ಬಿಜೆಪಿಯ ‘ವಂದೇ ಮಾತರಂ’ ಅಸ್ತ್ರ ಅದಕ್ಕೇ ತಿರುಗುಬಾಣವಾಯಿತೇ?

ವಂದೇ ಮಾತರಂಗೆ 150 ತುಂಬಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಮೋದಿ ಸರಕಾರ ಡಿಸೆಂಬರ್ 8ರಂದು ಚರ್ಚೆ ಆರಂಭಿಸಿತು. 10 ಗಂಟೆಗಳ ಚರ್ಚೆಗೆ ಸರಕಾರ ಸಂಸತ್ ಕಲಾಪದ ಸಮಯವನ್ನು ಮೀಸಲಿಟ್ಟಿತು. ದೇಶಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ ವಂದೇ ಮಾತರಂ ಕುರಿತ ಚರ್ಚೆಯ ಅಗತ್ಯವೇನಿತ್ತು ಎಂಬ ಪ್ರಶ್ನೆ ಎದ್ದಿತು. ಈ ಚರ್ಚೆಯನ್ನು ಎತ್ತುತ್ತಿರುವುದರಲ್ಲಿ ಮೋದಿ ಸರಕಾರದ ಆರೆಸ್ಸೆಸ್ ಮನಸ್ಥಿತಿಯ ರಾಜಕೀಯ ಇದೆ ಎಂಬುದನ್ನು ಸಂಸತ್ತಿನಲ್ಲಿ ವಿಪಕ್ಷ ನಾಯಕರ ದಿಟ್ಟ ಭಾಷಣಗಳು ಬಯಲು ಮಾಡಿದವು. ಮೋದಿ ಭಾಷಣ ಕೂಡ ಅನಗತ್ಯವಾದ ವಿಚಾರಗಳನ್ನು ಪ್ರಸ್ತಾಪಿಸಿ, ಇತಿಹಾಸವನ್ನು ಮರೆತ ಅಥವಾ ಮರೆಮಾಚುವ ರೀತಿಯಲ್ಲಿದ್ದುದನ್ನು ವಿಪಕ್ಷ ನಾಯಕರು ಸ್ಪಷ್ಟವಾಗಿ ಎತ್ತಿ ತೋರಿಸಿದರು. ಬಂಗಾಳ ಚುನಾವಣೆ ಹಿನ್ನೆಲೆಯಲ್ಲೂ ಸರಕಾರದ ಉದ್ದೇಶವನ್ನು ಪ್ರಶ್ನಿಸಲಾಯಿತು. ದೇಶದ ಜ್ವಲಂತ ಸಮಸ್ಯೆಗಳಾದ ನಿರುದ್ಯೋಗ ಮತ್ತು ಬೆಲೆ ಏರಿಕೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಇಂಥ ಭಾವನಾತ್ಮಕ ವಿಷಯಗಳನ್ನು ಅಸ್ತ್ರವಾಗಿ ಸರಕಾರ ಬಳಸುತ್ತಿದೆ ಎಂದು ವಿಪಕ್ಷಗಳು ಹೇಳಿದವು. ವಂದೇ ಮಾತರಂ ಬಗ್ಗೆ ಈಗ ಇಷ್ಟು ಬೊಬ್ಬೆ ಹೊಡೆಯುವವರು, ಅದರ ನಿಜವಾದ ಅರ್ಥ, ಆಶಯ ಅರಿತಿದ್ದಾರೆಯೇ, ದೇಶವನ್ನು ಅದೇ ರೀತಿ ಉಳಿಸಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗಳನ್ನು ವಿಪಕ್ಷ ನಾಯಕರು ಎತ್ತಿದರು. ಅಂತಿಮವಾಗಿ, ವಿಪಕ್ಷ ನಾಯಕರನ್ನು ಹೆದರಿಸಲೆಂದೇ ತೆಗೆದಿದ್ದ ಬಿಜೆಪಿ ಅಸ್ತ್ರ ಅದಕ್ಕೇ ತಿರುಗುಬಾಣವಾಗಿದೆ ಎಂಬ ಮಾತುಗಳಿವೆ.
ಯಾಕೆ ಮೋದಿ ಸರಕಾರ ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು, ತನ್ನನ್ನು ಯಾರಾದರೂ ಪ್ರಶ್ನಿಸುವುದನ್ನು ತಡೆಯಲು, ನಿಜವಾದ ಸಮಸ್ಯೆಗಳ ಚರ್ಚೆಯಿಂದ ತಪ್ಪಿಸಿಕೊಳ್ಳಲು ಮತ್ತೆ ಮತ್ತೆ ಭಾವನಾತ್ಮಕ ವಿಷಯಗಳನ್ನು ಮುಂದೆ ತರುತ್ತದೆ ಎಂಬ ಪ್ರಶ್ನೆ ಮತ್ತೊಮ್ಮೆ ಎದ್ದಿದೆ. ಇದಕ್ಕೆ ಕಾರಣವಾದದ್ದು, ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ನೆಪದಲ್ಲಿ ಸರಕಾರ ಸಂಸತ್ತಿನಲ್ಲಿ ಎತ್ತಿದ ಚರ್ಚೆ. ವಂದೇ ಮಾತರಂನ 150 ವರ್ಷಗಳ ಕುರಿತು ಚರ್ಚೆ ನಡೆದಿರುವ ಈ ಹೊತ್ತಲ್ಲಾದರೂ, ಸರಕಾರ ವಂದೇ ಮಾತರಂನ ಒಂದೇ ಒಂದು ಪದವನ್ನು ನಿಜವಾಗಿಯೂ ಅವಲಂಬಿಸಿವೆಯೇ ಎಂಬ ಪ್ರಶ್ನೆ ಕೂಡ ಬಂತು.
ವಂದೇ ಮಾತರಂ ಗೀತೆಯ ಸುತ್ತ ಒಂದು ವಿವಾದ ಅದನ್ನು ಬರೆದ ಬಂಕಿಮ ಚಂದ್ರ ಚಟರ್ಜಿಯವರು ಬದುಕಿದ್ದಾಗಲೂ ಇತ್ತು. ಅವರು ಆ ಗೀತೆಯನ್ನು ವಿಸ್ತರಿಸಿ ಹಿಂದೂ ದೇವತೆಯನ್ನು ಸ್ತುತಿಸುವ ಚರಣಗಳನ್ನು ಸೇರಿಸಿದಾಗ, ಅದನ್ನು ಮುಸ್ಲಿಮರು ವಿರೋಧಿಸಿದ್ದರು. ಸ್ವಾತಂತ್ರ್ಯ ಹೋರಾಟ ಎಲ್ಲ ಸಮುದಾಯಗಳ ಹೋರಾಟವಾಗಿದ್ದಾಗ, ಅದರಲ್ಲಿ ಒಂದು ಧರ್ಮಕ್ಕೆ ಸೀಮಿತವಾದಂತೆ ಕಾಣುವ ವಂದೇ ಮಾತರಂ ಹಾಡುವುದರ ಬಗ್ಗೆ ಆಕ್ಷೇಪಗಳು ಬಂದವು. ಅಂದಹಾಗೆ, ಈ ಗೀತೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಸೇರಿಕೊಂಡದ್ದು, ಕೋಲ್ಕತಾ ಕಾಂಗ್ರೆಸ್ ಅಧಿವೇಶನದಲ್ಲಿ ಟಾಗೋರರು ಅದನ್ನು ಹಾಡಿದ ಬಳಿಕ. ಆದರೆ ಅದರೊಳಗಿನ ಧಾರ್ಮಿಕ ವಿಚಾರ ಚರ್ಚಾಸ್ಪದವಾಯಿತು. ಅದು ಹಿಂದೂ ರಾಷ್ಟ್ರೀಯವಾದದ ಭಾಗವಾಗುತ್ತಿದ್ದು, ನೈಜ ರಾಷ್ಟ್ರೀಯವಾದ ಮರೆಯಾಗುತ್ತಿದೆ ಎಂಬ ತಕರಾರನ್ನು ಮುಸ್ಲಿಮ್ ಲೀಗ್ ಎತ್ತಿತ್ತು. ಆನಂತರ 1937ರಲ್ಲಿ ಅದನ್ನು ಮೊದಲ ಎರಡು ಚರಣಗಳಿಗೆ ಸೀಮಿತಗೊಳಿಸಿ ಬಳಸುವ ನಿರ್ಧಾರವನ್ನು ನೆಹರೂ ತೆಗೆದುಕೊಂಡರು. ಆದರೆ, ಅದಕ್ಕೆ ಟಾಗೋರರ ಸಮ್ಮತಿ ಕೂಡ ಇತ್ತು. ಮಹಾತ್ಮಾ ಗಾಂಧಿ ಕೂಡ ಆ ಗೀತೆಯನ್ನು ಯಾರ ಮೇಲಾದರೂ ಹೇರುವುದನ್ನು ವಿರೋಧಿಸಿದ್ದರು. ಅದನ್ನು ಎರಡು ಚರಣಗಳಿಗೆ ಸೀಮಿತಗೊಳಿಸಿ ಬಳಸುವಲ್ಲಿ, ಅದರ ಧರ್ಮಾತೀತ ನಿಲುವು ಭಾರತಕ್ಕೆ ಹೊಂದುವುದರ ಬಗೆಗಿನ ಆಲೋಚನೆಯಿತ್ತು ಮತ್ತದು ನೆಹರೂ ಒಬ್ಬರ ಏಕಪಕ್ಷೀಯ ನಿರ್ಧಾರವೇನೂ ಆಗಿರಲಿಲ್ಲ.
ಭಾರತವನ್ನು ತಾಯಿಯೆಂದು ಕಲ್ಪಿಸಿಕೊಂಡ ಗೀತೆ ವಂದೇ ಮಾತರಂ. ಬ್ರಿಟಿಷ್ ವಸಾಹತುಶಾಹಿಯಿಂದ ಸ್ವಾತಂತ್ರ್ಯಕ್ಕಾಗಿ ಹೋರಾಡಲು ಸಮಾಜದ ವಿವಿಧ ವರ್ಗಗಳನ್ನು ಒಟ್ಟುಗೂಡಿಸಿದ ರಾಷ್ಟ್ರನಿರ್ಮಾಪಕರಿಗೆ ಅದು ಸ್ಫೂರ್ತಿ ನೀಡಿತ್ತು. ನಮ್ಮ ಸಂವಿಧಾನ ಅದಕ್ಕೆ ರಾಷ್ಟ್ರೀಯ ಗೀತೆಯ ಸ್ಥಾನಮಾನ ನೀಡಿದೆ. ಆ ಗೀತೆಯ ಕಥೆ, ಅದರ ಆಶಯಗಳನ್ನು ರಾಷ್ಟ್ರ ನಿರ್ಮಾಣದಲ್ಲಿನ ಅದರ ಉದ್ದೇಶವನ್ನು ನೆನಪಿಸಿಕೊಳ್ಳುವುದು ಸೂಕ್ತ. ಆದರೆ, ಹಾಡಿನ ವಾರ್ಷಿಕೋತ್ಸವ ಸ್ಮರಿಸುವ ಸಂಸತ್ತಿನ ಚರ್ಚೆಯನ್ನು ಸರಕಾರ ಪಕ್ಷಪಾತದ ನಿಲುವಿಗೆ ಕಟ್ಟಿಹಾಕಿತು. ಇದರಲ್ಲಿ ಹಳೆಯ ಗಾಯಗಳನ್ನು ಮತ್ತೆ ಕೆದಕಲಾಯಿತು. ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ರಾಜ್ಯಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಕತ್ತರಿ ಹಾಕಿದ್ದರಿಂದ ವಿಭಜನೆಗೆ ಕಾರಣವಾಯಿತು ಎಂದು ಬಿಂಬಿಸಲು ನೋಡಿದರು. ಮುಸ್ಲಿಮ್ ಲೀಗ್ ಪ್ರತ್ಯೇಕ ಪಾಕಿಸ್ತಾನ ರಾಜ್ಯಕ್ಕೆ ಬೆಂಬಲ ಸಂಗ್ರಹಿಸಿದ್ದರಿಂದ, ಮೊದಲ ಎರಡು ಚರಣಗಳನ್ನು ಮಾತ್ರ ಬಳಸುವ ಭಾರತೀಯ ಕಾಂಗ್ರೆಸ್ ನಿರ್ಧಾರ ವಿಭಜನೆಗೆ ಬೀಜಗಳನ್ನು ಬಿತ್ತಿತು ಎಂಬ ಅಂಶವನ್ನು ಒತ್ತಿ ಹೇಳಲು ಪ್ರಯತ್ನಿಸಿತು. ಆದರೆ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲ್ಲಿಕಾರ್ಜುನ ಖರ್ಗೆ ವಂದೇ ಮಾತರಂನ ಐತಿಹಾಸಿಕ ಸಂದರ್ಭಗಳನ್ನು ವಿವರಿಸಿದರು ಮತ್ತು ವಂದೇ ಮಾತರಂ ಕುರಿತು ಯಾವುದೇ ಚರ್ಚೆಯ ಅಗತ್ಯವೇನಿದೆ ಎಂಬ ಪ್ರಶ್ನೆ ಎತ್ತಿದರು. ಸಂಸತ್ತು ಭೂತಕಾಲವನ್ನು ಚರ್ಚಿಸುವ ಬದಲು ಈಗಿನ ಜ್ವಲಂತ ವಿಷಯಗಳ ಬಗ್ಗೆ ಗಮನ ಕೊಡಬೇಕು ಎಂದು ಪ್ರಿಯಾಂಕಾ ಹೇಳಿದರು.
ವಾಸ್ತವವಾಗಿ, ವಂದೇ ಮಾತರಂ ನಂಬಿಕೆ ಮತ್ತು ಸಮುದಾಯಗಳನ್ನು ಒಂದುಗೂಡಿಸುವ ಹೊಂದಾಣಿಕೆ ಮತ್ತು ಪರಸ್ಪರ ಗೌರವದ ಮಾರ್ಗದ್ದಾಗಿದೆ ಎಂಬ ವಿಶ್ಲೇಷಣೆಗಳಿವೆ. ಯಾವುದೇ ನಂಬಿಕೆಯನ್ನು ಹೇರುವ ಬದಲು ಸಾಮಾನ್ಯ ನೆಲೆಯಲ್ಲಿ ಕಂಡುಕೊಳ್ಳುವುದು ಬುದ್ಧಿವಂತಿಕೆ ಎಂದು ರಾಷ್ಟ್ರೀಯ ಚಳವಳಿಯ ನಾಯಕರು ಭಾವಿಸಿದ್ದರು. ದೇಶಾದ್ಯಂತ ಲಕ್ಷಾಂತರ ಮುಸ್ಲಿಮರು ವಂದೇ ಮಾತರಂ ಪಠಣಕ್ಕೆ ಸೇರಿಕೊಂಡರು, ಅವರು ಹಿಂದೂಗಳೊಂದಿಗೆ ಮೆರವಣಿಗೆ ನಡೆಸಿದರು. ಏಕೀಕರಣ ಯೋಜನೆ ಹೆಚ್ಚಿನ ಮಟ್ಟಿಗೆ ಯಶಸ್ವಿಯಾದರೂ, ವಿಭಜನೆ ಆ ಏಕತೆಯ ದುರ್ಬಲ ಸ್ವರೂಪವನ್ನು ಕಾಣಿಸಿತು. ಜಾತ್ಯತೀತ, ಸಾಂವಿಧಾನಿಕ ಭಾರತೀಯ ಸಾಮಾನ್ಯತೆ ಹೊರತುಪಡಿಸಿ ಯಾವುದೇ ಗುರುತನ್ನು ಉತ್ತೇಜಿಸುವುದು ಯಾವುದೇ ಸಮಯದಲ್ಲಿ ಅಪಾಯಕಾರಿ ಎಂಬ ಭವಿಷ್ಯದ ಕಳಕಳಿಯನ್ನು ಅದು ವ್ಯಕ್ತಪಡಿಸಿತು. ಆ ಸಾಮರಸ್ಯದ ಇತಿಹಾಸವನ್ನು ಬಿರುಕುಗಳ ಮೂಲ ಎಂದು ಬಿಂಬಿಸುವುದು ಯಾವುದೇ ಉದ್ದೇಶವನ್ನು ಪೂರೈಸುವುದಿಲ್ಲ. ಭಾರತ ರಾಷ್ಟ್ರೀಯ ಉದ್ದೇಶದೊಂದಿಗೆ ಏಕತೆ ಮತ್ತು ಸಾಮರಸ್ಯವನ್ನು ಎತ್ತಿಹಿಡಿಯಬೇಕು. ಅದು ನಿಜಕ್ಕೂ ಭಾರತ ಮಾತೆಗೆ ಅತ್ಯಂತ ದೊಡ್ಡ ವಂದನೆ. ವಂದೇ ಮಾತರಂನ ಅಂತರಾಳ ಇದೇ ಆಗಿದೆ.
ಆದರೆ, ಬ್ರಿಟಿಷರ ವಿರುದ್ಧ ಭಾರತೀಯರೆಲ್ಲರನ್ನೂ ಜಾತಿಮತಗಳನ್ನು ಮೀರಿ ಒಗ್ಗೂಡಿಸಿದ್ದ ಗೀತೆಯನ್ನು ಇವತ್ತು ರಾಜಕೀಯ ಅಸ್ತ್ರವಾಗಿ ಬಳಸಲು ನೋಡುತ್ತ, ವಿಭಜನೆಯ ಕಥೆ ಹೇಳತೊಡಗಿರುವುದೇ ದೊಡ್ಡ ವಿಪರ್ಯಾಸ. ಕಾಂಗ್ರೆಸ್ ಅನ್ನು, ನೆಹರೂ ಅವರನ್ನು ಟೀಕಿಸಲು ವಂದೇ ಮಾತರಂ ಗೀತೆಯನ್ನು ಅಸ್ತ್ರವಾಗಿ ಬಳಸಿಕೊಳ್ಳಲು ನೋಡಲಾಯಿತು ಎಂದರೆ, ಅದರ 150ನೇ ವರ್ಷದ ಹಿನ್ನೆಲೆಯ ಚರ್ಚೆಗೆ ಏನು ಅರ್ಥ? ಅಥವಾ ಆ ಚರ್ಚೆ ಕೈಗೆತ್ತಿಕೊಂಡದ್ದೇ ಈ ರಾಜಕೀಯ ಮಾಡುವುದಕ್ಕಾಗಿಯೇ? ಈ ಪ್ರಶ್ನೆಗಳು ಸಹಜವಾಗಿಯೇ ಎದ್ದವು.
ಯಾಕೆಂದರೆ, ವಂದೇ ಮಾತರಂ ಬಗ್ಗೆ ಚರ್ಚಿಸುವಾಗ ಒಂದೇ ಒಂದು ಸಲವಾದರೂ ತಮ್ಮ ಬಗ್ಗೆ ಹೇಳಿಕೊಳ್ಳಬಹುದಾದ ಇತಿಹಾಸ ಇಲ್ಲದ ಸಂಘ ಪರಿವಾರದ ನೆರಳಿನಲ್ಲಿರುವ ಪಕ್ಷ ಇತಿಹಾಸವನ್ನು ಮತ್ತೊಮ್ಮೆ ತಪ್ಪುತಪ್ಪಾಗಿ ಬಿಂಬಿಸುವ ಯತ್ನ ಮಾಡಿತೆಂಬುದು ಕಂಡಿತು. ವಂದೇ ಮಾತರಂ ಗೀತೆಗೆ ಕತ್ತರಿ ಹಾಕಿದ್ದರಿಂದ ದೇಶ ವಿಭಜನೆಯಾಯಿತು ಎಂದು ಕಾಂಗ್ರೆಸ್ ಮೇಲೆ ಆರೋಪ ಹೊರಿಸಲು ನೋಡಲಾಯಿತೇ ಹೊರತು, ವಂದೇ ಮಾತರಂ ಆಶಯಕ್ಕೆ ತಾವೆಂದಾದರೂ ಬದ್ಧರಾಗಿದ್ದೇವೆಯೇ, ದೇಶವನ್ನು ಅದೇ ರೀತಿಯಲ್ಲಿ ಉಳಿಸಿಕೊಂಡಿದ್ದೇವೆಯೇ ಎಂದು ಕೇಳಿಕೊಳ್ಳದೇ ಹೋದರು. ವಂದೇ ಮಾತರಂಗೆ 50 ವರ್ಷ ತುಂಬಿದಾಗ ನೆಹರೂ ಆ ಗೀತೆಯನ್ನು ಎರಡು ಭಾಗವಾಗಿಸಿದರು ಎಂದು ಬಿಜೆಪಿ ಆರೋಪಿಸಿತು. 100 ವರ್ಷ ತುಂಬಿದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು ಎನ್ನಲಾಯಿತು. ಆದರೆ ಈಗ 150 ತುಂಬಿದಾಗ, ಬೇಕಿರದ ವಿಷಯ ಕೆದಕುತ್ತಿರುವ ತನ್ನ ನಡೆಯನ್ನು ಸಮರ್ಥಿಸಿಕೊಳ್ಳುವ ಭಂಡತನವನ್ನು ಅದು ತೋರಿಸಿದತೆ ಹೊರತು, ಈ ಹೊತ್ತಲ್ಲಿ ನಿಜವಾಗಿಯೂ ಚರ್ಚೆಯಾಗಬೇಕಿರುವ ವಿಷಯಗಳನ್ನು ನೋಡಲೇ ಇಲ್ಲ. ಅದನ್ನೇ ವಿಪಕ್ಷಗಳು ಎತ್ತಿದವು.
ಈ ದೇಶದಲ್ಲಿ ವಂದೇ ಮಾತರಂನ ಒಂದೇ ಒಂದು ಪದವನ್ನು ಜಾರಿಗೆ ತರಲಾಗಿದೆಯೇ ಎಂದು ಯೋಚಿಸಬೇಕಾಗುತ್ತದೆ.
‘‘ಓ ಮಾತೆ, ನಿನ್ನ ಭೂಮಿ ನೀರಿನಿಂದ ಸಮೃದ್ಧವಾಗಿದೆ. ಅದು ಹಣ್ಣು ಮತ್ತು ಹೂವುಗಳಿಂದ ತುಂಬಿದೆ. ಅದು ಮಲಯ ಪರ್ವತಗಳ ತಂಗಾಳಿಯಿಂದ ತಂಪಾಗಿದೆ. ನಿನ್ನ ಹೊಲಗಳು ಹಚ್ಚ ಹಸಿರಿನ ಬೆಳೆಗಳಿಂದ ಆವೃತವಾಗಿವೆ. ನಿನ್ನ ರಾತ್ರಿಗಳು ಚಂದ್ರನ ಬೆಳಕಿನಲ್ಲಿ ಮೀಯುತ್ತಿವೆ. ನಿನ್ನ ಮರಗಳು ಅರಳಿದ ಹೂವುಗಳು ಮತ್ತು ಎಲೆಗಳಿಂದ ಅಲಂಕೃತವಾಗಿವೆ. ನೀನು ನಗುವನ್ನು ಹರಡುವವಳು ಮತ್ತು ಸಿಹಿನುಡಿಗಳನ್ನು ಮಾತನಾಡುವವಳು, ಸಂತೋಷವನ್ನು ನೀಡುವವಳು. ನಿನ್ನ ಲಕ್ಷಾಂತರ ಪುತ್ರರ ಧ್ವನಿಗಳು ಆಕಾಶದಲ್ಲಿ ಪ್ರತಿಧ್ವನಿಸುತ್ತವೆ. ಕತ್ತಿಗಳು ಮತ್ತು ಆಯುಧಗಳು ಲಕ್ಷಾಂತರ ತೋಳುಗಳಲ್ಲಿ ಹೊಳೆಯುತ್ತವೆ. ನೀನು ದುರ್ಬಲ ಎಂದು ಯಾರು ಹೇಳುತ್ತಾರೆ ತಾಯಿ? ನೀನು ಅಪಾರ ಶಕ್ತಿ. ನೀನು ಪ್ರತಿಕೂಲವನ್ನು ಜಯಿಸಿ ಶತ್ರುಗಳನ್ನು ನಾಶಮಾಡಬಲ್ಲವಳು. ನೀನು ಜ್ಞಾನ, ಧರ್ಮ, ಹೃದಯ ಮತ್ತು ಜೀವನದ ಸಾರ. ನೀನು ಜೀವ ಶಕ್ತಿ. ನೀನು ತೋಳುಗಳ ಬಲ ಮತ್ತು ಹೃದಯದ ಭಕ್ತಿ. ನಾವು ನಿನ್ನನ್ನು ಪೂಜಿಸುತ್ತೇವೆ. ಓ ಮಾತೆ, ನೀನು ಹತ್ತು ಆಯುಧಗಳನ್ನು ಧರಿಸುವ ತಾಯಿ ದುರ್ಗಾ. ನೀನು ಕಮಲದ ಸಿಂಹಾಸನದ ಮೇಲೆ ಕುಳಿತಿರುವ ತಾಯಿ ಲಕ್ಷ್ಮಿ. ನೀನು ತಾಯಿ ಸರಸ್ವತಿ. ಓ ಪರಿಶುದ್ಧ ತಾಯಿ, ನಾನು ನಿನಗೆ ವಂದಿಸುತ್ತೇನೆ.’’
ಅಂದರೆ ಈ ದೇಶದ ಶಕ್ತಿ, ಈ ಭೂಮಿಯ ಶಕ್ತಿ, ಈ ದೇಶದೊಳಗಿನ ನೈಸರ್ಗಿಕ ಸಂಪನ್ಮೂಲಗಳಿಂದ ಜನರು ಪಡೆಯುವ ಶಕ್ತಿ ಇವೆಲ್ಲವನ್ನೂ ಅದು ವರ್ಣಿಸುತ್ತದೆ. ಆದರೆ ಇವತ್ತು ಎಲ್ಲವೂ ನಾಶವಾಗಿದೆ. ಶುದ್ಧ ನೀರು, ಗಾಳಿ, ಮಣ್ಣಿನ ಫಲವತ್ತತೆ ಯಾವುದೂ ಇಲ್ಲ. ರೈತರಿಗೆ ಬೆಂಬಲ ನೀಡಲು ಅಥವಾ ಹೋರಾಟಕ್ಕೆ ಬೆಂಬಲ ನೀಡಲು ಸಾಧ್ಯವಾಗುತ್ತಿಲ್ಲ. ಈ ದೇಶದೊಳಗಿನಿಂದ ಉದ್ಭವಿಸುವ ಪ್ರಶ್ನೆಗಳು ಸಂಸತ್ತಿನ ಕಾರಿಡಾರ್‌ಗಳಲ್ಲಿ ಬರದೇ ಕಳೆದುಹೋಗುತ್ತಿವೆ.
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಂದೇ ಮಾತರಂ ಹಾಡುವಾಗ ಎಷ್ಟು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು? ವಂದೇ ಮಾತರಂ ಸ್ವಾತಂತ್ರ್ಯ ಹೋರಾಟಕ್ಕೆ ಒಂದು ರಾಜಕೀಯ ಘೋಷಣೆಯಾಗಿರಲಿಲ್ಲ. ಬ್ರಿಟಿಷರನ್ನು ಭಾರತ ಬಿಡಿಸಬೇಕು ಮತ್ತು ನಾವು ಎದ್ದು ನಿಂತು ನಮ್ಮದೇ ಆದ ಹಾದಿಯಲ್ಲಿ ಮುಂದುವರಿಯಬೇಕು ಎಂಬ ದೃಢತೆ ಆಗ ಇತ್ತು. ಸಂವಿಧಾನ ಸಭೆಯೊಳಗೆ, ಈ ಹಾಡನ್ನು ಆಧರಿಸಿ ಸಂವಿಧಾನದ ಕುರಿತು ಚರ್ಚೆಗಳು ಪ್ರಾರಂಭವಾದವು. ಆದರೆ, ಈಗ 2025ರಲ್ಲಿ ಸಂಸತ್ತಿನಲ್ಲಿ ನಿಂತಿರುವವರು ಆ ಯುಗದ ನಾಯಕರನ್ನು ದೇಶವನ್ನು ಒಡೆದರು ಎಂದು ಬಿಂಬಿಸಿದರೆ ಇದಕ್ಕಿಂತ ಹೆಚ್ಚು ಘಾತುಕವಾದದ್ದು ಏನಿದೆ?
ಸಂಸತ್ತಿನ ಚರ್ಚೆಯಲ್ಲಿ ವಿಪಕ್ಷ ನಾಯಕರು ಇವೇ ಪ್ರಶ್ನೆಗಳನ್ನು ಎತ್ತಿದರು. ಮುಖ್ಯವಾಗಿ ಮಹುವಾ ಮೊಯಿತ್ರಾ, ಸಂಜಯ್ ಸಿಂಗ್, ಮನೋಜ್ ಕುಮಾರ್ ಝಾ ಬಹಳ ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿ, ಸರಕಾರವನ್ನು ಪ್ರಶ್ನೆಗಳಲ್ಲಿ ಸಿಲುಕಿಸಿದರು ಮತ್ತು ಅವರು ಎತ್ತಿದ ಪ್ರಶ್ನೆಗಳು ಬಿಜೆಪಿಯ ನಿಜಬಣ್ಣ ಬಯಲು ಮಾಡಿದವು.
ಮಹುವಾ ಮೊಯಿತ್ರಾ ವಂದೇ ಮಾತರಂ ಗೀತೆಯ ಒಂದೊಂದು ಸಾಲಿನ ಅರ್ಥವನ್ನೂ ವಿವರಿಸುತ್ತ, ಬಿಜೆಪಿ ಸರಕಾರದ ಬೂಟಾಟಿಕೆ ಬಯಲು ಮಾಡಿದರು. ‘ಸುಜಲಾಂ’ ಅಂದರೆ ಸ್ವಚ್ಛ ಸಮೃದ್ಧ ಜಲ. ಇಂದು ನಮ್ಮ ದೇಶದ ಶೇ. 70ಕ್ಕಿಂತ ಹೆಚ್ಚು ಭಾಗ ನೀರು ಕುಡಿಯಲು ಯೋಗ್ಯವಾಗಿಲ್ಲ. ನೀರಿನ ಗುಣಮಟ್ಟದ ಅಂತರ್‌ರಾಷ್ಟ್ರೀಯ ಸೂಚ್ಯಂಕದ ಪ್ರಕಾರ 122 ದೇಶಗಳ ಪಟ್ಟಿಯಲ್ಲಿ ತೀರಾ ಕೆಳಗಿನ 120ನೇ ಸ್ಥಾನದಲ್ಲಿದೆ. ದಿಲ್ಲಿ ಮತ್ತು ಬೆಂಗಳೂರು ಸೇರಿದಂತೆ ದೇಶದ 22 ನಗರಗಳಲ್ಲಿ 2030ರ ವೇಳೆಗೆ ಅಂತರ್ಜಲ ಬರಿದಾಗಲಿದೆ. ಇಂಥ ಕರಾಳ ಪರಿಸ್ಥಿತಿಯಲ್ಲಿ ಭಾರತ ಸರಕಾರ ಜಲಜೀವನ್ ಮಿಶನ್‌ಗೆ ನಿಗದಿಯಾಗಿದ್ದ ಅನುದಾನಕ್ಕೆ ಎಲ್ಲ ರಾಜ್ಯಗಳಲ್ಲೂ ಕತ್ತರಿ ಹಾಕಿದೆ. ಪಶ್ಚಿಮ ಬಂಗಾಳವೊಂದಕ್ಕೇ ಅದು 3,000 ಕೋಟಿ ಹಣ ಬಾಕಿ ಇಟ್ಟುಕೊಂಡಿದೆ. ಸುಜಲಾಂ ಹೆಸರಿನಲ್ಲಿ ನೀವು ಮಾಡಿದ ಕೆಲಸ ಇದು ಎಂದರು.
‘ಮಲಯಜ ಶೀತಲಾಂ’ ಅಂದರೆ ಶುದ್ಧ ಗಾಳಿ. ದಿಲ್ಲಿಯಲ್ಲಿ ವಾಯುವಿನ ಗುಣಮಟ್ಟದ ಸೂಚ್ಯಂಕ 800 ರಿಂದ 1000 ದವರೆಗೆ ಇದೆ. ಮಕ್ಕಳ ಉಸಿರಾಟಕ್ಕೆ ಕಷ್ಟವಾಗುತ್ತಿದೆ. ಹಿರಿಯ ನಾಗರಿಕರು ಸಾಯುತ್ತಿದ್ದಾರೆ. ಇದನ್ನು ಸರಿಪಡಿಸುವ ಬದಲು ಸರಕಾರ ಕಲ್ಲಿದ್ದಲನ್ನು ಉರಿಸುವ ಶೇ. 78ರಷ್ಟು ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳು ವಾಯು ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಅಳವಡಿಸಿಕೊಳ್ಳಬೇಕಿಲ್ಲ ಎಂದು ವಿನಾಯಿತಿ ನೀಡಿದೆ. ಪರಿಸರ ಸಚಿವಾಲಯ ತನಗೆ ನಿಗದಿಯಾಗಿದ್ದ 858 ಕೋಟಿ ರೂಪಾಯಿಗಳ ಮಾಲಿನ್ಯ ನಿಯಂತ್ರಣ ನಿಧಿಯಲ್ಲಿ ಕೇವಲ ಶೇ.1 ರಷ್ಟನ್ನು ಮಾತ್ರ 2025ರಲ್ಲಿ ಬಳಸಿಕೊಂಡಿದೆ. ಕಲ್ಲಿದ್ದಲು ಪೆಟ್ರೋಲ್‌ನಂಥ ಪಳೆಯುಳಿಕೆ ಇಂಧನದ ಹೊಗೆಯಿಂದಾಗಿಯೇ ಭಾರತದಲ್ಲಿ ವರ್ಷಕ್ಕೆ 17.2 ಲಕ್ಷ ಜನರು ಅವಧಿಗೆ ಮುನ್ನ ಸಾವನ್ನಪ್ಪುತ್ತಿದ್ದಾರೆ. ಮಲಿನ ಗಾಳಿಯಿಂದಾಗಿ ನಮ್ಮ ದೇಶಕ್ಕೆ 339 ಶತಕೋಟಿ ಅಮೆರಿಕನ್ ಡಾಲರ್ ನಷ್ಟು ನಷ್ಟವಾಗುತ್ತಿದೆ. ಅದು ನಮ್ಮ ಜಿಡಿಪಿಯ ಶೇ. 9.5ರಷ್ಟು ಎಂದರು.
‘ಸಸ್ಯ ಶ್ಯಾಮಲಾಂ’ ಎಂದರೆ ಮಣ್ಣಿನ ಫಲವತ್ತತೆ. ಕೃಷಿ ಮತ್ತು ರೈತಕಲ್ಯಾಣ ಸಚಿವಾಲಯಕ್ಕೆ ಈ ವರ್ಷ ಮುಂಗಡಪತ್ರದಲ್ಲೇ ಶೇ.2.5ರಷ್ಟು ಕಡಿತ ಮಾಡಲಾಗಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ 3,600 ಕೋಟಿ ರೂಪಾಯಿಗಳನ್ನು ಕಡಿತ ಮಾಡಲಾಗಿದೆ. ದೇಶದ ಶೇ.30 ರಷ್ಟು ಭೂಮಿ ಬಂಜರು ಬಿದ್ದಿದೆಯೆಂದು ಅಂದಾಜು ಮಾಡಲಾಗಿದೆ. ದೇಶದಲ್ಲಿ ಮೂರರಲ್ಲೆರಡು ಭಾಗದ ಮಣ್ಣಿನಲ್ಲಿ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಅಭಾವ ಕಂಡುಬಂದಿದೆ. ಶೇ. 85ರಷ್ಟು ಸ್ಯಾಂಪಲ್ ಗಳಲ್ಲಿ ಮಣ್ಣಿನ ಸಾರ ಹಿಡಿದಿಟ್ಟುಕೊಳ್ಳಬಲ್ಲ ಕಾರ್ಬನ್ ಕೊರತೆಯಿದೆ ಎಂದರು.
ಇನ್ನು ‘ಸುಹಾಸಿನಿ, ಸುಮಧುರ ಭಾಷಿಣಿ’ ಎಂದರೆ ಸಿಹಿನಗು ಮತ್ತು ಮಧುರ ಮಾತು ಎಲ್ಲಿದೆ? ಆಡಳಿತ ಪಕ್ಷದಲ್ಲಿರುವವರು ದ್ವೇಷ ಭಾಷಣಗಳ ಮೂಲಕ ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ಹಿಂಸೆಯ ಕರೆಕೊಡುತ್ತಾರೆ. ಬಹಿರಂಗ ಸಭೆಯಲ್ಲಿ ಅವರೆಲ್ಲರ ಕುಲ ನಾಶದ ಕರೆ ಕೊಡಲಾಗುತ್ತದೆ. ಮಾತೆತ್ತಿದರೆ ನುಸುಳುಕೋರರ, ಜಾಸ್ತಿ ಮಕ್ಕಳಿದ್ದವರ ಓಲೈಸುವವರ ವೋಟ್ ಬ್ಯಾಂಕ್ ರಾಜಕಾರಣ ಎಂದು ಹಿಂದೂಗಳನ್ನು ಎತ್ತಿಕಟ್ಟಲಾಗುತ್ತಿದೆ. ಎಲ್ಲರ ಮೇಲೆಯೂ ಹಿಂದಿ ಭಾಷೆ ಹೇರಲು ಹವಣಿಸಲಾಗುತ್ತಿದೆ ಎಂದರು.
‘ಸುಖದಾಂ ವರದಾಂ’ ಎಂದರೆ, ಸುಖ ಸಂತೋಷ. ಜಾಗತಿಕ ಸಂತಸ ಸೂಚ್ಯಂಕದ ಪ್ರಕಾರ 147 ರಾಷ್ಟ್ರಗಳ ಪೈಕಿ ಭಾರತದ ಸ್ಥಾನ 118ರಷ್ಟು ಕೆಳಗಿದೆ. ಈ ದೇಶದಲ್ಲಿ ಅಲ್ಪಸಂಖ್ಯಾತರರನ್ನು ಅನುಮಾನದಿಂದ ನೊಡಲಾಗುತ್ತದೆ, ಎರಡನೆಯ ದರ್ಜೆಯವರನ್ನಾಗಿ ನೊಡಲಾಗುತ್ತದೆ ಎಂದರು. ‘ತುಮಿ ವಿದ್ಯಾ ತುಮಿ ಧರ್ಮೊ’ ಎಂಬುದು ಎಲ್ಲಿದೆ? ಈ ಸರಕಾರದ ನೀತಿಯಿಂದಾಗಿ ಶಿಕ್ಷಣಕ್ಕೆ ಜಿಡಿಪಿಯ ಶೇ. 6ರಷ್ಟಾದರೂ ಇರಬೇಕಿದ್ದುದು, ತೀರ ನಿಕೃಷ್ಟವೆನಿಸುವ ಶೇ. 3.8 ಭಾಗಕ್ಕೆ ಕುಸಿದಿದೆ. ಸುಧಾರಿತ ದೇಶಗಳಿಗಿಂತ ತೀರ ಕೆಳಗಿದೆ. ಕಳೆದ ಎರಡು ವರ್ಷಗಳಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಮೀಸಲಾದ ಸಹಾಯನಿಧಿಯಲ್ಲಿ ಶೇ.61ರಷ್ಟು ಕಡಿತ ಮಾಡಲಾಗಿದೆ. ಯುಜಿಸಿ ಅನುದಾನದಲ್ಲಿ ಶೇ. 47 ಕಡಿತ ಮಾಡಲಾಗಿದೆ ಎಂದರು.
ಇನ್ನು ಧರ್ಮದ ವಿಚಾರ ಹೇಳುವುದಾದರೆ, ಧರ್ಮವನ್ನು ಧರ್ಮವಾಗಿಯೇ ನೋಡಲು ಪ್ರಧಾನಿ ಬಯಸುವುದಾದರೆ ಅದು ವಾಜಪೇಯಿ ಹೇಳಿದ್ದಂತೆ ರಾಜಧರ್ಮವಾಗಿರಬೇಕು. ಪ್ರಜೆಗಳನ್ನು ಅವರವರ ಜಾತಿ, ಕುಲದ ಆಧಾರದಲ್ಲಿ ವಿಂಗಡಿಸದೆ ಎಲ್ಲರನ್ನೂ ಸಮಾನವಾಗಿ ನೋಡಬೇಕು. ಆದರೆ ಈಗ ಈ ರಾಷ್ಟ್ರದ ಧರ್ಮ ಸಮಭಾವದ ಗುಣವನ್ನು ಚಿಂದಿ ಮಾಡಲಾಗುತ್ತಿದೆ ಎಂದರು.
ಮನೋಜ್ ಕುಮಾರ್ ಝಾ ಅವರು, ಇಂದಿನ ರಾಜಕೀಯ ಪರಿಸರದಲ್ಲಿ ಈ ರಾಷ್ಟ್ರಗೀತೆಯ ಮೂಲಾಶಯವನ್ನು ನಾವು ಉಳಿಸಿಕೊಂಡಿದ್ದೇವೆಯೇ ಎಂದು ಕೇಳಿದರು. ವೈವಿಧ್ಯವನ್ನು ಆಚರಿಸಬೇಕಾದ ಸಮಯದಲ್ಲಿ, ದೇಶ ಒಡೆದು ಗಲ್ಲಿಗಲ್ಲಿಗಳಲ್ಲಿ ದ್ವೇಷದ ಬೆಳೆ ಬೆಳೆಯುತ್ತಿದ್ದರೆ, ಇದು ಯಾವ ‘ವಂದೇ ಮಾತರಂ’ ಆಗುತ್ತದೆ ಎಂದು ಪ್ರಶ್ನಿಸಿದರು.
ಸಂಜಯ್ ಸಿಂಗ್ ಅವರು, ‘‘ಭಗತ್ ಸಿಂಗ್, ಸುಖದೇವ್, ರಾಜಗುರು, ಖುದಿರಾಮ್ ಬೋಸ್ ವಂದೇ ಮಾತರಂ ಘೋಷಣೆ ಕೂಗಿದಾಗ, ನೀವು ಏನು ಮಾಡುತ್ತಿದ್ದಿರಿ?’’ ಎಂದು ಬಿಜೆಪಿ ಮತ್ತು ಆರೆಸ್ಸೆಸ್ ಮಂದಿಯನ್ನು ಕೇಳಿದರು. ವಂದೇ ಮಾತರಂ ಹಾಡಿದ್ದಕ್ಕಾಗಿ ಜೈಲಿಗೆ ಹೋದ ನಾಲ್ಕೇ ನಾಲ್ಕು ಆರೆಸ್ಸೆಸ್ ಸದಸ್ಯರ ಹೆಸರು ಹೇಳಲು ನಿಮಗೆ ಸಾಧ್ಯವೇ ಎಂದು ಅವರು ಸರಕಾರವನ್ನು ಪ್ರಶ್ನಿಸಿದರು. ಸ್ವಾತಂತ್ರ್ಯ ಚಳವಳಿಯಲ್ಲಿ ನಿಮಗೆ ಯಾವುದೇ ಇತಿಹಾಸವಿಲ್ಲದ ಕಾರಣ ನಿಮಗೆ ಹೇಳಲು ಸಾಧ್ಯವಿಲ್ಲ ಎಂದರು. ಆರೆಸ್ಸೆಸ್ ತನ್ನ ಪ್ರಧಾನ ಕಚೇರಿಯಲ್ಲಿ 52 ವರ್ಷಗಳ ಕಾಲ ತ್ರಿವರ್ಣ ಧ್ವಜ ಹಾರಿಸಲಿಲ್ಲ ಎಂಬುದನ್ನು ಅವರು ಪ್ರಸ್ತಾಪಿಸಿದರು. ಇಂದು ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂಬ ಘೋಷಣೆಗಳನ್ನು ದೇಶ ಲೂಟಿ ಮಾಡಲು ಬಳಸಲಾಗುತ್ತಿದೆ ಎಂದರು.
ವಂದೇ ಮಾತರಂ ಅನ್ನು ಚರ್ಚೆಗೆಳೆಯುವ ಮೂಲಕ ವಿಪಕ್ಷಗಳನ್ನು ಮೌನವಾಗಿಸುವ ಅಸ್ತ್ರ ತೆಗೆಯುತ್ತೇನೆ ಎಂದೇ ಬಿಜೆಪಿ ಭಾವಿಸಿದ್ದಂತಿತ್ತು ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಯಿತು. ವಂದೇ ಮಾತರಂ ಚರ್ಚೆಯಲ್ಲಿ, ವಿರೋಧ ಪಕ್ಷಗಳು ಬೆದರಲಿಲ್ಲ, ಹಿಂದೆ ಸರಿಯಲಿಲ್ಲ. ಬದಲಾಗಿ, ಬಿಜೆಪಿ ಬೆಚ್ಚಿಬೀಳುವಂತೆ ವಿಪಕ್ಷ ನಾಯಕರ ಭಾಷಣಗಳು ಸಂಸತ್ತಿನಲ್ಲಿ ಮೊಳಗಿದವು. ವಂದೇ ಮಾತರಂ ಚರ್ಚೆಯಲ್ಲಿ ಬಿಜೆಪಿಗೆ ಏಕಪಕ್ಷೀಯ ಮುಕ್ತ ಅವಕಾಶ ಸಿಗಲಿಲ್ಲ. ವಿರೋಧ ಪಕ್ಷಗಳ ಪ್ರಶ್ನೆಗಳನ್ನು ಎದುರಿಸುವುದು ಬಿಜೆಪಿಗೆ, ಆರೆಸ್ಸೆಸ್ ಮಂದಿಗೆ, ಮೋದಿ ಸರಕಾರಕ್ಕೆ ಸಾಧ್ಯವಾಗಲಿಲ್ಲ.







