ಪಟಾಕಿ ಉದ್ಯಮಕ್ಕೆ ಇನ್ನೆಷ್ಟು ಬಲಿ ಬೇಕು?

ಭಾರತದಲ್ಲಿ ಪಟಾಕಿ ತಯಾರಿಕೆ ದೊಡ್ಡ ಉದ್ಯಮವಾಗಿ ಹೇಗೆ ಬೆಳೆದಿದೆಯೋ ಹಾಗೆಯೆ, ಪಟಾಕಿ ಕಾರ್ಖಾನೆಗಳಲ್ಲಿನ ಸ್ಫೋಟ, ಕಾರ್ಮಿಕರ ಸಾವುಗಳು ಕೊನೆಗಾಣದ ಯಾತನೆಯೂ ಆಗಿದೆ. ದುರಂತದ ಛಾಯೆಯನ್ನು ಹೊತ್ತುಕೊಂಡೇ ಈ ಉದ್ಯಮ ಮುಂದುವರಿಯುತ್ತದೆ ಮತ್ತು ಪರಿಸರ ಕುರಿತ ಈಚಿನ ತೀವ್ರ ಕಳವಳಗಳ ಹೊರತಾಗಿಯೂ ಪಟಾಕಿ ಸುಡುವುದು ತಪ್ಪುವುದಿಲ್ಲ. ವರ್ಷವೂ ಕೋಟಿಗಟ್ಟಲೆ ಮೌಲ್ಯದ ಪಟಾಕಿಗಳನ್ನು ಸುಡಲಾಗುತ್ತದೆ. ಅಂದರೆ, ಹೇಗೆ ಸಂಭ್ರಮ, ಸಂಪ್ರದಾಯ ಮತ್ತು ಧಾರ್ಮಿಕ ಭಾವನೆಯ ಹೆಸರಲ್ಲಿ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ನಿಷೇಧದ ಹೊರತಾಗಿಯೂ, ಹಸಿರು ಪಟಾಕಿಗಳನ್ನೇ ಬಳಸುವಂತೆ ನ್ಯಾಯಾಲಯಗಳು ಹೇಳಿರುವಾಗಲೂ, ಪರಿಸರಕ್ಕೆ ಮಾರಕವಾದ ಸಾಂಪ್ರದಾಯಿಕ ಪಟಾಕಿಗಳನ್ನೇ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಮಾರುಕಟ್ಟೆಗೆ ತರಲಾಗುತ್ತದೆ. ಜನರು ಅವುಗಳನ್ನೇ ಹುಡುಕಿಕೊಂಡು ಹೋಗುತ್ತಾರೆ. ಪಟಾಕಿ ಸುಟ್ಟು ಸಂಭ್ರಮಿಸುವ ಈ ವಿಚಿತ್ರ ಸನ್ನಿವೇಶದಲ್ಲಿ, ಪಟಾಕಿ ಕಾರ್ಖಾನೆಗಳಲ್ಲಿನ ಸ್ಫೋಟ, ಮೃತಪಟ್ಟ ಕಾರ್ಮಿಕರ ಕುಟುಂಬಗಳ ನೋವು ಕಾಣಿಸದೆ ಹೋಗುತ್ತದೆ ಮತ್ತು ಯಥಾಪ್ರಕಾರ ಅಪಾಯವನ್ನು ಬೆನ್ನಿಗೆ ಕಟ್ಟಿಕೊಂಡೇ ಅದೇ ಪಟಾಕಿ ಕಾರ್ಖಾನೆಗಳಲ್ಲಿ ದುಡಿಯುವುದೂ ಮುಂದುವರಿಯುತ್ತದೆ. ಸ್ಥಳೀಯ ಆರ್ಥಿಕತೆಗೆ ಸಹಾಯಕವಾಗಿದ್ದರೂ, ಸುರಕ್ಷತೆಗೆ ಸಂಬಂಧಿಸಿದ ಕಳವಳಗಳು ಕೂಡ ಅಷ್ಟೇ ದೊಡ್ಡ ಮಟ್ಟದಲ್ಲಿವೆ. ಬಾಲಕಾರ್ಮಿಕರ ಬಳಕೆ ಆರೋಪ, ನಿಷೇಧ ಕ್ರಮಗಳ ಹೊರತಾಗಿಯೂ ಅರಿವು ಮೂಡದೇ ಇರುವುದು ಇವೆಲ್ಲವೂ ಪಟಾಕಿ ಉದ್ಯಮದ ಜೊತೆಜೊತೆಗೇ ಕಾಣುವ ಕಟು ವಾಸ್ತವ.
ಭಾರತದಲ್ಲಿ ಪಟಾಕಿ ಕಾರ್ಖಾನೆಗಳಲ್ಲಿನ ಸ್ಫೋಟ ಮತ್ತು ಕಾರ್ಮಿಕರ ಸಾವುಗಳು ಮತ್ತೆ ಮತ್ತೆ ಸಂಭವಿಸುವ ದುರಂತಗಳಾಗಿವೆ. ಈ ವರ್ಷದ ಫೆಬ್ರವರಿಯಲ್ಲಿ ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ಸಮರ್ಲಕೋಟ ಮಂಡಲದ ವೆಟ್ಲಪಲೆಂ ಗ್ರಾಮದಲ್ಲಿ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, ಕನಿಷ್ಠ 20 ಜನ ಸಾವನ್ನಪ್ಪಿದ್ದರು. ಬಳಿಕ ಇದೇ ಎಪ್ರಿಲ್ ತಿಂಗಳಲ್ಲಿ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಪಟಾಕಿ ತಯಾರಿಕಾ ಘಟಕದಲ್ಲಿ ಸಂಭವಿಸಿದ ಭಾರೀ ಸ್ಫೋಟಕ್ಕೆ ಕನಿಷ್ಠ 23 ಮಂದಿ ಬಲಿಯಾದರು. ಅದರ ಬೆನ್ನಲ್ಲೇ, ಕೇರಳದ ತ್ರಿಶೂರ್ ಪೂರಂ ಹಬ್ಬದ ಹೊತ್ತಲ್ಲಿ ತಿರುವಂಬಾಡಿ ದೇವಸ್ಥಾನಕ್ಕೆ ಸಂಬಂಧಿಸಿದ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ, 12 ಕಾರ್ಮಿಕರು ಮೃತಪಟ್ಟರು. ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟ ಸಂಭವಿಸುವುದು, ಕಾರ್ಮಿಕರು ಸಾಯುವುದು, ಆನಂತರವೂ ಅಪಾಯವನ್ನು ಎದುರಿಟ್ಟುಕೊಂಡೇ ಉದ್ಯಮ ಮುಂದುವರಿಯುವುದು ಒಂದು ವಿಚಿತ್ರ ಸ್ಥಿತಿ. ಸುರಕ್ಷತಾ ಕ್ರಮಗಳ ಬಗ್ಗೆ ಪ್ರತೀ ಸಲವೂ ಸ್ಫೋಟ ಸಂಭವಿಸಿದ ದಿನಗಳಲ್ಲಿ ಕಳವಳ ಮೂಡುತ್ತದೆ ಮತ್ತು ಅಷ್ಟೇ ಬೇಗ ಮರೆತೂಹೋಗುತ್ತದೆ.
ಭಾರತದಲ್ಲಿ ಪಟಾಕಿ ಉದ್ಯಮದ ವಹಿವಾಟು ದೊಡ್ಡದಿದೆ. ವಾರ್ಷಿಕವಾಗಿ ಆರೇಳು ಸಾವಿರ ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆಯುತ್ತದೆ. ಆಂಧ್ರ, ತೆಲಂಗಾಣ ಮತ್ತಿತರ ಕೆಲ ರಾಜ್ಯಗಳಲ್ಲಿ ಪಟಾಕಿ ತಯಾರಿಕೆ ನಡೆಯುತ್ತಿದ್ದರೂ, ಭಾರತದ ಪಟಾಕಿ ಉದ್ಯಮ ನಿಜವಾಗಿಯೂ ಕೇಂದ್ರೀಕೃತವಾಗಿರುವುದು ತಮಿಳುನಾಡಿನ ಶಿವಕಾಶಿಯಲ್ಲಿ. ತಮಿಳುನಾಡಿನ ವಿರುಧುನಗರ ಜಿಲ್ಲೆಯಲ್ಲಿ, ವಿಶೇಷವಾಗಿ ಶಿವಕಾಶಿ ಮತ್ತು ಸುತ್ತಮುತ್ತ ಪಟಾಕಿ ತಯಾರಿಕಾ ಘಟಕಗಳು ನೆಲೆಯೂರಿವೆ. ಶಿವಕಾಶಿ ಪ್ರಮುಖ ಪಟಾಕಿ ತಯಾರಿಕಾ ಹಬ್ ಆಗಿದ್ದು, 1,000ಕ್ಕೂ ಹೆಚ್ಚು ಉತ್ಪಾದನಾ ಘಟಕಗಳನ್ನು ಹೊಂದಿದೆ. ಶಿವಕಾಶಿ ದೇಶದಲ್ಲಿನ ಪಟಾಕಿ ಉತ್ಪಾದನೆಯ ಶೇ. 90ರಷ್ಟು ಪಾಲನ್ನು ಹೊಂದಿದೆ. ಇದು ವಿರುಧುನಗರ ಜಿಲ್ಲೆಯ ಸ್ಥಳೀಯ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತದೆ. ಈ ಉದ್ಯಮ ಸುಮಾರು 8 ಲಕ್ಷ ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗ ಒದಗಿಸುತ್ತದೆ. ಇಲ್ಲಿ ಸುಮಾರು 3,00,000 ಜನರು ನೇರವಾಗಿ ಮತ್ತು 5,00,000 ಜನರು ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ. ನೋಂದಾಯಿತ ಘಟಕಗಳಿರುವಂತೆ, ನೋಂದಣಿಯೇ ಇಲ್ಲದೆ ನಡೆಯುತ್ತಿರುವ ಘಟಕಗಳೂ ಸಾಕಷ್ಟಿವೆ ಎನ್ನಲಾಗುತ್ತದೆ. ಅಸಮರ್ಪಕ ಸುರಕ್ಷತಾ ಕ್ರಮಗಳು, ಅಪಾಯಕಾರಿ ಕೆಲಸದ ಪರಿಸ್ಥಿತಿಗಳು ಮತ್ತು ಮಾಲಿನ್ಯಕ್ಕೆ ಸಂಬಂಧಿಸಿದಂತೆ ಇರುವ ಕಳವಳಗಳು ದೊಡ್ಡ ಸವಾಲುಗಳಾಗಿವೆ.
ಭಾರತದಲ್ಲಿ, ದೀಪಾವಳಿ ಹೊತ್ತಲ್ಲಿ ಪಟಾಕಿಗಳ ಮೇಲೆಯೇ ಕೋಟಿಗಟ್ಟಲೆ ರೂ. ಖರ್ಚು ಮಾಡಲಾಗುತ್ತಿದೆ. ಸುಮಾರು ಶೇ. 70-80 ವಾರ್ಷಿಕ ಮಾರಾಟ ದೀಪಾವಳಿ ಸಮಯದಲ್ಲೇ ಆಗುತ್ತದೆ. 2025ರ ದೀಪಾವಳಿ ಹೊತ್ತಿನಲ್ಲಿ ರೂ. 7,000 ಕೋಟಿಗಳಷ್ಟು ದಾಖಲೆಯ ಮಾರಾಟವಿತ್ತೆಂದು ಅಂಕಿಅಂಶಗಳು ಹೇಳುತ್ತವೆ. 2024ರಲ್ಲಿ ಆದ ಮಾರಾಟ 6,000 ಕೋಟಿ ರೂ. ಮೌಲ್ಯದ್ದಾಗಿತ್ತು. ಈ ಉದ್ಯಮ ದಿಲ್ಲಿಯಂತಹ ಪ್ರದೇಶಗಳಲ್ಲಿನ ಪರಿಸರ ನಿರ್ಬಂಧಗಳು ಮತ್ತು ಪ್ರಾದೇಶಿಕ ನಿಷೇಧಗಳ ಹೊರತಾಗಿಯೂ ಬೃಹತ್ ಮಾರುಕಟ್ಟೆ ಹೊಂದಿದೆ ಎಂಬುದಕ್ಕೆ ಇದೇ ಸಾಕ್ಷಿ. 2025ರಲ್ಲಿ ದಾಖಲೆ ಮಟ್ಟದಲ್ಲಿ ಪಟಾಕಿ ಮಾರಾಟವಾಗಿದೆ. ದೀಪಾವಳಿ ಹೊತ್ತಲ್ಲಿ ದಿಲ್ಲಿಯೊಂದರಲ್ಲೇ ಜನರು ಸುಮಾರು 500 ಕೋಟಿ ರೂ. ಮೌಲ್ಯದ ಪಟಾಕಿಗಳನ್ನು ಸಿಡಿಸುತ್ತಾರೆ. ಬಿಹಾರದಂತಹ ನಿರ್ದಿಷ್ಟ ಪ್ರದೇಶಗಳಲ್ಲಿಯೂ, ಗ್ರಾಹಕರು ಪಟಾಕಿಗಳ ಮೇಲೆ ಸುಮಾರು 750 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ. ಅಂದರೆ, ಪ್ರತೀ ಮನೆಗಳಲ್ಲೂ ಸರಾಸರಿ 500 ರೂ. ಖರ್ಚು ಮಾಡಲಾಗಿತ್ತು. ಹಸಿರು ಪಟಾಕಿಗಳು ಮತ್ತು ನಿರ್ಬಂಧಗಳಿಗೆ ಒತ್ತು ನೀಡಿದ್ದರೂ, ಸಾಂಪ್ರದಾಯಿಕ ಪಟಾಕಿಗಳ ಬೇಡಿಕೆ ಕಡಿಮೆಯಾಗಿಲ್ಲ.
ಇಷ್ಟೆಲ್ಲದರ ನಡುವೆಯೂ, ಪರಿಸರ ಕಾಳಜಿಯನ್ನು ಮಾತ್ರವಲ್ಲ, ಅಪಾಯವನ್ನು ಕಡೆಗಣಿಸುತ್ತಲೇ ಉದ್ಯಮ ಮುಂದುವರಿದಿದೆ. ಶಿವಕಾಶಿ ಮಾತ್ರವಲ್ಲದೆ, ದೇಶದ ವಿವಿಧೆಡೆಗಳಲ್ಲಿನ ಪಟಾಕಿ ಕಾರ್ಖಾನೆಗಳಲ್ಲಿ ಸ್ಫೋಟಗಳು ಸಂಭವಿಸುತ್ತಲೇ ಇರುತ್ತವೆ, ಕಾರ್ಮಿಕರು ಬಲಿಯಾಗುತ್ತಲೇ ಇರುತ್ತಾರೆ. ತಮಿಳುನಾಡಿನ ಶಿವಕಾಶಿ ಪ್ರದೇಶದಲ್ಲಿ ಪಟಾಕಿ ಕಾರ್ಖಾನೆ ದುರಂತಗಳು ಪದೇ ಪದೇ ಸಂಭವಿಸುತ್ತಿರುತ್ತವೆ. ಕಳೆದ 10 ವರ್ಷಗಳಲ್ಲಿ, ಕಳಪೆ ಸುರಕ್ಷತಾ ಕ್ರಮ, ಅಕ್ರಮ ತಯಾರಿಕೆ ಮತ್ತು ಹೆಚ್ಚಿನ ಬೇಡಿಕೆಗಳಿಂದಾಗಿ ಇರುವ ಒತ್ತಡದ ಪರಿಣಾಮವಾಗಿ ನೂರಾರು ಕಾರ್ಮಿಕರು ಬಲಿಯಾಗಿದ್ದಾರೆ. ಈಗಾಗಲೇ ಗಮನಿಸಿದಂತೆ, ಈ ವರ್ಷದ ಇಷ್ಟೇ ಸಮಯದಲ್ಲಿ ಸಂಭವಿಸಿದ ಪ್ರಮುಖ ದುರಂತಗಳಲ್ಲಿ 20 ಜನರನ್ನು ಬಲಿ ತೆಗೆದುಕೊಂಡ ಆಂಧ್ರದ ಕಾಕಿನಾಡದಲ್ಲಿನ ಸ್ಫೋಟ, 23 ಕಾರ್ಮಿಕರ ಸಾವಿಗೆ ಕಾರಣವಾದ ತಮಿಳುನಾಡಿನ ವಿರುಧುನಗರ ಸ್ಫೋಟ, 12 ಜನರು ಸಾವನ್ನಪ್ಪಿದ ಕೇರಳದ ಪಟಾಕಿ ಕಾರ್ಖಾನೆ ಸ್ಫೋಟ ಸೇರಿವೆ.
2024ರಲ್ಲಿ ಮಧ್ಯಪ್ರದೇಶದ ಬೈರಾಗಢ ಗ್ರಾಮದ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 11 ಜನರು ಸಾವನ್ನಪ್ಪಿದ್ದರು. ಅದೇ ವರ್ಷ ತಮಿಳುನಾಡಿನ ವಿರುಧುನಗರದಲ್ಲಿನ ರಾಮುದೇವನ್‌ಪಟ್ಟಿಯಲ್ಲಿರುವ ಕಾರ್ಖಾನೆಯ ರಾಸಾಯನಿಕ ಮಿಶ್ರಣ ಕೊಠಡಿಯಲ್ಲಿ ಸ್ಫೋಟ ಸಂಭವಿಸಿ, 10 ಕಾರ್ಮಿಕರು ಸಾವನ್ನಪ್ಪಿದ್ದರು. 2023ರಲ್ಲಿ ಪಶ್ಚಿಮ ಬಂಗಾಳದ ಮೇದಿನಿಪುರದಲ್ಲಿ ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 11 ಜನರು ಸಾವನ್ನಪ್ಪಿದ್ದರು. ಅದೇ ವರ್ಷ ಬಂಗಾಳದಲ್ಲಿಯೇ ಉತ್ತರ 24 ಪರಗಣದ ದತ್ತಪುಕೂರ್‌ನಲ್ಲಿ ಅಕ್ರಮ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ 7 ಜನರು ಸಾವನ್ನಪ್ಪಿದ್ದರು. 2023 ರ ಅಕ್ಟೋಬರ್‌ನಲ್ಲಿ ಬೆಂಗಳೂರಿನ ಅತ್ತಿಬೆಲೆಯಲ್ಲಿ ಪಟಾಕಿ ಗೋದಾಮು ಮತ್ತು ಅಂಗಡಿಯಲ್ಲಿ ಸಂಭವಿಸಿದ ದೊಡ್ಡ ಬೆಂಕಿ ಅನಾಹುತದಲ್ಲಿ 14 ಜನರು ಸಾವನ್ನಪ್ಪಿದ್ದರು. ಅದೇ ಹೊತ್ತಲ್ಲಿ ತಮಿಳುನಾಡಿನ ವಿರುಧುನಗರದ ರಂಗಪಾಳಯಂ ಮತ್ತು ಕಿಚ್ಚನಾಯಕನಪಟ್ಟಿಯಲ್ಲಿ ನಡೆದ ಪ್ರತ್ಯೇಕ ಅಗ್ನಿ ಅವಘಡಗಳಲ್ಲಿ 14 ಕಾರ್ಮಿಕರು ಸಾವನ್ನಪ್ಪಿದ್ದರು. 2021ರಲ್ಲಿ ತಮಿಳುನಾಡಿನ ಸತ್ತೂರು ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 27 ಜನರು ಸಾವನ್ನಪ್ಪಿದ್ದರು. 2018ರಲ್ಲಿ ದಿಲ್ಲಿ ಪಟಾಕಿ ಗೋದಾಮಿನಲ್ಲಿ ಸ್ಫೋಟ ಸಂಭವಿಸಿ 17 ಜನರು ಮೃತಪಟ್ಟಿದ್ದರು. 2016ರಲ್ಲಿ ಶಿವಕಾಶಿಯ ಪಟಾಕಿ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 8 ಜನರು ಸಾವನ್ನಪ್ಪಿದ್ದರು. ಇವೆಲ್ಲ ಕೆಲವು ಘಟನೆಗಳು ಮಾತ್ರ. ಸುದ್ದಿಯಾಗದೇ ಇರಬಹುದಾದ ಹಲವಾರು ಸ್ಫೋಟಗಳು, ಸಾವುಗಳು ಸಂಭವಿಸುತ್ತಲೇ ಇರುತ್ತವೆನ್ನುವುದು ಕಟು ಸತ್ಯ.
ಅಂಕಿಅಂಶಗಳ ಪ್ರಕಾರ, 2011 ರಿಂದ 2024ರ ಅವಧಿಯಲ್ಲಿ ತಮಿಳುನಾಡಿನಲ್ಲಿ ಮಾತ್ರವೇ 200ಕ್ಕೂ ಹೆಚ್ಚು ಪಟಾಕಿ ಕಾರ್ಖಾನೆ ಸ್ಫೋಟಗಳು ಸಂಭವಿಸಿ, 379 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಕ್ರಮ ಮತ್ತು ಅಸುರಕ್ಷಿತ ತಯಾರಿಕೆಯೇ ಈ ದುರಂತಗಳಿಗೆ ಪ್ರಮುಖ ಕಾರಣ. ಪರವಾನಿಗೆಗಳು ಅಥವಾ ಅಗತ್ಯ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಯನಿರ್ವಹಿಸುವ ಅಕ್ರಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಘಟಕಗಳಲ್ಲಿ, ವಿಶೇಷವಾಗಿ ಪ್ರಮುಖ ನಗರ ಕೇಂದ್ರಗಳ ಹೊರಗೆ ಅನೇಕ ಘಟನೆಗಳು ಸಂಭವಿಸುತ್ತವೆ.
ಸ್ಫೋಟಕ್ಕೆ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡುವುದಾದರೆ,
ಸ್ಫೋಟಕಗಳ ಅತಿಯಾದ ಸಂಗ್ರಹಣೆ, ಕಚ್ಚಾ ವಸ್ತುಗಳ ಅಸಮರ್ಪಕ ನಿರ್ವಹಣೆ, ಪರವಾನಿಗೆ ಇಲ್ಲದೆ, ಮನೆಗಳಲ್ಲಿ ಅಥವಾ ಇಕ್ಕಟ್ಟಾದ ಸ್ಥಳಗಳಲ್ಲಿ ಪಟಾಕಿ ತಯಾರಿಕೆ, ಅಪಾಯಕಾರಿ ವಲಯಗಳಲ್ಲಿ ಅನುಮತಿಗಿಂತ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳುವುದು, ತರಬೇತಿಯಿಲ್ಲದ ಅರೆಕಾಲಿಕ ಕಾರ್ಮಿಕರ ನೇಮಕ, ಪಟಾಕಿ ಮದ್ದನ್ನು ಬೆರೆಸುವಾಗ, ತುಂಬುವಾಗ ಕಿಡಿ ಹೊತ್ತಿಕೊಳ್ಳುವುದು, ಸುರಕ್ಷಿತವಲ್ಲದ ಪೊಟ್ಯಾಸಿಯಂ ಕ್ಲೋರೇಟ್ ಅಥವಾ ಸಲ್ಫರ್ ಅನ್ನು ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸುವುದು -ಇವೆಲ್ಲವೂ ಪ್ರಮುಖ ಕಾರಣಗಳು. ಒಂದು ಸಣ್ಣ ತಪ್ಪು, ಸಣ್ಣ ನಿರ್ಲಕ್ಷ್ಯವೂ ದೊಡ್ಡ ಅನಾಹುತಕ್ಕೆ ಎಡೆಮಾಡಿಕೊಡಬಹುದು.
ಬಣ್ಣಕ್ಕಿಂತಲೂ, ಪಟಾಕಿ ಸಿಡಿಸುವಾಗ ಸದ್ದು ಬರಬೇಕೆಂಬುದಕ್ಕೆ ತಯಾರಿಕೆ ವೇಳೆ ಒತ್ತು ನೀಡುವುದರಿಂದ ಪಟಾಕಿ ದುರಂತಗಳು ಹೆಚ್ಚು ಎಂದು ವರದಿಗಳು ಹೇಳುತ್ತವೆ. ಇತ್ತೀಚೆಗೆ ಬಣ್ಣ ಹೊರಸೂಸುವ ಪಟಾಕಿಗಳ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದ್ದರೂ, ಉತ್ಸವ ಸ್ಥಳಗಳಲ್ಲಿ ಹೆಚ್ಚಿನ ಡೆಸಿಬಲ್ ಉಳ್ಳ ಪಟಾಕಿಗಳ ಬಗ್ಗೆ ಜನರಿಗೆ ಉತ್ಸಾಹ ಹೆಚ್ಚು. ಪೊಟ್ಯಾಸಿಯಂ ಕ್ಲೋರೇಟ್‌ನಂತಹ ನಿಷೇಧಿತ ವಸ್ತುಗಳ ಬಳಕೆಯೂ ಅಪಾಯವನ್ನು ಹೆಚ್ಚಿಸುತ್ತದೆ. ಆದರೆ, ಅದರ ಬದಲು ಪೊಟ್ಯಾಸಿಯಮ್ ನೈಟ್ರೇಟ್, ಇದ್ದಿಲು, ಸಲ್ಫರ್ ಮತ್ತು ಅಲ್ಯೂಮಿನಿಯಂ ಪುಡಿಯಂತಹ ಲೋಹದ ಪುಡಿಯನ್ನು ಬಳಸುವ ಕಡೆ ಗಮನ ಕೊಡಲಾಗುತ್ತಿದೆ ಎನ್ನಲಾಗುತ್ತದೆ. ಬಣ್ಣ ಹೊರಸೂಸುವ ಪಟಾಕಿ ಪ್ರದರ್ಶನದಿಂದ ಅಪಾಯ ಕಡಿಮೆ.
ಪಟಾಕಿ ಕಾರ್ಖಾನೆಗಳಲ್ಲಿ ಕಡ್ಡಾಯವಾಗಿ ಪಾಲಿಸಲೆಂದೇ ಕಟ್ಟುನಿಟ್ಟಾದ ನಿಯಮಗಳಿವೆ. ಪಟಾಕಿ ತಯಾರಿಕಾ ಕಾರ್ಖಾನೆಗಳಲ್ಲಿ ಸ್ಫೋಟಗಳು ಮತ್ತು ದುರಂತಗಳನ್ನು ತಡೆಯಲು ಕಟ್ಟುನಿಟ್ಟಾದ ಸುರಕ್ಷತಾ ಮಾನದಂಡಗಳನ್ನು ಪಾಲಿಸುವುದು ಅತ್ಯಗತ್ಯ.
ಪ್ರಮುಖ ಸುರಕ್ಷತಾ ನಿಯಮಗಳೆಂದರೆ,
ಪ್ರತಿ ಉತ್ಪಾದನಾ ಕೊಠಡಿಗಳ ನಡುವೆ ನಿಗದಿತ ಅಂತರವಿರಬೇಕು. ಒಂದೇ ಕಟ್ಟಡದಲ್ಲಿ ಹೆಚ್ಚು ರಾಸಾಯನಿಕಗಳನ್ನು ಸಂಗ್ರಹಿಸಬಾರದು, ಪ್ರತೀ ಕೋಣೆಯಲ್ಲೂ ಕಡ್ಡಾಯವಾಗಿ ತುರ್ತು ನಿರ್ಗಮನ ದ್ವಾರಗಳು ಇರಬೇಕು, ಕೆಲಸದ ಸ್ಥಳದಲ್ಲಿ ಉತ್ತಮ ಗಾಳಿ ಬೆಳಕಿನ ವ್ಯವಸ್ಥೆ ಇರಬೇಕು, ಇದು ಶಾಖವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಪಟಾಕಿ ಕಾರ್ಖಾನೆಗಳು ಜನವಸತಿ ಪ್ರದೇಶಗಳಿಂದ ದೂರವಿರಬೇಕು, ಪಟಾಕಿ ತಯಾರಿಕೆಯಲ್ಲಿ ಬಳಸುವ ರಾಸಾಯನಿಕಗಳ ಅಸಮರ್ಪಕ ಮಿಶ್ರಣ, ಘರ್ಷಣೆ ಮತ್ತು ಅತಿಯಾದ ಶಾಖದಿಂದ ಭೀಕರ ಸ್ಫೋಟಗಳು ಸಂಭವಿಸುತ್ತವೆ. ಆದ್ದರಿಂದ ಮಿಶ್ರಣ ಮಾಡುವಾಗ ಎಚ್ಚರ ವಹಿಸಬೇಕು, ಕೆಲಸಗಾರರು ಕಾರ್ಖಾನೆಗೆ ಪ್ರವೇಶಿಸುವ ಮೊದಲು ಹತ್ತಿ ಉಡುಪುಗಳನ್ನು ಧರಿಸಬೇಕು, ಪಟಾಕಿ ತಯಾರಿಸುವ, ನಿರ್ವಹಿಸುವ ಅಥವಾ ಸಂಗ್ರಹಿಸುವ ಸ್ಥಳಗಳಲ್ಲಿ ಮೊಬೈಲ್ ಫೋನ್, ರೇಡಿಯೊಗಳಂತಹ ಇಲೆಕ್ಟ್ರಾನಿಕ್ ಸಾಧನಗಳನ್ನು ಬಳಸಬಾರದು, ಮದ್ಯದ ಅಮಲಿನಲ್ಲಿರುವ ಕಾರ್ಮಿಕರನ್ನು ಕಾರ್ಖಾನೆಯೊಳಗೆ ಬಿಡುವಂತಿಲ್ಲ, ಕೇವಲ ಪರವಾನಿಗೆ ಪಡೆದ ಕಾರ್ಖಾನೆಗಳು ಮಾತ್ರ ಕಾರ್ಯನಿರ್ವಹಿಸಬೇಕು, ತರಬೇತಿ ಪಡೆಯದ ಕಾರ್ಮಿಕರನ್ನು ನೇಮಿಸಕೂಡದು. ಪರಿಸರ ಮತ್ತು ಆರೋಗ್ಯದ ಹಾನಿಯನ್ನು ಕಡಿಮೆ ಮಾಡಲು, ಹಸಿರು ಪಟಾಕಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು, ಕಚ್ಚಾ ವಸ್ತುಗಳು ಮತ್ತು ಸಿದ್ಧಪಡಿಸಿದ ಪಟಾಕಿಗಳನ್ನು ಸುರಕ್ಷಿತವಾಗಿ, ತೇವಾಂಶವಿಲ್ಲದ ಸ್ಥಳದಲ್ಲಿ ಸಂಗ್ರಹಿಸಬೇಕು.
ನಿಯಮಿತ ತಪಾಸಣೆಗಳನ್ನು ನಡೆಸಿ, ನಿಯಮ ಉಲ್ಲಂಘಿಸುವ ಕಾರ್ಖಾನೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯ.
ಸಂತ್ರಸ್ತರಿಗೆ ಕೇವಲ ಪರಿಹಾರ ಪಾವತಿಸುವುದು ಸಾಕಾಗುವುದಿಲ್ಲ ಎಂದು ಸತ್ಯಶೋಧನಾ ತಂಡಗಳು ಒತ್ತಿ ಹೇಳಿವೆ. ಭವಿಷ್ಯದ ಘಟನೆಗಳನ್ನು ತಡೆಗಟ್ಟಲು ನಿರ್ಲಕ್ಷ್ಯದ ಹೊಣೆಗಾರಿಕೆ ಮೇಲೆ ಕಾರ್ಖಾನೆ ಮಾಲಕರು ಮತ್ತು ಅಧಿಕಾರಿಗಳನ್ನು ಬಂಧಿಸಬೇಕೆಂದು ಅವು ಒತ್ತಾಯಿಸಿವೆ. ಸ್ಫೋಟಗಳ ನಂತರ ಕಾರ್ಖಾನೆಗಳು ಪದೇ ಪದೇ ಮುಚ್ಚಲ್ಪಡುವುದರಿಂದ, ಸಾವಿರಾರು ಕಾರ್ಮಿಕರು ಹೆಚ್ಚಾಗಿ ನಿರುದ್ಯೋಗಿಗಳಾಗಿ ಬಿಡುತ್ತಾರೆ. ಆದರೂ ಉಪಾಯವಿಲ್ಲದೆ ಅನೇಕರು ಅದೇ ಅಪಾಯಕಾರಿ ಕೆಲಸವನ್ನೇ ನೆಚ್ಚಿಕೊಳ್ಳುತ್ತಾರೆ. ಉದ್ಯಮದಲ್ಲಿನ ಪುನರ್ವಸತಿ ಪ್ರಯತ್ನಗಳಲ್ಲಿ ಮುಖ್ಯವಾಗಿ, ತಯಾರಿಕೆಯನ್ನು ಕೈಯಿಂದ ಮಾಡುವ ಬದಲು ಹೆಚ್ಚು ಯಾಂತ್ರಿಕಗೊಳಿಸುವ ಬಗ್ಗೆ ಗಮನ ಕೊಡಬೇಕು ಎನ್ನಲಾಗುತ್ತದೆ. ಹಿಂದಿನ ಕಾರ್ಖಾನೆ ಸ್ಫೋಟಗಳ ನಂತರ, ವರದಿಗಳು ಸಂತ್ರಸ್ತ ಕುಟುಂಬಗಳಿಗೆ ಸುಮಾರು 20 ಲಕ್ಷ ರೂ. ಪರಿಹಾರದ ಅಗತ್ಯವನ್ನು ಒತ್ತಿಹೇಳಿವೆ. ಅಲ್ಲದೆ, ಮೃತರ ಕುಟುಂಬ ಸದಸ್ಯರಿಗೆ ಪುನರ್ವಸತಿ ಉದ್ಯೋಗಗಳ ಅಗತ್ಯದ ಬಗ್ಗೆಯೂ ಹೇಳಿವೆ. ಸಂತ್ರಸ್ತರಿಗೆ ನ್ಯಾಯ ಮತ್ತು ಪುನರ್ವಸತಿ ಖಚಿತಪಡಿಸಿಕೊಳ್ಳಲು ಕಾರ್ಖಾನೆ ಮಾಲಕರನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಕಾರ್ಮಿಕರ ಸಂಘಗಳು ಒತ್ತಾಯಿಸಿವೆ.
ದೀಪಾವಳಿಯಂತಹ ಹಬ್ಬಗಳ ಸಮಯದಲ್ಲಿ ಹೆಚ್ಚಿನ ಮಾಲಿನ್ಯದ ಮಟ್ಟವೇ ಸರಕಾರದ ಮಧ್ಯಪ್ರವೇಶಕ್ಕೆ ಹಾಗೂ ಪಟಾಕಿಗಳ ಮಾರಾಟ, ಬಳಕೆ ಮೇಲೆ ನ್ಯಾಯಾಲಯದ ನಿರ್ಬಂಧಗಳಿಗೆ ಕಾರಣವಾಗಿದೆ. ಪಟಾಕಿ ದುರಂತಗಳಿಗೆ ಸಂಬಂಧಿಸಿದ ಇತ್ತೀಚಿನ ನ್ಯಾಯಾಲಯದ ತೀರ್ಪುಗಳು ಮತ್ತು ಕ್ರಮಗಳು, ಹೊಣೆಗಾರಿಕೆ ನಿಗದಿಪಡಿಸುವುದು, ಬಲಿಯಾದವರ ಕುಟುಂಬಗಳಿಗೆ ಪರಿಹಾರ ಹೆಚ್ಚಿಸುವುದು ಮತ್ತು ಉತ್ಪಾದನಾ ಘಟಕಗಳಲ್ಲಿ ಕಠಿಣ ಸುರಕ್ಷತಾ ಕ್ರಮ ಜಾರಿಗೊಳಿಸುವುದರ ಮೇಲೆ ಒತ್ತುನೀಡಿವೆ. 2025 ರಲ್ಲಿ ಪಟಾಕಿ ಸ್ಫೋಟದ ಸಂತ್ರಸ್ತರಿಗೆ ಮದ್ರಾಸ್ ಹೈಕೋರ್ಟ್ ಪರಿಹಾರ ಹೆಚ್ಚಿಸಿತು. ಅಲ್ಲದೆ, ಮಕ್ಕಳ ಶಿಕ್ಷಣಕ್ಕೆ ಬೆಂಬಲ ಮತ್ತು ಸಂತ್ರಸ್ತ ಕುಟುಂಬಗಳಿಗೆ ವಸತಿ ಭದ್ರತೆ ಸೇರಿದಂತೆ ಪುನರ್ವಸತಿ ಮಾನದಂಡ ರಚಿಸುವಂತೆ ತಮಿಳುನಾಡು ಸರಕಾರಕ್ಕೆ ಸೂಚಿಸಿತು. ಮಾಲಿನ್ಯವನ್ನು ಕಡಿಮೆ ಮಾಡಲು, ಸುಪ್ರೀಂ ಕೋರ್ಟ್ ಕೇವಲ ಹಸಿರು ಪಟಾಕಿಗಳ ಮಾರಾಟ ಮತ್ತು ಬಳಕೆಗೆ ಮಾತ್ರ ಅನುಮತಿ ನೀಡಿದೆ. ಅತ್ತಿಬೆಲೆ ದುರಂತದ ನಂತರ, ಪಟಾಕಿ ಮಾರಾಟಗಾರರಿಗೆ ಮುಂಗಡವಾಗಿ ಮತ್ತು ಮಿತಿ ಮೀರಿ ಪಟಾಕಿ ಸಂಗ್ರಹಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಕೊರೋನ ಸಮಯದಲ್ಲಿ ಕೆಲ ರಾಜ್ಯ ಸರಕಾರಗಳು ಪಟಾಕಿ ನಿಷೇಧಿಸಿದ್ದವು. ಇದನ್ನು ಹೈಕೋರ್ಟ್ ಪರಿಶೀಲಿಸಿ, ಹಸಿರು ಪಟಾಕಿಗಳ ಬಳಕೆಗೆ ಸೂಚನೆ ಕೊಟ್ಟಿತ್ತು. 2025ರ ಆರಂಭದಲ್ಲಿ, ಸುಪ್ರೀಂ ಕೋರ್ಟ್ ದಿಲ್ಲಿ-ಎನ್‌ಸಿಆರ್‌ನಲ್ಲಿ ಹಸಿರು ಪಟಾಕಿಗಳೂ ಸೇರಿ ಎಲ್ಲಾ ರೀತಿಯ ಪಟಾಕಿಗಳನ್ನು ಸಂಪೂರ್ಣ ವರ್ಷಪೂರ್ತಿ ನಿಷೇಧಿಸಿತ್ತು. ಉಲ್ಲಂಘಿಸಿದರೆ ನ್ಯಾಯಾಂಗ ನಿಂದನೆಯ ಕ್ರಮಕ್ಕೆ ಗುರಿಯಾಗುವ ಎಚ್ಚರಿಕೆಯನ್ನೂ ನೀಡಲಾಗಿತ್ತು. ಸುಪ್ರೀಂ ಕೋರ್ಟ್ ಪದೇ ಪದೇ ಪಟಾಕಿ ಉದ್ಯಮದ ಹಕ್ಕು ಮತ್ತು ಅದೇ ವೇಳೆ ಉತ್ತಮ ಪರಿಸರ ಮತ್ತು ಬದುಕಿನ ಹಕ್ಕು ಎರಡನ್ನೂ ಸಮತೋಲನಗೊಳಿಸಲು ಪ್ರಯತ್ನಿಸಿದೆ. ಅಪಾಯಕಾರಿ ಕೈಗಾರಿಕಾ ಘಟಕಗಳ ಮಾಲಕರು ಅಪಘಾತಗಳಿಗೆ ಸಂಪೂರ್ಣ ಹೊಣೆ ಹೊರಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನ್ಯಾಯಾಲಯಗಳು ನೀಡುತ್ತಲೇ ಬಂದಿವೆ.
ಸುಪ್ರೀಂ ಕೋರ್ಟ್ ಹಸಿರು ಪಟಾಕಿಗಳ ಬಳಕೆಗೆ ಅನುಮತಿ ನೀಡಿದ ನಂತರ, ಶಿವಕಾಶಿ ಪಟಾಕಿ ತಯಾರಕರು 2018ರಲ್ಲಿ ಸುಮಾರು ಆರು ತಿಂಗಳ ಕಾಲ ಪ್ರತಿಭಟಿಸಿದ್ದರು. ನಂತರ ಮೇ 2019ರಲ್ಲಿ ಪ್ರತಿಭಟನೆ ಕೈಬಿಟ್ಟು ಉತ್ಪಾದನೆ ಪುನರಾರಂಭಿಸಿದರು ಎಂದು ವರದಿ ಹೇಳುತ್ತದೆ.
ಭಾರತದಲ್ಲಿ ಪಟಾಕಿಗಳ ಬಳಕೆಯನ್ನು ಧಾರ್ಮಿಕ ಆಚರಣೆಗಳೊಂದಿಗೆ ಬೆಸೆಯಲಾಗಿದೆ ಎಂಬ ಮತ್ತೊಂದು ಆಯಾಮವನ್ನು ನೋಡಬೇಕು. ಆದರೆ, ಯಾವುದೇ ಧರ್ಮ ಮಾಲಿನ್ಯವನ್ನು ಒಪ್ಪುವುದಿಲ್ಲ ಮತ್ತು ಆರೋಗ್ಯ ಕಾಳಜಿಯ ಮುಂದೆ ಪಟಾಕಿಗಳನ್ನು ಸಿಡಿಸುವ ಅಭ್ಯಾಸ ಗೌಣ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಭಾರೀ ವಿವಾದಗಳಿಗೆ ಕಾರಣವಾಯಿತು. ಆದರೆ, ಇಲ್ಲಿ ಜೀವನದ ಪ್ರಶ್ನೆಯಿದೆ ಎನ್ನುವುದು ಮುಖ್ಯ. ಪರಿಸರ ಕಾನೂನುಗಳ ಉಲ್ಲಂಘನೆಯಾದಾಗ, ಎಲ್ಲಾ ನ್ಯಾಯಾಲಯಗಳು ಶೂನ್ಯ ಸಹಿಷ್ಣುತೆ ಅಳವಡಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಅಭಯ್ ಎಸ್. ಓಕಾ ಆ ವಿವಾದದ ಹೊತ್ತಲ್ಲಿ ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ಪಟಾಕಿಗಳನ್ನು ಸಿಡಿಸುವುದು, ಧ್ವನಿವರ್ಧಕಗಳ ಬಳಕೆ ಮತ್ತು ನದಿಗಳಲ್ಲಿ ವಿಗ್ರಹಗಳನ್ನು ಮುಳುಗಿಸುವುದನ್ನು ಧಾರ್ಮಿಕ ಆಚರಣೆಯ ಆಧಾರದ ಮೇಲೆ ಸಮರ್ಥಿಸಲಾಗುವುದಿಲ್ಲ ಎಂದು ಅವರು ಹೇಳಿದ್ದರು. ಏಕೆಂದರೆ ಯಾವುದೇ ಧರ್ಮ ಮಾನವರು, ಸಸ್ಯಗಳು ಮತ್ತು ಪ್ರಾಣಿಗಳ ಜೀವನದ ಮೇಲೆ ಪರಿಣಾಮ ಬೀರುವ ಮಾಲಿನ್ಯಕ್ಕೆ ಸಮ್ಮತಿ ನೀಡುವುದಿಲ್ಲ ಎಂದು ಓಕಾ ಹೇಳಿದ್ದರು. ಪರಿಸರದ ನಾಶವನ್ನು ಯಾವುದೇ ಧರ್ಮ ಕ್ಷಮಿಸುವುದಿಲ್ಲ ಎಂದಿದ್ದರು. ಧರ್ಮದ ಹೆಸರಿನಲ್ಲಿ ಪರಿಸರವನ್ನು ಹಾನಿಗೊಳಿಸುವ ಪ್ರವೃತ್ತಿ ಇದೆ. ಆದರೆ ನಾವು ಎಲ್ಲಾ ಧರ್ಮಗಳ ತತ್ವಗಳನ್ನು ಪರಿಶೀಲಿಸಿದರೆ, ಪ್ರತಿಯೊಂದು ಧರ್ಮ ಪರಿಸರವನ್ನು ರಕ್ಷಿಸಲು ಮತ್ತು ಜೀವಿಗಳಿಗೆ ಕರುಣೆ ತೋರಿಸಲು ನಮಗೆ ಕಲಿಸುತ್ತದೆ ಎಂಬುದು ತಿಳಿಯುತ್ತದೆ. ಹಬ್ಬಗಳನ್ನು ಆಚರಿಸುವಾಗ ಪರಿಸರವನ್ನು ನಾಶಮಾಡಲು ಅಥವಾ ಪ್ರಾಣಿಗಳ ಪಾಲಿಗೆ ವಾತಾವರಣ ಅಪಾಯಕಾರಿಯಾಗುವಂತೆ ಮಾಡಲು ಯಾವುದೇ ಧರ್ಮ ಅವಕಾಶ ನೀಡುವುದಿಲ್ಲ ಎಂದಿದ್ದರು. ಓಕಾ ಅವರ ಈ ಮಾತು ಇವತ್ತು ಅಪಾಯಕಾರಿ ಮಾಲಿನ್ಯಮಟ್ಟವನ್ನು ಎದುರಿಸುತ್ತಿರುವ ಹೊತ್ತಲ್ಲಿ ಎಲ್ಲರೂ ನಿಜವಾಗಿಯೂ ಪಾಲಿಸಬೇಕಾದ ತತ್ವದಂತಿದೆ.






