ಭಾರತ-ರಶ್ಯ ಸಂಬಂಧ ಎಷ್ಟು ಹಳೆಯದು?

ದಿಲ್ಲಿಯಲ್ಲಿನ 23 ನೇ ಭಾರತ-ರಶ್ಯ ವಾರ್ಷಿಕ ಶೃಂಗಸಭೆಗೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಂದುಹೋಗಿದ್ದಾರೆ. 2021ರಲ್ಲಿ ಭಾರತದಲ್ಲಿ ನಡೆದ ಶೃಂಗಸಭೆಯಲ್ಲಿ ಪುಟಿನ್ ಪಾಲ್ಗೊಂಡಿದ್ದರು. ಆನಂತರದ 4 ವರ್ಷಗಳಲ್ಲಿ ಸಂಭವಿಸಿರುವ ಅಸಾಧಾರಣ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಸಲದ ಅವರ ಭೇಟಿಗೆ ಬಹಳ ಮಹತ್ವವಿತ್ತು. ಉಕ್ರೇನ್ ಯುದ್ಧ ಆರಂಭವಾದ ನಂತರದ ಅವರ ಮೊದಲ ಭಾರತ ಭೇಟಿ ಇದಾಗಿತ್ತು. ಜಾಗತಿಕ ಮಟ್ಟದಲ್ಲಿನ ಹಲವು ಒತ್ತಡಗಳ ಹಿನ್ನೆಲೆಯಲ್ಲಿ ಭಾರತ ಮತ್ತು ರಶ್ಯ ಒಟ್ಟಿಗೇ ನಿಲ್ಲುತ್ತಿರುವುದು ಬೇರೆ ಬೇರೆ ಶಕ್ತಿಗಳನ್ನು ಎದುರಿಸುವ ಸಂಗತಿಯಾಗುತ್ತಲೇ, ದೀರ್ಘ ಇತಿಹಾಸವುಳ್ಳ ದ್ವಿಪಕ್ಷೀಯ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು ಕೂಡ ಈ ಭೇಟಿಯ ಮಹತ್ವವನ್ನು ಹೆಚ್ಚಿಸಿದೆ. ಭಾರತ-ರಶ್ಯ ಸಂಬಂಧವನ್ನು ಪುಟಿನ್ ಅಚಲ ಭರವಸೆಯ ಪಾಲುದಾರಿಕೆ ಎಂದು ಕರೆದಿದ್ದಾರೆ. ಎರಡೂ ದೇಶಗಳ ನಡುವಿನ ಬಹಳ ಗಟ್ಟಿಯಾದ ನಂಬಿಕೆಯ ಬಗ್ಗೆ ಅವರು ಹೇಳಿದ್ದಾರೆ. ಮಾತ್ರವಲ್ಲದೆ, ಎರಡೂ ದೇಶಗಳ ನಡುವಿನ ಈ ಸಂಬಂಧವನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ ಎನ್ನುವ ಮೂಲಕ ಅಮೆರಿಕಕ್ಕೂ ತಕ್ಕ ಉತ್ತರ ಕೊಟ್ಟಿದ್ದಾರೆ.
ಭಾಗ - 1
ಭಾರತ-ರಶ್ಯ ಸಂಬಂಧಕ್ಕೆ 78 ವರ್ಷಗಳ ಇತಿಹಾಸವಿದೆ. ಈಗ ಎರಡು ದೇಶಗಳ ನಡುವಿನ ವಾರ್ಷಿಕ ಶೃಂಗಸಭೆಗಾಗಿ ಡಿಸೆಂಬರ್ 4 ಮತ್ತು 5ರಂದು ಪುಟಿನ್ ದಿಲ್ಲಿಗೆ ಭೇಟಿ ನೀಡಿದ್ದರು. ಅವರ ಭೇಟಿಯ ನಂತರದ ಬೆಳವಣಿಗೆಗಳು, ಮೂಡಿದ ಭರವಸೆಗಳನ್ನು ನೋಡುವುದಕ್ಕೂ ಮೊದಲು ಪ್ರಸ್ತಾಪಿಸಬೇಕಿರುವ ಕೆಲವು ವಿಚಾರಗಳನ್ನು, ಕಾಂಗ್ರೆಸ್ ಉಲ್ಲೇಖಿಸಿದ ಒಂದು ಸಂಗತಿಯೊಂದಿಗೆ ಶುರುಮಾಡಬಹುದು.
ಭಾರತ-ರಶ್ಯ ಸಂಬಂಧಗಳನ್ನು 1955ರಲ್ಲಿ ಸ್ಥಾಪಿತವಾದ ಇಂಡೋ-ಸೋವಿಯತ್ ಪಾಲುದಾರಿಕೆಯ ನೇರ ಫಲಿತಾಂಶ ಎಂದು ಕಾಂಗ್ರೆಸ್ ಬಣ್ಣಿಸಿದೆ. ಬಲ್ಗನಿನ್-ಕ್ರುಶ್ಚೇವ್ ಭೇಟಿ ಇಂಡೋ-ಸೋವಿಯತ್ ಸಹಯೋಗದ ಅಡಿಪಾಯಕ್ಕೆ ಕಾರಣವಾಯಿತು. ಭಿಲಾಯಿ ಸ್ಟೀಲ್ ಪ್ಲಾಂಟ್ ಮತ್ತು ಐಐಟಿ ಬಾಂಬೆ ಎರಡು ಆರಂಭಿಕ ಉದಾಹರಣೆಗಳು ಮಾತ್ರ ಎಂದು ಜೈರಾಂ ರಮೇಶ್ ಹೇಳಿದ್ದಾರೆ. ಪುಟಿನ್ ಅವರ ಭಾರತ ಭೇಟಿಗೆ ಮೊದಲು ಈ ಉಲ್ಲೇಖ ಮಾಡಿದ ಕಾಂಗ್ರೆಸ್, ಸೋವಿಯತ್ ನಾಯಕರಾದ ನಿಕೊಲಾಯ್ ಬಲ್ಗನಿನ್ ಮತ್ತು ನಿಕಿತಾ ಕ್ರುಶ್ಚೇವ್ ಅವರ ಭಾರತ ಪ್ರವಾಸವನ್ನು ನೆನಪಿಸಿಕೊಂಡಿದೆ. ಭಾರತ-ರಶ್ಯ ಸಂಬಂಧಗಳು 1955ರ ಉತ್ತರಾರ್ಧದಲ್ಲಿ ಮೊದಲ ಬಾರಿಗೆ ಸ್ಥಾಪಿತವಾದ ಇಂಡೋ-ಸೋವಿಯತ್ ಪಾಲುದಾರಿಕೆಯ ನೇರ ಫಲಿತಾಂಶ ಮತ್ತು ಮುಂದುವರಿಕೆ ಎಂದು ಜೈರಾಂ ರಮೇಶ್ ಹೇಳಿದ್ದಾರೆ. ಕಳೆದ 26 ವರ್ಷಗಳಲ್ಲಿ ರಶ್ಯ ಅಧ್ಯಕ್ಷರು ಮತ್ತು ಭಾರತದ ಪ್ರಧಾನ ಮಂತ್ರಿಗಳ ನಡುವೆ ನಡೆಯುತ್ತಾ ಬಂದಿರುವ ವಾರ್ಷಿಕ ಶೃಂಗಸಭೆಯ ಬಗ್ಗೆಯೂ ಅವರು ಪ್ರಸ್ತಾಪಿಸಿದ್ಧಾರೆ. 70 ವರ್ಷಗಳ ಹಿಂದೆ ಯುಎಸ್‌ಎಸ್‌ಆರ್ ನಾಯಕರುಗಳಾದ ನಿಕೋಲಾಯ್ ಬಲ್ಗಾನಿನ್ ಮತ್ತು ನಿಕಿತಾ ಕ್ರುಶ್ಚೇವ್ ಭಾರತಕ್ಕೆ ಬಂದರು. ಅವರು 1955ರ ನವೆಂಬರ್ 18ರಿಂದ 30 ಮತ್ತು ಅದೇ ವರ್ಷ ಡಿಸೆಂಬರ್ 7ರಿಂದ 14ರವರೆಗೆ 19 ದಿನಗಳ ಕಾಲ ಇಲ್ಲಿ ಇದ್ದರೆಂಬುದು ಅಸಾಮಾನ್ಯ ಸಂಗತಿಯಾಗಿತ್ತು. ಇದಕ್ಕೂ 6 ತಿಂಗಳ ಮೊದಲು ಜವಾಹರಲಾಲ್ ನೆಹರೂ ಅವರು ಯುಎಸ್‌ಎಸ್‌ಆರ್‌ಗೆ ಭೇಟಿ ನೀಡಿದ್ದರು ಎಂಬುದನ್ನು ಜೈರಾಂ ರಮೇಶ್ ನೆನಪು ಮಾಡಿಕೊಟ್ಟಿದ್ದಾರೆ. ಇದಾದ ಕೆಲ ವರ್ಷಗಳ ನಂತರ ಮಿಗ್ ವಿಮಾನಗಳನ್ನು ಎಚ್‌ಎಎಲ್ ತಂತ್ರಜ್ಞಾನ ವರ್ಗಾವಣೆ ಮೂಲಕ ತಯಾರಿಸಿತು. ಈ ಭೇಟಿ ಒಎನ್‌ಜಿಸಿ ಮತ್ತು ಐಡಿಪಿಎಲ್ ಅಂಥ ಅನೇಕ ಸಾರ್ವಜನಿಕ ವಲಯದ ಕಂಪೆನಿಗಳ ಭವಿಷ್ಯವನ್ನು ರೂಪಿಸಲು ನೆರವಾಯಿತು. ಜೊತೆಗೇ ಖಾಸಗಿ ಉದ್ಯಮಗಳಿಗೂ ನಾಂದಿಯಾಯಿತು ಎಂದು ಜೈರಾಂ ರಮೇಶ್ ಹೇಳಿದ್ಧಾರೆ. 1955ರ ಸೋವಿಯತ್ ನಾಯಕರ ಭಾರತ ಭೇಟಿಯ ವೀಡಿಯೊ ತುಣುಕುಗಳನ್ನು ಕೂಡ ಅವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಎರಡೂ ದೇಶಗಳ ಸಂಬಂಧ ಅವತ್ತಿನಿಂದಲೂ ಹೇಗೆ ಗಾಢವಾದುದಾಗಿದೆ ಎಂಬುದನ್ನು ಇದರ ಮೂಲಕ ಅರ್ಥ ಮಾಡಿಕೊಳ್ಳಬಹುದು.
ಏನೇ ಜಾಗತಿಕ ರಾಜಕೀಯದಲ್ಲಿನ ಬದಲಾವಣೆಗಳಿದ್ದರೂ ಅದರಿಂದ ಭಾರತ-ರಶ್ಯ ಬಾಂಧವ್ಯಕ್ಕೆ ಧಕ್ಕೆಯಾಗಿಲ್ಲ. ಇದು ಈ ಎರಡೂ ದೇಶಗಳಿಗೇ ವಿಶಿಷ್ಟವಾದ ಮತ್ತು ಇತರ ಎಲ್ಲಾ ಕಾರ್ಯತಂತ್ರದ ಪಾಲುದಾರಿಕೆಗಳಿಗಿಂತ ಭಿನ್ನವಾದ ಸಂಬಂಧವಾಗಿದೆ. ಕಾಲು ಶತಮಾನದ ವಾರ್ಷಿಕ ಶೃಂಗಸಭೆಗಳು ಈ ಸ್ನೇಹವನ್ನು ಇನ್ನಷ್ಟು ಗಟ್ಟಿಗೊಳಿಸುತ್ತ ಬಂದಿವೆ. ಯಾವುದೇ ಭೌಗೋಳಿಕ ರಾಜಕೀಯದ ಪ್ರಕ್ಷುಬ್ಧತೆಯನ್ನು ಮೀರಿ ಸಂಬಂಧ ಉಳಿಸಿಕೊಳ್ಳುವ ಒಂದು ಎಳೆಯೆಂದರೆ, ಎರಡೂ ದೇಶಗಳ ನಡುವಿನ ಈ ಉನ್ನತ ಮಟ್ಟದ ನಿಯಮಿತ ಸಂವಾದ. ಪ್ರಾದೇಶಿಕ ಭದ್ರತೆಯಿಂದ ಹಿಡಿದು ಎಲ್ಲ ಸಮಕಾಲೀನ ವಿಷಯಗಳ ಕುರಿತು ಮಾತುಕತೆಗಳು ಸತತವಾಗಿ ಉಭಯ ದೇಶಗಳ ನಡುವೆ ನಡೆಯುತ್ತಲೇ ಇರುತ್ತವೆ. ಆರ್ಥಿಕ ಸಹಕಾರ ಕೂಡ ವಿಸ್ತರಿಸುತ್ತಲೇ ಇದೆ. 2024-25ನೇ ಹಣಕಾಸು ವರ್ಷದಲ್ಲಿ ದ್ವಿಪಕ್ಷೀಯ ವ್ಯಾಪಾರ 68.7 ಬಿಲಿಯನ್ ಡಾಲರ್ ತಲುಪಿದೆ. ಇದರಲ್ಲಿ ಮುಖ್ಯವಾಗಿ ಭಾರತವು ರಶ್ಯದಿಂದ ಮಾಡಿಕೊಳ್ಳುತ್ತಿರುವ ತೈಲ ಆಮದು ಪಾಲಿದೆ. ಭಾರತದ ರಫ್ತು 5 ಬಿಲಿಯನ್ ಡಾಲರ್ಗಳಿಗಿಂತ ಕಡಿಮೆಯಿದ್ದರೂ, ಬೆಳವಣಿಗೆಗೆ ಅವಕಾಶವಿದೆ. ಭಾರತೀಯ ಔಷಧಗಳು, ಜವಳಿ ಮತ್ತು ಉಡುಪುಗಳು, ಕೃಷಿ ಉತ್ಪನ್ನಗಳು ಮತ್ತು ಸೀಗಡಿಯಂತಹ ಸಮುದ್ರ ರಫ್ತುಗಳಿಗೆ ರಶ್ಯ ಮಾರುಕಟ್ಟೆಯಲ್ಲಿ ಪ್ರಾಮುಖ್ಯತೆಯಿದೆ. ಕೈಗಾರಿಕಾ ಸಹಯೋಗ, ತಂತ್ರಜ್ಞಾನ ವರ್ಗಾವಣೆ ಮತ್ತು ಹೂಡಿಕೆಯಲ್ಲಿ ಹೆಚ್ಚು ವೈವಿಧ್ಯಮಯ ಮತ್ತು ಇನ್ನೂ ದೃಢತೆಯ ಆರ್ಥಿಕ ಪಾಲುದಾರಿಕೆ ಕಡೆಗೆ ಸಾಗುವ ದೊಡ್ಡ ಗುರಿ ಎದುರಲ್ಲಿದೆ. ಚೆನ್ನೈ-ವ್ಲಾಡಿವೋಸ್ಟಾಕ್ ಪೂರ್ವ ಸಾಗರ ಕಾರಿಡಾರ್ ಮತ್ತು ಉತ್ತರ ಸಮುದ್ರ ಮಾರ್ಗ ಲಾಜಿಸ್ಟಿಕ್ಸ್ ವೆಚ್ಚವನ್ನು ತೀವ್ರವಾಗಿ ಕಡಿಮೆ ಮಾಡಬಹುದು. ದೀರ್ಘಕಾಲದಿಂದ ಬಾಕಿ ಉಳಿದಿರುವ ಭಾರತ-ಯುರೇಷಿಯನ್ ಆರ್ಥಿಕ ಒಕ್ಕೂಟದ ಮುಕ್ತ ವ್ಯಾಪಾರ ಒಪ್ಪಂದದಲ್ಲಿನ ಈಚಿನ ಬೆಳವಣಿಗೆಗಳು ಕೂಡ ಅವಕಾಶಗಳನ್ನು ಮತ್ತಷ್ಟು ತೆರೆಯುವಂತೆ ಕಾಣುತ್ತಿದೆ. ರಶ್ಯಕ್ಕೆ ನುರಿತ ಭಾರತೀಯ ಕಾರ್ಮಿಕರ ಸುರಕ್ಷಿತ, ನಿಯಂತ್ರಿತ ವಲಸೆಗಾಗಿ ಹೊಸ ಹಲವಾರು ಪ್ರಮುಖ ಒಪ್ಪಂದಗಳು ನಿರ್ಣಾಯಕ ಹಂತಗಳಲ್ಲಿವೆ.
ಭಾರತ-ರಶ್ಯ ಸಂಬಂಧಗಳಿಗೆ ಬಹುಕಾಲದಿಂದ ಮೂಲಾಧಾರವಾಗಿರುವ ರಕ್ಷಣಾ ಸಹಕಾರ ಅತ್ಯಂತ ಮುಖ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ತನ್ನ ಖರೀದಿ ಮೂಲಗಳನ್ನು ವೈವಿಧ್ಯಗೊಳಿಸಿದ್ದರೂ, ರಶ್ಯದ Su-30MKI ಫೈಟರ್ ಜೆಟ್, T-90S ಟ್ಯಾಂಕ್ ಮತ್ತು S-400 ವಾಯು ರಕ್ಷಣಾ ವ್ಯವಸ್ಥೆಯಂಥವು ಭಾರತದ ರಕ್ಷಣಾ ಸಾಮರ್ಥ್ಯದಲ್ಲಿ ಪ್ರಮುಖವಾಗಿವೆ. ಜಂಟಿ ಸಂಶೋಧನೆ, ವಿನ್ಯಾಸ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿರುವುದರಿಂದ, ಎರಡೂ ದೇಶಗಳ ನಡುವಿನ ಪಾಲುದಾರಿಕೆ ಆಮದು-ರಫ್ತಿನ ಮಾದರಿಯನ್ನು ಮೀರಿ ಬೆಳೆದಿದೆ. ನಾಗರಿಕ ಪರಮಾಣು ಸಹಕಾರ ಎರಡು ದೇಶಗಳ ಸಂಬಂಧಕ್ಕೆ ಮತ್ತೊಂದು ಆಯಾಮ ಒದಗಿಸಿದೆ. ತಮಿಳುನಾಡಿನ ಕೂಡಂಕುಳಂನಲ್ಲಿರುವ ಭಾರತದ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರ ನಮ್ಮ ತಾಂತ್ರಿಕ ಸಹಕಾರದ ಪ್ರಮುಖ ಅಂಶವಾಗಿದೆ.
ಭಾರತ-ರಶ್ಯ ಸಂಬಂಧ ಎರಡೂ ದೇಶಗಳಲ್ಲಿನ ರಾಜಕೀಯ ಸಮೀಕರಣಗಳನ್ನು ಮೀರಿ ಬಹಳ ಹಿಂದಿನಿಂದಲೂ ಬೆಳೆದುಕೊಂಡುಬಂದಿದೆ. ಭಾರತವನ್ನು ರಶ್ಯ ವಿಶ್ವಸಂಸ್ಥೆಯಲ್ಲಿ ನಿರಂತರವಾಗಿ ಬೆಂಬಲಿಸಿದ ವಿಶ್ವಾಸಾರ್ಹ ಪಾಲುದಾರ ದೇಶವಾಗಿದೆ ಎಂಬುದನ್ನು ಗಮನಿಸಲೇಬೇಕು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಸಿಕ್ಕಿರುವುದರಲ್ಲೂ ರಶ್ಯ ಪಾತ್ರವಿದೆ. ಎರಡೂ ದೇಶಗಳ ನಡುವಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಅಡಿಪಾಯಗಳು ಕೂಡ ದೃಢವಾಗಿವೆ. ಪ್ರಸ್ತುತ 20,000 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ರಶ್ಯದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ರಕ್ಷಣೆ, ಇಂಧನ, ಪರಮಾಣು ಸಹಕಾರ ಮತ್ತು ಬಾಹ್ಯಾಕಾಶದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ರಶ್ಯ ಭಾರತದ ಅತಿ ನಿಕಟ ಮಿತ್ರನಾಗಿದೆ. ಮುಂಬರುವ ದಶಕದಲ್ಲಿ, ಆರ್ಥಿಕ ವೈವಿಧ್ಯೀಕರಣ, ಉನ್ನತ ತಂತ್ರಜ್ಞಾನ ಸಹಯೋಗ ಇವೆಲ್ಲವೂ ಉಭಯ ದೇಶಗಳ ಸಂಬಂಧವನ್ನು ಇನ್ನಷ್ಟು ಉನ್ನತ ಹಂತಕ್ಕೆ ಒಯ್ಯಲಿವೆ. ಪುಟಿನ್ ಅವರ ಈಗಿನ ಭೇಟಿ ಭಾರತ-ರಶ್ಯ ಸಂಬಂಧಗಳನ್ನು ಬದಲಾಗಿರುವ ಭೌಗೋಳಿಕ ರಾಜಕೀಯದ ಸನ್ನಿವೇಶದಲ್ಲಿ ಮತ್ತಷ್ಟು ಉತ್ತಮಗೊಳಿಸಲು ಹಾಗೂ ಪರಸ್ಪರ ಸಹಕಾರದ ಹೊಸ ದೃಷ್ಟಿಕೋನಗಳು ಮೂಡಲು ನೆರವಾಗಬಹುದು ಎಂದೇ ಹೇಳಲಾಗುತ್ತಿದೆ.
ಇದರ ಒಂದು ದೊಡ್ಡ ಸೂಚನೆಯೆನ್ನುವಂತೆ, ಪುಟಿನ್ ಹೊಸದಿಲ್ಲಿ ಭೇಟಿಗೆ ಮುಂಚಿತವಾಗಿ ಭಾರತದೊಂದಿಗಿನ ಪರಸ್ಪರ ಲಾಜಿಸ್ಟಿಕ್ ಬೆಂಬಲ ವಿನಿಮಯ (ರೆಲೋಸ್) ಒಪ್ಪಂದವನ್ನು ರಶ್ಯ ಅನುಮೋದಿಸಿದೆ. ಇದು ಎರಡೂ ದೇಶಗಳ ರಕ್ಷಣಾ ಸಂಬಂಧವನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲಿದೆ. ಈ ಒಪ್ಪಂದ ಎರಡೂ ಕಡೆಯ ಮಿಲಿಟರಿ ವಿಮಾನಗಳು, ಹಡಗುಗಳು ಜಂಟಿ ಸಮರಾಭ್ಯಾಸ, ತರಬೇತಿ, ಮಾನವೀಯ ಕಾರ್ಯಾಚರಣೆ ಮತ್ತು ವಿಪತ್ತು-ಪರಿಹಾರ ಕಾರ್ಯಾಚರಣೆಗಳು ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪರಸ್ಪರ ಸೌಲಭ್ಯಗಳನ್ನು ಬಳಸಲು ಅವಕಾಶ ಮಾಡಿಕೊಡುತ್ತದೆ. ಇದರಿಂದಾಗಿ ರಶ್ಯ ಮತ್ತು ಭಾರತೀಯ ಹಡಗುಗಳು ಹಾಗೂ ವಿಮಾನಗಳು ಪರಸ್ಪರರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಇಂಧನ, ತೈಲ, ಬಿಡಿಭಾಗಗಳು ಮತ್ತು ನಿರ್ವಹಣಾ ಬೆಂಬಲವನ್ನು ಸುಲಭವಾಗಿ ಮತ್ತು ವಿಳಂಬವಿಲ್ಲದೆ ಪಡೆಯಲು ಸಾಧ್ಯವಾಗುತ್ತದೆ. ಇದು ಭಾರತೀಯ ನೌಕಾಪಡೆಗೆ ಆರ್ಕ್ಟಿಕ್ ಪ್ರದೇಶದಲ್ಲಿ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಸುವರ್ಣಾವಕಾಶವಾಗಿದೆ.
ಭಾರತ-ರಶ್ಯ ಸಂಬಂಧದ ಇತಿಹಾಸವನ್ನು ನೆನಪಿಸಿಕೊಂಡರೆ, ಸ್ವಾತಂತ್ರ್ಯ ಗಳಿಸಿದ ಆರಂಭದಲ್ಲಿ ಭಾರತ ತನ್ನ ಅಲಿಪ್ತ ನೀತಿಯನ್ನು ಬಿಟ್ಟುಕೊಡದೆ ಇತರ ರಾಷ್ಟ್ರಗಳ ಸ್ನೇಹ ಬಯಸಿದ್ದಾಗ, ದೊಡ್ಡ ಬಲವಾಗಿ ಒದಗಿಬಂದದ್ದು ರಶ್ಯ. ಅಮೆರಿಕ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ಭಾರತದೊಂದಿಗೆ ಸ್ನೇಹ ಬೆಳೆಸಲು ಷರತ್ತುಗಳನ್ನು ಒಡ್ಡಿದ್ದೇ ಹೆಚ್ಚು. ಶೀತಲ ಸಮರದ ಆ ಕಾಲಘಟ್ಟದಲ್ಲಿ ಯಾವುದೇ ಬಣದೊಂದಿಗೆ ಗುರುತಿಸಿಕೊಳ್ಳಲು ಬಯಸಿರದ ಭಾರತದ ಕಡೆ ತಿರುಗಿ ನೋಡಿದ್ದು ಸೋವಿಯತ್ ಒಕ್ಕೂಟ (ಯುಎಸ್‌ಎಸ್‌ಆರ್). ಇವತ್ತು ಕಾಣುತ್ತಿರುವ ಅತ್ಯಂತ ಬಲವಾದ ಭಾರತ-ರಶ್ಯ ಸಂಬಂಧ ಮೊದಲುಗೊಂಡದ್ದೇ ಅಲ್ಲಿಂದ. ಹಾಗೆ ಶುರುವಾದದ್ದು, ಕಾಲದ ಅಗ್ನಿಪರೀಕ್ಷೆಗಳನ್ನು ದಾಟಿ, ಆಳವಾದ ನಂಬಿಕೆ, ಒಗ್ಗಟ್ಟು ಮತ್ತು ಪರಸ್ಪರ ಸ್ವಾತಂತ್ರ್ಯವನ್ನು ಗೌರವಿಸುವ ನಿಲುವಿನೊಂದಿಗೆ ಬೆಳೆದಿದೆ. ಭಾರತ ತನ್ನದೇ ಆದ ರಕ್ಷಣಾ ನೀತಿಯನ್ನು ನಿರ್ಧರಿಸಬೇಕಾಗಿದ್ದ ಆ ನಿರ್ಣಾಯಕ ಸಮಯದಲ್ಲಿ ಯಾವುದೇ ಷರತ್ತುಗಳಿಲ್ಲದೆ ತನ್ನೊಂದಿಗೆ ನಿಲ್ಲಬಲ್ಲ ಮಿತ್ರರಾಷ್ಟ್ರಕ್ಕಾಗಿ ಎದುರು ನೋಡುತ್ತಿದ್ದಾಗ ಸೋವಿಯತ್ ಒಕ್ಕೂಟ ಸ್ನೇಹ ಹಸ್ತ ಚಾಚಿತ್ತು. ಆಗ, ಸೋವಿಯತ್ ಒಕ್ಕೂಟಕ್ಕೆ ಏಶ್ಯದಲ್ಲಿ ತನ್ನ ನೆಲೆ ಗಟ್ಟಿಗೊಳಿಸಿಕೊಳ್ಳುವುದು ಮುಖ್ಯವಾಗಿದ್ದರೆ, ಭಾರತಕ್ಕೆ ತನ್ನ ಮಿಲಿಟರಿ ಸ್ವಾವಲಂಬನೆಗೆ ದಾರಿ ಕಂಡುಕೊಳ್ಳುವುದು ಅಗತ್ಯವಾಗಿತ್ತು. ಕೈಗಾರಿಕೀಕರಣಕ್ಕೆ ಭಾರತ ಪ್ರೇರಣೆ ಮತ್ತು ಸಹಕಾರ ಪಡೆದದ್ದು ಕೂಡ ಸೋವಿಯತ್ ಒಕ್ಕೂಟದಿಂದಲೇ ಎಂಬುದನ್ನು ನೋಡಿದರೆ, ಎರಡು ದೇಶಗಳ ಸಂಬಂಧದಲ್ಲಿನ ಅವಿನಾಭಾವ ಅಂಶ ಎಂಥದೆಂಬುದು ತಿಳಿಯುತ್ತದೆ.
ಆನಂತರದ ದಾರಿಯಲ್ಲಿನ ಮಹತ್ವದ ಕೆಲವು ಮೆಟ್ಟಿಲುಗಳನ್ನು ಗಮನಿಸುವುದಾದರೆ,
1951-ಕಾಶ್ಮೀರ ವಿವಾದ ವಿಶ್ವಸಂಸ್ಥೆಯಲ್ಲಿ ಚರ್ಚೆಗೆ ಬಂದಾಗ, ಭಾರತಕ್ಕೆ ಬೆಂಬಲವಾಗಿ ಸೋವಿಯತ್ ಒಕ್ಕೂಟ ತನ್ನ ವೀಟೊ ಚಲಾಯಿಸಿತ್ತು.
1953-ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್, ಭಾರತದ ಆಗಿನ ಉಪರಾಷ್ಟ್ರಪತಿ ಎಸ್. ರಾಧಾಕೃಷ್ಣನ್ ಅವರೊಂದಿಗಿನ ಮಾತುಕತೆಯಲ್ಲಿ, ಯಾವ ಅನುಮಾನವಿಲ್ಲದೆ ನಂಬುವಂತೆ ಭರವಸೆ ಮೂಡಿಸಿದರು.
1955-ಸೋವಿಯತ್ ರಶ್ಯಕ್ಕೆ ಭಾರತದ ಮೊದಲ ಪ್ರಧಾನಿ ನೆಹರೂ ಭೇಟಿ ನೀಡಿದರು ಮತ್ತು ಅದೇ ವರ್ಷ ಸೋವಿಯತ್ ನಾಯಕರಾದ ನಿಕೊಲಾಯ್ ಬಲ್ಗನಿನ್ ಮತ್ತು ನಿಕಿತಾ ಕ್ರುಶ್ಚೇವ್ ಭಾರತಕ್ಕೆ ಬಂದುಹೋದರು.
1960ರ ದಶಕದ ಆರಂಭದಲ್ಲಿ ಸೋವಿಯತ್ ಒಕ್ಕೂಟ ಭಾರತಕ್ಕೆ ಮಿಗ್ -21 ಫೈಟರ್ ಜೆಟ್‌ಗಳನ್ನು ಪೂರೈಸಲು ಮುಂದಾಯಿತು.
ಪಾಶ್ಚಿಮಾತ್ಯ ದೇಶಗಳು ಭಾರತಕ್ಕೆ ತಮ್ಮ ಆಧುನಿಕ ಜೆಟ್‌ಗಳನ್ನು ಪೂರೈಸಲು ನಿರಾಕರಿಸಿದ್ದ ಹೊತ್ತಲ್ಲಿ ಸೋವಿಯತ್ ಒಕ್ಕೂಟದ ಈ ಸಹಕಾರ ದೊಡ್ಡ ಬಲವಾಯಿತು.
ಸೋವಿಯತ್ ಒಕ್ಕೂಟ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಮಾತ್ರವಲ್ಲದೆ ತಂತ್ರಜ್ಞಾನ ವರ್ಗಾಯಿಸುವುದಕ್ಕೂ ಸಿದ್ಧವಾಗಿತ್ತು.
1971-ಬಾಂಗ್ಲಾ ವಿಮೋಚನೆ ಯುದ್ಧದ ಹೊತ್ತಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ತೀವ್ರ ಹಂತ ಮುಟ್ಟಿದ್ದಾಗ, ಪಾಕಿಸ್ತಾನವನ್ನು ಬಹಿರಂಗವಾಗಿ ಬೆಂಬಲಿಸಿದ್ದ ಅಮೆರಿಕ, ತನ್ನ ಏಳನೇ ನೌಕಾಪಡೆಯನ್ನು ಭಾರತವನ್ನು ಬೆದರಿಸಲೆಂದೇ ಬಂಗಾಳ ಕೊಲ್ಲಿಯ ಕಡೆಗೆ ಕಳಿಸಿದಾಗ, ಒಬ್ಬಂಟಿಯಾಗಿದ್ದ ಭಾರತದ ನೆರವಿಗೆ ಬಂದದ್ದು ಸೋವಿಯತ್ ಒಕ್ಕೂಟ.
ಸೋವಿಯತ್ ಒಕ್ಕೂಟ ತನ್ನ ಯುದ್ಧನೌಕೆಗಳನ್ನು ಭಾರತೀಯ ಗಡಿಯ ಬಳಿ ನಿಯೋಜಿಸಿತು.ಮತ್ತದು, ಅಮೆರಿಕದ ನೌಕಾಪಡೆ ಹಿಮ್ಮೆಟ್ಟುವಂತಾಗಲು ಕಾರಣವಾಯಿತು.
ಸೋವಿಯತ್ ಒಕ್ಕೂಟದ ಬಗ್ಗೆ ಭಾರತ ಅಚಲ ನಂಬಿಕೆ ಹೊಂದುವಂತಾಗಲು, ಬೇಷರತ್ತಾಗಿ ಅದು ಭಾರತದ ಬೆಂಬಲಕ್ಕೆ ಬಂದ ಆ ವಿದ್ಯಮಾನ ಮಹತ್ವದ ಪಾತ್ರ ನಿರ್ವಹಿಸಿತ್ತು. ಮತ್ತದು ವಿವಿಧ ಕ್ಷೇತ್ರಗಳಲ್ಲಿನ ಸೋವಿಯತ್ ಸಹಕಾರಕ್ಕೆ ನಾಂದಿಯಾಯಿತು.
1984-ಸೋವಿಯತ್ ಬಾಹ್ಯಾಕಾಶ ನೌಕೆಯಲ್ಲಿ ಭಾರತದ ರಾಕೇಶ್ ಶರ್ಮಾ ಗಗನಯಾತ್ರೆ ನಡೆಸಿದರು.
1985-ತಮಿಳುನಾಡಿನ ಕೂಡಂಕುಳಂನಲ್ಲಿ ಸೋವಿಯತ್ ನೆರವಿನೊಂದಿಗೆ ಪರಮಾಣು ವಿದ್ಯುತ್ ಸ್ಥಾವರ ಆರಂಭವಾಯಿತು.
1991-ಸೋವಿಯತ್ ಒಕ್ಕೂಟ ಕುಸಿತದ ನಂತವೂ ರಶ್ಯ ಭಾರತ ಜೊತೆಗಿನ ಸಂಬಂಧವನ್ನು ಉಳಿಸಿಕೊಂಡು ಮುಂದುವರಿಯಿತು. ಹಾಗೆಯೆ, ಭಾರತದ ವಿದೇಶಾಂಗ ರಶ್ಯಕ್ಕೆ ಆದ್ಯತೆ ಸಿಕ್ಕಿತು.
1993-ಭಾರತ ಮತ್ತು ರಶ್ಯ ನಡುವಿನ ಸ್ನೇಹ ಸಹಕಾರ ಒಪ್ಪಂದ ನವೀಕರಣಗೊಂಡಿತು.
2000-ವ್ಲಾದಿಮಿರ್ ಪುಟಿನ್ ರಶ್ಯ ಅಧ್ಯಕ್ಷರಾದ ಬಳಿಕ ಎರಡೂ ದೇಶಗಳ ಸಂಬಂಧ ಇನ್ನೂ ಗಾಢವಾಯಿತು.
ಅದೇ ವರ್ಷ ಅಕ್ಟೋಬರ್‌ನಲ್ಲಿ, ಅಂದರೆ ಅಧ್ಯಕ್ಷರಾದ ಐದು ತಿಂಗಳುಗಳ ಬಳಿಕ ಪುಟಿನ್ ಭಾರತಕ್ಕೆ ಭೇಟಿ ನೀಡಿದ್ದರು.
2003-ಪರಮಾಣು ಸಹಕಾರ ಒಪ್ಪಂದಕ್ಕೆ ಭಾರತ ಮತ್ತು ರಶ್ಯ ಸಹಿ ಹಾಕಿದವು.
2010-ಪುಟಿನ್ ಭಾರತ ಭೇಟಿ ವೇಳೆ ವಿಶೇಷ ಕಾರ್ಯತಾಂತ್ರಿಕ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಲಾಯಿತು.
2021-ಪುಟಿನ್ ಭಾರತ ಭೇಟಿಯ ಸಂದರ್ಭದಲ್ಲಿ ಬಾಹ್ಯಾಕಾಶ, ರಕ್ಷಣೆ ಮತ್ತು ಇಂಧನ ಸುರಕ್ಷತೆ ಸಹಕಾರ ಸೇರಿದಂತೆ ಒಟ್ಟು 28 ಒಪ್ಪಂದಗಳಿಗೆ ಅಂಕಿತ ಬಿತ್ತು.







