ಆರೆಸ್ಸೆಸ್‌ಗೆ ಕಡಿವಾಣ ಹಾಕುವುದು ಅಸಾಧ್ಯವೇ?

ಆರೆಸ್ಸೆಸ್ ಚಟುವಟಿಕೆಗೆ ಕಡಿವಾಣ ಹಾಕಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹೊಸ ದಾರಿ ಕಂಡುಕೊಂಡಿದೆ. ಸರಕಾರಿ ಶಾಲೆ, ಕಾಲೇಜು, ಆಟದ ಮೈದಾನಗಳು ಮತ್ತು ಸರಕಾರಿ ಸಂಸ್ಥೆಗಳ ಆವರಣಗಳಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಸಿಎಂ ಸಿದ್ದರಾಮಯ್ಯ ಈಗ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಸರಕಾರಿ ಸ್ಥಳಗಳಲ್ಲಿ ಯಾವುದೇ ಖಾಸಗಿ ಸಂಘ-ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಂಕುಶ ಹಾಕಲು ಸರಕಾರ ನಿರ್ಧರಿಸಿದೆ.
ಕರ್ನಾಟಕ ಮಾತ್ರವಲ್ಲ, ಇತರ ಹಲವು ರಾಜ್ಯಗಳಲ್ಲಿಯೂ ಆರೆಸ್ಸೆಸ್ ವಿರುದ್ಧ ಇಂಥ ಸಮರಗಳು ನಡೆಯುತ್ತಲೇ ಇವೆ. ತಮಿಳುನಾಡಿನ ಡಿಎಂಕೆ ಸರಕಾರವಂತೂ ಆರೆಸ್ಸೆಸ್ ವಿರುದ್ಧ ವರ್ಷಗಳಿಂದ ಇಂಥ ನಿರ್ಬಂಧ ಹೇರುತ್ತಿದೆ ಮತ್ತು ಪ್ರಕರಣಗಳು ಕೋರ್ಟ್ ಮೆಟ್ಟಿಲೇರಿದ್ದೂ ಇವೆ. ಆರೆಸ್ಸೆಸ್‌ಗೆ ಯಾವೆಲ್ಲ ಸರಕಾರಗಳು ಹೇಗೆಲ್ಲ ಕಡಿವಾಣ ಹಾಕಿವೆ?
ಭಾಗ - 1
ಸರಕಾರ ಆರೆಸ್ಸೆಸ್ ಹೆಸರನ್ನು ಪ್ರಸ್ತಾಪಿಸದೇ ಇದ್ದರೂ, ನಿರ್ಬಂಧ ವಿಧಿಸುವ ವಿಷಯದಲ್ಲಿ ತೆಗೆದುಕೊಳ್ಳಲಾದ ಈ ಹೊಸ ತೀರ್ಮಾನ ಮುಖ್ಯವಾಗಿ ಆರೆಸ್ಸೆಸ್ ಚಟುವಟಿಕೆಗಳ ಮೆಲೆ ನಿಯಂತ್ರಣ ಹೇರುವುದಾಗಿದೆ. ಕಾನೂನು ತೊಡಕುಗಳು ಎದುರಾಗದಂತೆ ಈ ಎಚ್ಚರಿಕೆ ವಹಿಸಲಾಗಿದ್ದು, ಬಿಜೆಪಿ ಸರಕಾರವಿದ್ದ ಕಾಲದ ತೀರ್ಮಾನವನ್ನೇ ಇಲ್ಲಿ ಅಸ್ತ್ರವಾಗಿ ಬಳಸಲಾಗಿದೆ. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದ ಅವಧಿಯಲ್ಲಿ ಸರಕಾರಿ ಶಾಲೆ-ಕಾಲೇಜು ಆವರಣಗಳಲ್ಲಿ ಸಂಘ-ಸಂಸ್ಥೆಗಳ ಚಟುವಟಿಕೆಗೆ ಅನುಮತಿ ಪಡೆಯುವುದನ್ನು ಕಡ್ಡಾಯಗೊಳಿಸಿದ್ದ ಆದೇಶವನ್ನೇ ಬಳಸಿಕೊಂಡು ಹೊಸ ನಿಯಮಗಳನ್ನು ರೂಪಿಸಲು ಸರಕಾರ ಮುಂದಾಗಿದೆ.
ಸರಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕೆಂದು ಸಚಿವ ಪ್ರಿಯಾಂಕ್ ಖರ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಇದಾದ ಬಳಿಕ, ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗೆ ಸಿದ್ದರಾಮಯ್ಯ ಸೂಚಿಸಿದ್ದರು. ಜನ ಸಮುದಾಯದಲ್ಲಿ ದ್ವೇಷ ಬಿತ್ತುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸುವುದಕ್ಕಾಗಿ ಹಾಗೂ ದೇಶದ ಜಾತ್ಯತೀತ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕಾಗಿ ಸಂವಿಧಾನ ಅಧಿಕಾರ ನೀಡಿದೆ ಎಂಬ ಅಂಶವನ್ನು ಪ್ರಿಯಾಂಕ್ ಖರ್ಗೆ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಶಾಲೆಗಳು ಮತ್ತು ಸಾರ್ವಜನಿಕ ಮೈದಾನಗಳಲ್ಲಿ ನಡೆಯುವ ಆರೆಸ್ಸೆಸ್ ಶಾಖೆಗಳನ್ನು ನಡೆಸುವುದು, ಮಕ್ಕಳು ಮತ್ತು ಯುವಕರಲ್ಲಿ ಭಾರತದ ಏಕತೆ ಮತ್ತು ಜಾತ್ಯತೀತ ಚೌಕಟ್ಟಿಗೆ ವಿರುದ್ಧವಾದ ನಕಾರಾತ್ಮಕ ವಿಚಾರಗಳನ್ನು ಹುಟ್ಟುಹಾಕುತ್ತದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು. ಪೊಲೀಸ್ ಅನುಮತಿ ಪಡೆಯದೆ ದೊಣ್ಣೆಗಳನ್ನು ಹಿಡಿದು ಆಕ್ರಮಣಕಾರಿ ಪ್ರದರ್ಶನ ನಡೆಸುವ ಮೂಲಕ, ಮಕ್ಕಳು ಹಾಗೂ ಯುವಜನರ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರಲಾಗುತ್ತಿದೆ. ನಾಡಿನ ಮಕ್ಕಳು, ಯುವ ಸಮುದಾಯ, ಸಾರ್ವಜನಿಕರು ಮತ್ತು ಸಮಾಜದ ಸ್ವಾಸ್ಥ್ಯದ ಹಿತದೃಷ್ಟಿಯಿಂದ ಸರಕಾರಿ ಶಾಲೆಗಳು ಹಾಗೂ ಸರಕಾರದ ಅನುದಾನಿತ ಶಾಲೆಗಳು ಮತ್ತು ಮೈದಾನಗಳು, ಉದ್ಯಾನವನಗಳು, ಮುಜರಾಯಿ ಇಲಾಖೆಯ ದೇವಸ್ಥಾನಗಳು, ಪುರಾತತ್ವ ಇಲಾಖೆಯ ಸ್ಥಳಗಳು ಸೇರಿದಂತೆ ಯಾವುದೇ ಸರಕಾರಿ ಸ್ಥಳಗಳಲ್ಲಿ ಶಾಖೆಗಳು, ಸಾಂಘಿಕ್ ಅಥವಾ ಬೈಠಕ್ ಹೆಸರಲ್ಲಿ ಆರೆಸ್ಸೆಸ್ ನಡೆಸುವ ಎಲ್ಲಾ ಬಗೆಯ ಚಟುವಟಿಕೆಗಳಿಗೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದ್ದರು. ಇದಲ್ಲದೆ, ಮುಖ್ಯಮಂತ್ರಿಗೆ ಬರೆದ ಮತ್ತೊಂದು ಪತ್ರದಲ್ಲಿ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಭಾಗಿಯಾಗದಂತೆ ಕ್ರಮ ಕೈಗೊಳ್ಳಲು ಸುತ್ತೋಲೆ ಹೊರಡಿಸುವಂತೆಯೂ ಕೋರಿದ್ದರು.
ಪ್ರಿಯಾಂಕ್ ಖರ್ಗೆ ಪತ್ರದ ಬಳಿಕ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು, ಸರಕಾರಿ ಸ್ಥಳಗಳಲ್ಲಿ ಆರೆಸ್ಸೆಸ್ ಸೇರಿದಂತೆ ಯಾವುದೇ ಖಾಸಗಿ ಸಂಘಟನೆಯ ಸಭೆ, ಸಮಾರಂಭ ಮತ್ತಿತರ ಚಟುವಟಿಕೆಗಳಿಗೆ ಪೂರ್ವಾನುಮತಿ ಕಡ್ಡಾಯ ಎಂದು ನಿರ್ಧರಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸರಕಾರ ಎಚ್ಚರಿಕೆ ನೀಡಿದೆ. 2013ರಲ್ಲಿನ ಬಿಜೆಪಿ ಸರಕಾರದ ಆದೇಶವನ್ನೇ ಸಿದ್ದರಾಮಯ್ಯ ಸರಕಾರ ಈಗ ಅಸ್ತ್ರವಾಗಿ ಬಳಸಿದೆ. ಆಗಿನ ಬಿಜೆಪಿ ಸರಕಾರ ಸರಕಾರಿ ಆಸ್ತಿಗಳ ಬಳಕೆಗೆ ಕೆಲ ಮಾರ್ಗಸೂಚಿಗಳನ್ನು ರೂಪಿಸಿತ್ತು. ಅದೇ ಆದೇಶವನ್ನು ಆಧರಿಸಿ, ಹೊಸ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲು ಸಿದ್ದರಾಮಯ್ಯ ಸರಕಾರ ಮುಂದಾಗಿದೆ. ಆರೆಸ್ಸೆಸ್‌ನ ಕೆಲ ಕಾರ್ಯಕ್ರಮಗಳಲ್ಲಿ ಸರಕಾರಿ ನೌಕರರು ಭಾಗಿಯಾಗುತ್ತಿರುವುದರ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಗಿದೆ. ಆರೆಸ್ಸೆಸ್ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸರಕಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆಯೂ ಸಮಾಲೋಚನೆ ನಡೆದಿದೆ.
ಈ ನಿರ್ಧಾರ ಎಲ್ಲಾ ಸಂಘಸಂಸ್ಥೆಗಳಿಗೆ ಅನ್ವಯಿಸುತ್ತದಾದರೂ, ಆರೆಸ್ಸೆಸ್‌ಗೆ ಪರೋಕ್ಷ ಅಂಕುಶವಾಗಿದೆ. ಸರಕಾರಿ ಆಸ್ತಿಗಳನ್ನು ಇತರ ಕಾರ್ಯಕ್ರಮಗಳಿಗೆ ದುರುಪಯೋಗವನ್ನು ತಡೆಯುವುದು ಸರಕಾರದ ಜವಾಬ್ದಾರಿ ಎಂದು ಸಂಪುಟದಲ್ಲಿ ಒಮ್ಮತದ ನಿಲುವು ವ್ಯಕ್ತವಾಗಿದೆ. ಆರೆಸ್ಸೆಸ್ ಚಟುವಟಿಕೆಯನ್ನು ನಿಷೇಧಿಸುವ ಕಠಿಣ ಕಾನೂನನ್ನೇ ರೂಪಿಸಬೇಕೆಂದು ಕೂಡ ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದರೂ, ಅಂಥ ಕಾನೂನು ಮಾಡಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಸಿದ್ದರಾಮಯ್ಯ ಮನದಟ್ಟು ಮಾಡಿದ್ದಾರೆ ಎನ್ನಲಾಗಿದೆ.
ಸರಕಾರದ ಆರೋಪಗಳಿಗೆ ಪ್ರತಿಯಾಗಿ ಆರೆಸ್ಸೆಸ್ ತನ್ನದೇ ಆದ ಸಮರ್ಥನೆಯನ್ನು ಮುಂದಿಡುತ್ತದೆ. ತಮ್ಮದು ರಾಜಕೀಯ ಪಕ್ಷವಲ್ಲ, ಬದಲಾಗಿ ‘ಸಾಂಸ್ಕೃತಿಕ ಮತ್ತು ರಾಷ್ಟ್ರೀಯತಾವಾದಿ’ ಸಂಘಟನೆ ಎಂಬುದು ಅದರ ಅಧಿಕೃತ ನಿಲುವು. ತನ್ನ ‘ಶಾಖೆ’ಗಳು ಯಾವುದೇ ಧರ್ಮದ ವಿರುದ್ಧ ದ್ವೇಷ ಬೋಧಿಸುವುದಿಲ್ಲ, ಬದಲಾಗಿ ವ್ಯಕ್ತಿತ್ವ ನಿರ್ಮಾಣ, ಶಿಸ್ತು, ದೈಹಿಕ ಸಾಮರ್ಥ್ಯ ಮತ್ತು ದೇಶಭಕ್ತಿಯನ್ನು ಬೆಳೆಸುವ ಕೇಂದ್ರಗಳಾಗಿವೆ ಎಂದು ಆರೆಸ್ಸೆಸ್ ಪ್ರತಿಪಾದಿಸುತ್ತದೆ. ತಮ್ಮ ಮೇಲಿನ ನಿರ್ಬಂಧಗಳು ಕಾನೂನುಬದ್ಧ ಕಾರಣಗಳಿಗಿಂತ ಹೆಚ್ಚಾಗಿ, ರಾಜಕೀಯ ದ್ವೇಷ ಮತ್ತು ‘ಓಲೈಕೆ ರಾಜಕಾರಣ’ದಿಂದ ಪ್ರೇರಿತವಾಗಿವೆ ಎಂದು ಆರೋಪಿಸುವ ಸಂಘಟನೆಯು, ನೈಸರ್ಗಿಕ ವಿಕೋಪಗಳಂತಹ ಸಂದರ್ಭಗಳಲ್ಲಿ ತಮ್ಮ ಸ್ವಯಂಸೇವಕರು ಮಾಡಿದ ಸೇವಾ ಕಾರ್ಯಗಳನ್ನು ಉದಾಹರಣೆಯಾಗಿ ನೀಡಿ ತನ್ನ ಸಮಾಜಮುಖಿ ಕಾರ್ಯಗಳನ್ನು ಒತ್ತಿ ಹೇಳುತ್ತದೆ.
ಆದರೂ, ಎಲ್ಲಾ ಸಂಘಟನೆಗಳು ಎನ್ನುವ ಮೂಲಕ ಮುಖ್ಯವಾಗಿ ಆರೆಸ್ಸೆಸ್ ಅನ್ನು ನಿಯಂತ್ರಿಸುವ ನಿಯಮಗಳು ಜಾರಿಗೆ ಬಂದರೆ, ಇಂಥ ಸಾಲಿನಲ್ಲಿ ಈಗಾಗಲೇ ಇರುವ ರಾಜ್ಯಗಳ ಸಾಲಿನಲ್ಲಿ ಕರ್ನಾಟಕವೂ ಸೇರಿದಂತಾಗುತ್ತದೆ.
ಆರೆಸ್ಸೆಸ್ ರಾಷ್ಟ್ರಮಟ್ಟದಲ್ಲಿ ಈಗಾಗಲೇ ಮೂರು ಬಾರಿ ನಿಷೇಧಕ್ಕೊಳಗಾಗಿದ್ದ ಸಂಘಟನೆ. ಮೊದಲ ಬಾರಿಗೆ ಗಾಂಧಿ ಹತ್ಯೆಯ ನಂತರ 1948ರಲ್ಲಿ ನಿಷೇಧ ಹೇರಲಾಯಿತು. ಸರ್ದಾರ್ ವಲ್ಲಭಭಾಯಿ ಪಟೇಲ್ ನೇತೃತ್ವದ ಕೇಂದ್ರ ಗೃಹ ಸಚಿವಾಲಯ 1948ರ ಫೆಬ್ರವರಿ 4ರಂದು ಆರೆಸ್ಸೆಸ್ ನಿಷೇಧಿಸಿತ್ತಲ್ಲದೆ, ಸಂಘದ ಆಗಿನ ಮುಖ್ಯಸ್ಥ ಗೋಳ್ವಾಲ್ಕರ್ ಅವರನ್ನೂ ಬಂಧಿಸಿತ್ತು. ನಿಷೇಧ ಹಿಂಪಡೆಯಲು ಸಂಘ ಹಲವಾರು ಮನವಿಗಳನ್ನು ಮಾಡಿತು. ಕಡೆಗೆ ಒಂದು ವರ್ಷದ ನಂತರ, 1949ರ ಜುಲೈ 11ರಂದು ನಿಷೇಧ ತೆಗೆದುಹಾಕಲಾಯಿತು. ಎರಡನೇ ಸಲ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತು. ಈ ಸಂದರ್ಭದಲ್ಲಿ ಆರೆಸ್ಸೆಸ್ ಮೇಲೆ ಹಿಡಿತ ಸಾಧಿಸಲು ಇಂದಿರಾಗಾಂಧಿ ದಿಟ್ಟ ಹೆಜ್ಜೆ ಇರಿಸಿದ್ದರು. 1975ರ ಜೂನ್ 25ರಂದು ತುರ್ತು ಪರಿಸ್ಥಿತಿ ಹೇರಿದ ನಂತರ, ಜುಲೈ 4 ರಂದು ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತು. ತುರ್ತು ಪರಿಸ್ಥಿತಿ ಕೊನೆಗೊಂಡಾಗ, 1977ರ ಮಾರ್ಚ್ 22ರಂದು ಆರೆಸ್ಸೆಸ್ ಮೇಲೆ ಹೇರಿದ್ದ ನಿಷೇಧ ತೆಗೆದುಹಾಕಲಾಯಿತು. ಮೂರನೆಯದಾಗಿ, ಬಾಬರಿ ಮಸೀದಿ ಧ್ವಂಸದ ನಂತರ ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತು. ಅಯೋಧ್ಯೆಯಲ್ಲಿನ ಬಾಬರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಕೆಡವಲಾಯಿತು. ಡಿಸೆಂಬರ್ 10ರಂದು ಆರೆಸ್ಸೆಸ್ ಅನ್ನು ನಿಷೇಧಿಸಲಾಯಿತು. ನಂತರ 1993ರ ಜೂನ್ 4ರಂದು ನಿಷೇಧ ತೆಗೆಯಲಾಯಿತು.
ರಾಜ್ಯಗಳ ವಿಚಾರಕ್ಕೆ ಬಂದರೆ, ಮುಖ್ಯವಾಗಿ ಆರೆಸ್ಸೆಸ್ ವಿರುದ್ಧ ಸಮರ ಸಾಧಿಸುತ್ತಿರುವುದು ತಮಿಳುನಾಡಿನ ಡಿಎಂಕೆ ಸರಕಾರ. ಈಗ ರಾಜ್ಯದಲ್ಲಿ ಆರೆಸ್ಸೆಸ್ ಚಟುವಟಿಕೆ ನಿರ್ಬಂಧಿಸುವ ಚರ್ಚೆ ನಡೆದಿದ್ದ ಹೊತ್ತಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡು ಮಾದರಿ ಎಂಬುದನ್ನು ಪ್ರಸ್ತಾಪಿಸಿದ್ದರು.
ತಮಿಳುನಾಡು ಆರೆಸ್ಸೆಸ್ ಚಟುವಟಿಕೆಗಳ ಮೇಲೆ ಸಂಪೂರ್ಣ ನಿಷೇಧ ಹೇರುವ ನೀತಿಯನ್ನು ಹೊಂದಿಲ್ಲವಾದರೂ, ಸಾರ್ವಜನಿಕ ಸ್ಥಳಗಳಲ್ಲಿ ಆರೆಸ್ಸೆಸ್ ಮೆರವಣಿಗೆಗಳಿಗೆ ಅನುಮತಿ ನಿರಾಕರಿಸುತ್ತಲೇ ಬಂದಿದೆ. ಕೆಲವು ಪ್ರಕರಣಗಳು ನ್ಯಾಯಾಲಯದವರೆಗೂ ಹೋಗಿವೆ. ಹಲವಾರು ವರ್ಷಗಳಿಂದ ಡಿಎಂಕೆ ಮತ್ತು ಎಐಎಡಿಎಂಕೆ ನೇತೃತ್ವದ ತಮಿಳುನಾಡು ಸರಕಾರಗಳು, ಪೂರ್ವಾನುಮತಿಯಿಲ್ಲದೆ ಮೆರವಣಿಗೆಗಳನ್ನು ನಡೆಸಿದ್ದಕ್ಕಾಗಿ ಸಂಘದ ವಿರುದ್ಧ ಕಠಿಣ ಕ್ರಮ ಕೈಗೊಂಡಿವೆ. ಈ ವರ್ಷವೂ ಅಕ್ಟೋಬರ್ 2ರಂದು ಚೆನ್ನೈನ ಪೋರೂರ್ ಬಳಿ ಅಯ್ಯಪ್ಪಂತಂಗಲ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಗುರು ಪೂಜೆ ಮತ್ತು ವಿಶೇಷ ಶಾಖೆ ತರಬೇತಿ ಅಧಿವೇಶನ ನಡೆಸಿದ್ದಕ್ಕಾಗಿ ಪೊಲೀಸರು 40ಕ್ಕೂ ಹೆಚ್ಚು ಆರೆಸ್ಸೆಸ್ ಸದಸ್ಯರನ್ನು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಸಂಘದ ವಿರುದ್ಧದ ಈ ಕ್ರಮಗಳ ಪರಿಣಾಮವಾಗಿ, ತಮಿಳುನಾಡು ಸರಕಾರ ಕಾನೂನು ಹೋರಾಟಗಳಲ್ಲಿಯೂ ಸಿಲುಕಿದೆ. ಮುಖ್ಯವಾಗಿ 2022ರಿಂದ ಈ ಜಟಾಪಟಿ ಜೋರಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ 2022ರ ಅಕ್ಟೋಬರ್ 2ರಂದು ಒಂದು ರೂಟ್ ಮಾರ್ಚ್ ಅನ್ನು ನಡೆಸಲು ಆರೆಸ್ಸೆಸ್ ನಿರ್ಧರಿಸಿತ್ತು. ಆದರೆ ಅದಕ್ಕೆ, ಕಾನೂನು ಸುವ್ಯವಸ್ಥೆ ದೊಡ್ಡ ಮೆರವಣಿಗೆಗಳಿಗೆ ಅನುಕೂಲಕರವಾಗಿಲ್ಲ ಎಂದು ಉಲ್ಲೇಖಿಸಿ ಡಿಎಂಕೆ ಸರಕಾರ ಅನುಮತಿ ನಿರಾಕರಿಸಿತು. ನಂತರ ಆರೆಸ್ಸೆಸ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದಾಗ, ಅದು ಮೆರವಣಿಗೆಗೆ ಅವಕಾಶ ನೀಡಿತು. ನ್ಯಾಯಾಲಯದ ಆದೇಶದ ಹೊರತಾಗಿಯೂ, ರಾಜ್ಯ ಸರಕಾರ ಕಾನೂನು ಸುವ್ಯವಸ್ಥೆಯ ಸಮಸ್ಯೆಗಳನ್ನು ಉಲ್ಲೇಖಿಸಿ ಆರೆಸ್ಸೆಸ್‌ಗೆ ಅನುಮತಿ ನಿರಾಕರಿಸಿತು. ನಂತರ ಸಂಘ ಗೃಹ ಕಾರ್ಯದರ್ಶಿ, ಡಿಜಿಪಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ವಿರುದ್ಧ ನ್ಯಾಯಾಲಯ ನಿಂದನೆ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಆಲಿಸಿದ ಹೈಕೋರ್ಟ್, ಆರೆಸ್ಸೆಸ್ ಸೂಕ್ತವೆಂದು ತೋರುವ ಪರ್ಯಾಯ ಆಯ್ಕೆಯ ದಿನಾಂಕದಂದು ಆದರೆ ಸಮಂಜಸವಾದ ನಿರ್ಬಂಧಗಳೊಂದಿಗೆ ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಸರಕಾರಕ್ಕೆ ನಿರ್ದೇಶಿಸಿತು. ಆರೆಸ್ಸೆಸ್ ತನ್ನ ಮೆರವಣಿಗೆಯನ್ನು 2022ರ ನವೆಂಬರ್ 6ಕ್ಕೆ ಮರು ನಿಗದಿಪಡಿಸಿತು. ಆದರೆ ಅದು ಮೊದಲು ಕೋರಿದ್ದ 50ಕ್ಕೂ ಹೆಚ್ಚು ಸ್ಥಳಗಳಿಗೆ ಬದಲಾಗಿ ಕೇವಲ ಮೂರು ಸ್ಥಳಗಳಲ್ಲಿ ಸಾರ್ವಜನಿಕ ಮೆರವಣಿಗೆಗಳನ್ನು ನಡೆಸಲು ಅವಕಾಶ ನೀಡಲಾಯಿತು. 23 ಸ್ಥಳಗಳಲ್ಲಿ ಒಳಾಂಗಣ ಮೆರವಣಿಗೆಗಳನ್ನು ಮಾತ್ರ ನಡೆಸಲು ಕೇಳಲಾಯಿತು. ಏಕೆಂದರೆ ಹೈಕೋರ್ಟ್ ತನ್ನ ಆದೇಶದಲ್ಲಿ, ಕಾಂಪೌಂಡ್ ಗೋಡೆಗಳನ್ನು ಹೊಂದಿರುವ ಆವರಣದೊಳಗೆ ರೂಟ್ ಮಾರ್ಚ್‌ಗಳನ್ನು ನಡೆಸಬೇಕು ಎಂದು ನಿರ್ದೇಶಿಸಿತ್ತು. ಆದ್ದರಿಂದ, ಮೆರವಣಿಗೆಯನ್ನು ಮುಂದೂಡಲು ನಿರ್ಧರಿಸಿದ ಆರೆಸ್ಸೆಸ್ ಮತ್ತೆ ಹೈಕೋರ್ಟ್ ಮೆಟ್ಟಿಲೇರಿತು. 2023ರ ಫೆಬ್ರವರಿ 10ರಂದು ತೀರ್ಪು ನೀಡಿದ ಹೈಕೋರ್ಟ್, ರೂಟ್ ಮಾರ್ಚ್‌ಗಳಿಗೆ ಅನುಮತಿ ನೀಡುವಂತೆ ಪೊಲೀಸರಿಗೆ ಆದೇಶಿಸಿತು ಮತ್ತು ಮೆರವಣಿಗೆಗಳನ್ನು ಕಾಂಪೌಂಡ್ ಗೋಡೆಗಳನ್ನು ಹೊಂದಿರುವ ಆವರಣಕ್ಕೆ ಸೀಮಿತಗೊಳಿಸುವ ಹಿಂದಿನ ಆದೇಶ ರದ್ದುಗೊಳಿಸಿತು.
ಆದರೆ, ರಾಜ್ಯದಲ್ಲಿ ಆರೆಸ್ಸೆಸ್‌ಗೆ ರೂಟ್ ಮಾರ್ಚ್‌ಗಳನ್ನು ನಡೆಸಲು ಅನುಮತಿ ನೀಡಿದ್ದ ಮದ್ರಾಸ್ ಹೈಕೋರ್ಟ್ ಆದೇಶಗಳ ವಿರುದ್ಧ ರಾಜ್ಯ ಸರಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತು. ಸ್ಟಾಲಿನ್ ಸರಕಾರದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತು. ಮೆರವಣಿಗೆಗಳು ವಿಳಂಬವಾಗಿದ್ದರೂ, ಅಂತಿಮವಾಗಿ ಎಪ್ರಿಲ್ 2023ರಲ್ಲಿ ನಡೆಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ, ತಮಿಳುನಾಡು ಪೊಲೀಸರು ಆರೆಸ್ಸೆಸ್‌ನ ರೂಟ್ ಮಾರ್ಚ್‌ಗಳನ್ನು ಅನುಮತಿಸುವ ಮಾರ್ಗಸೂಚಿಗಳ ಕುರಿತು ಪ್ರಸ್ತಾವನೆ ಸಲ್ಲಿಸಿದರು. ಆಸ್ಪತ್ರೆಗಳು, ಶಾಲೆಗಳು ಮತ್ತು ಧಾರ್ಮಿಕ ಸ್ಥಳಗಳಂತಹ ಪ್ರಮುಖ ಸಂಸ್ಥೆಗಳು ಇರುವ ಜನದಟ್ಟಣೆಯ, ಕಿರಿದಾದ ಪ್ರದೇಶಗಳು ಮತ್ತು ಮಾರ್ಗಗಳಲ್ಲಿ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಾಗಿತ್ತು.







