ಅಮೆರಿಕಕ್ಕೆ ಇನ್ನೆಷ್ಟು ದೇಶಗಳ ಬಲಿ ಬೇಕು?

ಭಾಗ- 2
ಗಲ್ಫ್ ಯುದ್ಧ (1990-1991)
ಸೋವಿಯತ್ ಒಕ್ಕೂಟದ ಪತನದ ಬಳಿಕ ಅಮೆರಿಕ ವಿಶ್ವದ ಏಕೈಕ ಸೂಪರ್ ಪವರ್ ಆಗಿಬಿಟ್ಟಿತು ಮತ್ತು ಈ ಬಲದ ಮೊದಲ ಪ್ರಮುಖ ಪರೀಕ್ಷೆ ಪರ್ಷಿಯನ್ ಕೊಲ್ಲಿಯಲ್ಲಿ ಕಾಣಿಸಿತು. ಆಗಸ್ಟ್ 1990ರಲ್ಲಿ ಇರಾಕ್ ಅಧ್ಯಕ್ಷ ಸದ್ದಾಂ ಹುಸೇನ್ ಕುವೈತ್ ಮೇಲೆ ಆಕ್ರಮಣ ಮಾಡಿದಾಗ, ಅದಕ್ಕೆ ನೇರ ಪ್ರತಿಕ್ರಿಯೆಯಂತೆ ಈ ಯುದ್ಧ ಶುರುವಾಯಿತು. ವಿಯೆಟ್ನಾಂನಲ್ಲಿನ ಸೈದ್ಧಾಂತಿಕವಾಗಿ ಸಂಕೀರ್ಣವಾಗಿದ್ದ ಮತ್ತು ವಿಭಜಕ ಯುದ್ಧಕ್ಕಿಂತ ಭಿನ್ನವಾಗಿ, ಕೊಲ್ಲಿ ಯುದ್ಧಕ್ಕೆ ಬೇರೆಯೇ ಸಮರ್ಥನೆಯಿತ್ತು. ಅದು ಅಂತರ್‌ರಾಷ್ಟ್ರೀಯ ಕಾನೂನಿನ ಅನ್ವಯದೊಂದಿಗೆ, ಜಾಗತಿಕ ಸಮುದಾಯದಿಂದ ವ್ಯಾಪಕ ಬೆಂಬಲ ಪಡೆದಿತ್ತು.
ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ನೇತೃತ್ವದಲ್ಲಿ ಅಮೆರಿಕ 34 ರಿಂದ 42 ರಾಷ್ಟ್ರಗಳ ಬೃಹತ್ ಅಂತರ್‌ರಾಷ್ಟ್ರೀಯ ಒಕ್ಕೂಟವನ್ನು ಸೇರಿಸಿತು. ಅದು ಇರಾಕ್ ಹಿಂದೆಗೆಯುವಂತೆ ಒತ್ತಾಯಿಸಿತು ಮತ್ತು ಅದನ್ನು ಜಾರಿಗೊಳಿಸಲು ಎಲ್ಲಾ ಅಗತ್ಯ ವಿಧಾನಗಳ ಬಳಕೆಗೆ ಅಮೆರಿಕಕ್ಕೆ ಅಧಿಕಾರ ನೀಡಿತು. ವಿಯೆಟ್ನಾಂ ನಂತರ ಪುನರ್ನಿರ್ಮಿಸಲ್ಪಟ್ಟ ಮತ್ತು ಸುಧಾರಿಸಲ್ಪಟ್ಟ ಯುಎಸ್ ಮಿಲಿಟರಿಗೆ ಈ ಮಿಲಿಟರಿ ಕಾರ್ಯಾಚರಣೆಯ ಪ್ರದರ್ಶನಕ್ಕೆ ಈ ಯುದ್ಧ ವೇದಿಕೆಯಂತಾಗಿತ್ತು. ಸೌದಿ ಅರೇಬಿಪದಲ್ಲಿ ಪಡೆಗಳ ರಕ್ಷಣಾತ್ಮಕ ರಚನೆಯಾದ ‘ಆಪರೇಷನ್ ಡಸರ್ಟ್ ಶೀಲ್ಡ್’ ಅನ್ನು ಜನವರಿ 1991ರಲ್ಲಿ ರಚಿಸಲಾಯಿತು. ಇದು ಐದು ವಾರಗಳ ನಿಖರತೆ ಮತ್ತು ತೀವ್ರತೆಯ ವಾಯುದಾಳಿಯೊಂದಿಗೆ ಶುರುವಾಯಿತು. ಇದು ಇರಾಕ್‌ನ ಕಮಾಂಡ್ ಮತ್ತು ನಿಯಂತ್ರಣ ವ್ಯವಸ್ಥೆ, ವಾಯು ರಕ್ಷಣಾ ವ್ಯವಸ್ಥೆ ಮತ್ತು ಮೂಲಸೌಕರ್ಯವನ್ನು ವ್ಯವಸ್ಥಿತವಾಗಿ ನಾಶಗೊಳಿಸಿತು. ನಂತರ ನೆಲದ ಮೇಲಿನ ಆಕ್ರಮಣ ತ್ವರಿತವಾದ 100 ಗಂಟೆಗಳ ಕಾರ್ಯಾಚರಣೆಯಾಗಿತ್ತು. ಇರಾಕಿ ಸೈನ್ಯದ ಗಮನಾರ್ಹ ಭಾಗವನ್ನು ಸುತ್ತುವರಿದು ನಾಶಪಡಿಸಿತು. ಕುವೈತ್ ಅನ್ನು ಸ್ವತಂತ್ರಗೊಳಿಸಿತು.
ಯುದ್ಧದಲ್ಲಿ ಒಕ್ಕೂಟಕ್ಕೆ ನಿರ್ಣಾಯಕ ಮಿಲಿಟರಿ ಗೆಲುವು ಸಿಕ್ಕಿತ್ತು ಮತ್ತು ಈ ಮೂಲಕ ಯುಎಸ್‌ನಲ್ಲಿನ ವಿಯೆಟ್ನಾಂ ಸಿಂಡ್ರೋಮ್ ಅಂತಿಮವಾಗಿ ಇಲ್ಲವಾದಂತೆ ಕಂಡುಬಂತು. ಮಿಲಿಟರಿಯಲ್ಲಿ ಜನರ ವಿಶ್ವಾಸವನ್ನು ಪುನಃಸ್ಥಾಪಿಸುವುದು ಸಾಧ್ಯವಾದಂತೆ ಕಂಡಿತು. ಜನರ ಬೆಂಬಲ ಅಪಾರವಾಗಿ ಹೆಚ್ಚಿತ್ತು. ಯುದ್ಧ ಇರಾಕ್‌ನ ಮೇಲೆ ಅಪಾರವಾಗಿ ಕೆಟ್ಟ ಪರಿಣಾಮ ಉಂಟುಮಾಡಿತ್ತು. ಬಾಂಬ್ ದಾಳಿ ಮತ್ತು ನಂತರದ ನೆಲದ ಯುದ್ಧ ಒಂದು ಲಕ್ಷ ಇರಾಕಿ ಸೈನಿಕರು ಮತ್ತು ನಾಗರಿಕರನ್ನು ಕೊಂದಿರಬಹುದು ಎಂದು ಹೇಳಲಾಗಿದೆ. ಮೂಲಸೌಕರ್ಯಗಳ ನಾಶವಂತೂ ಸಾರ್ವಜನಿಕ ಆರೋಗ್ಯ ಬಿಕ್ಕಟ್ಟಿಗೆ ಎಡೆ ಮಾಡಿಕೊಟ್ಟಿತ್ತು.
ಈ ಯುದ್ಧ ಎಷ್ಟು ಸಂಕೀರ್ಣವಾಗಿತ್ತೆಂದರೆ, ಅದು ಅಂತಿಮವಾಗಿ ಭವಿಷ್ಯದ ಸಂಘರ್ಷಕ್ಕೂ ಅಡಿಪಾಯ ಹಾಕಿತು. ಯುದ್ಧದ ತಕ್ಷಣದ ಪರಿಣಾಮವೆಂದರೆ, ಇರಾಕ್‌ನಲ್ಲಿ ಶಿಯಾ ಮತ್ತು ಕುರ್ದಿಶ್ ಜನರು ಸದ್ದಾಂ ವಿರುದ್ಧ ದಂಗೆ ಏಳಲು ಅಮೆರಿಕದ ಉತ್ತೇಜನ. ಆದರೆ ನಂತರ ಅದು ಬೆಂಬಲ ನೀಡಲು ವಿಫಲವಾಯಿತು. ಇದರಿಂದಾಗಿ ಸದ್ದಾಂ ಸರಕಾರ ದಂಗೆಗಳನ್ನು ಕ್ರೂರವಾಗಿ ಹತ್ತಿಕ್ಕಲು ಅವಕಾಶವಾಯಿತು. ಇದರ ನಂತರ ಒಂದು ದಶಕದ ಕಾಲ ವಿಶ್ವಸಂಸ್ಥೆಯ ಕಠಿಣ ನಿರ್ಬಂಧಗಳನ್ನು ಇರಾಕ್ ಎದುರಿಸಬೇಕಾಯಿತು. ಉತ್ತರ ಮತ್ತು ದಕ್ಷಿಣ ಇರಾಕ್ ಮೇಲೆ ಹಾರಾಟ ನಿಷೇಧ ವಲಯಗಳ ಹೇರಿಕೆ, ವಿವಾದಾತ್ಮಕ ಶಸ್ತ್ರಾಸ್ತ್ರ ತಪಾಸಣಾ ಕ್ರಮಗಳೆಲ್ಲವೂ ಅಮೆರಿಕ ಮತ್ತು ಇರಾಕ್ ನಡುವಿನ ಉದ್ವಿಗ್ನತೆ ಹೆಚ್ಚಲು ಕಾರಣವಾದವು. ಇದಲ್ಲದೆ, ಇಸ್ಲಾಮ್‌ನ ಅತ್ಯಂತ ಪವಿತ್ರ ಸ್ಥಳಗಳಿರುವ ಸೌದಿ ಅರೇಬಿಯದಲ್ಲಿ ದೊಡ್ಡ, ಶಾಶ್ವತ ಯುಎಸ್ ಮಿಲಿಟರಿ ಪಡೆಯನ್ನು ನಿಯೋಜಿಸುವ ನಿರ್ಧಾರವೂ ಆಯಿತು. ಅಮೆರಿಕದ ವಿರುದ್ಧದ ಉಸಾಮಾ ಬಿನ್ ಲಾದೆನ್ ಮತ್ತು ಅಲ್ ಖಾಯಿದಾ ಯುದ್ಧಕ್ಕೆ ಸಮರ್ಥನೆಯಾಗಿ ಈ ಕ್ರಮ ತೆಗೆದುಕೊಳ್ಳಲಾಯಿತು.
ಅಫ್ಘಾನಿಸ್ತಾನ ಯುದ್ಧ (2001-2021)
ಈ ಯುದ್ಧ 9/11 ಭಯೋತ್ಪಾದಕ ದಾಳಿಗಳಿಗೆ ನೇರ ಪ್ರತಿಕ್ರಿಯೆಯಾಗಿತ್ತು. ಉಸಾಮಾ ಬಿನ್ ಲಾದೆನ್‌ನ ಅಲ್ ಖಾಯಿದಾ ಜಾಲ ಅಫ್ಘಾನಿಸ್ತಾನದಲ್ಲಿ ತನ್ನ ಸುರಕ್ಷಿತ ತಾಣದಿಂದ ಅಮೆರಿಕದ ಮೇಲಿನ ಈ ದಾಳಿಯನ್ನು ಯೋಜಿಸಿ ಕಾರ್ಯಗತಗೊಳಿಸಿತ್ತು. ಆಡಳಿತಾರೂಢ ತಾಲಿಬಾನ್ ಈ ದಾಳಿಯ ಹಿಂದಿತ್ತು. ಅಕ್ಟೋಬರ್ 2001ರಲ್ಲಿ ಪ್ರಾರಂಭಿಸಲಾದ ‘ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’ನ ಆರಂಭಿಕ ಉದ್ದೇಶಗಳು ಎರಡಿದ್ದವು. ಒಂದು, ಅಲ್ ಖಾಯಿದಾ ತರಬೇತಿ ಶಿಬಿರಗಳನ್ನು ನಾಶಪಡಿಸುವುದು; ಮತ್ತು ಎರಡು, ಬಿನ್ ಲಾಡೆನ್‌ನನ್ನು ಹಸ್ತಾಂತರಿಸಲು ನಿರಾಕರಿಸಿದ್ದಕ್ಕಾಗಿ ತಾಲಿಬಾನ್ ಅನ್ನು ಗುರಿಯಾಗಿಸುವುದು. ಯುದ್ಧದ ಈ ಆರಂಭಿಕ ಹಂತ ವ್ಯಾಪಕ ಅಂತರ್‌ರಾಷ್ಟ್ರೀಯ ಬೆಂಬಲ ಗಳಿಸಿತ್ತು ಮತ್ತು ನ್ಯಾಯಸಮ್ಮತ ಎಂದು ಬಿಂಬಿತವಾಗಿತ್ತು.
ಅಮೆರಿಕದ ಈ ದಾಳಿ ತಕ್ಷಣದ ಮಿಲಿಟರಿ ಯಶಸ್ಸನ್ನು ಕಂಡಿತು. ಅಗಾಧ ವಾಯುಬಲದಿಂದ ತೀವ್ರಗೊಂಡ ದಾಳಿ ಅದಾಗಿತ್ತು. ಯುಎಸ್ ವಿಶೇಷ ಪಡೆಗಳು ಮತ್ತು ಸಿಐಎ ಕಾರ್ಯಕರ್ತರ ಒಂದು ಸಣ್ಣ ತುಕಡಿ, ಸ್ಥಳೀಯ ತಾಲಿಬಾನ್ ವಿರೋಧಿ ಉತ್ತರ ಮಿತ್ರಕೂಟದೊಂದಿಗೆ ಕೆಲಸ ಮಾಡಿ ತಾಲಿಬಾನ್ ಸರಕಾರವನ್ನು ಬಹುಬೇಗ ಉರುಳಿಸಿತು. ಆದರೆ, ಇದು ಸೀಮಿತ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಮೀರಿ, ಎರಡು ದಶಕಗಳ ಕಾಲ ನಡೆದ ದಂಗೆ ನಿಗ್ರಹ ಮತ್ತು ರಾಷ್ಟ್ರ ನಿರ್ಮಾಣ ಯೋಜನೆಯಾಗಿ ರೂಪಾಂತರಗೊಂಡಿತ್ತು. ಅಧಿಕಾರ ಕಳೆದುಕೊಂಡ ಬಳಿಕ ತಾಲಿಬಾನ್ ನೆರೆಯ ಪಾಕಿಸ್ತಾನದ ಆಶ್ರಯ ತಾಣಗಳಲ್ಲಿ ಮತ್ತೆ ಗುಂಪುಗೂಡಿತ್ತು. ಹೊಸ ಯುಎಸ್ ಬೆಂಬಲಿತ ಅಫ್ಘಾನ್ ಸರಕಾರ ಮತ್ತು ಅಂತರ್‌ರಾಷ್ಟ್ರೀಯ ಪಡೆಗಳ ವಿರುದ್ಧ ನಿರಂತರ ಮತ್ತು ಹೆಚ್ಚು ಪರಿಣಾಮಕಾರಿಯಾದ ದಂಗೆಯನ್ನು ಅದು ಪ್ರಾರಂಭಿಸಿತು. ಅಧ್ಯಕ್ಷ ಬರಾಕ್ ಒಬಾಮಾ ನೇತೃತ್ವದಲ್ಲಿ ಯುಎಸ್ ಕಾರ್ಯತಂತ್ರ ಹಲವು ಬಾರಿ ಬದಲಾಯಿತು. ಆದರೆ ಅದು ದಂಗೆಯನ್ನು ಸೋಲಿಸಲು ಅಥವಾ ಸ್ವಾವಲಂಬಿ ಅಫ್ಘಾನ್ ರಾಜ್ಯ ಮತ್ತು ಮಿಲಿಟರಿಯನ್ನು ನಿರ್ಮಿಸುವಲ್ಲಿ ವಿಫಲವಾಯಿತು.
ಈ ಯುದ್ಧ ಅಮೆರಿಕದ ಇತಿಹಾಸದಲ್ಲಿಯೇ ಅತಿ ದೀರ್ಘವಾಗಿತ್ತು. ಭಾರೀ ವೆಚ್ಚವನ್ನು ಅಮೆರಿಕ ಕಂಡಿತು. 2.3 ಟ್ರಿಲಿಯನ್ ಡಾಲರ್‌ಗಿಂತಲೂ ಹೆಚ್ಚು ವೆಚ್ಚವಾಯಿತು. ಮಿತ್ರ ಪಡೆಗಳ ಜೊತೆಗೆ 2,400ಕ್ಕೂ ಹೆಚ್ಚು ಸೈನಿಕರ ಬಲಿಯನ್ನು ಅಮೆರಿಕ ನೋಡಬೇಕಾಯಿತು. ಅಫ್ಘನ್ನರೂ ಇನ್ನೂ ಹೆಚ್ಚು ವಿನಾಶ ಕಂಡಿದ್ದರು. ಕನಿಷ್ಠ 46,000 ನಾಗರಿಕರು ಮತ್ತು ಸುಮಾರು 70,000 ಅಫ್ಘಾನ್ ಮಿಲಿಟರಿ ಮತ್ತು ಪೊಲೀಸರು ಸಾವನ್ನಪ್ಪಿದ್ದರು. ಯುದ್ಧಕ್ಕೆ ಆರಂಭದಲ್ಲಿ ಅಮೆರಿಕದ ಜನರ ಬೆಂಬಲ ವ್ಯಾಪಕವಾಗಿತ್ತಾದರೂ, ಸಂಘರ್ಷ ಮುಂದುವರಿದಂತೆ ಅದು ಸತತವಾಗಿ ಕಡಿಮೆಯಾಯಿತು. ಅಲ್ಲದೆ, ಸ್ಪಷ್ಟ ಗೆಲುವು ಕೂಡ ಸಿಗದೇ ಹೋಗಿತ್ತು. ಯುದ್ಧದ ಅಂತ್ಯದ ವೇಳೆಗೆ, ಬಹುಪಾಲು ಅಮೆರಿಕನ್ನರು ಇದನ್ನು ತಪ್ಪು ಎಂದು ಪರಿಗಣಿಸಿದ್ದರು.ಅಷ್ಟೊಂದು ಸಾವುನೋವುಗಳು ಮತ್ತು ಆರ್ಥಿಕ ನಷ್ಟಕ್ಕೆ ಅರ್ಹವಾದ ಯುದ್ಧ ಅದಾಗಿರಲಿಲ್ಲ ಎಂಬ ಅಭಿಪ್ರಾಯ ಮೂಡಿತ್ತು. ಯುದ್ಧದ ಅಂತ್ಯ ಅಮೆರಿಕದ ಪಾಲಿಗೆ ಒಂದು ಕಾರ್ಯತಂತ್ರದ ಸೋಲಾಗಿತ್ತು.
2020ರಲ್ಲಿ ಟ್ರಂಪ್ ಸರಕಾರ ಚುನಾಯಿತ ಅಫ್ಘಾನ್ ಸರಕಾರವನ್ನು ಬಹುತೇಕ ಹೊರತುಪಡಿಸಿ ತಾಲಿಬಾನ್‌ನೊಂದಿಗೆ ನೇರವಾಗಿ ವಾಪಸಾತಿ ಮಾತುಕತೆ ನಡೆಸಿತು. ಆಗಸ್ಟ್ 2021ರಲ್ಲಿ ಅಂತಿಮ ಯುಎಸ್ ವಾಪಸಾತಿ ನಡೆದಾಗ, ಅಫ್ಘಾನ್ ಸರಕಾರ ಮತ್ತು ಅದರ ಯುಎಸ್ ತರಬೇತಿ ಪಡೆದ ಸೈನ್ಯ ಆಘಾತಕಾರಿ ವೇಗದಲ್ಲಿ ಕುಸಿಯಿತು. ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂತು. ಕಾಬೂಲ್ ಅನ್ನು ವಶಪಡಿಸಿಕೊಂಡಿತು. ಅದರೊಂದಿಗೆ, ಎರಡು ದಶಕಗಳ ರಾಜಕೀಯ ಮತ್ತು ಸಾಮಾಜಿಕ ಬದಲಾವಣೆಗಳು ಅಳಿದುಹೋದವು. ಅಂತಿಮವಾಗಿ ತಾಲಿಬಾನ್ ಗೆಲುವು ಕಂಡಿತ್ತು. ಇದು, ಅಮೆರಿಕ ಮತ್ತದರ ನೇಟೊ ಮಿತ್ರರಾಷ್ಟ್ರಗಳ ಪಾಲಿನ ಅವಮಾನಕಾರಿ ವೈಫಲ್ಯವಾಗಿತ್ತು.
ಇರಾಕ್ ಯುದ್ಧ (2003-2011)
ಅಫ್ಘಾನಿಸ್ತಾನ ಯುದ್ಧ ಅನಿವಾರ್ಯ ಯುದ್ಧವೆಂದು ಬಿಂಬಿತವಾಗಿತ್ತು. ಆದರೆ, ಇರಾಕ್ ಯುದ್ಧ ಆರಂಭದಿಂದಲೂ ಆಯ್ಕೆಯ ಯುದ್ಧವಾಗಿತ್ತು. ಜಾರ್ಜ್ ಡಬ್ಲ್ಯೂ. ಬುಷ್ ಆಡಳಿತ ಮಾರ್ಚ್ 2003ರ ಆಕ್ರಮಣವನ್ನು ಹಲವಾರು ನೆಲೆಯಿಂದ ಸಮರ್ಥಿಸಿಕೊಂಡಿತು. ಆದರೆ ಅದು, ಸುಳ್ಳು ಅಥವಾ ತೀವ್ರ ದೋಷಪೂರಿತವಾದ ಮತ್ತು ಬೇಕೆಂದೇ ಹೆಣೆಯಲಾಗಿದ್ದ ಗುಪ್ತಚರ ಮಾಹಿತಿಯ ಆಧಾರದ ಮೇಲಿತ್ತೆಂಬುದು ನಂತರ ಸಾಬೀತಾಯಿತು. ಸದ್ದಾಂ ಹುಸೇನ್ ಸರಕಾರ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ದೊಡ್ಡ ಮತ್ತು ಸಕ್ರಿಯ ಸಂಗ್ರಹವನ್ನು ಹೊಂದಿದ್ದು, ಅದು ಭಾರೀ ಬೆದರಿಕೆಯಾಗಿದೆ ಎಂಬ ತರ್ಕ ಇದರ ಹಿಂದಿತ್ತು. 9/11ರ ದಾಳಿಗೆ ಕಾರಣವಾದ ಅಲ್ ಖಾಯಿದಾ ಭಯೋತ್ಪಾದಕ ಜಾಲದೊಂದಿಗೆ ಕಾರ್ಯಾಚರಣೆಯ ಸಂಬಂಧಗಳನ್ನು ಸದ್ದಾಂ ಸರಕಾರ ಹೊಂದಿತ್ತು ಮತ್ತು ಅದನ್ನು ಬೆಂಬಲಿಸುತ್ತಿತ್ತು ಎಂದು ಪ್ರಚಾರ ಮಾಡಲಾಯಿತು. ಸದ್ದಾಂ ಪತನ ಮಧ್ಯಪ್ರಾಚ್ಯದಾದ್ಯಂತ ಪ್ರಜಾಪ್ರಭುತ್ವಕ್ಕೆ ಸಹಾಯ ಮಾಡುತ್ತದೆ ಎನ್ನಲಾಯಿತು. ಆದರೆ, ಯಾವುದೇ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ದಾಸ್ತಾನುಗಳು ಯಾವತ್ತೂ ಕಂಡುಬರಲಿಲ್ಲ. ಅಲ್ಲದೆ, 9/11ರ ತನಿಖಾ ಆಯೋಗ ಕೂಡ ಸದ್ದಾಂ ಮತ್ತು ಅಲ್ ಖಾಯಿದಾ ನಡುವಿನ ಸಹಯೋಗದ ಯಾವುದೇ ಪುರಾವೆಗಳಿಲ್ಲ ಎಂದು ತೀರ್ಮಾನಿಸಿತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ದಿಷ್ಟ ಆದೇಶವಿಲ್ಲದೆ ಆಕ್ರಮಣ ಮಾಡುವ ನಿರ್ಧಾರ ಜಾಗತಿಕವಾಗಿ ಬಹಳ ವಿವಾದಾತ್ಮಕವಾಗಿತ್ತು. ವಿಶ್ವಸಂಸ್ಥೆಯ ಆಗಿನ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಸೇರಿದಂತೆ ಅನೇಕ ಕಾನೂನು ತಜ್ಞರು ಇದನ್ನು ಅಂತರ್‌ರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದು ಪರಿಗಣಿಸಿದ್ದಾರೆ.
ಆರಂಭಿಕ ಆಕ್ರಮಣದಲ್ಲಿ ಮಿಲಿಟರಿ ಶಕ್ತಿಯನ್ನು ದೊಡ್ಡ ಮಟ್ಟದಲ್ಲಿ ತೋರಿಸಲಾಯಿತು. ಯುಎಸ್ ನೇತೃತ್ವದ ಸಮ್ಮಿಶ್ರ ಪಡೆಗಳು ಕೇವಲ ಮೂರು ವಾರಗಳಲ್ಲಿ ಸದ್ದಾಮ್ ಆಡಳಿತವನ್ನು ಉರುಳಿಸಿದವು. ಆದರೆ, ಆಕ್ರಮಣದ ನಂತರದ ಕೆಲವು ಕ್ರಮಗಳು ತಪ್ಪು ಕ್ರಮಗಳಾಗಿದ್ದವು. ಯುಎಸ್ ನೇತೃತ್ವದ ಒಕ್ಕೂಟದ ತಾತ್ಕಾಲಿಕ ಪ್ರಾಧಿಕಾರ ಇಡೀ ಇರಾಕಿ ಸೈನ್ಯವನ್ನು ವಿಸರ್ಜಿಸಿತು. ಲಕ್ಷಾಂತರ ಶಸ್ತ್ರಸಜ್ಜಿತ ಸೈನಿಕರನ್ನು ಕೆಲಸದಿಂದ ಹೊರಹಾಕಿತು. ಸದ್ದಾಮ್ ಹುಸೇನ್‌ರನ್ನು ಬಂಧಿಸಿ ಬಳಿಕ ಗಲ್ಲಿಗೇರಿಸಲಾಯಿತು. ಅಲ್ಲದೆ, ಸದ್ದಾಂ ಸರಕಾರದಲ್ಲಿನ ಸರಕಾರಿ ಸ್ಥಾನಗಳನ್ನು ಶುದ್ಧೀಕರಿಸುವ ನೀತಿಯನ್ನು ಜಾರಿಗೆ ತಂದಿತು. ದೇಶದ ಸುನ್ನಿ ಅಲ್ಪಸಂಖ್ಯಾತರನ್ನು ದೂರವಿಡಲಾಯಿತು. ಅದು ನೇರವಾಗಿ ಪ್ರಬಲ ದಂಗೆಗೆ ಉತ್ತೇಜನ ನೀಡಿತು. ದೇಶದಲ್ಲಿ ಬಹುಬೇಗ ಅವ್ಯವಸ್ಥೆ ತಲೆದೋರಿತು. ಅಲ್ಲದೆ, ಸುನ್ನಿ ಮತ್ತು ಶಿಯಾ ಮುಸ್ಲಿಮರ ನಡುವಿನ ಕ್ರೂರ ಅಂತರ್ಯುದ್ಧಕ್ಕೆ ಎಡೆ ಮಾಡಿಕೊಟ್ಟಿತು. 2007ರಲ್ಲಿ ಹೊಸ ದಂಗೆ ನಿಗ್ರಹ ತಂತ್ರಗಳನ್ನು ಜಾರಿಗೆ ತರುವ ಮೂಲಕ ಮತ್ತು ಸುನ್ನಿ ಬುಡಕಟ್ಟು ಜನಾಂಗದವರೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಹಿಂಸಾಚಾರವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಯಿತು. ಆದರೆ ತೀವ್ರ ರಾಜಕೀಯ ವಿಭಜನೆಗಳನ್ನು ಪರಿಹರಿಸಲು ಸಾಧ್ಯವಾಗಲಿಲ್ಲ.
ಇರಾಕ್ ಯುದ್ಧ ಅಪಾರ ವೆಚ್ಚಕ್ಕೆ ಕಾರಣವಾಯಿತು. ಅಮೆರಿಕ 2ರಿಂದ 3 ಟ್ರಿಲಿಯನ್ ಡಾಲರ್ ವೆಚ್ಚ ಅನುಭವಿಸಿತು. ಸುಮಾರು 4,500 ಅಮೆರಿಕನ್ ಸೈನಿಕರು ಸಾವನ್ನಪ್ಪಿರುವುದಾಗಿ ಅಂದಾಜಿಸಲಾಗಿದೆ. ಇರಾಕಿಗಳ ಸಾವುನೋವಿನ ಪ್ರಮಾಣ ಇನ್ನೂ ಭಯಾನಕವಾಗಿತ್ತು. ವಿಶ್ವಾಸಾರ್ಹ ಅಂದಾಜುಗಳ ಪ್ರಕಾರ ಕನಿಷ್ಠ ಒಂದು ಲಕ್ಷದಿಂದ ಹಲವಾರು ಲಕ್ಷಗಳವರೆಗೆ ನಾಗರಿಕರು ಸಾವನ್ನಪ್ಪಿದ್ದರು. ಯುದ್ಧ ಬೃಹತ್ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿತ್ತು. ಲಕ್ಷಾಂತರ ಜನರ ಸ್ಥಳಾಂತರಕ್ಕೆ ಕಾರಣವಾಗಿತ್ತು. ದೇಶದ ಸಾಮಾಜಿಕ ರಚನೆಯನ್ನು ಛಿದ್ರಗೊಳಿಸಿತ್ತು. ದೇಶೀಯವಾಗಿ, ಯುದ್ಧ ಆಳವಾಗಿ ಧ್ರುವೀಕರಣಗೊಳ್ಳುತ್ತಿತ್ತು. ಆಕ್ರಮಣಕ್ಕೆ ಮುಂಚಿನ ಮಾಧ್ಯಮ ವರದಿಗಳು ಯುದ್ಧದ ಪರವಾಗಿದ್ದವು. ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರ ಸಂಗ್ರಹ ಮತ್ತು 9/11ರೊಂದಿಗಿನ ಇರಾಕ್‌ನ ಸಂಪರ್ಕದ ಬಗೆಗಿನ ಆರೋಪಗಳು ವ್ಯಾಪಕವಾದ ತಪ್ಪು ತಿಳುವಳಿಕೆಗಳಿಗೆ ಕಾರಣವಾಗಿದ್ದವು. ಆದರೆ, ಕ್ರಮೇಣ ಸತ್ಯಗಳು ಬಯಲಾದಾಗ, ಆರಂಭದ ತರ್ಕಗಳು ತಲೆಕೆಳಗಾದಾಗ, ಜನರ ಬೆಂಬಲ ಕುಸಿಯಿತು. ಬುಷ್ ಆಡಳಿತದ ವಿಶ್ವಾಸಾರ್ಹತೆಗೆ ಮಾತ್ರವಲ್ಲದೆ, ಅಮೆರಿಕದ ಅಂತರ್‌ರಾಷ್ಟ್ರೀಯ ಸ್ಥಾನಮಾನಕ್ಕೂ ತೀವ್ರ ಹೊಡೆತ ಬಿತ್ತು. ಇರಾಕ್ ಅಂತೂ ಯುದ್ಧದ ಪರಿಣಾಮವಾಗಿ ತೀವ್ರ ಮತ್ತು ಶಾಶ್ವತವಾದ ಅಸ್ಥಿರತೆಯನ್ನು ಎದುರಿಸಬೇಕಾಗಿದೆ. ಈ ಯುದ್ಧ ಇರಾಕನ್ನು ಛಿದ್ರಗೊಳಿಸಿತು. ದೇಶವನ್ನು ಪೀಡಿಸುತ್ತಿರುವ ಪಂಥೀಯ ಆಕ್ರೋಶಗಳು ಹೆಚ್ಚಿದವು. ಯುದ್ಧದಿಂದ ಉಂಟಾದ ಅರಾಜಕತೆ, ಅತಿ ಹಿಂಸಾತ್ಮಕ ಉಗ್ರಗಾಮಿ ಗುಂಪಾಗಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸಿರಿಯಾ (ISIS) ಉದಯಕ್ಕೆ ನೇರವಾಗಿ ಅನುವು ಮಾಡಿಕೊಟ್ಟಿತು. ಇರಾನ್‌ನ ಪ್ರಮುಖ ಪ್ರಾದೇಶಿಕ ಪ್ರತಿಸ್ಪರ್ಧಿ ಸದ್ದಾಂ ಹುಸೇನ್‌ರನ್ನು ನಿರ್ಮೂಲನೆ ಮಾಡುವ ಉದ್ದೇಶದ ಈ ಯುದ್ಧ, ಅಮೆರಿಕದ ಪ್ರಮುಖ ಎದುರಾಳಿಯಾದ ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಪ್ರಭಾವ ಗಮನಾರ್ಹವಾಗಿ ಹೆಚ್ಚಾಗಲು ಕಾರಣವಾಯಿತೆಂಬುದು ಮತ್ತೊಂದು ದೊಡ್ಡ ವ್ಯಂಗ್ಯ.
9/11ರ ನಂತರದ ಅಫ್ಘಾನಿಸ್ತಾನ ಮತ್ತು ಇರಾಕ್ ಯುದ್ಧಗಳು ಅಮೆರಿಕದ ಹಸ್ತಕ್ಷೇಪದ ಅತ್ಯಂತ ಹಾನಿಕಾರಕ ಮಾದರಿಗಳ ದುರಂತ ಮುಖದ ಪ್ರತೀಕಗಳಾಗಿವೆ. ಈ ಸಂಘರ್ಷಗಳು, ವಿಯೆಟ್ನಾಂ ಯುದ್ಧದಲ್ಲಿನ ದೋಷಪೂರಿತ ಸೈದ್ಧಾಂತಿಕ ಸಮರ್ಥನೆಗಳು ಮತ್ತು ಪರಿಣಾಮವಾಗಿ ವಿಶ್ವಾಸಾರ್ಹತೆಗೆ ಬಿದ್ದ ಏಟಿನ ಪುನರಾವರ್ತನೆಯಂತಿದ್ದವು. ಇರಾಕ್ ಅನ್ನು ಆಕ್ರಮಿಸಲು ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ತರ್ಕವನ್ನು ಬೇಕೆಂದೇ ಹೆಣೆಯಲಾಗಿತ್ತು. ಸುಳ್ಳು ಗುಪ್ತಚರ ಮಾಹಿತಿಯ ಆಧಾರದಲ್ಲಿ ಈ ತಪ್ಪು ನಿರೂಪಣೆಯನ್ನು ಮುನ್ನೆಲೆಗೆ ತರಲಾಗಿತ್ತು. ಅದು ಬಹಿರಂಗಗೊಂಡ ನಂತರ ದೇಶ ಮತ್ತು ವಿದೇಶಗಳಲ್ಲಿ ವಿಶ್ವಾಸಾರ್ಹತೆಗೆ ದೊಡ್ಡ ಧಕ್ಕೆಯಾಯಿತು. ಆಕ್ರಮಣದ ನಂತರ ಇರಾಕಿ ಸೈನ್ಯವನ್ನು ವಿಸರ್ಜಿಸುವ ನಿರ್ಧಾರ ಒಂದು ದುರಂತ ಮತ್ತು ಯಾವುದೇ ಸಮರ್ಥನೆಯಿಲ್ಲದ ದೋಷವೆಂದು ಪರಿಗಣಿಸಲಾಗಿದೆ.
ಈ ಎರಡೂ ಯುದ್ಧಗಳ ಬಳಿಕ ಯುಎಸ್ ಮಿಲಿಟರಿ ರಾಷ್ಟ್ರ ನಿರ್ಮಾಣದ ದುಸ್ತರ ಕಾರ್ಯದಲ್ಲಿ ಸಿಲುಕಿಕೊಂಡಿತು. ತಮ್ಮದೇ ಕಾಲ ಮೇಲೆ ನಿಲ್ಲುವ ಸಾಮರ್ಥ್ಯವಿರುವ ಕಾನೂನುಬದ್ಧ ಸ್ಥಳೀಯ ಸರಕಾರಗಳನ್ನು ರಚಿಸಲು ಸಾಧ್ಯವಾಗಲಿಲ್ಲ. ಬುಷ್ ಸರಕಾರ ಈ ಹಸ್ತಕ್ಷೇಪಗಳಿಗೆ ಕಾನೂನು ಮತ್ತು ನೈತಿಕ ಸಮರ್ಥನೆ ನೀಡಿದ್ದರೂ, ಅಂತಿಮವಾಗಿ ಇರಾಕ್‌ನಲ್ಲಿ ಸುಳ್ಳು ನೆಪಗಳ ಆಧಾರದ ಮೇಲೆ ಯುದ್ಧ ಮಾಡಲಾಯಿತು ಎಂಬುದು ತೀವ್ರ ಅಪಖ್ಯಾತಿ ತಂದಿತು.
ವಿದೇಶಗಳಲ್ಲಿ ಅಮೆರಿಕನ್ ಯುದ್ಧಗಳ ಇತಿಹಾಸ ಒಂದೇ ಮಾದರಿಯ ಪುನರಾವರ್ತನೆಯ ಕಥೆಯಾಗಿದೆ. ಹಸ್ತಕ್ಷೇಪದ ಅಗತ್ಯವಿಲ್ಲದಿರುವಾಗಲೂ, ತನ್ನ ಹಿತಾಸಕ್ತಿಗಳನ್ನು ರಕ್ಷಿಸುವ ಮತ್ತು ಮುನ್ನಡೆಸುವ ಅದರ ಆಟವನ್ನು ಈ ಕಥೆ ಬಹಿರಂಗಪಡಿಸುತ್ತದೆ. ಯುದ್ಧದ ಸಮರ್ಥನೆಗಳು ನಾಟಕೀಯವಾಗಿ ರೂಪಿತವಾಗಿರುತ್ತವೆ. 19ನೇ ಶತಮಾನದಲ್ಲಿ ವಾಣಿಜ್ಯ ರಕ್ಷಣೆ ಮತ್ತು ಭೂಪ್ರದೇಶ ಸ್ವಾಧೀನ ಎಂದು ಸಮರ್ಥಿಸಿಕೊಳ್ಳಲಾಯಿತು. 20ನೇ ಶತಮಾನದಲ್ಲಿ ಜಾಗತಿಕ ಸೈದ್ಧಾಂತಿಕ ಪ್ರತಿಸ್ಪರ್ಧಿಯನ್ನು ನೆಪವಾಗಿಸಿ ಯುದ್ಧ ಮಾಡಲಾಯಿತು. 21ನೇ ಶತಮಾನದಲ್ಲಿ ಭಯೋತ್ಪಾದಕ ಬೆದರಿಕೆಗಳ ವಿರುದ್ಧ ಪೂರ್ವಭಾವಿ ದಾಳಿ ಎಂದು ಹೇಳಿಕೊಂಡು ಯುದ್ಧ ಮಾಡಲಾಯಿತು. ಆದರೆ, ಮಾತಿನಲ್ಲಿ ಹೇಳುವುದಕ್ಕೂ ವಾಸ್ತವಕ್ಕೂ ದೊಡ್ಡ ಅಂತರವಿದ್ದುದು ಬಯಲಾಗುತ್ತಲೇ ಬಂದಿದೆ. ಹಾಗಾದಾಗ, ವಿಶ್ವಾಸಾರ್ಹತೆಗೆ ದೊಡ್ಡ ಹಾನಿಯಾಗಿದೆ. ಬಿಕ್ಕಟ್ಟುಗಳಿಗೆ ಕಾರಣವಾಗಿದೆ. ವಿಶೇಷವಾಗಿ ವಿಯೆಟ್ನಾಂ ಮತ್ತು ಇರಾಕ್ ಯುದ್ಧಗಳಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತದೆ.







