Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಸರಕಾರಿ ಅಧಿಕಾರಿಗಳ ರಾಜೀನಾಮೆ ಪ್ರಕರಣಗಳ...

ಸರಕಾರಿ ಅಧಿಕಾರಿಗಳ ರಾಜೀನಾಮೆ ಪ್ರಕರಣಗಳ ಹಿಂದೆ-ಮುಂದೆ

ಆರ್.ಜೀವಿಆರ್.ಜೀವಿ10 July 2025 2:03 PM IST
share
ಸರಕಾರಿ ಅಧಿಕಾರಿಗಳ ರಾಜೀನಾಮೆ ಪ್ರಕರಣಗಳ ಹಿಂದೆ-ಮುಂದೆ

ಭಾಗ - 2

ಕೆ. ಅಣ್ಣಾಮಲೈ ಪ್ರಕರಣ

ಕರ್ನಾಟಕ ರಾಜ್ಯದಲ್ಲಿ ಐಪಿಎಸ್ ಅಧಿಕಾರಿಯಾಗಿ ಮಿಂಚಿದ್ದ ಕೆ. ಅಣ್ಣಾಮಲೈ, ಇದ್ದಕ್ಕಿದ್ದಂತೆ ಪೊಲೀಸ್ ವೃತ್ತಿ ತೊರೆದು ಅಚ್ಚರಿ ಮೂಡಿಸಿದ್ದರು. ನಂತರ ರಾಜಕೀಯಕ್ಕೆ ಕಾಲಿಟ್ಟ ಅಣ್ಣಾಮಲೈ, ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾದರು. ಈಗ ಅವರು ಆ ಹುದ್ದೆಗೂ ರಾಜೀನಾಮೆ ನೀಡಿದ್ದಾರೆ.

ತಮಿಳುನಾಡಿನ ಕೆರೂರಿನ ಚಿನ್ನಾಥಪುರಂನ ಅಣ್ಣಾಮಲೈ, ಮೂಲತಃ ರೈತ ಕುಟುಂಬದವರು. 2011ರಲ್ಲಿ ಐಪಿಎಸ್ ಹುದ್ದೆಗೆ ಆಯ್ಕೆಯಾದ ಅಣ್ಣಾಮಲೈ, 2013ರಲ್ಲಿ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಉಪ ವಿಭಾಗ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದರು. 2015ರ ಜನವರಿ 1 ರಂದು ಪೊಲೀಸ್ ವರಿಷ್ಠಾಧಿಕಾರಿಯಾಗಿ ಭಡ್ತಿ ಪಡೆದು 2016 ರವರೆಗೆ ಉಡುಪಿ ಜಿಲ್ಲಾ ಎಸ್‌ಪಿಯಾಗಿದ್ದರು. ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲಿ 2018ರ ಅಕ್ಟೋಬರ್‌ವರೆಗೆ ಎಸ್‌ಪಿಯಾಗಿದ್ದರು. ಆ ಬಳಿಕ ಬೆಂಗಳೂರು ದಕ್ಷಿಣ ಪೊಲೀಸ್ ಉಪ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2019ರಲ್ಲಿ ಅಣ್ಣಾಮಲೈ ಅವರು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದ್ದು ಭಾರೀ ದೊಡ್ಡ ಸುದ್ದಿಯಾಗಿತ್ತು. ತಮ್ಮ ತವರು ರಾಜ್ಯ ತಮಿಳುನಾಡಿಗೆ ಮರಳಿದ ಅಣ್ಣಾಮಲೈ, ಕೃಷಿಯಲ್ಲಿ ತೊಡಗುತ್ತೇನೆ, ಕುಟುಂಬಕ್ಕೆ ಸಮಯ ನೀಡುತ್ತೇನೆ ಎಂದು ಹೇಳಿದ್ದರು. ಅದಾದ ಕೆಲ ದಿನಗಳಲ್ಲೇ ಅಣ್ಣಾಮಲೈ ಬಿಜೆಪಿ ಸೇರ್ಪಡೆಯಾದರು.

ಅಣ್ಣಾಮಲೈ ಮೊದಲ ಸಲ ಚುನಾವಣಾ ಕಣಕ್ಕಿಳಿದದ್ದು 2021ರಲ್ಲಿ. ತಮಿಳುನಾಡಿನ ಅರವಕುರಿಚಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಅಣ್ಣಾಮಲೈ ಸೋಲು ಕಂಡರು. ಕಡೆಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾದರು. 2024ರ ಲೋಕಸಭಾ ಚುನಾವಣೆಯಲ್ಲಿ ಕೊಯಂಬತ್ತೂರಿನಿಂದ ಸ್ಪರ್ಧಿಸಿ ಸೋತರು. ತಮಿಳುನಾಡಿನಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳ ಮೂಲಕವೇ ಅಣ್ಣಾಮಲೈ ಗಮನ ಸೆಳೆದರು. ಎಐಎಡಿಎಂಕೆ ಅಧಿನಾಯಕಿ ದಿವಂಗತ ಜಯಲಲಿತಾ ಅವರ ಕುರಿತಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕಾರಣ ಸಿಟ್ಟಿಗೆದ್ದ ಎಐಎಡಿಎಂಕೆ ಪಕ್ಷ ಎನ್‌ಡಿಎ ಮೈತ್ರಿ ಕೂಟದಿಂದಲೇ ಹೊರಗೆ ಹೋಗುವುದಕ್ಕೂ ಅಣ್ಣಾಮಲೈ ಕಾರಣರಾದರು. ಈಗ ಎಐಎಡಿಎಂಕೆ ಮತ್ತೆ ಬಿಜೆಪಿ ಜೊತೆ ಸೇರಿದೆ. ಅಣ್ಣಾಮಲೈ ರಾಜ್ಯಾಧ್ಯಕ್ಷ ಹುದ್ದೆಯಿಂದ ಕೆಳಗಿಳಿದಿದ್ದಾರೆ. ಆದರೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯಲ್ಲಿ ಬಹಳ ಪ್ರಭಾವಿಯಾಗಿದ್ದಾರೆ.

ಸುಹೈಲ್ ಅಹ್ಮದ್ ಪ್ರಕರಣ

ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಅಸಿಸ್ಟೆಂಟ್ ಕಮಾಂಡೆಂಟ್ ಆಗಿದ್ದ ಯುವ ಪೊಲೀಸ್ ಅಧಿಕಾರಿ ಸುಹೈಲ್ ಅಹ್ಮದ್ 2023ರ ನವೆಂಬರ್ 26ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಸಂವಿಧಾನದ ತತ್ವಗಳು ಅಪಾಯದಲ್ಲಿವೆ ಎಂದು ಅವರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಪ್ರಸ್ತಾಪಿಸಿದ್ದರು. ಸಂವಿಧಾನದ ಕಾಯಕಲ್ಪ ಕಾರ್ಯಕ್ಕಾಗಿ ರಾಜೀನಾಮೆ ನೀಡುತ್ತಿದ್ದೇನೆ. ಸಂವಿಧಾನದ ಕೊಡುಗೆಯಾಗಿ ನೀಡಿದ್ದ ಹುದ್ದೆಯನ್ನು ದೇಶಕ್ಕೆ ಸಂವಿಧಾನ ಸಮರ್ಪಣೆಯಾದ ಈ ಮಹತ್ವದ ದಿನದಂದು ಸಮರ್ಪಿಸಿ ರಾಜೀನಾಮೆ ನೀಡುತ್ತಿದ್ದೇನೆ ಎಂದು ನವೆಂಬರ್ 26ರಂದು ಅವರು ಪತ್ರ ಬರೆದಿದ್ದರು.

ಅವರು ಮೈಸೂರು ಜಿಲ್ಲೆಯ ಹುಣಸೂರಿನವರು. ಕೃಷಿಕ ಕುಟುಂಬದ ಹಿನ್ನೆಲೆಯವರು. ಕಾನ್‌ಸ್ಟೇಬಲ್ ಹುದ್ದೆಯಲ್ಲಿದ್ದಾಗಲೇ ಅವರು ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ರಾಜ್ಯ ಮುಕ್ತ ವಿವಿಯಿಂದ ಪಡೆದರು. ಆನಂತರ ಬೇರೆ ಬೇರೆ ಇಲಾಖೆಯಲ್ಲಿ ಉದ್ಯೋಗಾವಕಾಶಗಳು ಸಿಕ್ಕಿದ್ದರೂ, ಅವರು ಪೊಲೀಸ್ ಇಲಾಖೆಯಲ್ಲೇ ಮುಂದುವರಿದಿದ್ದರು. ಕಾನ್‌ಸ್ಟೇಬಲ್ ಹುದ್ದೆಯಿಂದ ಇನ್‌ಸ್ಪೆಕ್ಟರ್, ಬಳಿಕ ಡಿವೈಎಸ್ಪಿಯಾಗಿ ಭಡ್ತಿ ಪಡೆದಿದ್ದರು.

ಈಗ ಅವರು ಸಾರ್ವಜನಿಕ, ಸಾಮಾಜಿಕ ಮತ್ತು ರಾಜಕೀಯ ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಜಾಪ್ರಭುತ್ವದ ಜೀವಾಳವೇ ಚಳವಳಿ ಎನ್ನುವ ಅವರು, ಅಂಥ ಚಳವಳಿ ಕಟ್ಟುವ ಕನಸು ಹೊಂದಿದ್ದಾರೆ.

ಗಿರೀಶ್ ಮಟ್ಟಣ್ಣನವರ್ ಪ್ರಕರಣ

ಕಲಬುರಗಿಯ ನರೋಣಾ ಠಾಣೆಯಲ್ಲಿ 2003ರಲ್ಲಿ ತಮ್ಮ 26ನೇ ವಯಸ್ಸಿನಲ್ಲಿ ಎಸ್‌ಐ ಆಗಿದ್ದ ಗಿರೀಶ್ ಮಟ್ಟಣ್ಣನವರ್, ಅದೇ ವರ್ಷ ಶಾಸಕರ ಭವನದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಿಂದ ದೊಡ್ಡ ಸುದ್ದಿಯಾಗಿದ್ದರು. ಭ್ರಷ್ಟ ರಾಜಕಾರಣಿಗಳ ವಿರುದ್ಧ ತಮ್ಮ ಹೋರಾಟ ಎಂದಿದ್ದರು. ಆ ಪ್ರಕರಣದ ಬಳಿಕ ಬಾಂಬ್ ಎಸ್‌ಐ ಎಂದೇ ಅವರು ಜನಪ್ರಿಯರಾಗಿದ್ದರು.

13 ವರ್ಷಗಳ ಬಳಿಕ 2016ರಲ್ಲಿ ಈ ಪ್ರಕರಣದ ಅಂತಿಮ ತೀರ್ಪು ಪ್ರಕಟವಾಗಿತ್ತು. ನಗರದ 66ನೇ ಸಿವಿಲ್ ಹಾಗೂ ಸೆಷೆನ್ಸ್ ಕೋರ್ಟ್, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣನವರ್ ಸೇರಿ ಮೂವರು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಆ ಪ್ರಕರಣದ ಬಳಿಕ ಪೊಲೀಸ್ ಇಲಾಖೆಯಿಂದ ಹೊರಬಂದಿದ್ದ ಗಿರೀಶ್ ಮಟ್ಟಣ್ಣನವರ್ ಪತ್ರಿಕೋದ್ಯಮ, ಯುವಜನ ಸಂಘಟನೆ, ಬಿಜೆಪಿ ಯುವಮೋರ್ಚಾದಲ್ಲಿ ತೊಡಗಿಸಿಕೊಂಡಿದ್ದರು. ಆರೆಸ್ಸೆಸ್ ಹಿನ್ನೆಲೆಯಿಂದ ಬಂದ ಮಟ್ಟಣ್ಣನವರ್ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದರು. ಧರ್ಮಸ್ಥಳದ ಸೌಜನ್ಯಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈಚೆಗೆ ಯೂಟ್ಯೂಬರ್ ಸಮೀರ್ ವಿವರವಾಗಿ ಮಾಡಿದ್ದ ವೀಡಿಯೊ ಸುದ್ದಿಯಾದಾಗ, ಸಮೀರ್ ಪರ ನಿಲ್ಲುವ ಮೂಲಕ ಮಟ್ಟಣ್ಣನವರ್ ಗಮನ ಸೆಳೆದಿದ್ದರು.

ಬಿ.ಸಿ. ಪಾಟೀಲ್ ಪ್ರಕರಣ

ಪೊಲೀಸ್ ಹುದ್ದೆಯಲ್ಲಿದ್ದ ಬಿ.ಸಿ. ಪಾಟೀಲ್ ಅದೇ ಹೊತ್ತಲ್ಲಿ ಸಿನೆಮಾದಲ್ಲಿ ನಟನೆ ಮೂಲಕ ಹೆಸರು ಗಳಿಸಿದರು. ಸರಕಾರಿ ಉದ್ಯೋಗದಲ್ಲಿರುವವರು ಸಿನೆಮಾದಲ್ಲಿ ನಟಿಸುವಂತಿಲ್ಲ ಎಂಬ ಕಾನೂನು ಬಂದಾಗ, ಪೊಲೀಸ್ ಇಲಾಖೆ ಬಿಟ್ಟು, ಸಿನೆಮಾ ಕ್ಷೇತ್ರವನ್ನೇ ಆರಿಸಿಕೊಂಡರು. ಕಡೆಗೆ ರಾಜಕೀಯಕ್ಕೂ ಪ್ರವೇಶಿಸಿದರು. ಮೊದಲು ಕಾಂಗ್ರೆಸ್ ಸೇರಿದ ಅವರು 2019 ರಲ್ಲಿ ಬಿಜೆಪಿ ಸೇರಿದರು. ಶಾಸಕ, ಮಂತ್ರಿಯೂ ಆದರು. ಈಗ ಮಾಜಿ ಶಾಸಕರಾಗಿದ್ದಾರೆ.

ಚಿರಂಜೀವಿ ಸಿಂಗ್ ಪ್ರಕರಣ

ಪಂಜಾಬ್‌ನಿಂದ ಐಎಎಸ್ ಅಧಿಕಾರಿಯಾಗಿ ಕರ್ನಾಟಕಕ್ಕೆ ಬಂದಿದ್ದ ಚಿರಂಜೀವಿ ಸಿಂಗ್ ಅಚ್ಚಕನ್ನಡಿಗರೇ ಆಗಿಬಿಟ್ಟಿದ್ದರು. ಅವರು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಪ್ರೊಬೇಷನರ್ ಆಗಿ ಕರ್ನಾಟಕದ ಬಳ್ಳಾರಿಯಲ್ಲಿ ಕಾರ್ಯ ಆರಂಭಿಸಿದ ಅವರು, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರ್ನಾಟಕದ ಹಲವು ಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು.

1984ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ನಂತರ ದೇಶಾದ್ಯಂತ ಸಿಖ್ ವಿರೋಧಿ ಗಲಭೆಗಳಾದಾಗ, ಅದನ್ನು ವಿರೋಧಿಸಿ ಸಿಖ್ ಅಧಿಕಾರಿಗಳು ರಾಜೀನಾಮೆ ಕೊಡಲಾರಂಭಿಸಿದ್ದರು. ಅದರ ಭಾಗವಾಗಿ ಕರ್ನಾಟಕದಲ್ಲಿ ಚಿರಂಜೀವಿ ಸಿಂಗ್ ಕೂಡ ರಾಜೀನಾಮೆ ನೀಡಿದ್ದರಾದರೂ, ಮೂರು ತಿಂಗಳ ಬಳಿಕ ಅವರು ಆ ನಿರ್ಧಾರದಿಂದ ಹಿಂದೆ ಸರಿದು ಸೇವೆಗೆ ಮರಳಿದ್ದರು.

ಎನ್.ಬಿ. ಭಟ್ ಪ್ರಕರಣ

ನಿವೃತ್ತ ಐಪಿಎಸ್ ಅಧಿಕಾರಿ, ಮೂಲತಃ ದಕ್ಷಿಣ ಕನ್ನಡದವರಾದ ಎನ್.ಬಿ. ಭಟ್, ಗುಂಡೂರಾವ್ ಅವರು ಸಿಎಂ ಆಗಿದ್ದ ಕಾಲದಲ್ಲಿ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿದ್ದರು. ಆಗ ಗುಂಡೂರಾವ್ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವೆಯಾಗಿದ್ದ ರೇಣುಕಾ ರಾಜೇಂದ್ರನ್ ವಿರುದ್ಧ ಭ್ರಷ್ಟಾಚಾರ ಆರೋಪವೊಂದು ಸುತ್ತಿಕೊಂಡಿತ್ತು. ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ಒಬ್ಬ ಪೊಲೀಸ್ ಕಾನ್‌ಸ್ಟೇಬಲ್ ಕಡೆಯಿಂದ 25 ಸಾವಿರ ರೂ. ಪಡೆದು ಭ್ರಷ್ಟಾಚಾರ ಎಸಗಿದ್ದಾರೆ ಎಂಬ ಆರೋಪವಿತ್ತು. ಆ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಎನ್.ಬಿ. ಭಟ್, ದಿಲ್ಲಿಯಿಂದ ರೇಣುಕಾ ರಾಜೇಂದ್ರನ್ ಬೆಂಗಳೂರಿಗೆ ಮರಳಿದಾಗ ಬೆಂಗಳೂರು ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿ ವಿವಾದಕ್ಕೆ ಒಳಗಾಗಿದ್ದರು ಎನ್ನಲಾಗುತ್ತದೆ.

ಆಗ, ಅದು ತಮ್ಮ ಸರಕಾರಕ್ಕೆ ದೊಡ್ಡ ಮುಜುಗರ ಎಂದು ಭಾವಿಸಿದ ಗುಂಡೂರಾವ್ ಅವರು, ಇಂದಿರಾ ಗಾಂಧಿಯವರೊಡನೆ ಚರ್ಚಿಸಿ, ಅವರನ್ನು ಈಶಾನ್ಯ ರಾಜ್ಯಕ್ಕೆ ವರ್ಗಾಯಿಸುವ ಆದೇಶ ಹೊರಡುವಂತೆ ಮಾಡಿದ್ದರು. ಅದನ್ನು ಧಿಕ್ಕರಿಸಿ ಭಟ್ ಅವರು 1982ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು ಮತ್ತು ತಕ್ಷಣವೇ ಕಾನೂನು ವೃತ್ತಿಯಲ್ಲಿ ತೊಡಗಿಸಿಕೊಂಡ ಅವರು, ಹೈಕೋರ್ಟ್ ಮತ್ತು ಆಡಳಿತ ನ್ಯಾಯಮಂಡಳಿಗಳಲ್ಲಿ ವಕೀಲರಾಗಿ ಪ್ರಾಕ್ಟೀಸ್ ಮಾಡತೊಡಗಿದ್ದರು.

ಈಗಿನ ತಲೆಮಾರಿಗೆ ಬಹುತೇಕ ಗೊತ್ತಿಲ್ಲದಂತಾಗಿರುವ ಈ ಪ್ರಕರಣದ ಬಗ್ಗೆ ಹಿರಿಯ ಪತ್ರಕರ್ತ ಸಿ. ರುದ್ರಪ್ಪ ‘‘ರಾಜ್ಯದಲ್ಲಿ ಇಂಥ ಪ್ರಕರಣ ಬಹುಶಃ ಇದೇ ಮೊದಲನೆಯದು’’ ಎನ್ನುತ್ತಾರೆ.

ಅಧಿಕಾರಿಗಳು ಬಹಳ ಸಲ ವ್ಯವಸ್ಥೆಯ ಬಲಿಪಶುಗಳಾಗು ವುದು, ರಾಜಕಾರಣಿಗಳ ಕೈಗೊಂಬೆಯಾಗುವುದು ನಡೆಯುತ್ತದೆ. ಭ್ರಷ್ಟ ವ್ಯವಸ್ಥೆಯ ನಡುವೆ ಉತ್ತಮ ಮತ್ತು ದಕ್ಷ ಅಧಿಕಾರಿಗಳು ಪರಿತಪಿಸಬೇಕಾದ ಕಾಲವಿದು. ಎಷ್ಟೋ ಸಲ ಕರ್ತವ್ಯ ನಿಷ್ಠೆ ಮತ್ತು ಬದ್ಧತೆಯೇ ಹಲವರನ್ನು ಬಲಿ ತೆಗೆದುಕೊಂಡಿರುವ ಉದಾಹರಣೆಗಳೂ ದೇಶಾದ್ಯಂತ ಕಾಣಿಸುತ್ತವೆ. ಇಂಥ ಸ್ಥಿತಿಯಲ್ಲಿ ರಾಜಕಾರಣಿಗಳು, ಅಧಿಕಾರಸ್ಥರು ತಾವೇ ಎಲ್ಲವೂ ಆಗಿದ್ದೇವೆಂಬ ಭ್ರಮೆ ಬಿಟ್ಟು, ಅಧಿಕಾರಿಗಳನ್ನು ಸಜ್ಜನಿಕೆ ಮತ್ತು ಗೌರವಪೂರ್ವಕವಾಗಿ ನಡೆಸಿಕೊಳ್ಳುವುದು ಅಗತ್ಯ.

share
ಆರ್.ಜೀವಿ
ಆರ್.ಜೀವಿ
Next Story
X