ಮಹಿಳಾ ನಾಯಕತ್ವ ಎದುರಿಸಿದ, ಎದುರಿಸುತ್ತಿರುವ ಸವಾಲುಗಳು

ಭಾಗ - 2
ಇಂದಿರಾ ಗಾಂಧಿ (1917-1984)
ಆಧುನಿಕ ಭಾರತದ ಅತ್ಯಂತ ಪ್ರಭಾವೀ ನಾಯಕಿ ಇಂದಿರಾ ಗಾಂಧಿ. ಭಾರತದ ಮೊದಲ ಮಹಿಳಾ ಪ್ರಧಾನಿಯಾದ ಅವರು, ಪ್ರಬಲ ಮತ್ತು ದಿಟ್ಟ ನಾಯಕತ್ವಕ್ಕೆ ಹೆಸರಾಗಿದ್ದಾರೆ. ಸ್ವಾತಂತ್ರ್ಯಾನಂತರದ ಇತಿಹಾಸದ ಸಂಕೀರ್ಣ ಅವಧಿಯಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ದೇಶವನ್ನು ಮುನ್ನಡೆಸಿದರು. ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಪುತ್ರಿಯಾಗಿ, ಅವರು ಚಿಕ್ಕ ವಯಸ್ಸಿನಿಂದಲೇ ರಾಜಕೀಯದಲ್ಲಿ ತೊಡಗಿಸಿಕೊಂಡರು. ದಿಟ್ಟ ಸುಧಾರಣೆಗಳು ಮತ್ತು ವಿವಾದಾತ್ಮಕ ನಿರ್ಧಾರಗಳ ಮೂಲಕ ತಮ್ಮದೇ ಆದ ಪರಂಪರೆ ನಿರ್ಮಿಸಿದರು. ಅವರ ಅಧಿಕಾರಾವಧಿಯ ಹಸಿರು ಕ್ರಾಂತಿ ಭಾರತದ ಕೃಷಿ ವಲಯವನ್ನೇ ಬದಲಿಸಿತು. ಆದರೂ, 1975ರಿಂದ 1977 ರವರೆಗೆ ಅವರು ತುರ್ತು ಪರಿಸ್ಥಿತಿ ಹೇರಿದ್ದು ದೇಶದ ಚರಿತ್ರೆಯಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದಿದೆ. ನಾಗರಿಕ ಸ್ವಾತಂತ್ರ್ಯಗಳನ್ನು ಅಮಾನತುಗೊಳಿಸುವುದು ಮತ್ತು ರಾಜಕೀಯ ವಿರೋಧಿಗಳನ್ನು ಬಂಧಿಸುವುದು ಭಾರೀ ಟೀಕೆಗೆ ಗುರಿಯಾಯಿತು. 1984ರಲ್ಲಿ ಅವರು ತಮ್ಮ ಸಿಖ್ ಅಂಗರಕ್ಷಕರಿಂದ ಹತ್ಯೆಗೀಡಾದರು. ತಮ್ಮ ತಪ್ಪು ನಿರ್ಧಾರಗಳ ಹೊರತಾಗಿಯೂ, ಇಂದಿರಾ ಗಾಂಧಿ ಭಾರತೀಯ ರಾಜಕೀಯದಲ್ಲಿ ಅತ್ಯುನ್ನತ ವ್ಯಕ್ತಿಯಾಗಿದ್ದಾರೆ. ಅತ್ಯಂತ ಪ್ರಸಿದ್ಧ ನಾಯಕಿಯರಲ್ಲಿ ಒಬ್ಬರಾಗಿ ಉಳಿದಿದ್ದಾರೆ.
ಬೆನಝೀರ್ ಭುಟ್ಟೋ
ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನ ಮಂತ್ರಿಯಾಗಿದ್ದರು. ಅವರು 1988ರಿಂದ 90 ಮತ್ತು 1993ರಿಂದ 96ರವರೆಗೆ ಎರಡು ಬಾರಿ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಮುಸ್ಲಿಮ್ ದೇಶದ ಪ್ರಜಾಪ್ರಭುತ್ವ ಸರಕಾರವನ್ನು ಮುನ್ನಡೆಸಿದ ಮೊದಲ ಮಹಿಳೆ ಅವರು. ಪ್ರಭಾವಿ ರಾಜಕೀಯ ಕುಟುಂಬದಿಂದ ಬಂದ ಅವರು, ತಮ್ಮ ತಂದೆ ಝುಲ್ಫಿಕರ್ ಅಲಿ ಭುಟ್ಟೋ ಅವರ ನಂತರ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯನ್ನು ಮುನ್ನಡೆಸಿದರು. ಭುಟ್ಟೋ ಅವರು ಸೈನಿಕ ಆಡಳಿತದ ವಿರುದ್ಧ ಹೋರಾಡಿ, ಪ್ರಜಾಪ್ರಭುತ್ವವನ್ನು ಬೆಂಬಲಿಸಿದರು. ಆದರೆ ಭ್ರಷ್ಟಾಚಾರದ ಆರೋಪಗಳು ಮತ್ತು ರಾಜಕೀಯ ಅಸ್ಥಿರತೆಯನ್ನು ಎದುರಿಸಿದರು. 2007ರಲ್ಲಿ ಚುನಾವಣಾ ರ್ಯಾಲಿಯ ಹೊತ್ತಲ್ಲಿ ಸ್ಫೋಟದಲ್ಲಿ ಅವರ ಹತ್ಯೆಯಾಯಿತು.
ಮೇಘವತೀ ಸುಕರ್ಣೋಪುತ್ರಿ
2001ರಿಂದ 2004ವರೆಗೆ ವಿಶ್ವದ ಅತಿ ಹೆಚ್ಚು ಮುಸ್ಲಿಮ್ ಜನಸಂಖ್ಯೆಯ ದೇಶ ಇಂಡೋನೇಶ್ಯದ ಅಧ್ಯಕ್ಷೆಯಾಗಿದ್ದರು. ಆ ದೇಶದ ಪ್ರಥಮ ಹಾಗೂ ಏಕೈಕ ಮಹಿಳಾ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಅವರದ್ದು. ಅದಕ್ಕೂ ಮೊದಲು ದೇಶದ ಉಪಾಧ್ಯಕ್ಷೆಯಾಗಿಯೂ ಸೇವೆ ಸಲ್ಲಿಸಿದ್ದರು. ಅವರ ತಂದೆ ಸುಕರ್ಣೋ ಆ ದೇಶದ ಪ್ರಥಮ ಅಧ್ಯಕ್ಷರಾಗಿದ್ದರು.
ತಾನ್ಸೂ ಸಿಲ್ಲೆರ್
1993ರಿಂದ 1996ರವರೆಗೆ ತುರ್ಕಿಯದ ಪ್ರಧಾನಿಯಾಗಿ ದ್ದರು. ಆ ದೇಶದ ಪ್ರಥಮ ಹಾಗೂ ಏಕೈಕ ಮಹಿಳಾ ಪ್ರಧಾನಿ ಅವರು.
ಏಂಜೆಲಾ ಮರ್ಕೆಲ್
2005ರಿಂದ 2021ರವರೆಗೆ ಜರ್ಮನಿಯ ಚಾನ್ಸೆಲರ್ ಆಗಿ ಸೇವೆ ಸಲ್ಲಿಸಿದರು. ಅವರು ಆ ಹುದ್ದೆಯನ್ನು ಅಲಂಕರಿಸಿದ ಏಕೈಕ ಮಹಿಳೆ ಮತ್ತು ದೀರ್ಘಕಾಲ ಸೇವೆ ಸಲ್ಲಿಸಿದ ಚಾನ್ಸೆಲರ್. ಅವರನ್ನು ಒಂದು ದಶಕಕ್ಕೂ ಹೆಚ್ಚು ಕಾಲ ವಿಶ್ವದ ಅತ್ಯಂತ ಶಕ್ತಿಶಾಲಿ ಮಹಿಳೆ ಎಂದು ಉಲ್ಲೇಖಿಸಲಾಯಿತು. ಹಲವಾರು ಪ್ರಮುಖ ಯುರೋಪಿಯನ್ ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ನಾಯಕತ್ವಕ್ಕೆ ಅವರು ಹೆಸರಾಗಿದ್ದರು.
ಎಲೆನ್ ಜಾನ್ಸನ್ ಸಿರ್ಲೀಫ್
2006 ರಿಂದ 2018 ರವರೆಗೆ ಲೈಬೀರಿಯಾ ಅಧ್ಯಕ್ಷರಾಗಿದ್ದರು. ಅವರು ಆಫ್ರಿಕಾದಲ್ಲಿ ಆಯ್ಕೆಯಾದ ರಾಷ್ಟ್ರದ ಮೊದಲ ಮಹಿಳಾ ಮುಖ್ಯಸ್ಥರಾಗಿದ್ದರು. ಮಹಿಳಾ ಹಕ್ಕುಗಳ ಕುರಿತಾದ ಕೆಲಸ ಮತ್ತು ಲೈಬೀರಿಯಾದ ಅಂತರ್ಯುದ್ಧದ ನಂತರದ ಆರ್ಥಿಕತೆ ಬಲಪಡಿಸಿದ್ದಕ್ಕಾಗಿ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾಗಿದ್ದರು.
ಆಂಗ್ ಸಾನ್ ಸೂ ಕಿ
ಮ್ಯಾನ್ಮಾರ್‌ನ ಆಂಗ್ ಸಾನ್ ಸೂ ಕಿ ಅವರದು ಪ್ರಜಾಪ್ರಭುತ್ವದ ಹೋರಾಟದ ಸಂಕೇತದಿಂದ ಕಾರಾಗೃಹದವರೆಗೆ ಸಾಗಿರುವ ಒಂದು ಸಂಕೀರ್ಣ ಪಯಣ. ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ನಾಯಕಿಯೊಬ್ಬರು ನಂತರದ ದಿನಗಳಲ್ಲಿ ವಿವಾದಗಳು ಮತ್ತು ರಾಜಕೀಯ ಪತನವನ್ನು ಕಂಡ ಬಗೆ, ಅಧಿಕಾರದ ಹಾದಿ ಎಷ್ಟು ಕಠಿಣ ಎಂಬುದನ್ನು ತೋರಿಸುತ್ತದೆ.
ಪ್ರತಿಭಾ ಪಾಟೀಲ್ ಮತ್ತು ದ್ರೌಪದಿ ಮುರ್ಮು
ಇಂದಿರಾ ಗಾಂಧಿಯವರು ಆಡಳಿತಾತ್ಮಕ ಮುಖ್ಯಸ್ಥರಾಗಿ ಇತಿಹಾಸ ಬರೆದರೆ, ರಾಷ್ಟ್ರದ ಅತ್ಯುನ್ನತ ಸಾಂವಿಧಾನಿಕ ಹುದ್ದೆಯಾದ ರಾಷ್ಟ್ರಪತಿ ಸ್ಥಾನವನ್ನೂ ಮಹಿಳೆಯರು ಅಲಂಕರಿಸಿ ಭಾರತದ ಘನತೆಯನ್ನು ಹೆಚ್ಚಿಸಿದ್ದಾರೆ. ಪ್ರತಿಭಾ ಪಾಟೀಲ್ ಅವರು 2007ರಲ್ಲಿ ಭಾರತದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಆಯ್ಕೆಯಾಗುವ ಮೂಲಕ ಈ ಪರಂಪರೆಗೆ ನಾಂದಿ ಹಾಡಿದರು. ಇನ್ನು ಪ್ರಸ್ತುತ ರಾಷ್ಟ್ರಪತಿಯಾಗಿರುವ ದ್ರೌಪದಿ ಮುರ್ಮು ಅವರ ಆಯ್ಕೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು. ಒಡಿಶಾದ ಕುಗ್ರಾಮವೊಂದರಿಂದ ಬಂದು, ಕಠಿಣ ಪರಿಶ್ರಮದ ಮೂಲಕ ಬೆಳೆದು, ದೇಶದ ಪ್ರಥಮ ಪ್ರಜೆಯಾಗಿ ಆಯ್ಕೆಯಾದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.
ನಜ್ಲ ಬೋಡೆನ್
ಟ್ಯುನೀಷಿಯಾ ಹಾಗೂ ಅರಬ್ ಜಗತ್ತಿನ ಪ್ರಪ್ರಥಮ ಮಹಿಳಾ ಪ್ರಧಾನಿ ಇವರು. 2021ರಿಂದ 2023ರವರೆಗೆ ಟ್ಯುನೀಷಿಯಾ ಪ್ರಧಾನಿಯಾಗಿದ್ದರು.
ಹಲೀಮಾ ಯಾಕೂಬ್
2017ರಿಂದ 2023ರವರೆಗೆ ಸಿಂಗಾಪುರ ಅಧ್ಯಕ್ಷರಾಗಿದ್ದರು. ಆ ದೇಶದ ಪ್ರಥಮ ಅಧ್ಯಕ್ಷೆ ಎಂಬ ಹೆಗ್ಗಳಿಕೆ ಇವರದ್ದು.
ವರ್ತಮಾನದಲ್ಲಿಯೂ ಮಹಿಳೆಯರು ಅಡೆತಡೆಗಳನ್ನು ಮುರಿಯುತ್ತಲೇ ಇದ್ದಾರೆ ಮತ್ತು ರಾಜಕೀಯವಾಗಿ ತಮ್ಮ ನಾಯಕತ್ವದ ಶಕ್ತಿ ತೋರಿಸುತ್ತಲೇ ಇದ್ದಾರೆ. ಮಹಿಳೆಯರು ಅತ್ಯುನ್ನತ ರಾಜಕೀಯ ಹುದ್ದೆಗಳಿಗೆ ಹೆಚ್ಚಾಗಿ ಆಯ್ಕೆಯಾಗು ತ್ತಿದ್ದಾರೆ. ಆಡಳಿತಕ್ಕೆ ವೈವಿಧ್ಯಮಯ ದೃಷ್ಟಿಕೋನಗಳನ್ನು ತರುತ್ತಿದ್ದಾರೆ. ಇಂದು ಮಹಿಳೆಯರು ರಾಷ್ಟ್ರ ಅಥವಾ ಸರಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ 29 ದೇಶಗಳಿವೆ. ಮಾಹಿತಿಯ ಪ್ರಕಾರ, 29 ದೇಶಗಳಲ್ಲಿ 32 ಮಹಿಳೆಯರು ಹೆಡ್ ಆಫ್ ಸ್ಟೇಟ್ ಅಥವಾ ಸರಕಾರದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಉರ್ಸುಲಾ ವಾನ್ ಡೆರ್ ಲೇಯೆನ್
ಯುರೋಪಿಯನ್ ಆಯೋಗದ ಅಧ್ಯಕ್ಷೆಯಾಗಿರುವ ಇವರು, ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ರಾಜಕೀಯ ವ್ಯಕ್ತಿಗಳಲ್ಲಿ ಸ್ಥಿರವಾದ ಸ್ಥಾನ ಪಡೆದಿದ್ದಾರೆ.
ಕ್ರಿಸ್ಟೀನ್ ಲಗಾರ್ಡ್
ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಅಧ್ಯಕ್ಷೆಯಾಗಿದ್ದು, ಜಾಗತಿಕ ಹಣಕಾಸು ಮತ್ತು ಆರ್ಥಿಕ ನೀತಿಯಲ್ಲಿ ಪ್ರಮುಖ ವ್ಯಕ್ತಿ.
ಕಮಲಾ ಹ್ಯಾರಿಸ್
ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಮೊದಲ ಮಹಿಳೆ, ಮೊದಲ ಕಪ್ಪು ವ್ಯಕ್ತಿ ಮತ್ತು ಮೊದಲ ದಕ್ಷಿಣ ಏಶ್ಯದ ಅಮೆರಿಕನ್. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತರೂ, ಅಮೆರಿಕದಲ್ಲಿ ಅವರು ಅತ್ಯುನ್ನತ ಶ್ರೇಣಿಯ ಮಹಿಳಾ ರಾಜಕಾರಣಿ.
ಜಾರ್ಜಿಯಾ ಮೆಲೋನಿ
ಇಟಲಿಯ ಪ್ರಧಾನಿ, ಪ್ರಮುಖ ಯುರೋಪಿಯನ್ ನಾಯಕಿ.
ಕ್ಲೌಡಿಯಾ ಶೀನ್‌ಬಾಮ್
ಮೆಕ್ಸಿಕೋದ ಮೊದಲ ಮಹಿಳಾ ಅಧ್ಯಕ್ಷೆಯಾಗಿ 2024 ರಲ್ಲಿ ಆಯ್ಕೆಯಾದರು.
ಮಿಯಾ ಮಾಟ್ಲಿ
2018 ರಿಂದ ಬಾರ್ಬಡೋಸ್‌ನ ಪ್ರಧಾನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಹವಾಮಾನ ಬದಲಾವಣೆ ಮತ್ತು ಜಾಗತಿಕ ಹಣಕಾಸು ಸುಧಾರಣೆಯ ಕುರಿತ ಪ್ರಬಲ ಧ್ವನಿಯಾಗಿ ಗುರುತಿಸಲ್ಪಟ್ಟಿದ್ದಾರೆ.
ಜಸಿಂಡಾ ಅರ್ಡೆರ್ನ್
ನ್ಯೂಝಿಲ್ಯಾಂಡ್‌ನ ಕಿರಿಯ ಪ್ರಧಾನ ಮಂತ್ರಿಗಳಲ್ಲಿ ಒಬ್ಬರಾಗಿ, 2017ರಿಂದ 2023ರವರೆಗೆ ಅಧಿಕಾರದಲ್ಲಿದ್ದರು. ಅವರು ಕ್ರೈಸ್ಟ್ ಚರ್ಚ್ ಮಸೀದಿ ಗುಂಡಿನ ದಾಳಿ ಮತ್ತು ಕೋವಿಡ್ ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ಸಹಾನುಭೂತಿ ಮತ್ತು ನಿರ್ಣಾಯಕ ನಾಯಕತ್ವಕ್ಕಾಗಿ ಜಾಗತಿಕ ಗಮನ ಸೆಳೆದರು.
ಸುಶೀಲಾ ಕರ್ಕಿ
ನೇಪಾಳದಲ್ಲಿ ಸೆಪ್ಟಂಬರ್ 2025 ರಲ್ಲಿ ಯುವಜನರ ಆಕ್ರೋಶಕ್ಕೆ ತುತ್ತಾಗಿ ಸರಕಾರ ಪತನವಾದಾಗ ಸುಪ್ರೀಂ ಕೋರ್ಟ್ ಮಾಜಿ ಮುಖ್ಯ ನ್ಯಾಯಮೂರ್ತಿ ಸುಶೀಲಾ ಕರ್ಕಿ ಅವರು ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ನೇಪಾಳದ ಪ್ರಥಮ ಮಹಿಳಾ ಪ್ರಧಾನಿ ಅವರು.
ಸಾಮಿಯ ಸುಲೂಹು ಹಸನ್
ತಾಂಝಾನಿಯದ ಹಾಲಿ ಅಧ್ಯಕ್ಷೆ. 2021ರಿಂದ ಅಧಿಕಾರ ದಲ್ಲಿರುವ ಇವರು ಆ ದೇಶದ ಪ್ರಥಮ ಅಧ್ಯಕ್ಷೆ.
ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಕ್ರಿಸ್ಟೀನ್ ಲಗಾರ್ಡ್ ಅವರನ್ನು ಯುರೋಪಿಯನ್ ಒಕ್ಕೂಟದ ಮೇಲಿನ ಅವರ ಅಪಾರ ಆರ್ಥಿಕ ಮತ್ತು ನೀತಿ ಪ್ರಭಾವದ ಕಾರಣಕ್ಕಾಗಿ ಜಾಗತಿಕವಾಗಿ ಅತ್ಯಂತ ಶಕ್ತಿಶಾಲಿ ಮಹಿಳೆಯರೆಂದು ಉಲ್ಲೇಖಿಸಲಾಗುತ್ತದೆ.
ಇಷ್ಟೆಲ್ಲದರ ಹೊರತಾಗಿಯೂ, ರಾಜಕೀಯ ಜೀವನದಲ್ಲಿ ಲಿಂಗ ಸಮಾನತೆ ಸಾಧಿಸುವುದು ಬಹಳ ದೂರವಿದೆ ಎಂದು ದತ್ತಾಂಶಗಳು ತೋರಿಸುತ್ತವೆ. ವಿಶ್ವಾದ್ಯಂತ ನಿರ್ಧಾರ ತೆಗೆದುಕೊಳ್ಳುವ ಎಲ್ಲಾ ಹಂತಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕಡಿಮೆ ಮತ್ತು ರಾಜಕೀಯ ಜೀವನದಲ್ಲಿ ಲಿಂಗ ಸಮಾನತೆ ಸಾಧಿಸಲು ಈಗಿನ ಸ್ಥಿತಿಯಲ್ಲಿ ಇನ್ನೂ 130 ವರ್ಷಗಳವರೆಗೂ ಸಾಧ್ಯವಿಲ್ಲ ಎನ್ನಲಾಗುತ್ತಿದೆ.
ಯುಎನ್ ವಿಮೆನ್ ದತ್ತಾಂಶದ ಪ್ರಕಾರ, ಮಹಿಳೆಯರು ಶೇ.22.9ರಷ್ಟು ಕ್ಯಾಬಿನೆಟ್ ಸದಸ್ಯರನ್ನು ಪ್ರತಿನಿಧಿಸುತ್ತಾರೆ. ಕ್ಯಾಬಿನೆಟ್ ಮಂತ್ರಿಗಳ ಸ್ಥಾನಗಳಲ್ಲಿ ಮಹಿಳೆಯರು ಶೇ.50 ಅಥವಾ ಅದಕ್ಕಿಂತ ಹೆಚ್ಚಿನದನ್ನು ಹೊಂದಿರುವ ದೇಶಗಳು ಬೆರಳೆಣಿಕೆಯಷ್ಟು ದೇಶಗಳು ಮಾತ್ರ. ರುವಾಂಡಾ ಮತ್ತು ಮೆಕ್ಸಿಕೊದಂತಹ ಕೆಲ ದೇಶಗಳು ಮಾತ್ರವೇ ತಮ್ಮ ಸಂಸತ್ತುಗಳಲ್ಲಿ ಶೇ. 50 ಅಥವಾ ಅದಕ್ಕಿಂತ ಹೆಚ್ಚಿನ ಮಹಿಳಾ ಪ್ರಾತಿನಿಧ್ಯವನ್ನು ಸಾಧಿಸಿವೆ. ರುವಾಂಡಾ (ಶೇ.64), ಕ್ಯೂಬಾ (ಶೇ.56), ನಿಕರಾಗುವಾ (ಶೇ.55), ಅಂಡೋರಾ (ಶೇ.50), ಮೆಕ್ಸಿಕೊ (ಶೇ.50) ಮತ್ತು ಯುಎಇ (ಶೇ.50). 21 ದೇಶಗಳಲ್ಲಿ ಈ ಪ್ರಾತಿನಿಧ್ಯ ಶೇ.40ರಷ್ಟು ಅಥವಾ ಅದಕ್ಕಿಂತ ಹೆಚ್ಚಿದೆ. ಇದರಲ್ಲಿ ಯುರೋಪಿನ ಒಂಭತ್ತು ದೇಶಗಳು, ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ಆರು ದೇಶಗಳು, ಆಫ್ರಿಕಾದಲ್ಲಿ ಐದು ಮತ್ತು ಏಶ್ಯ-ಪೆಸಿಫಿಕ್‌ನಲ್ಲಿ ಒಂದು ದೇಶ ಸೇರಿವೆ. ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್‌ನಲ್ಲಿ ಮಹಿಳೆಯರು ಶೇ.36ರಷ್ಟು ಸಂಸದೀಯ ಸ್ಥಾನಗಳನ್ನು ಹೊಂದಿದ್ದಾರೆ. ಯುರೋಪ್ ಮತ್ತು ಉತ್ತರ ಅಮೆರಿಕದಲ್ಲಿ ಶೇ.33ರಷ್ಟು ಸಂಸದರಾಗಿದ್ದಾರೆ. ಉಪ ಸಹಾರನ್ ಆಫ್ರಿಕಾದಲ್ಲಿ ಶೇ.27 ರಷ್ಟು ಮಹಿಳಾ ಸಂಸದರಿದ್ದಾರೆ. ಪೂರ್ವ ಮತ್ತು ಆಗ್ನೇಯ ಏಶ್ಯದಲ್ಲಿ ಶೇ.23.5ರಷ್ಟು, ಓಷಿಯಾನಿಯಾದಲ್ಲಿ ಶೇ.20ರಷ್ಟು, ಉತ್ತರ ಆಫ್ರಿಕಾ ಮತ್ತು ಪಶ್ಚಿಮ ಏಶ್ಯದಲ್ಲಿ ಶೇ.19ರಷ್ಟು ಮತ್ತು ಮಧ್ಯ ಮತ್ತು ದಕ್ಷಿಣ ಏಶ್ಯದಲ್ಲಿ ಶೇ.17ರಷ್ಟು ಮಹಿಳಾ ಸಂಸದರಿದ್ದಾರೆ.
ಆದರೂ, ರಾಷ್ಟ್ರೀಯ ಸಂಸತ್ತುಗಳಲ್ಲಿ ಮಹಿಳೆಯರ ಜಾಗತಿಕ ಸರಾಸರಿ ಶೇ. 27ರಷ್ಟಿದೆ ಮತ್ತು ಕೆಲವು ದೇಶಗಳಲ್ಲಿ ಇದು ಶೇ. 10ಕ್ಕಿಂತ ಕಡಿಮೆಯಿದೆ ಎಂದು ವಿಶ್ವಸಂಸ್ಥೆ ವರದಿಯಲ್ಲಿ ಮಾಹಿತಿಯಿದೆ. ಕಳೆದ 25 ವರ್ಷಗಳಲ್ಲಿ ಜಾಗತಿಕವಾಗಿ ಮಹಿಳೆಯರ ರಾಜಕೀಯ ಭಾಗವಹಿಸುವಿಕೆ ದ್ವಿಗುಣಗೊಂಡಿದೆ. ಆದರೂ ಗಮನಾರ್ಹ ಅಂತರಗಳು ಹಾಗೆಯೇ ಉಳಿದಿವೆ. ಹೆಚ್ಚಿನ ಮಹಿಳಾ ರಾಜಕೀಯ ಪ್ರಾತಿನಿಧ್ಯ ಆರ್ಥಿಕ ಬೆಳವಣಿಗೆ ಮತ್ತು ವೇತನ ರಜೆ ಮತ್ತು ಮಕ್ಕಳ ಆರೈಕೆಯಂತಹ ವೃತ್ತಿ ಮತ್ತು ವೈಯಕ್ತಿಕ ಜೀವನ ಸಮತೋಲನ ಬೆಂಬಲಿಸುವ ನೀತಿಗಳೊಂದಿಗೆ ಸಂಬಂಧ ಹೊಂದಿದೆ. ಮಹಿಳಾ ರಾಜಕೀಯ ನಾಯಕರು ಹೆಚ್ಚಾಗಿ ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಲಿಂಗ ಆಧಾರಿತ ಹಿಂಸೆಯಂತಹ ಸಮಸ್ಯೆಗಳನ್ನು ನಿರ್ವಹಿಸುತ್ತಾರೆ.
ಆದರೂ ಅವರೆದುರಿನ ಸವಾಲುಗಳು ಕಡಿಮೆಯಿಲ್ಲ. ಸಾಮಾಜಿಕ ರೂಢಿಗಳು, ಸೀಮಿತ ಸಂಪನ್ಮೂಲಗಳು ಮತ್ತು ವ್ಯವಸ್ಥಿತ ಪಕ್ಷಪಾತಗಳು ಮಹಿಳೆಯರ ಪ್ರಗತಿಗೆ ಅಡ್ಡಿಯಾಗುತ್ತಲೇ ಇರುತ್ತವೆ. ಈಗಾಗಲೇ ಗಮನಿಸಿರುವಂತೆ, ಈಗಿನ ದರದಲ್ಲಿ ಉನ್ನತ ನಾಯಕತ್ವದಲ್ಲಿ ಲಿಂಗ ಸಮಾನತೆ ಕಾಣಲು ಒಂದು ಶತಮಾನಕ್ಕೂ ಹೆಚ್ಚು ಸಮಯ ಬೇಕಾಗಬಹುದು. ಯುರೋಪ್ ಮತ್ತು ಅಮೆರಿಕಗಳಲ್ಲಿ ಬಲವಾದ ಪ್ರಾತಿನಿಧ್ಯದ ಹೊರತಾಗಿಯೂ, ಪೆಸಿಫಿಕ್ ದ್ವೀಪಗಳು ಮತ್ತು ಏಶ್ಯದ ಕೆಲವು ಭಾಗಗಳಲ್ಲಿ ಗಮನಾರ್ಹ ಮಟ್ಟದ ಕಡಿಮೆ ಪ್ರಾತಿನಿಧ್ಯ ಮುಂದುವರಿದಿದೆ. ಮಹಿಳೆಯರು ರಾಜಕೀಯ ಅಧಿಕಾರದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದರೂ, ಆಧುನಿಕ ಜಗತ್ತು ಎಲ್ಲಾ ಹಂತದ ಆಡಳಿತದಲ್ಲಿ ಸಮಾನ ಪ್ರಾತಿನಿಧ್ಯ ಮತ್ತು ಪ್ರಭಾವ ಸಾಧಿಸುವಲ್ಲಿ ಈಗಲೂ ಗಣನೀಯ ಅಡೆತಡೆಗಳನ್ನು ಎದುರಿಸುತ್ತಿದೆ ಎಂದು ಯುಎನ್ ವಿಮೆನ್ ಮತ್ತು ಅಂತರ ಸಂಸದೀಯ ಒಕ್ಕೂಟದ (ಐಪಿಯು) ವರದಿಗಳು ಎತ್ತಿ ತೋರಿಸುತ್ತಿವೆ.
ಆಧುನಿಕ ಜಗತ್ತಿನಲ್ಲಿ, ಕಾನೂನು ಪ್ರಗತಿಗಳು ಮತ್ತು ಇಂದಿರಾ ಗಾಂಧಿ, ಮಾರ್ಗರೆಟ್ ಥ್ಯಾಚರ್ ಮತ್ತು ಜಸಿಂಡಾ ಆರ್ಡೆರ್ನ್ ಅವರಂತಹ ಮಹಿಳಾ ಮಾದರಿಗಳ ಹೊರತಾಗಿಯೂ, ಮಹಿಳೆಯರು ಇನ್ನೂ ಗಮನಾರ್ಹವಾದ, ಆದರೆ ಹೆಚ್ಚಾಗಿ ಸೂಕ್ಷ್ಮವಾದ ಅಡೆತಡೆಗಳನ್ನು ಎದುರಿಸುತ್ತಾರೆ. ವೃತ್ತಿಪರ ಮತ್ತು ವೈಯಕ್ತಿಕ ಜೀವನವೆರಡನ್ನೂ ನಿಭಾಯಿಸುವ ಒತ್ತಡ ಅವರ ಮೇಲಿದೆ. ಜಾಗತಿಕವಾಗಿ ರಾಜಕೀಯ ಪಕ್ಷಗಳು ಮತ್ತು ಸರಕಾರಗಳಲ್ಲಿ ಉನ್ನತ ಮಟ್ಟದ ಸ್ಥಾನಗಳಲ್ಲಿ ಮಹಿಳೆಯರು ಕಡಿಮೆ ಪ್ರಾತಿನಿಧ್ಯ ಹೊಂದಿದ್ದಾರೆ. ಕೆಲವು ಸ್ಥಳೀಯ ಸರಕಾರಿ ವ್ಯವಸ್ಥೆಗಳಲ್ಲಿ ಅಧಿಕಾರಕ್ಕೆ ಆಯ್ಕೆಯಾದ ಮಹಿಳೆಯರನ್ನು ಕೆಲವೊಮ್ಮೆ ಕುಟುಂಬದ ಪುರುಷ ಸದಸ್ಯರೇ ನಿಯಂತ್ರಿಸುವ ವಿಪರ್ಯಾಸವೂ ಇದೆ.







