‘ಧರ್ಮಸ್ಥಳ ದೂರು’ ನೆನಪಿಸಿದ ನಿಗೂಢ ಹತ್ಯಾಕಾಂಡಗಳು

ಭಾಗ- 1
‘ಸರಣಿ ಹತ್ಯೆಗಳು’, ‘ಸರಣಿ ಹಂತಕರು’ ಎಂಬ ಪದಗಳೇ ಎದೆ ನಡುಗಿಸಿಬಿಡುತ್ತವೆ. ಇದೊಂದು ಬಗೆಯ ಉನ್ಮಾದಿಗಳ ಕಥೆಯೂ ಹೌದು. ನರಮೇಧದಲ್ಲಿ ಸರಣಿ ಹತ್ಯಾಕಾಂಡವೂ ಒಂದು ಪ್ರಕಾರ. ಸಾಮಾನ್ಯವಾಗಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಹತ್ಯೆಗಳನ್ನು ಒಬ್ಬ ವ್ಯಕ್ತಿ ಮಾಡಿದ್ದರೆ, ಅಂಥವರನ್ನು ಸರಣಿ ಹಂತಕ, ಸರಣಿ ಹಂತಕಿ ಎನ್ನಲಾಗುತ್ತದೆ. ಕೊಲ್ಲುವುದಕ್ಕೆ ಅವರಿಗೆ ಯಾವ ಕಾರಣಗಳೂ ಬೇಕಿಲ್ಲ. ಬಹಳ ಸಲ ಬಲಿಪಶುಗಳು ಆ ಹಂತಕ ಅಥವಾ ಹಂತಕಿಗೆ ಗೊತ್ತಿದ್ದವರೂ ಆಗಿರುವುದಿಲ್ಲ. ಅವರು ಕೊಲ್ಲುತ್ತಾರೆ ಮತ್ತದರಿಂದ ಅವರಿಗೆಂಥದೋ ಸಂತೋಷ ಸಿಗುತ್ತದೆನ್ನಲಾಗುತ್ತದೆ. ಇದರ ಹೊರತಾಗಿ, ನಿರ್ದಿಷ್ಟ ಉದ್ದೇಶಗಳೊಂದಿಗೇ ಸರಣಿ ಹತ್ಯೆ ಮಾಡಿದವರೂ ಇದ್ದಾರೆ. ಇದೇನೇ ಇದ್ದರೂ, ಹತ್ಯೆಗಳಿಗೆ ಯಾವ ಸಮರ್ಥನೆಯೂ ಇರುವುದು ಸಾಧ್ಯವಿಲ್ಲ. ಯಾವುದೇ ದೇಶ ಮತ್ತು ಯಾವುದೇ ಕಾಲದ ಒಂದು ವಿಲಕ್ಷಣ ಪ್ರವೃತ್ತಿಯಾಗಿ ಸರಣಿ ಹತ್ಯಾಕಾಂಡ ದಂಗುಬಡಿಸುತ್ತಲೇ ಇರುತ್ತದೆ. ಭಾರತದಲ್ಲಿಯೂ ಅಂಥ ಅದೆಷ್ಟೋ ಕರಾಳ ಪ್ರಕರಣಗಳಿವೆ.
ಥಗ್ ಬೆಹ್ರಮ್ (1790-1840)
ಭಾರತದ ಸರಣಿ ಹತ್ಯಾಕಾಂಡದ ಇತಿಹಾಸದಲ್ಲಿ ಇವನೊಬ್ಬ ಅತಿ ದೊಡ್ಡ ಹಂತಕ. ಮಧ್ಯಪ್ರದೇಶದ ಜಬಲ್ಪುರದವನಾದ ಈತ ಅವಧ್‌ನಲ್ಲಿ ಸಕ್ರಿಯವಾಗಿದ್ದ ದರೋಡೆಕೋರರ ಗುಂಪಿನ ನಾಯಕನಾಗಿದ್ದ. ಕಿಂಗ್ ಆಫ್ ಥಗ್ಸ್ ಎಂದೇ ಅವನನ್ನು ಗುರುತಿಸಲಾಗುತ್ತದೆ. 1790ರಿಂದ 1840ರ ಅವಧಿಯಲ್ಲಿ ಈತ 931 ಕೊಲೆಗಳನ್ನು ಮಾಡಿದ್ದಾಗಿ ಹೇಳಲಾಗಿದೆ. ಆದರೆ 125 ಹತ್ಯೆಗಳನ್ನು ಮಾಡಿರುವುದು ದೃಢಪಟ್ಟಿದೆ. ಅದರ ಬಗ್ಗೆ ಆತ ಸ್ವತಃ ಒಪ್ಪಿದ್ದನ್ನು ಈಸ್ಟ್ ಇಂಡಿಯಾ ಕಂಪೆನಿ ಅಧಿಕಾರಿ ಜೇಮ್ಸ್ ಪ್ಯಾಟನ್ ದಾಖಲಿಸಿದ್ದಾನೆ. ಸಾಮಾನ್ಯವಾಗಿ ರುಮಾಲು ಎಂದು ಕರೆಯುತ್ತಿದ್ದ ಕರವಸ್ತ್ರದಂಥ ಬಟ್ಟೆಯಿಂದ ಕತ್ತು ಬಿಗಿದು ಸಾಯಿಸುವುದು ಅವನ ವಿಧಾನವಾಗಿತ್ತು. 1840ರಲ್ಲಿ ಬ್ರಿಟಿಷರು ಆತನಿಗೂ ಮತ್ತು ಆತನ ತಂಡದವರಿಗೂ ಮರಣ ದಂಡನೆ ವಿಧಿಸಿದರು. ಜಬಲ್ಪುರ ಜಿಲ್ಲೆಯಲ್ಲಿ ಆತನನ್ನು ನೇಣಿಗೇರಿಸಲಾಯಿತು.
ರಾಮನ್ ರಾಘವ್ (1965-68)
ಈತ ತಮಿಳುನಾಡಿನ ತಿರುನೆಲ್ವೇಲಿಯವನು. ಸಿಂಧಿ ತಲ್ವಾಯಿ, ಅನ್ನಾ, ತಂಬಿ, ವೇಲುಸ್ವಾಮಿ ಎಂಬ ಹೆಸರುಗಳಿಂದಲೂ ಗುರುತಾಗಿದ್ದ. ಸುಮಾರು ಮೂರು ವರ್ಷಗಳ ಅವಧಿಯಲ್ಲಿ 50ಕ್ಕೂ ಹೆಚ್ಚು ಕೊಲೆಗಳನ್ನು ಮಾಡಿದ್ದ. ಆತ ಕೊಲೆಗಳನ್ನೆಸಗಿದ್ದು ಮುಂಬೈನಲ್ಲಿ. ಬಲಿಪಶುಗಳೆಲ್ಲರೂ ಕೊಳೆಗೇರಿಯಲ್ಲಿ ವಾಸಿಸುವವರಾಗಿದ್ದರು. 1965 ಮತ್ತು 1966ರಲ್ಲಿ ಮೊದಲ ಸುತ್ತಿನ 19 ಕೊಲೆಗಳು ನಡೆದವು. 1968ರಲ್ಲಿ ಎರಡನೇ ಸುತ್ತಿನ ಕೊಲೆಗಳು ನಡೆದವು. ಮುಂಬೈ ಹೊರವಲಯದಲ್ಲಿ ಆಗಸ್ಟ್ 1968ರಲ್ಲಿ ನಡೆದ ಸರಣಿ ಕೊಲೆಗಳಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ ನಿರಾಶ್ರಿತರನ್ನು ಹೊಡೆದು ಸಾಯಿಸಲಾಗಿತ್ತು. ಎಲ್ಲಾ ಕೊಲೆಗಳು ರಾತ್ರಿ ವೇಳೆಯೇ ನಡೆದಿದ್ದವು. 1965-66 ರಲ್ಲೂ ಮುಂಬೈನ ಪೂರ್ವ ಉಪನಗರಗಳಲ್ಲಿ ಇದೇ ರೀತಿಯ ಕೊಲೆಗಳ ಸರಣಿ ನಡೆದಿದ್ದ ಹಿನ್ನೆಲೆಯಲ್ಲಿ ಚುರುಕುಗೊಂಡ ಪೊಲೀಸರು, ರಾಮನ್ ರಾಘವ್‌ನನ್ನು ಶಂಕಿಸಿ ಬಂಧಿಸಿದ್ದರು. ನಿರಾಶ್ರಿತನಾಗಿದ್ದ ಈತನ ಮೇಲೆ ಪೊಲೀಸ್ ದಾಖಲೆಗಳಲ್ಲಿ ಈ ಹಿಂದೆ ಉಲ್ಲೇಖಗಳಿದ್ದದ್ದು ಬಂಧನಕ್ಕೆ ಕಾರಣವಾಗಿತ್ತು. ವಿಚಾರಣೆ ವೇಳೆ ಆತ, 1966ರಲ್ಲಿ ಆಗಿನ ಸೆಂಟ್ರಲ್ ರೈಲ್ವೆ ಮಾರ್ಗದಲ್ಲಿ 41 ಜನರನ್ನು ಮತ್ತು 1968ರಲ್ಲಿ ಉಪನಗರಗಳಲ್ಲಿ ಸುಮಾರು 12 ಜನರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದ. ಆದರೆ ಮಾನಸಿಕ ಅಸ್ವಸ್ಥತೆ ಕಾರಣದಿಂದ ಆತ ಮರಣದಂಡನೆ ಶಿಕ್ಷೆಯಿಂದ ಪಾರಾದ. ನಂತರ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 1995ರಲ್ಲಿ ಜೈಲು ಕಸ್ಟಡಿಯಲ್ಲಿದ್ದಾಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ.
ಸ್ಟೋನ್‌ಮ್ಯಾನ್ (1983-2011)
1989ರಲ್ಲಿ ಕೋಲ್ಕತಾದಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ ಕನಿಷ್ಠ 13 ಮಂದಿ ಸೂರಿಲ್ಲದ ಜನರನ್ನು ತಲೆಯ ಮೆಲೆ ಕಲ್ಲು ಎತ್ತಿಹಾಕಿ ಕೊಂದಿದ್ದ ಗುರುತಿಸಲಾಗದ ಸರಣಿ ಹಂತಕನನ್ನು ಸ್ಟೋನ್‌ಮ್ಯಾನ್ ಎಂಬ ಹೆಸರಲ್ಲಿ ಕರೆಯಲಾಯಿತು. ಆ ಹೆಸರು ಕೊಟ್ಟಿದ್ದು ಕೋಲ್ಕತಾದ ಒಂದು ಇಂಗ್ಲಿಷ್ ಪತ್ರಿಕೆ. ಕಡೆಗೆ, ಅದಕ್ಕೂ ಮುಂಚೆ ಅಂದರೆ 1983ರಿಂದ 1988ರವರೆಗೆ ಮುಂಬೈನಲ್ಲಿ ನಡೆದ ಇದೇ ರೀತಿಯ ಸರಣಿ ಕೊಲೆಗಳ ಅಪರಾಧಿಗೂ ಈ ಹೆಸರನ್ನೇ ಕೊಡಲಾಗಿದೆ.
ಕೋಲ್ಕತಾದಲ್ಲಿ ಜೂನ್ 1989ರಲ್ಲಿ ಅಂತಹ ಮೊದಲ ಕೊಲೆ ಸಂಭವಿಸಿತು. ಮುಂದಿನ ಆರು ತಿಂಗಳುಗಳಲ್ಲಿ ಮತ್ತೆ 12 ಕೊಲೆಗಳಾದವು. ಕೊಲೆಯಾದವರೆಲ್ಲರೂ ನಗರದ ಫುಟ್‌ಪಾತ್ ಮೇಲೆ ಏಕಾಂಗಿಯಾಗಿ ಮಲಗಿದ್ದ ನಿರಾಶ್ರಿತ ಮಂದಿಯಾಗಿದ್ದರು. ಕೊಲೆಗಾರ ಭಾರವಾದ ಕಲ್ಲು ಅಥವಾ ಕಾಂಕ್ರಿಟ್ ಚಪ್ಪಡಿಯನ್ನು ಎತ್ತಿಹಾಕಿ ಕೊಲ್ಲುತ್ತಿದ್ದ. ಪತ್ತೆಮಾಡಲು ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿತ್ತು. ಬಳಿಕ ಕೊಲೆಗಳು ನಿಂತುಹೋದವು. ಆದರೆ, ಕೊಲೆಗಾರ ಮಾತ್ರ ಪತ್ತೆಯಾಗದೆ, ಆ ಪ್ರಕರಣಗಳು ಬಗೆಹರಿಯದೇ ಉಳಿದಿವೆ. ಮುಂಬೈ ಹತ್ಯೆಗಳು ಕೋಲ್ಕತಾ ಸ್ಟೋನ್‌ಮ್ಯಾನ್ ಹತ್ಯೆಗಳಿಗೆ ಸಂಬಂಧಿಸಿವೆಯೇ ಅಥವಾ ಬೇರೆಯೇ ಎಂಬುದನ್ನು ಇವತ್ತಿನವರೆಗೂ ಪತ್ತೆಮಾಡಲು ಸಾಧ್ಯವಾಗಿಲ್ಲ. ಆದರೆ ಕೊಂದ ರೀತಿಯಲ್ಲಿನ ಸಾಮ್ಯತೆ ಕಾರಣದಿಂದ ಅಲ್ಲಿ ನಡೆದ 13 ಕೊಲೆಗಳನ್ನು ಕೂಡ ನೋಡಲಾಗಿದ್ದು, ಒಟ್ಟು 26 ಕೊಲೆಗಳನ್ನು ಒಬ್ಬನೇ ವ್ಯಕ್ತಿ ಮಾಡಿರಬಹುದು ಎಂದು ಊಹಿಸಲಾಗಿದೆ. ಮುಂಬೈನಲ್ಲಿ 6 ತಿಂಗಳ ಅವಧಿಯಲ್ಲಿ 13 ಕೊಲೆಗಳಾದವು. ಮೊದಲ ಕೊಲೆ ಜೂನ್ 1983ರಲ್ಲಿ ನಡೆಯಿತು. ಎಲ್ಲಾ 13 ಪ್ರಕರಣಗಳು ಬಗೆಹರಿಯದೆ ಉಳಿದಿವೆ. ಫೆಬ್ರವರಿ 2009ರಲ್ಲಿ ಅಸ್ಸಾಮಿನ ಗುವಾಹಟಿ ನಗರದಲ್ಲಿಯೂ ಇದೇ ರೀತಿಯ ಹತ್ಯೆಗಳು ನಡೆದಿರುವ ಬಗ್ಗೆ ವರದಿಯಾಗಿತ್ತು.
ಗೌರಿಶಂಕರ್ (1987-89)
1987ರಿಂದ 1989ರ ಅವಧಿಯಲ್ಲಿ 6 ಕೊಲೆಗಳನ್ನು ಮಾಡಿದ ಸರಣಿ ಹಂತಕ ಗೌರಿ ಶಂಕರ್. ತಮಿಳುನಾಡಿನ ಆತ ಆಟೊ ಶಂಕರ್ ಎಂದೇ ಗುರುತಿಸಲ್ಪಟ್ಟಿದ್ದ. ಹೊಟ್ಟೆಪಾಡಿಗಾಗಿ ಆತ ಸೈಕಲ್‌ರಿಕ್ಷಾ ಓಡಿಸುತ್ತಿದ್ದುದು ಈ ಹೆಸರಿಗೆ ಕಾರಣವಾಗಿತ್ತು. 1970 ಮತ್ತು 1980ರ ದಶಕಗಳಲ್ಲಿ ಚೆನ್ನೈನಲ್ಲಿ ಸಕ್ರಿಯನಾಗಿದ್ದ. ಆ ಸಮಯದಲ್ಲಿ ಅದು ಅಪರಾಧಿಗಳ ನೆಲೆಯಾಗಿತ್ತು. ಶಂಕರ್ ಅಕ್ರಮ ಮದ್ಯ ಸಾಗಣೆ ಶುರು ಮಾಡಿದ. ರಾಜಕೀಯದವರ ಒಡನಾಟವೂ ಬೆಳೆದು, ಪೊಲೀಸರನ್ನು ಕೂಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಲ್ಲವನಾದ. ನಿಧಾನವಾಗಿ ವೇಶ್ಯಾವಾಟಿಕೆ ದಂಧೆಗೂ ಇಳಿದು, ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನೂ ತನ್ನ ಗಿರಾಕಿಗಳನ್ನಾಗಿಸಿಕೊಳ್ಳುವಷ್ಟು ಮಟ್ಟಕ್ಕೆ ಬೆಳೆದ.
ಆತನ ಮೂರನೇ ಪತ್ನಿ ಲಲಿತಾ ಅವನ ಸ್ನೇಹಿತ ಸುದಲೈ ಮುತ್ತು ಜೊತೆ ಓಡಿಹೋಗಿ, ತನ್ನದೇ ಆದ ವೇಶ್ಯಾವಾಟಿಕೆ ವ್ಯವಹಾರ ಶುರುಮಾಡಿದಾಗ, ಅವಳನ್ನು ಮುಗಿಸುವ ಯೋಜನೆ ರೂಪಿಸಿದ. ಅವರಿಬ್ಬರೊಂದಿಗೆ ರಾಜಿ ಮಾಡಿಕೊಳ್ಳುವಂತೆ ನಟಿಸಿ, ಅಕ್ಟೋಬರ್ 1987ರಲ್ಲಿ ಒಂದು ರಾತ್ರಿ, ಅವನು ಅವಳನ್ನು ಪೆರಿಯಾರ್ ನಗರದಲ್ಲಿರುವ ತನ್ನ ಸ್ಥಳಕ್ಕೆ ಕರೆಸಿ ಕೊಲೆ ಮಾಡಿ, ಮನೆಯೊಳಗೇ ಹೂತುಹಾಕಿದ್ದ. ಲಲಿತಾ ಒಬ್ಬ ವಿಐಪಿ ಜೊತೆ ಪ್ರವಾಸದಲ್ಲಿದ್ದಾಳೆಂದು ಸುದಲೈಗೆ ಹೇಳಿ ನಂಬಿಸಿದ್ದ. ಎರಡು ತಿಂಗಳ ನಂತರ ಸುದಲೈನನ್ನು ಕೂಡ ಊಟಕ್ಕೆ ಕರೆದು, ಆತ ಮದ್ಯದ ಅಮಲಿನಲ್ಲಿದ್ದಾಗ ಕತ್ತು ಹಿಸುಕಿ ಕೊಂದು, ದೇಹವನ್ನು ಸುಟ್ಟು, ಬೂದಿಯನ್ನು ಸಮುದ್ರದಲ್ಲಿ ಚೆಲ್ಲಿದ್ದ. ಸುದಲೈನ ಸ್ನೇಹಿತ ರವಿ ಎಂಬಾತ ಶಂಕರ್ ಬಗ್ಗೆ ಅನುಮಾನ ವ್ಯಕ್ತಪಡಿಸಿದಾಗ, ಅವನನ್ನು ಕೂಡ ಕೊಂದು, ಪೆರಿಯಾರ್ ನಗರದ ಜಮೀನಿನಲ್ಲಿ ಹೂತುಹಾಕಿದ. 1988ರ ಹೊತ್ತಿಗೆ ಆತನ ಬಳಿ, ಬಂಗಲೆ, ಕಾರು ಹೀಗೆ ಬೇಕಾದದ್ದೆಲ್ಲವೂ ಇದ್ದವು. ಏನು ಬೇಕಾದರೂ ಮಾಡಬಹುದಾದ ಸಂಪರ್ಕಗಳನ್ನು ಹೊಂದಿದ್ದ. 1988 ಮೇ 29ರಂದು, ಎದುರಾಳಿ ಗ್ಯಾಂಗ್‌ನ ಸಂಪತ್, ಮೋಹನ್ ಮತ್ತು ಗೋವಿಂದರಾಜ್ ಎಂಬವರು ವ್ಯವಹಾರದಲ್ಲಿ ಹಣ ನೀಡಲು ನಿರಾಕರಿಸಿದಾಗ, ಅವರನ್ನೂ ನಂಬಿಸಿ ತನ್ನ ಅಡ್ಡಾಕ್ಕೆ ಕರೆದು ಕೊಂದುಹಾಕಿ ಅಲ್ಲೇ ಹೂಳಿದ. ಅದೇ ಜೂನ್ ಕೊನೆಯ ವೇಳೆಗೆ ಸಂಪತ್ ಪತ್ನಿ ವಿಜಯಾ ಮೈಲಾಪುರ ಪೊಲೀಸರಿಗೆ ದೂರು ನೀಡಿ, ಶಂಕರ್ ಮೇಲೆ ಅನುಮಾನ ವ್ಯಕ್ತಪಡಿಸಿದಾಗ, ಪೊಲೀಸರು ಮೊದಲು ಆತನ ವಿರುದ್ಧ ಏನೂ ಮಾಡದೇ ಇದ್ದರೂ, ವಿಜಯಾ ಗವರ್ನರ್‌ವರೆಗೂ ಹೋದಾಗ, ಪರಿಸ್ಥಿತಿ ಬಿಗಡಾಯಿಸಿತ್ತು. ಬಂಧಿಸಿ ವಿಚಾರಣೆ ನಡೆಸಿದಾಗ ತಾನು ಮಾಡಿದ ಎಲ್ಲ ಕೊಲೆಗಳ ಬಗ್ಗೆ ಬಾಯ್ಬಿಟ್ಟಿದ್ದ. ಮೇ 31, 1991ರಂದು ಇಬ್ಬರು ಸಹಚರರಾದ ಎಲ್ಡಿನ್ ಮತ್ತು ಶಿವಾಜಿ ಅವರೊಂದಿಗೆ ಶಂಕರ್‌ಗೂ ಗಲ್ಲುಶಿಕ್ಷೆ ವಿಧಿಸಲಾಯಿತು. 1995ರ ಎಪ್ರಿಲ್ 27ರಂದು ಸೇಲಂ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಯಿತು.
ಸೀಮಾ ಗವಿತ್ ಮತ್ತು ರೇಣುಕಾ ಶಿಂದೆ (1990-96)
ಸಹೋದರಿಯರಾದ ಸೀಮಾ ಮೋಹನ್ ಗವಿತ್ ಮತ್ತು ರೇಣುಕಾ ಕಿರಣ್ ಶಿಂದೆ 1990ರಿಂದ 1996ರ ಅವಧಿಯಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 13 ಮಕ್ಕಳನ್ನು ಅಪಹರಿಸಿ 5 ಮಕ್ಕಳನ್ನು ಕೊಂದಿರುವ ಸರಣಿ ಹಂತಕಿಯರಾಗಿದ್ದಾರೆ. ಇಬ್ಬರೂ ತಮ್ಮ ತಾಯಿ ಅಂಜನಾಬಾಯಿಯೊಂದಿಗೆ ಸೇರಿ, ಪುಣೆ, ಥಾಣೆ, ಕಲ್ಯಾಣ್, ಕೊಲ್ಹಾಪುರ ಮತ್ತು ನಾಸಿಕ್‌ನಲ್ಲಿ ಈ ದುಷ್ಕೃತ್ಯ ಎಸಗಿದ್ದರು. ಜನದಟ್ಟಣೆಯ ಸ್ಥಳಗಳಲ್ಲಿ ಕದಿಯುವಾಗ ಅಕಸ್ಮಾತ್ ಸಿಕ್ಕಿಬಿದ್ದರೆ ಮಗುವನ್ನು ತೋರಿಸಿ ಸಹಾನುಭೂತಿ ಪಡೆಯುವ ಉದ್ದೇಶದಿಂದ ಮಕ್ಕಳನ್ನು ಅಪಹರಿಸುತ್ತಿದ್ದರು. ಅಪಹರಿಸಿದ ಮಗುವನ್ನು ನಂತರ ಕೊಲ್ಲುತ್ತಿದ್ದರು. ಈ ಮೂವರನ್ನೂ ನವೆಂಬರ್ 1996ರಲ್ಲಿ ಬಂಧಿಸಲಾಯಿತು. ಜೊತೆಗೆ ರೇಣುಕಾ ಪತಿ ಕಿರಣ್ ಶಿಂದೆಯನ್ನೂ ಬಂಧಿಸಲಾಯಿತು. ನಂತರ ಆತ ಅಪ್ರೂವರ್ ಆದ. ಬಂಧನವಾದ ಎರಡು ವರ್ಷಗಳಲ್ಲಿ ವಿಚಾರಣೆಗೆ ಮೊದಲೇ ಅಂಜನಾಬಾಯಿ ಅನಾರೋಗ್ಯಕ್ಕೆ ತುತ್ತಾಗಿ ಸಾವನ್ನಪ್ಪಿದಳು. 2001ರಲ್ಲಿ ಕೊಲ್ಹಾಪುರದ ನ್ಯಾಯಾಲಯ ಇಬ್ಬರೂ ಸಹೋದರಿಯರನ್ನು ತಪ್ಪಿತಸ್ಥರೆಂದು ಘೋಷಿಸಿತು. 2004ರಲ್ಲಿ ಬಾಂಬೆ ಹೈಕೋರ್ಟ್ ಶಿಕ್ಷೆಯನ್ನು ಎತ್ತಿಹಿಡಿಯಿತು. ಮರಣದಂಡನೆಯನ್ನು 2006ರಲ್ಲಿ ಸುಪ್ರೀಂ ಕೋರ್ಟ್ ಕೂಡ ದೃಢಪಡಿಸಿತು. ಅವರಿಬ್ಬರ ಕ್ಷಮಾದಾನ ಅರ್ಜಿಗಳನ್ನು 2014ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತಿರಸ್ಕರಿಸಿದರು. ಅಂತಿಮವಾಗಿ, ಬಾಂಬೆ ಹೈಕೋರ್ಟ್ 2022ರಲ್ಲಿ ಅವರ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತು. ಇಬ್ಬರೂ ಪುಣೆಯ ಯೆರವಾಡ ಜೈಲಿನಲ್ಲಿದ್ದಾರೆ.
ದಂಡುಪಾಳ್ಯ ಗ್ಯಾಂಗ್ (1996-2001)
ದಂಡುಪಾಳ್ಯ ಗ್ಯಾಂಗ್ 1990ರ ದಶಕದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ದರೋಡೆ, ಕೊಲೆ ಮತ್ತು ಅತ್ಯಾಚಾರದಂತಹ ಅಪರಾಧಗಳನ್ನು ಎಸಗುತ್ತಿದ್ದ ಒಂದು ಕ್ರಿಮಿನಲ್ ಗ್ಯಾಂಗ್. ಸುಮಾರು 1996ರಿಂದ 2001ರ ಅವಧಿಯಲ್ಲಿ ಕೊಲೆಗಳು, ಅತ್ಯಾಚಾರಗಳು ಮತ್ತು ದರೋಡೆಗಳನ್ನು ಮಾಡಿದ ಕುಖ್ಯಾತಿ ಈ ಗ್ಯಾಂಗ್‌ನದ್ದಾಗಿದೆ. ಈ ಗ್ಯಾಂಗ್‌ನ ಚಟುವಟಿಕೆಗಳು ಭಯಾನಕವಾಗಿದ್ದವು ಮತ್ತು ಜನರಲ್ಲಿ ಭೀತಿ ಹುಟ್ಟುಹಾಕಿದ್ದವು. ದಂಡುಪಾಳ್ಯ ಎಂಬುದು ಬೆಂಗಳೂರು ಗ್ರಾಮಾಂತರದ ಒಂದು ಹಳ್ಳಿಯ ಹೆಸರು ಮತ್ತು ಈ ಗ್ಯಾಂಗ್‌ನವರೆಲ್ಲ ಅಲ್ಲಿ ನೆಲೆಸಿದ್ದರಿಂದ ಆ ಹೆಸರಿನಿಂದಲೇ ಕರೆಯಲಾಗುತ್ತಿತ್ತು. ಮುಖ್ಯವಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅವರು ಅಪರಾಧ ಕೃತ್ಯದಲ್ಲಿ ತೊಡಗಿದ್ದರು. ದಂಡುಪಾಳ್ಯ ಗ್ಯಾಂಗ್‌ನ ಪ್ರಮುಖ ಸದಸ್ಯರು ಕನ್ನಡ ಮಾತನಾಡುವವರಾಗಿದ್ದರೂ, ಅವರ ಪೂರ್ವಜರು 1930 ರ ಸುಮಾರಿಗೆ ಆಂಧ್ರದ ಗಡಿ ಪ್ರದೇಶದಿಂದ ವಲಸೆ ಬಂದಿದ್ದವರೆಂದು ಹೇಳಲಾಗುತ್ತದೆ. ಈ ಗ್ಯಾಂಗ್ ಸುಮಾರು 30 ಜನರನ್ನೊಳಗೊಂಡಿತ್ತು. ಮಹಿಳೆಯರೂ ಇದ್ದರು. ಅವರು 80 ಕ್ಕೂ ಹೆಚ್ಚು ಜನರನ್ನು ಕೊಂದಿದ್ದಾರೆಂದು ಹೇಳಲಾಗುತ್ತದೆ. ಕೊನೆಗೆ ಪೊಲೀಸರು ಅವರನ್ನು ಬಂಧಿಸಿದರು. ಕೆಲವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಗ್ಯಾಂಗ್‌ನ 16 ಸದಸ್ಯರಿಗೆ ಮರಣದಂಡನೆ ಮತ್ತು 4 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತರರು ಕಡಿಮೆ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ. ಇವರ ಮೇಲೆ ‘ದಂಡುಪಾಳ್ಯ’ ಎಂಬ ಸಿನೆಮಾ ಕೂಡ ಬಂದಿತ್ತು.







