ದಕ್ಷಿಣ ಕನ್ನಡದಲ್ಲಿ ಕೋಮುದ್ವೇಷ ಶಮನವಾಗಲು ಇನ್ನೆಷ್ಟು ಬಲಿದಾನ ಬೇಕು?

ಭಾಗ- 1
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷದ ಬೆಂಕಿ ಆರುತ್ತಿಲ್ಲ. ಅದು ಸತತವಾಗಿ ಬಲಿ ಪಡೆಯುತ್ತಲೇ ಇದೆ. ಒಂದು ತಿಂಗಳಲ್ಲೇ ಮೂರು ಹತ್ಯೆಗಳು ನಡೆದುಹೋಗಿವೆ. ಬಲಿಯಾದವರಲ್ಲಿ ಇಬ್ಬರು ಮುಸ್ಲಿಮರಾಗಿದ್ದಾರೆ.
ಪಹಲ್ಗಾಮ್ ದಾಳಿಯಾದ ಹೊತ್ತಲ್ಲಿ ಮಂಗಳೂರಿನಲ್ಲಿ ಅಶ್ರಫ್ ಎಂಬ ಕೇರಳ ಮೂಲದ ಮಾನಸಿಕ ಅಸ್ವಸ್ಥನನ್ನು ಗುಂಪು ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು.
ಇದರ ಬೆನ್ನಲ್ಲೇ ಫಾಝಿಲ್ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆಯಾಯಿತು. ಇದೀಗ ಮತ್ತೊಂದು ಹತ್ಯೆ ಜಿಲ್ಲೆಯ ಶಾಂತಿ ಕದಡಲು ಕಾರಣವಾಗಿದೆ.
ಬಂಟ್ವಾಳದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹ್ಮಾನ್ ಎಂಬ ಯುವಕನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪ್ರಕ್ಷುಬ್ಧ ವಾತಾವರಣದಲ್ಲೇ ಬೇಯುತ್ತಿದೆ.
ಒಂದರ ಬೆನ್ನಲ್ಲೊಂದು ಹತ್ಯೆಗಳು, ಕಾಂಗ್ರೆಸ್ ಸರಕಾರದ ಕಾಲದಲ್ಲೂ ಕೋಮುದ್ವೇಷ ಕೊನೆಗಾಣುತ್ತಿಲ್ಲವೇ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಸವರಾಜ ಬೊಮ್ಮಾಯಿ ಸರಕಾರದ ಅವಧಿಯಲ್ಲಿಯೂ ಮೂರು ಕೊಲೆಗಳು ನಡೆದಿದ್ದವು.
ಸುಳ್ಯದಲ್ಲಿ ಮಸೂದ್ ಕೊಲೆ ಪ್ರಕರಣ ನಡೆದಿತ್ತು. ಅದರ ಬೆನ್ನಿಗೇ ಪ್ರವೀಣ್ ನೆಟ್ಟಾರು ಕೊಲೆಯಾಗಿತ್ತು. ಪ್ರವೀಣ್ ನೆಟ್ಟಾರು ಕೊಲೆಯಾದ ಎರಡನೇ ದಿನವೇ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನ ಹತ್ಯೆ ಮಾಡಲಾಗಿತ್ತು. ಈಗ ಅದೇ ನೆತ್ತರು ಅಂಟಿಸಿಕೊಂಡ ಹತ್ಯಾ ಸರಣಿ ಮುಂದುವರಿದಿದೆ.
ಈಗ ದಕ್ಷಿಣ ಕನ್ನಡದಲ್ಲಿ ಆ್ಯಂಟಿ ಕಮ್ಯೂನಲ್ ಫೋರ್ಸ್ ರಚಿಸುವುದರ ಬಗ್ಗೆ ಚರ್ಚೆ ತೀವ್ರಗೊಂಡಿದೆ.
ದಕ್ಷಿಣ ಕನ್ನಡದ ಕೋಮು ಹಿಂಸಾಚಾರದ ಇತಿಹಾಸದ ಕಡೆ ತಿರುಗಿ ನೋಡಿದರೆ, ಅದರ ಸಾಮಾಜಿಕ, ಆರ್ಥಿಕ, ರಾಜಕೀಯ ಹಿನ್ನೆಲೆಗಳೂ ತೆರೆದುಕೊಳ್ಳುತ್ತ ಹೋಗುತ್ತವೆ.
1976ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಆಧರಿತ 49 ಕೊಲೆಗಳು ನಡೆದಿವೆ. ಅವು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿವೆ, ಸಮುದಾಯಗಳ ನಡುವೆ ಘರ್ಷಣೆಗಳನ್ನು ಹುಟ್ಟುಹಾಕಿವೆ.
ದಕ್ಷಿಣ ಕನ್ನಡದಲ್ಲಿ ಬಹಿರಂಗ ಕೋಮುವಾದ ಕಾಣಸಿಕೊಂಡದ್ದು ಸುಮಾರು 1976ರಿಂದ 1997ರ ಅವಧಿಯಲ್ಲಿ. ಈ ಅವಧಿಯಲ್ಲಿ ದಕ್ಷಿಣ ಕನ್ನಡದಲ್ಲಿ ಬಹಿರಂಗ ಕೋಮು ಚಟುವಟಿಕೆಗಳು ಮತ್ತು ಹಿಂಸಾಚಾರ ಗಮನಾರ್ಹವಾಗಿ ಹೆಚ್ಚಿದವು.
ಈ ಹೊತ್ತಲ್ಲಿ ನಡೆದ ಹಲವಾರು ಘಟನೆಗಳು ಭವಿಷ್ಯದ ಸಂಘರ್ಷಗಳಿಗೆ ಅಡಿಪಾಯ ಹಾಕಿದವು.
ಕೆಲವನ್ನು ಉಲ್ಲೇಖಿಸುವುದಾದರೆ,
1. 1976ರಲ್ಲಿ ಮಂಗಳೂರಿನಿಂದ ಸುಮಾರು 37 ಕಿ.ಮೀ. ದೂರದಲ್ಲಿರುವ ಕಲ್ಲಡ್ಕದಲ್ಲಿ ಸುದ್ದಿ ಏಜೆಂಟ್ ಇಸ್ಮಾಯೀಲ್ ಅವರ ಕತ್ತು ಹಿಸುಕಿ ಕೊಲ್ಲಲಾಯಿತು. ಇಸ್ಮಾಯೀಲ್ ಹತ್ಯೆ ಹಿಂದೆ ಜನಸಂಘದ ನಾಯಕರಿದ್ದಾರೆ ಎಂಬ ವದಂತಿಗಳು ಹರಡಿದವು. ಅದು ಅಶಾಂತಿ ಮತ್ತು ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿತ್ತು.
2. 1978ರಲ್ಲಿ, ಕನ್ನಡ ದಿನಪತ್ರಿಕೆಯ ಸಂಪಾದಕ ರಾಘವೇಂದ್ರ ಎಂ. ನಾಗೋರಿ ಅವರನ್ನು ಹಂಪನಕಟ್ಟೆಯಲ್ಲಿರುವ ಅವರ ಮುದ್ರಣಾಲಯದ ಬಳಿ ಇರಿದು ಕೊಲ್ಲಲಾಯಿತು. ಎರಡು ಗುಂಪುಗಳ ನಡುವಿನ ವೈಷಮ್ಯವೇ ಅದಕ್ಕೆ ಕಾರಣವೆನ್ನಲಾಗಿತ್ತು.
ಇಸ್ಮಾಯೀಲ್ ಹತ್ಯೆಗೆ ಪ್ರತೀಕಾರವಾಗಿ ರಾಘವೇಂದ್ರ ಅವರನ್ನು ಕೊಲೆ ಮಾಡಲಾಗಿದೆ ಎಂಬ ವದಂತಿಗಳೂ ಹರಡಿದ್ದವು.
3. 1960ರ ದಶಕದಲ್ಲಿ ಹೆಚ್ಚಾಗಿದ್ದ ದನಗಳ ವ್ಯಾಪಾರಿಗಳ ಮೇಲಿನ ದಾಳಿ ಕೂಡ ಈ ಅವಧಿಯಲ್ಲಿ ಮತ್ತೆ ಕಾಣಿಸಿಕೊಂಡಿತು. ಇದು ಕೋಮು ಘರ್ಷಣೆಯ ಮುಖ್ಯ ಮೂಲವಾಗತೊಡಗಿತು.
4. 1998ರಲ್ಲಿ ಸುರತ್ಕಲ್‌ನಲ್ಲಿ ಮೂವರನ್ನು ಕೊಲೆ ಮಾಡಲಾಯಿತು.
5. ಅದೇ ವರ್ಷ, ಪೊಳಲಿಯಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ನಡೆದ ಗಲಾಟೆಯಿಂದಾಗಿ ಗುಜರಿ ವ್ಯಾಪಾರಿಯೊಬ್ಬನ ಹತ್ಯೆಯಾಯಿತು.
6. 2001ರಲ್ಲಿ ನಂದಾವರದಲ್ಲಿ ಆಟೊರಿಕ್ಷಾ ಚಾಲಕನ ಕೊಲೆಯಾಯಿತು.
7. 2002ರಲ್ಲಿ ಕುದ್ರೋಳಿಯಲ್ಲಿ ಬಡಗಿಯೊಬ್ಬರನ್ನು ಹತ್ಯೆ ಮಾಡಲಾಯಿತು.
8. 1998ರ ಡಿಸೆಂಬರ್ ಹಾಗೂ 1999ರಲ್ಲಿ ಹಿಂದೂ ಯುವತಿಗೆ ಮುಸ್ಲಿಮ್ ಯುವಕ ಚುಡಾಯಿಸಿದ ಎಂಬ ಹೆಸರಲ್ಲಿ ಭುಗಿಲೆದ್ದ ಅತ್ಯಂತ ಭೀಕರ ಕೋಮು ಹಿಂಸಾಚಾರದಲ್ಲಿ, ಒಂದು ಸಮುದಾಯದ ಏಳು ಜನರು ಮತ್ತು ಇನ್ನೊಂದು ಸಮುದಾಯದ ಇಬ್ಬರನ್ನು ಹತ್ಯೆ ಮಾಡಲಾಯಿತು. ಆ ಪ್ರಕರಣದಲ್ಲಿ ಒಬ್ಬ ಪೊಲೀಸ್ ಕಾನ್‌ಸ್ಟೆಬಲ್ ಕೂಡ ಹತ್ಯೆಗೀಡಾದರು.
9. 2005ರಲ್ಲಿ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಬ್ಬಾರ್, ರಿಕ್ಷಾ ಚಾಲಕ ಮತ್ತು ಉತ್ತರಕನ್ನಡ ಜಿಲ್ಲೆಯ ಅಪರಿಚಿತ ಕಾರ್ಮಿಕನ ಹತ್ಯೆ ಮಾಡಲಾಯಿತು.
10. 2006ರಲ್ಲಿ ಅಕ್ರಮ ದನ ಸಾಗಣೆ ವಿಷಯಕ್ಕೆ ಸಂಬಂಧಿಸಿದಂತೆ ಮೂರು ಕೊಲೆಗಳು ನಡೆದವು.
11. ಅದೇ ವರ್ಷ ಮುಲ್ಕಿ ಸುಖಾನಂದ ಶೆಟ್ಟಿ ಹತ್ಯೆ ನಡೆಯಿತು. ಆಗ ಹಿಂಸಾಚಾರದಲ್ಲಿ ತೊಡಗಿದ್ದ ಗುಂಪನ್ನು ಚದುರಿಸಲು ಪೊಲೀಸರು ಗೋಲಿಬಾರ್ ನಡೆಸಿದಾಗ,
ಇಬ್ಬರು ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡರು.
12. ಮುಲ್ಕಿ ರಫೀಕ್ ಪೊಲೀಸರಿಂದ ಎನ್‌ಕೌಂಟರ್‌ಗೆ ಬಲಿಯಾದ ಬೆನ್ನಲ್ಲೇ, 2005ರಲ್ಲಿ ಸಂಘ ಪರಿವಾರದ ಪೊಳಲಿ ಅನಂತು ಹತ್ಯೆಯಾಯಿತು. 2009ರಲ್ಲಿ ಪೊಳಲಿ ಅನಂತು ಗ್ಯಾಂಗ್‌ನಲ್ಲೇ ಗುರುತಿಸಿಕೊಂಡಿದ್ದ ಕ್ಯಾಂಡಲ್ ಸಂತು ಅಲಿಯಾಸ್ ಸಂತೋಷ್ ಎಂಬಾತನ ಹತ್ಯೆಯಾಯಿತು.
13. 2015ರಲ್ಲಿ, ಕ್ಯಾಂಡಲ್ ಸಂತು ಹಾಗೂ ಸುಖಾನಂದ ಶೆಟ್ಟಿ ಕೊಲೆ ಆರೋಪಿ ಮಾಡೂರು ಇಸುಬು ಮತ್ತು ಗಣೇಶ್ ಶೆಟ್ಟಿ ಅವರನ್ನು ಜಿಲ್ಲಾ ಜೈಲಿನ ಒಳಗೆಯೇ ದಾಳಿ ಮಾಡಿ ಹತ್ಯೆ ಮಾಡಲಾಯಿತು.
14. 2017-18ರ ಆರಂಭದಲ್ಲಿ, ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ, ಬಂಟ್ವಾಳದಲ್ಲಿ ಹರೀಶ್, ಬಿ.ಸಿ. ರೋಡ್‌ನಲ್ಲಿ ಶರತ್ ಮಡಿವಾಳ, ಸುರತ್ಕಲ್‌ನಲ್ಲಿ ದೀಪಕ್ ರಾವ್, ಕೊಟ್ಟಾರಚೌಕಿಯಲ್ಲಿ ಬಶೀರ್ ಮತ್ತು ಬೆಂಜನಪದವುನಲ್ಲಿ ಅಶ್ರಫ್ ಕಲಾಯ್ ಕೊಲೆಗಳು ನಡೆದವು.
15. 2020ರಲ್ಲಿ, ಬಂದರ್‌ನಲ್ಲಿ ಸಿಎಎ ವಿರುದ್ಧ ಮುಸ್ಲಿಮರು ನಡೆಸಿದ ಪ್ರತಿಭಟನೆಯ ಸಂದರ್ಭ ಪೊಲೀಸರು ಗೋಲಿಬಾರ್ ನಡೆಸಿದಾಗ, ಇಬ್ಬರು ಯುವಕರು ಪ್ರಾಣ ಕಳೆದುಕೊಂಡರು.
16. 2022ರಲ್ಲಿ ಸುಳ್ಯ ತಾಲೂಕಿನಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಯ ಮರುದಿನವೇ ಸುರತ್ಕಲ್‌ನಲ್ಲಿ ಫಾಝಿಲ್ ಹತ್ಯೆ ನಡೆಯಿತು.
17. ಈಗ ಒಂದು ತಿಂಗಳ ಅವಧಿಯಲ್ಲಿಯೇ ಮೂರು ಕೊಲೆಗಳು ನಡೆದಿವೆ.
ಕೇರಳದ ವಯನಾಡಿನಿಂದ ಬಂದ ಮುಸ್ಲಿಮ್ ದಿನಗೂಲಿ ಕಾರ್ಮಿಕ ಅಶ್ರಫ್, ಎಪ್ರಿಲ್ 27ರ ಸಂಜೆ, ಮಂಗಳೂರಿನ ಕುಡುಪುವಿನ ದೇವಸ್ಥಾನದ ಬಳಿ ಶವವಾಗಿ ಪತ್ತೆಯಾಗಿದ್ದರು.
40ರ ಹರೆಯದ ಅಶ್ರಫ್ ಅವರನ್ನು 30ಕ್ಕೂ ಹೆಚ್ಚು ಜನರ ಗುಂಪೊಂದು ಹಲ್ಲೆ ಮಾಡಿ ಕೊಂದಿತ್ತು.
ಅಶ್ರಫ್ ಹತ್ಯೆಯಾದ ಕುಡುಪುವಿನ ಕ್ರಿಕೆಟ್ ಮೈದಾನವೇ ಸ್ಥಳೀಯ ರಾಜಕೀಯದ ಒಂದು ಅನಧಿಕೃತ ಗುರುತಿನಂತಿದೆ ಎಂದೇ ವಿಶ್ಲೇಷಕರು ಹೇಳುತ್ತಾರೆ.
ಇದನ್ನು ಅನಧಿಕೃತವಾಗಿ ಸಾಮ್ರಾಟ್ ಮೈದಾನ ಎಂದು ಕರೆಯಲಾಗುವುದು ಕೂಡ, ಇಲ್ಲಿನ ಕೋಮು ಸೂಕ್ಷ್ಮವನ್ನು ಸೂಚಿಸುತ್ತದೆ. ಜೊತೆಗೆ, ಸಾರ್ವಜನಿಕ ಸ್ಥಳಗಳ ಮೇಲೆ ಧಾರ್ಮಿಕ ಗುರುತನ್ನು ಒತ್ತುವ ಮನಸ್ಥಿತಿಯನ್ನು ಅದು ಸೂಚಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲೆ ಭಾರತದ ಅತ್ಯಂತ ಕೋಮು ಧ್ರುವೀಕರಣಗೊಂಡ ಪ್ರದೇಶಗಳಲ್ಲಿ ಒಂದೆನ್ನಿಸಿದೆ.
ಮಂಗಳೂರು, ಇತ್ತೀಚಿನ ವರ್ಷಗಳಲ್ಲಿ ಅನೈತಿಕ ಪೊಲೀಸ್ ಗಿರಿ, ಅಂತರ್ ಧರ್ಮೀಯ ಜೋಡಿಗಳ ಮೇಲೆ ದಾಳಿ, ಗೋಹತ್ಯೆಯ ಆರೋಪದ ಮೇಲೆ ನಡೆಯುವ ಹಿಂಸಾಚಾರ ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ಸಂಘಟಿತ ದಾಳಿಗಳನ್ನು ಸತತವಾಗಿ ಕಾಣುತ್ತಿದೆ.
ಐತಿಹಾಸಿಕವಾಗಿ, ಮಂಗಳೂರು ವೈವಿಧ್ಯಮಯವಾಗಿತ್ತು ಮತ್ತು ಸಾಮರಸ್ಯಕ್ಕೂ ಹೆಸರಾಗಿದ್ದ ಪಟ್ಟಣವಾಗಿತ್ತು.ಮುಸ್ಲಿಮರು, ಹಿಂದೂಗಳು ಮತ್ತು ಗೋವಾ, ಕೇರಳ ಮತ್ತು ಕರ್ನಾಟಕದಾದ್ಯಂತದ ವಲಸಿಗರು ನೆರೆಹೊರೆಯವರಾಗಿ ವಾಸಿಸುತ್ತಿದ್ದರು. ಅವರೆಲ್ಲರ ನಡುವೆ ಧರ್ಮ ಎಂಬುದು ಯಾವುದೇ ಭೇದ ಮೂಡಿಸುವ ಸಂಗತಿಯಾಗಿ ಆಗ ಕಾಣಿಸಿಕೊಂಡಿರಲಿಲ್ಲ.
ಆದರೆ 1980ರ ದಶಕದಲ್ಲಿ ಹಿಂದುತ್ವ ರಾಷ್ಟ್ರೀಯತಾವಾದಿ ಗುಂಪುಗಳು ಕರಾವಳಿ ಕರ್ನಾಟಕದಲ್ಲಿ ಪ್ರಬಲವಾಗತೊಡಗಿದವು. ಆವರೆಗೂ ಇದ್ದ ಕೋಮು ಸಾಮರಸ್ಯ ಕದಡತೊಡಗಿತು.
ಮತಾಂತರ, ಉಡುಗೆ ತೊಡುಗೆ, ಪಬ್ ವಿಷಯ ಅಥವಾ ಗೋಮಾಂಸ ಸೇವನೆಯ ಆರೋಪದ ಮೇಲೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರನ್ನು ಗುರಿಯಾಗಿಸಿಕೊಳ್ಳುವುದು ನಡೆಯಿತು.
ಬಜರಂಗದಳ, ಹಿಂದೂ ಜಾಗರಣ ವೇದಿಕೆ ಮತ್ತು ನಂತರ ಶ್ರೀರಾಮಸೇನೆಯಂತಹ ಬಲಪಂಥೀಯ ಗುಂಪುಗಳು ಅಲ್ಪಸಂಖ್ಯಾತರಲ್ಲಿ ಭಯ ಮತ್ತು ದ್ವೇಷದ ವಾತಾವರಣ ಸೃಷ್ಟಿಸಿದವು.
1992ರಲ್ಲಿ ಬಾಬರಿ ಮಸೀದಿ ಧ್ವಂಸದ ನಂತರ, ಮಂಗಳೂರಿನಲ್ಲಿಯೂ ಹಿಂಸಾಚಾರ ಭುಗಿಲೆದ್ದಿತು. ನಂತರದ ದಶಕಗಳಲ್ಲಿ, ದಕ್ಷಿಣ ಕನ್ನಡ ಕೋಮು ದ್ವೇಷದ ನೆಲವಾಗಿ, ಸದಾ ಉದ್ವಿಗ್ನತೆಯಿಂದಲೇ ತುಂಬಿಕೊಂಡಿದೆ.
2008ರ ಚರ್ಚ್‌ಗಳ ಮೇಲಿನ ದಾಳಿಗಳು, 2009ರ ಪಬ್ ದಾಳಿಗಳು ಮತ್ತು ಇತ್ತೀಚಿನ ಗೋರಕ್ಷಕರೆಂಬವರ ದುರ್ವರ್ತನೆಗಳು ಎಲ್ಲವೂ ದಕ್ಷಿಣ ಕನ್ನಡದ ಸಾಮರಸ್ಯದ ಇತಿಹಾಸವನ್ನು ಮುಗಿಸಿಹಾಕಿವೆ.
1990ರ ದಶಕದಲ್ಲಿ, ಕರಾವಳಿ ಕರ್ನಾಟಕದಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾದಂತೆ, ಮಂಗಳೂರು ಅಪರಾಧದ ನೆಲವಾಗಿಬಿಟ್ಟಿದೆ.
ಬಲಪಂಥೀಯ ಹಿಂದುತ್ವ ಭಾವನೆ ಪ್ರಬಲವಾಗುತ್ತಿರುವಾಗ, ಸರಕಾರ ಕೂಡ ಬಹಳ ಸಲ ಸಹಭಾಗಿಯಾಗಿದ್ದುದು ಕಂಡಿದೆ.
ಹಿಂಸಾಚಾರವನ್ನು ಧರ್ಮದ ಹೆಸರಿನಲ್ಲಿ, ಪ್ರತೀಕಾರದ ಹೆಸರಿನಲ್ಲಿ ಸಮರ್ಥಿಸಿಕೊಳ್ಳುವುದು ನಡೆಯುತ್ತಿದೆ.
ಇದಲ್ಲದೆ, ಹಿಂದುತ್ವ ರಾಷ್ಟ್ರೀಯತಾವಾದಿ ಗುಂಪುಗಳು ಹಿಂದುಳಿದ ಜಾತಿಯ ಹಿಂದೂಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಭೀತಿ ಹುಟ್ಟುಹಾಕುತ್ತ, ಅವರನ್ನು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿವೆ.
ಒಂದೆಡೆ ಪ್ರಬಲ ಸಮುದಾಯಗಳು ಆರ್ಥಿಕವಾಗಿ ಬಲಿಷ್ಠಗೊಳ್ಳುತ್ತಿರುವಾಗ, ಅಭಿವೃದ್ಧಿ ಕಾಣದ ಬಿಲ್ಲವರು ಮತ್ತು ಮೊಗವೀರರಂತಹ ಹಿಂದುಳಿದ ಸಮುದಾಯಗಳಲ್ಲಿ ಅಸಮಾಧಾನವಿದೆ. ಈ ಗುಂಪುಗಳು ಬಲಪಂಥೀಯ ಸಂಘಟನೆಗಳ ಪ್ರಭಾವಕ್ಕೆ ಒಳಗಾಗುತ್ತವೆ.
ಆ ಅಮಾಯಕರನ್ನು ಈ ಹಿಂದುತ್ವದ ಗುಂಪುಗಳು ತಮ್ಮ ಗುರಿಯಾಗಿರುವ ಅಲ್ಪಸಂಖ್ಯಾತರ ಮೇಲೆ ಮುಗಿಬೀಳುವುದಕ್ಕೆ ಬಳಸಿಕೊಳ್ಳುತ್ತಲೇ ಬಂದಿವೆ.
ಮಂಗಳೂರಿನಲ್ಲಿ ಗುಂಪು ಹಿಂಸಾಚಾರ ಒಂದು ಪ್ರದರ್ಶನದಂತೆ, ಬೆದರಿಸುವ ಉದ್ದೇಶ ಮತ್ತು ಅಧಿಕಾರದ ಪ್ರದರ್ಶನವಾಗಿ ನಡೆಯುತ್ತದೆ.
2008ರಲ್ಲಿನ ಚರ್ಚ್‌ಗಳ ಮೇಲಿನ ದಾಳಿಗಳು ಅಥವಾ 2009ರ ಪಬ್ ದಾಳಿಯಂತಹ ಪ್ರಕರಣಗಳಲ್ಲಿ ಇದನ್ನು ಕಾಣಬಹುದು.
ಬಲಪಂಥೀಯ ರಾಜಕೀಯ ಶಕ್ತಿಗಳು ಕರಾವಳಿ ಕರ್ನಾಟಕದಲ್ಲಿ ರಾಜಕೀಯ ಲಾಭ ಪಡೆಯಲು ಮುಖ್ಯವಾಗಿ, ಉಡುಪಿ ಮತ್ತು ದಕ್ಷಿಣ ಕನ್ನಡದ ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಿವೆ ಎಂಬ ಸತ್ಯವನ್ನು, ಈ ವಿಷಯವಾಗಿ ಅಧ್ಯಯನ ಮಾಡಿದ ಸುನೀಲ್ ಕುಮಾರ್ ಎಸ್. ಅವರಂಥ ವಿದ್ವಾಂಸರು ಹೇಳುತ್ತಾರೆ.
ಈ ಪ್ರದೇಶವನ್ನು ಆಗಾಗ ಹಿಂದುತ್ವ ಪ್ರಯೋಗಾಲಯ ಎಂದು ಕರೆಯಲಾಗುತ್ತದೆ. ಇದು ಸ್ಪಷ್ಟವಾಗಿ ರಾಜಕೀಯ ಶಕ್ತಿಗಳ ಕೋಮು ಧ್ರುವೀಕರಣ ಯತ್ನವನ್ನೇ ಸೂಚಿಸುತ್ತದೆ.
ಸ್ಥಳೀಯ ಕುಂದುಕೊರತೆಗಳನ್ನು ರಾಜಕೀಯ ಅಜೆಂಡಾಗಳಿಗೆ ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ಇಲ್ಲಿ ಕೋಮು ಘಟನೆಗಳು ಇದ್ದಕ್ಕಿದ್ದಂತೆ ನಡೆಯುತ್ತವೆ ಎನ್ನುವುದಕ್ಕಿಂತಲೂ, ಜಿಲ್ಲೆಯ ಸಾಮಾಜಿಕ, ರಾಜಕೀಯ ಹಿನ್ನೆಲೆಯಲ್ಲಿನ ಸಂಘಟಿತ ಪ್ರಯತ್ನದ ಭಾಗವಾಗಿರುವುದು ಸ್ಪಷ್ಟ.
ದಕ್ಷಿಣ ಕನ್ನಡದ ಕೋಮುವಾದ ಕುರಿತ ಅಧ್ಯಯನಗಳು 1976ರಿಂದ 1997ರ ಅವಧಿಯನ್ನು ಒಂದು ಪ್ರಮುಖ ಭಾಗವಾಗಿ ನೋಡಿವೆ. ಈ ಅವಧಿಯಲ್ಲಿ ಕೋಮುವಾದ ಹೆಚ್ಚಳಕ್ಕೆ ಕಾರಣವಾದ ಪ್ರಮುಖ ಅಂಶಗಳನ್ನೂ ಗುರುತಿಸಲಾಗಿದೆ.
1. ಜನಸಂಘ, ವಿಎಚ್‌ಪಿ, ಹಿಂದೂ ಯುವ ಸೇನೆ ಮತ್ತು ತರುವಾಯ ಹಿಂದೂ ಜಾಗರಣ ವೇದಿಕೆಯಂತಹ ಹಿಂದುತ್ವ ರಾಷ್ಟ್ರೀಯತಾವಾದಿ ಸಂಘಟನೆಗಳು ಪ್ರಬಲವಾಗುತ್ತಿದ್ದಂತೆ, ಕೋಮುದ್ವೇಷದ ವಾತಾವರಣ ಮೊಳೆಯತೊಡಗಿತು.
2. ರಾಜಕೀಯ ಕೋಮುವಾದ ಮತ್ತೊಂದು ಅಂಶ.
ಈಗಾಗಲೇ ಗಮನಿಸಿದ ಹಾಗೆ, 1976ರ ಇಸ್ಮಾಯೀಲ್ ಹತ್ಯೆಯಲ್ಲಿ ಜನಸಂಘ ನಾಯಕರ ಪಾತ್ರವಿತ್ತೆಂಬ ಆರೋಪ ಕೇಳಿಬಂದಿತ್ತು. ವಿಎಚ್‌ಪಿ ಮತ್ತಿತರ ಸಹವರ್ತಿ ಗುಂಪುಗಳ ಪ್ರಾಬಲ್ಯದೊಂದಿಗೆ, ಜಾತ್ಯತೀತ ವಾತಾವರಣ ಹದಗೆಡುವುದು ಆರಂಭವಾಯಿತು.
3. 1992ರ ಬಾಬರಿ ಮಸೀದಿ ಧ್ವಂಸ ಮತ್ತದರ ಪರಿಣಾಮಗಳು ಕೂಡ ಕೋಮು ಭಾವನೆಗಳ ರಾಜಕೀಯ ಬಳಕೆ ಮತ್ತು ಹಿಂಸಾಚಾರಕ್ಕೆ ದಾರಿ ಮಾಡಿಕೊಟ್ಟಿತ್ತು.
ಸಮುದಾಯಗಳ ನಡುವಿನ ಪರಸ್ಪರ ಸಂಬಂಧಗಳ ಮೇಲೆ ಅದು ಶಾಶ್ವತವಾದ ಗಾಯಗಳನ್ನು ಸೃಷ್ಟಿಸಿತ್ತು.
ದಕ್ಷಿಣ ಕನ್ನಡದಲ್ಲಿನ ಕೋಮು ಹಿಂಸಾಚಾರದಲ್ಲಿ 1998 ರಿಂದ 2010ರ ಅವಧಿ ಮತ್ತೊಂದು ಹಂತ.
1990ರ ದಶಕದ ಅಂತ್ಯ ಮತ್ತು 2000ರ ದಶಕದಲ್ಲಿ ದಕ್ಷಿಣ ಕನ್ನಡದಲ್ಲಿ ಕೋಮು ಹಿಂಸಾಚಾರ ಗಮನಾರ್ಹವಾಗಿ ಹೆಚ್ಚಿತು.
ರಾಜಕೀಯ ಕೊಲೆಗಳ ಸರಣಿ, ಅನೈತಿಕ ಪೊಲೀಸ್‌ಗಿರಿ ಹೆಚ್ಚಳ, ಹಿಂದೂ-ಮುಸ್ಲಿಮ್ ಸಂಘರ್ಷದ ತೀವ್ರತೆ ಈ ಅವಧಿಯಲ್ಲಿ ತೀವ್ರವಾಗಿ ಕಾಣಿಸಿತು.
2000ರ ದಶಕದಲ್ಲಿ ಪ್ರತೀ ಚುನಾವಣೆ ಸಮೀಪಿಸುತ್ತಿದ್ದಂತೆ ಹಿಂದೂ ಸಮಾಜೋತ್ಸವ ಆಯೋಜಿಸುವ ಪದ್ಧತಿ ಬೆಳೆಯತೊಡಗಿತು.
ಹಿಂದೂ ಸಮಾಜೋತ್ಸವದ ಹೆಸರಿನಲ್ಲಿ ಭಾರೀ ಸಂಖ್ಯೆಯಲ್ಲಿ ಜನರನ್ನು ಸೇರಿಸಿ ಅಲ್ಲಿಗೆ ದ್ವೇಷ ಭಾಷಣಕಾರರನ್ನು ಕರೆಸಿ ಇಲ್ಲಿನ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರುವ ಭಾಷಣ ಮಾಡಿಸಲಾಗುತ್ತಿತ್ತು. ಸಮಾಜೋತ್ಸವದಿಂದ ಹಿಂದಿರುಗಿ ಹೋಗುವಾಗ ಹಲವು ಅಹಿತಕರ ಘಟನೆಗಳು ನಡೆದ ನಿದರ್ಶನಗಳು ಕರಾವಳಿ ಜಿಲ್ಲೆಗಳಲ್ಲಿವೆ.
ಇದೀಗ ಹಿಂದೂ ಸಮಾಜೋತ್ಸವಗಳು ನಿಂತಿದ್ದು, ಸಾಮಾಜಿಕ ಜಾಲತಾಣದಲ್ಲೇ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇದಕ್ಕೆಂದೇ ಒಂದು ಬೃಹತ್ ವ್ಯವಸ್ಥೆ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಕಾಣುತ್ತಿದೆ.
ಇನ್ನು ಈ ದ್ವೇಷ ವಿವಿಧ ಹಂತಗಳಲ್ಲಿ ವಿವಿಧ ರೂಪಗಳಲ್ಲಿ ಪ್ರಕಟಗೊಳ್ಳುತ್ತದೆ. ಶೈಕ್ಷಣಿಕ ಸಂಸ್ಥೆಗಳು, ಉದ್ಯೋಗದ ಕಡೆಗಳಲ್ಲಿ ಈ ದ್ವೇಷ ಕ್ಷುಲ್ಲಕ ಕಾರಣಗಳಿಂದಾಗಿ ಏಕಾಏಕಿ ಸ್ಫೋಟಗೊಳ್ಳುತ್ತದೆ. ಸ್ಫೋಟ ವಿವಿಧ ತಿರುವುಗಳನ್ನು ಪಡೆದು ಹಲವು ಅನಾಹುತಗಳಿಗೂ ಕಾರಣವಾಗುತ್ತದೆ
ಕರ್ನಾಟಕ ಸರಕಾರ ಆ ಸಮಯದ ದಾಳಿಗಳ ತನಿಖೆಗಾಗಿ ನ್ಯಾಯಮೂರ್ತಿ ಬಿ.ಕೆ. ಸೋಮಶೇಖರ ವಿಚಾರಣಾ ಆಯೋಗವನ್ನು ನೇಮಿಸಿತು.
2011ರಲ್ಲಿ ಅದು ಅಂತಿಮ ವರದಿ ಸಲ್ಲಿಸಿತು.
ಆಗಿನ ಬಿಜೆಪಿ ಸರಕಾರ ಮತ್ತು ಮುಖ್ಯವಾಹಿನಿಯ ಸಂಘ ಪರಿವಾರದ ಸಂಘಟನೆಗಳ ನೇರ ಒಳಗೊಳ್ಳುವಿಕೆ ಈ ದಾಳಿಗಳಲ್ಲಿ ಇಲ್ಲವೆಂದು ಅದು ಹೇಳಿತ್ತು.
ಹಿಂದೂಗಳ ವಿರುದ್ಧ ಅವಹೇಳನಕಾರಿ ಸಾಹಿತ್ಯದ ಪ್ರಸರಣ ಮತ್ತು ಧಾರ್ಮಿಕ ಮತಾಂತರದ ಸಮಸ್ಯೆಗಳು ದಾಳಿಗಳಿಗೆ ಪ್ರಮುಖ ಕಾರಣವೆಂದು ಅದು ಉಲ್ಲೇಖಿಸಿತ್ತು.
ಈ ದಾಳಿಗಳಿಗೆ ದಾರಿ ತಪ್ಪಿದ ಮೂಲಭೂತವಾದಿ ದುಷ್ಕರ್ಮಿಗಳು ಕಾರಣವೆಂದು ಆರೋಪಿಸಲಾಗಿತ್ತು. ಧರ್ಮದ ಹೆಸರಿನಲ್ಲಿ ದೌರ್ಜನ್ಯಗಳನ್ನು ತಡೆಗಟ್ಟಲು ಕಾನೂನು ಜಾರಿಗೆ ತರಬೇಕು ಎಂಬುದು ಅದರ ಶಿಫಾರಸುಗಳಲ್ಲಿ ಒಂದಾಗಿತ್ತು.
ಆ ವರದಿಯನ್ನು ಕ್ರಿಶ್ಚಿಯನ್ ಸಮುದಾಯ ಮತ್ತು ಕರ್ನಾಟಕ ಮಿಷನ್ಸ್ ನೆಟ್‌ವರ್ಕ್‌ನಂತಹ ಸಂಸ್ಥೆಗಳು ತೀವ್ರವಾಗಿ ಟೀಕಿಸಿದ್ದವು. ಅಪರಾಧಿಗಳನ್ನು ಮತ್ತವರ ಸಾಂಸ್ಥಿಕ ಸಂಬಂಧಗಳನ್ನು ಸ್ಪಷ್ಟವಾಗಿ ಗುರುತಿಸುವಲ್ಲಿ ಆಯೋಗ ವಿಫಲವಾಗಿದೆ ಎಂದು ಅವು ಹೇಳಿದ್ದವು.
ಆರೋಪಿಗಳನ್ನು ಯಾರೋ ದುಷ್ಕರ್ಮಿಗಳು ಎನ್ನುವಂತೆ ಬಿಂಬಿಸಿ, ಪ್ರಮುಖ ಸಂಘಟನೆಗಳು ಮತ್ತು ರಾಜ್ಯ ಸರಕಾರವನ್ನು ದೋಷಮುಕ್ತಗೊಳಿಸುವ ರೀತಿಯಿಂದಾಗಿ ಆ ವರದಿ ಟೀಕೆಗೆ ತುತ್ತಾಗಿತ್ತು.
ಕೋಮು ದ್ವೇಷ ಹರಡುವ ಇತ್ತೀಚಿನ ವಿಧಾನ ಮುಸ್ಲಿಮ್ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕರೆ ಹಾಗೂ ದೇವಾಲಯಗಳ ಜಾತ್ರೆ ಮತ್ತಿತರ ಕಡೆಗಳಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಅವಕಾಶ ನಿರಾಕರಿಸುವ ನಡೆ.







