Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ‘ಗ್ರೇಟರ್ ಬೆಂಗಳೂರು’ ಸಾಧಿಸಿದ್ದೇನು?...

‘ಗ್ರೇಟರ್ ಬೆಂಗಳೂರು’ ಸಾಧಿಸಿದ್ದೇನು? ಸಾಧಿಸಬೇಕಾಗಿರುವುದೇನು?

ಆರ್.ಜೀವಿಆರ್.ಜೀವಿ23 Sept 2025 2:38 PM IST
share
‘ಗ್ರೇಟರ್ ಬೆಂಗಳೂರು’ ಸಾಧಿಸಿದ್ದೇನು? ಸಾಧಿಸಬೇಕಾಗಿರುವುದೇನು?

ಬೆಂಗಳೂರು ಯಾರಿಗೂ ಬೇಡವಾಗುತ್ತಿದೆಯೆ? ಇಂಥದೊಂದು ಪ್ರಶ್ನೆ ಎದ್ದಿದೆ. ಉದ್ಯಮಗಳು ಇಲ್ಲಿಂದ ದೂರ ಸರಿಯುವ ಸೂಚನೆಗಳು ಕೂಡ ಆಗಾಗ ಮುನ್ನೆಲೆಯಲ್ಲಿರುತ್ತವೆ. ಉದ್ಯಮಗಳ ವಿಷಯ ಹಾಗಿರಲಿ, ಜನಜೀವನವೇ ನಿತ್ಯ ನರಕ ಅನುಭವಿಸುವ ಸ್ಥಿತಿ ಒಂದು ಕಾಲದ ಉದ್ಯಾನನಗರಿಯಲ್ಲಿದೆ. ಹೇಳಿಕೊಳ್ಳುವುದಕ್ಕೇನೋ ಬೆಂಗಳೂರು ದೇಶದ ಪೋಸ್ಟರ್ ಸಿಟಿ. ಆದರೆ ಭಾರತದ ಬಹುತೇಕ ಎಲ್ಲ ನಗರಗಳನ್ನು ಕಾಡುತ್ತಿರುವ ವಿಫಲ ಪೌರಾಡಳಿತ ಬೆಂಗಳೂರನ್ನು ಕೂಡ ಬಿಟ್ಟಿಲ್ಲ.

ಸರಕಾರಗಳೇನೋ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ದೊಡ್ಡ ಮಾತುಗಳನ್ನೇ ಹೇಳುತ್ತವೆ. ಬಿಬಿಎಂಪಿ ಕಾಲ ಮುಗಿದು ಬೆಂಗಳೂರು ಈಗ ಗ್ರೇಟರ್ ಬೆಂಗಳೂರು ಆಗುತ್ತಿದೆ. ಆದರೆ ವಿಸ್ತರಿಸಿಕೊಳ್ಳುತ್ತಿರುವ, ಜನಸಂಖ್ಯೆ ವೇಗವಾಗಿ ವೃದ್ಧಿಸುತ್ತಿರುವ ಈ ನಗರದ ಮೂಲಭೂತ ಸೌಲಭ್ಯಗಳ ಅಸಲಿ ಕಥೆ ಏನು? ಏಕೆ ಜನರು ದಿನದ ಬಹುಸಮಯವನ್ನು ಟ್ರಾಫಿಕ್ ಜಾಮ್‌ನಲ್ಲಿಯೇ ಕಳೆಯಬೇಕಾಗಿದೆ? ರಸ್ತೆಗುಂಡಿಗಳು ಇನ್ನೆಷ್ಟು ಜೀವ ಬಲಿ ತೆಗೆದುಕೊಳ್ಳಬೇಕಾಗಿವೆ? ಒಂದು ಮಳೆಗೇ ಇಡೀ ನಗರ ಅಸ್ತವ್ಯಸ್ತವಾಗಿಬಿಡುವುದು ಏಕೆ? ಪ್ರತೀ ಬೇಸಿಗೆಯೂ ನೀರಿನ ಬರದ ದುಸ್ವಪ್ನದೊಂದಿಗೇ ಎದುರಾಗುವ ಸ್ಥಿತಿ ಏಕೆ ಇದೆ? ಸರಕಾರಗಳು ತರುವ ಸಾವಿರಾರು ಕೋಟಿಯ ಯೋಜನೆಗಳು ನಿಜವಾಗಿಯೂ ಬೆಂಗಳೂರನ್ನು ಉತ್ತಮಗೊಳಿಸುತ್ತಿವೆಯೆ? ಜನರ ಗೋಳು ಕೇಳುವವರು ಯಾರು?

ಭಾಗ - 1

ಮೊನ್ನೆಯ ಒಂದು ಸುದ್ದಿಯಿಂದಲೇ ಶುರು ಮಾಡೋಣ. ಲಾಜಿಸ್ಟಿಕ್ಸ್ ಸ್ಟಾರ್ಟ್ ಅಪ್ ಬ್ಲ್ಯಾಕ್‌ಬಕ್‌ನ ಸಿಇಒ ರಾಜೇಶ್ ಯಬಾಜಿ, ಬೆಳ್ಳಂದೂರಿನಿಂದ ಒಂಭತ್ತು ವರ್ಷಗಳಿಂದ ಇರುವ ಕಂಪೆನಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಬಗ್ಗೆ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು. ‘‘ಇಲ್ಲಿ ಮುಂದುವರಿಯುವುದು ಈಗ ತುಂಬಾ ಕಷ್ಟ. ನನ್ನ ಸಹೋದ್ಯೋಗಿಗಳ ಸರಾಸರಿ ಪ್ರಯಾಣದ ಅವಧಿ ಒಂದೂವರೆ ಗಂಟೆಗಳಿಗೂ ಹೆಚ್ಚಿದೆ. ರಸ್ತೆಗಳೆಲ್ಲ ಗುಂಡಿಗಳು ಮತ್ತು ಧೂಳಿನಿಂದ ತುಂಬಿವೆ. ಸರಿಪಡಿಸಲಾಗುತ್ತದೆ ಎಂಬ ಯಾವ ಭರವಸೆಯೂ ಉಳಿದಿಲ್ಲ’’ ಎಂದು ಬರೆದಿದ್ದರು.

ಈ ಪೋಸ್ಟ್‌ಗೆ ಬೆಂಗಳೂರಿನ ಜನರಿಂದ ವ್ಯಾಪಕ ಮಟ್ಟದಲ್ಲಿ ಪ್ರತಿಕ್ರಿಯೆಗಳು ಬಂದಿದ್ದವು. ಕೆಲವು ಉದ್ಯಮಿಗಳಿಂದಲೂ ಪ್ರತಿಕ್ರಿಯೆಗಳಿದ್ದವು. ‘‘ಬೆಂಗಳೂರಿನ ನಾಗರಿಕ ಮೂಲಸೌಕರ್ಯದ ಸ್ಥಿತಿ ಸರಕಾರದ ದೊಡ್ಡ ವೈಫಲ್ಯ’’ ಎಂದು ಇನ್ಫೋಸಿಸ್ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಮೋಹನ್ ದಾಸ್ ಪೈ ಹೇಳಿದ್ದರು. ರಾಜ್ಯ ಸರಕಾರ ತಕ್ಷಣ ಮಧ್ಯಪ್ರವೇಶಿಸುವಂತೆ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಒತ್ತಾಯಿಸಿದ್ದರು. ಬೆಂಗಳೂರಿನ ಮೂಲಸೌಕರ್ಯ ಬಿಕ್ಕಟ್ಟು ನೋಡಿದ ಜನರು ಸಣ್ಣ ನಗರಗಳ ಕಡೆ ಹೋಗುವ ನಿರ್ಧಾರ ಮಾಡುತ್ತಿರುವುದಾಗಿ ಬ್ಯಾಂಕರ್ ಸಾರ್ಥಕ್ ಅಹುಜಾ ಹೇಳಿದ್ದರು.

ಇದರ ಬೆನ್ನಲ್ಲೇ, ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ನವೆಂಬರ್ ಅಂತ್ಯದ ಗಡುವು ವಿಧಿಸಿರುವ ಸುದ್ದಿಯೂ ಬಂತು. ಆದರೆ ಅವರೊಂದು ಖಡಕ್ ಪ್ರತಿಕ್ರಿಯೆಯನ್ನೂ ಉದ್ಯಮಿಯ ತಕರಾರಿಗೆ ನೀಡಿದ್ದರು. ‘‘ರಾಜ್ಯ ಬಿಟ್ಟುಹೋಗುತ್ತೇವೆನ್ನುವ ಉದ್ಯಮಿಗಳು ಹೋಗಲಿ, ಅವರನ್ನು ತಡೆಯುವುದಿಲ್ಲ. ಆದರೆ ಸರಕಾರವನ್ನು ಬ್ಲ್ಯಾಕ್‌ಮೇಲ್ ಮಾಡುವುದು ಬೇಡ’’ ಎಂದಿದ್ದರು. ಡಿಸಿಎಂ ಹೀಗೆ ಹೇಳುತ್ತಿದ್ದಂತೆ, ಅದೇ ರಾಜೇಶ್ ಯಬಾಜಿ, ‘‘ಬೆಂಗಳೂರು ನಮ್ಮ ತವರು, ಬಿಟ್ಟುಹೋಗುವ ಮಾತೇ ಇಲ್ಲ’’ ಎಂದರು. ತಮ್ಮ ಲಾಭವನ್ನು ಮಾತ್ರ ನೋಡುವ ಕಾರ್ಪೊರೇಟ್‌ಗಳ, ತಾವಿಲ್ಲದೆ ಬೆಂಗಳೂರಿನಲ್ಲಿ ಬೆಳಗಾಗುವುದಿಲ್ಲ ಎನ್ನುವ ಮನಸ್ಥಿತಿಯವರ ಇಂಥ ಅಪಸ್ವರಗಳಿಗೆ ಸೊಪ್ಪುಹಾಕಬೇಕಿಲ್ಲ ಎಂಬ ಡಿಸಿಎಂ ನಿಲುವು ಖಂಡಿತ ಸರಿ. ಬೆಂಗಳೂರಿನ ಬಗ್ಗೆ ತಕರಾರೆತ್ತುವ ಅಂಥವರೆಲ್ಲ, ಬೆಂಗಳೂರಿಗೋಸ್ಕರ ತಾವೇನು ಕೊಟ್ಟಿದ್ದೇವೆ ಎಂದೂ ಕೇಳಿಕೊಳ್ಳಬೇಕಿದೆ. ಆದರೆ, ಸರಕಾರ ಬೆಂಗಳೂರಿನ ಬಗೆಗಿನ ಅಪಸ್ವರಗಳನ್ನು ಸಾರಾಸಗಟಾಗಿ ನಿರಾಕರಿಸಿ ನಿಲ್ಲುವುದಕ್ಕಾಗುವುದಿಲ್ಲ ಎಂಬುದು ಕೂಡ ಬಹಳ ದೊಡ್ಡ ವಿಷಯ. ಬೆಂಗಳೂರು ಬೆಳೆಯುತ್ತಿರುವಾಗ, ಅದರ ಸಮಸ್ಯೆಗಳು ಬೃಹದಾಕಾರವಾಗಿರುವಾಗ, ಪರಿಹಾರದ ಹಾದಿಗಳನ್ನು ಹುಡುಕುವ ನಿಟ್ಟಿನಲ್ಲಿ ರಾಜಕೀಯವನ್ನು ಮೀರಿದ ಇಚ್ಛಾಶಕ್ತಿ ಸರಕಾರಕ್ಕೆ ಬೇಕು. ಅದಿಲ್ಲದೆ ಹೋದರೆ, ಆಡುವವರ ಬಾಯಿ ಕಟ್ಟಲು ನೋಡುವುದರಲ್ಲಿ ಅರ್ಥವಿಲ್ಲ.

ಬೆಂಗಳೂರಿನ ಸಮಸ್ಯೆಗಳು ಮೇಲ್ನೋಟಕ್ಕೇ ದಿಗಿಲು ಬೀಳಿಸುವಷ್ಟಿವೆ. ಬೆಂಗಳೂರಿನ ಪ್ರಮುಖ ಸಮಸ್ಯೆಗಳೆಂದರೆ, ಮೂಲಭೂತ ಸೌಲಭ್ಯಗಳ ಕೊರತೆ, ವಿಪರೀತ ಸಂಚಾರ ದಟ್ಟಣೆ, ನೀರಿನ ಬಿಕ್ಕಟ್ಟು, ತ್ಯಾಜ್ಯ ನಿರ್ವಹಣೆ, ವಸತಿ ಸಮಸ್ಯೆಗಳು, ಕೆರೆಗಳ ಮಾಲಿನ್ಯ. ವೇಗವಾದ ನಗರೀಕರಣ ಮತ್ತು ಜನಸಂಖ್ಯೆಯಲ್ಲಿನ ತೀವ್ರ ಹೆಚ್ಚಳಕ್ಕೆ ಸಮನಾಗಿ ಮೂಲಸೌಕರ್ಯ ಅಭಿವೃದ್ಧಿ ಆಗುತ್ತಿಲ್ಲ.

ಮೊದಲನೆಯದಾಗಿ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಏಕೆ ಇಷ್ಟೊಂದು ಕೆಟ್ಟದಾಗಿದೆ? ರಸ್ತೆಗಳು ಮತ್ತು ಮೂಲಸೌಕರ್ಯಗಳಲ್ಲಿ ಸಾಕಷ್ಟು ವಿಸ್ತರಣೆಯಿಲ್ಲದಿರುವುದು ಇದಕ್ಕೆ ಕಾರಣ. ಮೆಟ್ರೊ ಇದ್ದರೂ ಟ್ರಾಫಿಕ್ ಸಮಸ್ಯೆಗೆ ಮಾತ್ರ ಮುಕ್ತಿ ಸಿಗುತ್ತಿಲ್ಲ. ಜನರ ಜೀವ ತಿನ್ನುವ ಮಟ್ಟಿಗೆ ಮೆಟ್ರೊ ಕಾಮಗಾರಿಯೇ ಒಂದು ಸಮಸ್ಯೆಯಾಗಿದೆ. ಮುಖ್ಯ ರಸ್ತೆಯ ಬಹುತೇಕ ಭಾಗ ಕಾಮಗಾರಿ ಉದ್ದೇಶಕ್ಕೇ ಬಳಕೆಯಾಗುತ್ತಿದ್ದು ವಾಹನಗಳು ಸುಗಮವಾಗಿ ಸಾಗಲು ಸಾಧ್ಯವಾಗದೆ ಇರುವುದರಿಂದಾಗಿ ಟ್ರಾಫಿಕ್ ಸಮಸ್ಯೆ ತೀವ್ರಗೊಳ್ಳುತ್ತಿದೆ. ದಿನದಿಂದ ದಿನಕ್ಕೆ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಲೇ ಇದೆ. ಜನರು ಪ್ರತೀದಿನ ಕನಿಷ್ಠ 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿಯೇ ಕಳೆಯಬೇಕಾಗಿದೆ. ಬೆಂಗಳೂರಿನಲ್ಲಿರುವ ಹೆಚ್ಚಿನ ವೃತ್ತಿಪರರು, ಕಚೇರಿಗೆ ಪ್ರಯಾಣಿಸಬೇಕಾದವರು ಇದೇ ರೀತಿಯ ಸವಾಲುಗಳನ್ನು ಎದುರಿಸುತ್ತಾರೆ. ದೇಶದಲ್ಲೇ ಅತ್ಯಂತ ಕೆಟ್ಟ ಸಂಚಾರ ದಟ್ಟಣೆಯನ್ನು ಹೊಂದಿರುವ ನಗರ ಎಂಬ ಅಪಖ್ಯಾತಿ ಕೂಡ ಬೆಂಗಳೂರಿಗೆ ಅಂಟಿದೆ. 2024ರ ಒಂದು ಸೂಚ್ಯಂಕದ ಪ್ರಕಾರ, ಬೆಂಗಳೂರು ವಿಶ್ವದಲ್ಲೇ ಮೂರನೇ ಅತಿ ಕೆಟ್ಟ ಸಂಚಾರ ದಟ್ಟಣೆ ಹೊಂದಿರುವ ನಗರವಾಗಿದೆ. ಜನರು ವರ್ಷಕ್ಕೆ ಸರಾಸರಿ 134 ಗಂಟೆಗಳ ಕಾಲ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಯೇ ಕಳೆಯಬೇಕಾಗಿದೆ ಎನ್ನಲಾಗುತ್ತದೆ. 2023ರ ಅಧ್ಯಯನದ ಪ್ರಕಾರ, ಸಂಚಾರ ದಟ್ಟಣೆಯಲ್ಲಿ ಜನರು ಕಳೆದುಕೊಳ್ಳುವ ಇಷ್ಟು ಸಮಯದಿಂದಾಗಿ ಪ್ರತೀ ವರ್ಷ 20,000 ಕೋಟಿ ರೂ.ಗಳನ್ನು ಬೆಂಗಳೂರು ಕಳೆದುಕೊಳ್ಳುತ್ತಿದೆ.

ಎರಡನೆಯದಾಗಿ, ಎಲ್ಲೆಲ್ಲೂ ವಾಹನಗಳು. ಬೆಂಗಳೂರಿನ ಜನಸಂಖ್ಯೆ 1.43 ಕೋಟಿಯಾಗಿದ್ದರೆ, 1.22 ಕೋಟಿ ವಾಹನಗಳು ಬೆಂಗಳೂರಿನೊಳಗೆ ಇನ್ನಿಲ್ಲದ ಒತ್ತಡ ಸೃಷ್ಟಿಸಿವೆ. 2025 ಜನವರಿ 30ರ ಹೊತ್ತಿಗೆ 1,22,37,854 ವಾಹನಗಳ ನೋಂದಣಿ ಆಗಿರುವುದಾಗಿ ವರದಿಗಳು ಹೇಳುತ್ತಿವೆ. ಕೇವಲ ಬೆಂಗಳೂರು ನಗರದ ವಾಹನಗಳಲ್ಲದೆ ದಿನವೂ ಬೆಂಗಳೂರು ನಗರಕ್ಕೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬಂದು ಹೋಗುವ ವಾಹನಗಳ ಸಂಖ್ಯೆಯೂ ಹೆಚ್ಚಾಗಿದೆ. ಇದು ಕೂಡ ಸಂಚಾರ ದಟ್ಟಣೆ ಉಂಟಾಗಲು ಪ್ರಮುಖ ಕಾರಣ. ಬೆಂಗಳೂರಿನ ಅನೇಕ ರಸ್ತೆಗಳು ಹಿಂದೆ ನಗರದ ಜನಸಂಖ್ಯೆ ತೀರಾ ಕಡಿಮೆ ಇದ್ದಾಗ ನಿರ್ಮಾಣಗೊಂಡವುಗಳಾಗಿವೆ. ಕೆಲ ಪ್ರದೇಶಗಳಲ್ಲಿನ ರಸ್ತೆಗಳಂತೂ ತೀರಾ ಕಿರಿದಾಗಿವೆ. ವಾಹನಗಳ ಸಂಖ್ಯೆ ರಸ್ತೆಗಳ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿರುವುದು ಮತ್ತು ಹೆಚ್ಚುತ್ತಿರುವ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಅಭಿವೃದ್ಧಿಯಾಗದೇ ಇರುವುದು ಸಂಚಾರ ದಟ್ಟಣೆಗೆ ಕಾರಣವಾಗುತ್ತದೆ. ಪೌರಸಂಸ್ಥೆಗಳು ಕೈಗೊಳ್ಳುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳು ದೀರ್ಘಾವಧಿಯಲ್ಲಿ ಸಂಚಾರ ಸುಗಮಗೊಳಿಸುವ ಉದ್ದೇಶವನ್ನು ಹೊಂದಿರುವುದೇನೋ ನಿಜ. ಆದರೆ, ಯೋಜನೆಗಳ ಪ್ರಗತಿಯ ಸಮಯದಲ್ಲಿ ಅವೇ ದೊಡ್ಡ ತೊಡಕುಗಳಾಗಿವೆ. 9 ಪ್ರಮುಖ ರಸ್ತೆಗಳಿಂದ ಬೆಂಗಳೂರು ಸುತ್ತುವರಿದಿದ್ದು, ಆ ರಸ್ತೆಗಳಲ್ಲಿ ಒಂದೆಡೆಯಿಂದ ಇನ್ನೊಂದೆಡೆ ಹೋಗಬೇಕಾದ ವಾಹನಗಳು ನಗರದ ಮಧ್ಯಭಾಗದಿಂದಲೇ ಹಾದು ಹೋಗುತ್ತವೆ. ಇದು ಕೂಡ ನಗರದ ಸಂಚಾರದ ದಟ್ಟಣೆಗೆ ಕಾರಣವಾಗಿದೆ. ಅನೇಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ನೆಲೆಯಾಗಿರುವ ಬೆಂಗಳೂರು, ಮೂಲಸೌಕರ್ಯ ನ್ಯೂನತೆಗಳನ್ನು ಪರಿಹರಿಸುವ ಒತ್ತಡದಲ್ಲಿದೆ. ಕಳಪೆ ರಸ್ತೆ, ಟ್ರಾಫಿಕ್ ಜಾಮ್ ಇವೆಲ್ಲವೂ ಉದ್ಯಮಗಳ ಮೇಲೆಯೂ ಪರಿಣಾಮ ಬೀರುತ್ತವೆ. ಅದರಲ್ಲೂ, ಹಲವಾರು ಐಟಿ ಪಾರ್ಕ್‌ಗಳನ್ನು ಹೊಂದಿರುವ ಔಟರ್ ರಿಂಗ್ ರಸ್ತೆಯಂಥ (ಒಆರ್‌ಆರ್) ನಿರ್ಣಾಯಕ ಮಾರ್ಗಗಳಲ್ಲಿ ನೇರ ಪರಿಣಾಮ ಉಂಟಾಗುತ್ತದೆ.

ಮೂರನೆಯದಾಗಿ, ರಸ್ತೆಗಳ ದುಸ್ಥಿತಿಯಂತೂ ಹೇಳತೀರದು. ಅಪಘಾತಗಳಿಗೆ ಕಾರಣವಾಗಿ, ಕೆಲವೊಮ್ಮೆ ಜೀವವನ್ನೂ ತೆಗೆಯುವ ರಸ್ತೆ ಗುಂಡಿಗಳದ್ದು ಬಹಳ ದೊಡ್ಡ ಸಮಸ್ಯೆ. ಮೊನ್ನೆ ಡಿ.ಕೆ. ಶಿವ ಕುಮಾರ್ ಅವರೆ ಹೇಳಿರುವ ಪ್ರಕಾರ, 7 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಲಾಗಿದ್ದು, ಇನ್ನೂ 5 ಸಾವಿರಕ್ಕೂ ಹೆಚ್ಚು ಗುಂಡಿಗಳನ್ನು ಮುಚ್ಚಬೇಕಾಗಿದೆ. ಈಗ ಅವರು ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ನವೆಂಬರ್ ತಿಂಗಳ ಗಡುವನ್ನೂ ನೀಡಿದ್ದಾರೆ.

ಇನ್ನು, ಬೆಂಗಳೂರನ್ನು ಬಹಳ ದೊಡ್ಡ ಮಟ್ಟದಲ್ಲಿ ಕಾಡುತ್ತಿರುವುದು, ಭವಿಷ್ಯದಲ್ಲಿಯೂ ಕಾಡಲಿರುವುದು ನೀರಿನ ಸಮಸ್ಯೆ. ಇನ್ನೊಂದೆಡೆ, ಕೊಳಚೆ ನೀರು ಮತ್ತು ತ್ಯಾಜ್ಯ ಕೆರೆಗಳನ್ನು ಕಲುಷಿತಗೊಳಿಸುತ್ತಿವೆ. ಅಲ್ಲದೆ, ಅಂತರ್ಜಲ ಮಟ್ಟ ಕುಸಿತ ಮತ್ತು ಅತಿಹೆಚ್ಚಿನ ಅಂತರ್ಜಲ ಹೊರತೆಗೆಯುವಿಕೆಯಿಂದ ಕೆರೆಗಳು ಒಣಗುತ್ತಿವೆ. ಆದರೆ, ಇನ್ನೊಂದೆಡೆ ಬೆಂಗಳೂರಿನಲ್ಲಿ ಮಳೆ ತಂದಿಡುವ ಅವಾಂತರಗಳಂತೂ ಜನರನ್ನು ಕಂಗೆಡಿಸಿಬಿಡುವಂಥವು. ಇದು ಕೊನೆಗಾಣದ ಸಮಸ್ಯೆಯಾಗಿಯೇ ಉಳಿದಿದೆ. ಬೇಸಿಗೆಯ ಮಳೆಗೂ ಇಡೀ ಬೆಂಗಳೂರು ಜಲಾವೃತಗೊಳ್ಳುವ ಸ್ಥಿತಿಯಿದೆ. ಒಂದೆರಡು ಗಂಟೆಯ ಮಳೆಯನ್ನು ಈ ನಗರ ತಡೆದುಕೊಳ್ಳುವುದಿಲ್ಲ ಎಂಬುದನ್ನು ಗಮನಿಸಿದರೆ, ಇಲ್ಲಿನ ಮೂಲಭೂತ ಸೌಕರ್ಯ ಯಾವ ಮಟ್ಟದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಪ್ರತೀ ವರ್ಷ ನಗರದಲ್ಲಿ ಪ್ರವಾಹ ಸ್ಥಿತಿ ತಲೆದೋರುವುದು ಸಾಮಾನ್ಯ ಲಕ್ಷಣವಾಗಿದೆ. ತ್ವರಿತ ಬೆಳವಣಿಗೆ ಅದರ ಮೂಲಸೌಕರ್ಯವನ್ನು ಕುಂಠಿತಗೊಳಿಸಿದೆ. ಯೋಜನಾಬದ್ಧವಲ್ಲದ ಅಭಿವೃದ್ಧಿ ನಾಗರಿಕ ಮೂಲಸೌಕರ್ಯದ ಮೇಲೆ ಒತ್ತಡ ಹೇರಿದೆ. ಕಳೆದ ನಾಲ್ಕು ದಶಕಗಳಲ್ಲಿ ನಗರ ತನ್ನ ಹಸಿರು ಹೊದಿಕೆಯ ಶೇ. 88ರಷ್ಟು ಭಾಗವನ್ನು ಕಳೆದುಕೊಂಡಿದೆ ಮತ್ತು ಕಾಂಕ್ರಿಟ್ ಪ್ರದೇಶಗಳು 11 ಪಟ್ಟು ಹೆಚ್ಚಾಗಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಅಧ್ಯಯನಗಳು ಹೇಳುತ್ತವೆ. ಈ ಬದಲಾವಣೆ ಮಳೆನೀರನ್ನು ಹೀರಿಕೊಳ್ಳುವ ನಗರದ ಸಾಮರ್ಥ್ಯವನ್ನು ಕಡಿಮೆ ಮಾಡಿದೆ. ಇದರಿಂದಾಗಿ ಬೆಂಗಳೂರಿನ ಶೇ. 85ಕ್ಕಿಂತ ಹೆಚ್ಚು ಭಾಗ ಪ್ರವಾಹಕ್ಕೆ ಒಳಗಾಗುತ್ತದೆ. ಕೆರೆಗಳನ್ನೇ ಅತಿಕ್ರಮಿಸಿ ಕಟ್ಟಡಗಳು ಎದ್ದಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ. ಜೊತೆಗೆ, ಚರಂಡಿಗಳು ಮುಚ್ಚಿಹೋಗಿರುವುದರಿಂದ ಮಳೆನೀರಿನ ಹರಿವಿಗೆ ಅಡ್ಡಿಯಾಗಿ, ಪ್ರವಾಹಕ್ಕೆ ಕಾರಣವಾಗಿದೆ. ಅಂದಿನಿಂದ ಇಂದಿನವರೆಗಿನ ಸರಕಾರಗಳು ಬೆಂಗಳೂರಿನ ಮಳೆಯ ಸಮಸ್ಯೆ, ರಾಜಕಾಲುವೆ ಒತ್ತುವರಿ ಪರಿಹಾರಕ್ಕೆ ವಸ್ತುನಿಷ್ಠ ಪ್ರಯತ್ನವನ್ನೇ ಮಾಡಲಿಲ್ಲ. ಯಾವ ಸರಕಾರ ಇದ್ದರೂ ಬೆಂಗಳೂರು ನಗರದ ಮಂದಿಗೆ ಮಳೆಗಾಲದ ಕಡುಕಷ್ಟ ತಪ್ಪುವುದಿಲ್ಲ. ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಮಳೆನೀರು ಹರಿದು ಹೋಗಬೇಕಾದ ರಾಜಕಾಲುವೆಗಳ ಸಂಪರ್ಕ ಕಡಿತವಾಗಿದೆ. ರಾಜಕಾಲುವೆಗಳನ್ನೇ ಅತಿಕ್ರಮಿಸಿ ಕಟ್ಟಡಗಳು ತಲೆ ಎತ್ತಿವೆ. ಆಗೀಗ ಅತಿಕ್ರಮಣ ತೆರವಿನ ಸದ್ದು ಕೇಳಿಸುತ್ತದೆ. ಅಷ್ಟೇ ಬೇಗ ಎಲ್ಲವೂ ಅಡಗಿಹೋಗುತ್ತವೆ. 2021ರ ಸಿಎಜಿ ವರದಿ ಪ್ರಕಾರ, 1800ರ ದಶಕದ ಆರಂಭದಲ್ಲಿ ಬೆಂಗಳೂರಿನಲ್ಲಿದ್ದ 1,452 ಜಲಮೂಲಗಳು 35 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದ್ದವು. 2016ರ ವೇಳೆಗೆ ಅವು 194ಕ್ಕೆ ಇಳಿದವು. ಬೆಂಗಳೂರಿನ ನೀರಿನ ಸಮಸ್ಯೆಗಳಿಗೆ ಸರಕಾರಗಳಷ್ಟೇ ಸಲ್ಲ, ನಾಗರಿಕರು ಕೂಡ ಹೊಣೆಯಾಗಬೇಕು. ವರದಿಗಳು ತೋರಿಸುವ ಪ್ರಕಾರ, ಕಳಪೆ ಯೋಜನೆ, ದೂರದೃಷ್ಟಿಯ ಕೊರತೆ ಎದ್ದು ಕಾಣಿಸುತ್ತವೆ. ನಾಗರಿಕರು ಸಹ ಅತಿಕ್ರಮಣ, ಜಲಮೂಲಗಳು ಮತ್ತು ಮಳೆ ನೀರಿನ ಚರಂಡಿಗಳ ಮಾಲಿನ್ಯ, ಅಕ್ರಮ ನಿರ್ಮಾಣಗಳ ವಿಷಯದಲ್ಲಿ ಹೆಚ್ಚಿನವುಗಳಿಗೆ ಹೊಣೆಯಾಗಿದ್ದಾರೆ.

ಆದರೆ, ಬೆಂಗಳೂರಿನ ಎಲ್ಲ ಸಮಸ್ಯೆಗಳ ಮೂಲ ಕಾರಣ ಜನಸಂಖ್ಯೆ ಹೆಚ್ಚಳ. 2011ರ ನಂತರ, ನಗರದ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ವರದಿಗಳು ಹೇಳುತ್ತವೆ. 2025ರ ಅಂದಾಜಿನ ಪ್ರಕಾರ ಬೆಂಗಳೂರಿನ ಮಹಾನಗರ ಪ್ರದೇಶದ ಜನಸಂಖ್ಯೆ 1,43,95,000. 2011ರ ಜನಗಣತಿಯ ಪ್ರಕಾರ ಬೆಂಗಳೂರು ನಗರ ಜಿಲ್ಲೆಯ ಒಟ್ಟು ಜನಸಂಖ್ಯೆ 96,21,551 ಇತ್ತು. 2024ರಲ್ಲಿದ್ದ ಜನಸಂಖ್ಯೆಗೆ ಹೋಲಿಸಿದರೆ 2025ರಲ್ಲಿ ಬೆಂಗಳೂರು ಜನಸಂಖ್ಯೆಯಲ್ಲಿ ಶೇ. 2.76 ಹೆಚ್ಚಳವಾಗಿದೆ. ಅಂದರೆ ಬೆಂಗಳೂರಿನಲ್ಲಿ ವಾಸವಿರುವ ಜನರ ಸಂಖ್ಯೆಗೂ ಇರುವ ಸೌಲಭ್ಯಗಳಿಗೂ ದೊಡ್ಡ ವ್ಯತ್ಯಾಸವಿದೆ. ರಸ್ತೆ, ಚರಂಡಿ ಹಾಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆಗಳ ಮೇಲೆ ತುಂಬಾ ಒತ್ತಡ ಬಿದ್ದಿದೆ. ರಸ್ತೆಗಳು ಸಾಮರ್ಥ್ಯ ಮೀರಿ ಹೆಚ್ಚು ಜನರನ್ನು ಸಾಗಿಸಬೇಕಾಗಿದೆ. ಹಾಗಾಗಿ ಎಲ್ಲೆಲ್ಲೂ ಸಂಚಾರ ದಟ್ಟಣೆ. ಚರಂಡಿಗಳು ಹಾಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಕೂಡ ಸಾಮರ್ಥ್ಯಕ್ಕೂ ಮೀರಿ ತ್ಯಾಜ್ಯ ಸಾಗಿಸಬೇಕಾಗಿದೆ. ಬಹಳಷ್ಟು ಕಡೆ ತ್ಯಾಜ್ಯ ಬಿದ್ದಲ್ಲೇ ಬಿದ್ದು ನಾರುತ್ತಿರುವುದೇ ಸಮಸ್ಯೆಯಾಗಿದೆ. ಅಂತಿಮವಾಗಿ ಅದು ಜನರ ಆರೋಗ್ಯವನ್ನು ಕಸಿಯುತ್ತದೆ.

ಬೆಂಗಳೂರಿನ ಜನಸಂಖ್ಯೆ 2031ರ ವೇಳೆಗೆ ಈಗಿರುವ 1.4 ಕೋಟಿಯಿಂದ 2 ಕೋಟಿಗೆ ತಲುಪುವ ನಿರೀಕ್ಷೆಯಿದೆ. ಆಗ, ಸಂಪನ್ಮೂಲಗಳು ಮತ್ತು ಮೂಲಸೌಕರ್ಯಗಳ ಮೇಲೆ ಹೆಚ್ಚಿನ ಒತ್ತಡ ಬೀಳುತ್ತದೆ. ಈ ದೊಡ್ಡ ಜನಸಂಖ್ಯೆಯ ಹೆಚ್ಚಳವನ್ನು ಪೂರೈಸಲು ನಗರ ಅಭಿವೃದ್ಧಿ ಹೊಂದಬೇಕು. ಇಲ್ಲದಿದ್ದರೆ ದೇಶಾದ್ಯಂತ ಉತ್ತಮ ತಂತ್ರಜ್ಞಾನ ಕೇಂದ್ರಗಳು ಹೊರಹೊಮ್ಮುತ್ತಿದ್ದಂತೆ ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ತನ್ನ ಐಕಾನಿಕ್ ಸ್ಥಾನಮಾನ ಕಳೆದುಕೊಳ್ಳಬಹುದು. ಅದರ ಐಕಾನಿಕ್ ಸ್ಥಾನಮಾನ ಪುನಃಸ್ಥಾಪಿಸಲು, ಸುಸ್ಥಿರ ನೀರು ನಿರ್ವಹಣೆ, ಮೂಲಸೌಕರ್ಯ ನವೀಕರಣಗಳು ಮತ್ತು ಸಾರ್ವಜನಿಕ ಸಾರಿಗೆ ಮೊದಲಾದವುಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಬೇಕು ಎಂದು ತಜ್ಞರು ಹೇಳುತ್ತಾರೆ. ತಜ್ಞರ ಪ್ರಕಾರ, ಕಳೆದ ಕೆಲ ದಶಕಗಳಲ್ಲಿ ನಿರ್ಮಾಣದ ಭರಾಟೆ ಕಂಡುಬಂದಿರುವುದರಿಂದ ದೀರ್ಘಾವಧಿಯ ಯೋಜನೆಯ ಕೊರತೆ ಸೇರಿದಂತೆ ಹಲವು ಅಂಶಗಳು ಸಮಸ್ಯೆ ತಂದಿಟ್ಟಿವೆ. ಖಾಸಗಿ ವಾಹನಗಳ ಬಳಕೆ ತಗ್ಗಿಸಿ, ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸುವಂತಹ ವ್ಯಾಪಕ ಕ್ರಮಗಳಿಂದ ಮಾತ್ರ ಸಂಚಾರ ದಟ್ಟಣೆ ನಿಭಾಯಿಸಬಹುದು ಎನ್ನುತ್ತಾರೆ.

share
ಆರ್.ಜೀವಿ
ಆರ್.ಜೀವಿ
Next Story
X