ಅಧಿಕಾರಶಾಹಿಯನ್ನು ಸಬಲೀಕರಣಗೊಳಿಸಿದರು. ಆಹಾರ ಉತ್ಪಾದನೆ, ನೀರಾವರಿ, ಪ್ರಾಥಮಿಕ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ್ದಲ್ಲದೆ, ಕಾನೂನು ಸುವ್ಯವಸ್ಥೆ ಸುಧಾರಿಸಿದರು. ಹತ್ತಿರದ ದೇಶಗಳೊಂದಿಗೆ ಆರ್ಥಿಕ ಸಹಕಾರ ಪ್ರಾರಂಭಿಸಿದರು. ಅದರ ನಡುವೆಯೂ, ಮಿಲಿಟರಿ ದಂಗೆ ಯತ್ನಗಳು ಮುಂದುವರಿದವು ಮತ್ತು 1981ರ ಮೇ 30 ರಂದು ಕೆಲವು ಸೇನಾಧಿಕಾರಿಗಳಿಂದಲೇ ಅವರ ಹತ್ಯೆಯಾಯಿತು. ಆದರೆ, ಢಾಕಾದಲ್ಲಿನ ಮಿಲಿಟರಿ ಹೈಕಮಾಂಡ್ ಹಂತಕ ಸೇನಾಧಿಕಾರಿಗಳಿಗೆ ಬೆಂಬಲ ನೀಡಲಿಲ್ಲ ಮತ್ತು ಸಂಚುಕೋರರನ್ನು ಗಲ್ಲಿಗೇರಿಸಲಾಯಿತು.







