Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಪಂಚ ರಾಜ್ಯಗಳ ಪಟ್ಟ ಯಾರ್ಯಾರಿಗೆ?

ಪಂಚ ರಾಜ್ಯಗಳ ಪಟ್ಟ ಯಾರ್ಯಾರಿಗೆ?

ವಾರ್ತಾಭಾರತಿವಾರ್ತಾಭಾರತಿ7 April 2026 2:45 PM IST
share
ಪಂಚ ರಾಜ್ಯಗಳ ಪಟ್ಟ ಯಾರ್ಯಾರಿಗೆ?

ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿ ವಿಧಾನಸಭೆಗೆ ಈ ತಿಂಗಳು ಚುನಾವಣೆ ನಡೆಯುತ್ತಿದೆ. ಕೇರಳ, ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಚುನಾವಣೆಗೆ ಸಜ್ಜಾಗಿವೆ. ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಎ.9ಕ್ಕೆ, ತಮಿಳುನಾಡಿನಲ್ಲಿ ಎ.23ಕ್ಕೆ ಮತ್ತು ಪಶ್ಚಿಮ ಬಂಗಾಳದಲ್ಲಿ ಎ.23 ಮತ್ತು 29ರಂದು ಮತದಾನ ನಡೆಯಲಿದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ, 234 ಸದಸ್ಯ ಬಲದ ತಮಿಳುನಾಡಲ್ಲಿ ಡಿಎಂಕೆ ಮೈತ್ರಿಕೂಟ, 140 ಸದಸ್ಯ ಬಲದ ಕೇರಳದಲ್ಲಿ ಎಲ್‌ಡಿಎಫ್, 126 ಸದಸ್ಯ ಬಲದ ಅಸ್ಸಾಮಿನಲ್ಲಿ ಬಿಜೆಪಿ ಮತ್ತು 30 ಸದಸ್ಯ ಬಲದ ಪುದುಚೇರಿಯಲ್ಲಿ ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ ಅಧಿಕಾರದಲ್ಲಿವೆ. ಈಗ ಅಧಿಕಾರ ಉಳಿಸಿಕೊಳ್ಳುವ ಮತ್ತು ಅಧಿಕಾರ ಹಿಡಿಯುವ ಆಟದಲ್ಲಿ ಏನಾಗಲಿದೆ ಎನ್ನುವ ಕುತೂಹಲ ತೀವ್ರಗೊಂಡಿದೆ.

ಪಶ್ಚಿಮ ಬಂಗಾಳದ ಮೇಲೆ ಬಹಳ ಸಮಯದಿಂದ ಕಣ್ಣಿಟ್ಟುಕೊಂಡು ಬಂದಿರುವ ಬಿಜೆಪಿ ಈ ಸಲ ಮಮತಾ ಬ್ಯಾನರ್ಜಿಯವರಿಗೆ ದೊಡ್ಡ ಸವಾಲೊಡ್ಡುವಂತೆ ಕಾಣುತ್ತಿದೆ. ತಮಿಳುನಾಡು ಕೂಡ ಬಿಜೆಪಿಗೆ ದಕ್ಕದೇ ಉಳಿದಿರುವ ರಾಜ್ಯವಾಗಿದ್ದು, ಅದು ಮತ್ತೊಮ್ಮೆ ಎಐಎಡಿಎಂಕೆಯನ್ನು ಮುಂದಿಟ್ಟುಕೊಂಡು ಅವಕಾಶ ನೋಡುತ್ತಿದೆ. ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಸಾಂಪ್ರದಾಯಿಕ ಪೈಪೋಟಿಯನ್ನು ಮೀರಿ ಈ ಸಲ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕಣಕ್ಕಿಳಿದಿರುವುದು ಆಡಳಿತಾರೂಢ ಡಿಎಂಕೆಗೆ ಪ್ರಮುಖ ಸವಾಲಾಗಲಿದೆ. ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಪೈಪೋಟಿಯಿರುವ ಕೇರಳದಲ್ಲಿಯೂ ಬಿಜೆಪಿ ಅಧಿಕಾರಕ್ಕಾಗಿ ಶ್ರಮಿಸುತ್ತಿದೆ. ಕೇರಳದಲ್ಲಿ ಮಾತ್ರ ಪ್ರಾಬಲ್ಯವಿರುವ ಎಡರಂಗಕ್ಕೆ ಈ ಚುನಾವಣೆ ನಿರ್ಣಾಯಕ. ಅಸ್ಸಾಮಿನಲ್ಲಿ ಬಿಜೆಪಿ ಸತತ ಮೂರನೇ ಗೆಲುವಿನ ಕನಸು ಕಾಣುತ್ತಿದೆ. ಪುದುಚೇರಿಯಲ್ಲೂ ಎನ್‌ಡಿಎ ಅಧಿಕಾರ ಉಳಿಸಿಕೊಳ್ಳುವ ಯತ್ನ ನಡೆಸಿದೆ.

ಈ ಚುನಾವಣೆಗಳ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಬಣದ ಭವಿಷ್ಯದ ಪ್ರಶ್ನೆಯೂ ಇದೆ ಎಂಬುದು ಗಮನಿಸಬೇಕಿರುವ ಸಂಗತಿ.

ಪಶ್ಚಿಮ ಬಂಗಾಳ

ಇದು ಈ ಚುನಾವಣೆಯಲ್ಲಿ ತೀವ್ರ ಹೋರಾಟಕ್ಕೆ ಸಾಕ್ಷಿಯಾಗಲಿರುವ ರಾಜ್ಯ. ಎಸ್‌ಐಆರ್ ವಿರುದ್ಧದದ ಮಮತಾ ಬ್ಯಾನರ್ಜಿಯವರ ತೀವ್ರ ವಿರೋಧದ ನಡುವೆಯೂ ಎಸ್‌ಐಆರ್ ನಡೆದಿದ್ದು, ಶೇ.10ರಷ್ಟು ಮತದಾರರನ್ನು ಅಳಿಸಲಾಗಿದೆ. 2025ರ ಅಕ್ಟೋಬರ್ 25ಕ್ಕೆ ಮತದಾರರ ಪಟ್ಟಿಯಲ್ಲಿ 7,66,37,529 ಜನರಿದ್ದರು. ಎಸ್‌ಐಆರ್ ಬಳಿಕ ಮತದಾರರ ಸಂಖ್ಯೆ 6,44,52,609ಕ್ಕೆ ಕುಸಿದಿದೆ. ಈವರೆಗೆ 75 ಲಕ್ಷಕ್ಕೂ ಹೆಚ್ಚು ಮತದಾರರನ್ನು ತೆಗೆದುಹಾಕಲಾಗಿದೆ. ಚುನಾವಣೆ ಸಮೀಪದಲ್ಲಿದ್ದರೂ, ಲಕ್ಷಾಂತರ ಮತದಾರರು ತಮ್ಮ ಹಕ್ಕಿನ ಬಗ್ಗೆ ಖಾತರಿಯಿಲ್ಲದೆ ಅತಂತ್ರರಾಗಿದ್ದಾರೆ. ಎಸ್‌ಐಆರ್ ಮೂಲಕ ಮಹಿಳೆಯರು, ಮುಸ್ಲಿಮರು, ಆದಿವಾಸಿಗಳು ಹಾಗೂ ಇನ್ನಿತರ ಮತದಾರರನ್ನು ಚುನಾವಣಾ ಆಯೋಗ ತೆಗೆದುಹಾಕಿದೆ ಎಂದು ಟಿಎಂಸಿ ದೂರಿದೆ. ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಏನಾಗಲಿದೆ ಎಂಬ ಪ್ರಶ್ನೆಗೆ ಬಹುಶಃ ಈ ಎಸ್‌ಐಆರ್ ಪ್ರಕ್ರಿಯೆಯ ಆಳದಲ್ಲಿ ಉತ್ತರವಿದ್ದಂತಿದೆ. ಉಳಿದ ಕಡೆಗಳಿಗಿಂತಲೂ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಉಳಿಸಿಕೊಳ್ಳುವ ಮತ್ತು ಅಧಿಕಾರ ಕಸಿದುಕೊಳ್ಳುವ ಆಟ ಹೆಚ್ಚು ಜಿದ್ದಿನದ್ದಾಗಿದೆ.

ಒಂದೆಡೆ ಎಸ್‌ಐಆರ್ ಗದ್ದಲವಿದ್ದರೆ, ಮತ್ತೊಂದೆಡೆ ಅಧಿಕಾರ ವಿರೋಧಿ ಅಲೆಯೂ ಇದೆ. ಟಿಎಂಸಿ ಮೂರು ಅವಧಿಯಿಂದ ಅಧಿಕಾರದಲ್ಲಿದ್ದು, ಆಡಳಿತ ವಿರೋಧಿ ಅಲೆ ತಡೆಯಲು 74 ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ ಮತ್ತು 15 ಶಾಸಕರ ಕ್ಷೇತ್ರಗಳನ್ನು ಬದಲಿಸಿದೆ. ಭಾರತೀಯ ಗೂರ್ಖಾ ಪ್ರಜಾತಾಂತ್ರಿಕ್ ಮೋರ್ಚಾ(ಬಿಜಿಪಿಎಂ) ಡಾರ್ಜಿಲಿಂಗ್ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಟಿಎಂಸಿ ಮೈತ್ರಿಯಲ್ಲಿ ಸ್ಪರ್ಧಿಸುತ್ತಿದೆ. ಬಂಗಾಳಿ ಉಪರಾಷ್ಟ್ರೀಯತೆಯನ್ನು ಟಿಎಂಸಿ ಪ್ರಮುಖವಾಗಿ ಪ್ರತಿಪಾದಿಸುತ್ತಿದ್ದು, ಬಿಜೆಪಿಯನ್ನು ಹೊರಗಿನ ಪಕ್ಷ ಎನ್ನುತ್ತಿದೆ. ಪ್ರತಿಯಾಗಿ, ಅಕ್ರಮ ನುಸುಳುವಿಕೆ, ಮಹಿಳೆಯರ ಸುರಕ್ಷತೆ, ಕಾನೂನು ಸುವ್ಯವಸ್ಥೆ ಕುಸಿತ ಹಾಗೂ ರಾಜ್ಯದ ಹಲವು ಭಾಗಗಳಲ್ಲಿ ಜನಸಂಖ್ಯೆಯಲ್ಲಿ ಬದಲಾವಣೆ ಆಧರಿಸಿ, ಧರ್ಮದ ಆಧಾರದಲ್ಲಿ ಮತದಾರರನ್ನು ಧ್ರುವೀಕರಿಸಲು ಬಿಜೆಪಿ ಯತ್ನಿಸುತ್ತಿದೆ. ಟಿಎಂಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಅಕ್ರಮ ನುಸುಳುಕೋರರನ್ನು ಹೊರಹಾಕಲು ಎಸ್‌ಐಆರ್ ಮಾಡಲಾಗಿದೆ ಎಂದು ಬಿಜೆಪಿ ಹೇಳುತ್ತಿದೆ. ಹಿಂದೂಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ ಎನ್ನುವ ಕಥೆ ಕಟ್ಟಲಾಗಿದೆ. 2011ರ ಜನಗಣತಿ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯ ಹಿಂದೂಗಳ ಸಂಖ್ಯೆ ಶೇ.79.8, ಮುಸ್ಲಿಮರು ಶೇ.14.2 ಮತ್ತು ಇತರರು ಶೇ.6 ಇದ್ದಾರೆ. ಪಶ್ಚಿಮ ಬಂಗಾಳದ ಒಟ್ಟು ಜನಸಂಖ್ಯೆ 9.13 ಕೋಟಿಯಲ್ಲಿ ಮುಸ್ಲಿಮರ ಸಂಖ್ಯೆ 2.47 ಕೋಟಿ, ಅಂದರೆ ಶೇ.27 ರಷ್ಟು. ಹೀಗಿರುವಾಗ ದೇಶ ಇಲ್ಲವೇ ಬಂಗಾಳದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುವುದು ಹೇಗೆ ಎಂಬ ಪ್ರಶ್ನೆಯೂ ಇದೆ.

ಟಿಎಂಸಿ ಕಳೆದ 14 ವರ್ಷಗಳಿಂದ ಅಧಿಕಾರದಲ್ಲಿದೆ. ವಿರೋಧಿ ಅಲೆ ಮತ್ತು ಅತೃಪ್ತಿ ಇರಲೂಬಹುದು. ಟಿಎಂಸಿ ಈ ಸವಾಲನ್ನು ಎದುರಿಸುತ್ತಿದ್ದರೂ, ಮಹಿಳೆಯರ ಮೇಲಿನ ಹಿಂಸಾಚಾರದ ಘಟನೆಗಳು, ಶಿಕ್ಷಕರ ನೇಮಕಾತಿ ವಿಷಯ ಮತ್ತು ಇತ್ತೀಚೆಗೆ ಫುಟ್ಬಾಲ್ ಆಟಗಾರ ಮೆಸ್ಸಿ ಭೇಟಿಯ ಸಮಯದಲ್ಲಿ ನಡೆದ ವಿವಾದ ಆಡಳಿತಾರೂಢ ಟಿಎಂಸಿಯ, ಅದರಲ್ಲೂ ಮಮತಾ ಬ್ಯಾನರ್ಜಿಯ ವರ್ಚಸ್ಸನ್ನು ಸ್ವಲ್ಪಮಟ್ಟಿಗೆ ಕುಗ್ಗಿಸಿದೆ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಟಿಎಂಸಿ ತನ್ನ ಬೆಂಬಲ ನೆಲೆಯನ್ನು ಹಿಡಿದಿಟ್ಟುಕೊಳ್ಳಬಹುದೇ ಅಥವಾ ಬಿಜೆಪಿಯ ಕಡೆಗೆ ಮಾಪಕ ವಾಲುತ್ತದೆಯೇ ಎಂಬುದು ಈಗಿನ ಪ್ರಶ್ನೆ. ಬಿಜೆಪಿ ಶೇ. 38.1 ಮತಗಳೊಂದಿಗೆ 77 ವಿಧಾನಸಭಾ ಸ್ಥಾನಗಳನ್ನು ಗೆದ್ದು ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮುವಲ್ಲಿ ಯಶಸ್ವಿಯಾಗಿದ್ದರೂ, ಟಿಎಂಸಿಯನ್ನು ಸೋಲಿಸುವಂಥ ಹಂತಕ್ಕೆ ಬರಲು ಅದಕ್ಕಿನ್ನೂ ಸಾಧ್ಯವಾಗಿಲ್ಲ. ಕಾಂಗ್ರೆಸ್ ಮತ್ತು ಎಡರಂಗವನ್ನು ಬಹಳ ಹಿಂದಕ್ಕೆ ತಳ್ಳುವಲ್ಲಿ ಬಿಜೆಪಿ ಯಶಸ್ವಿಯಾಗಿದ್ದು, ಅವನ್ನು ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತಳ್ಳಿದೆ ಎಂಬುದು ನಿಜ. ಆದರೆ, ಬಿಜೆಪಿ ತಂತ್ರವನ್ನು ಅಂಥದ್ದೇ ಪ್ರತಿತಂತ್ರದಿಂದ ಯಶಸ್ವಿಯಾಗಿ ಮಣಿಸುತ್ತ ಬಂದಿರುವ ಮಮತಾ ಬ್ಯಾನರ್ಜಿ ಅವರ ಆಟ ಈ ಚುನಾವಣೆಯಲ್ಲೂ ನಡೆಯುವುದೇ ಎಂಬುದನ್ನು ನೋಡಬೇಕಿದೆ.

ವಿಧಾನಸಭೆ ಈಗಿನ ಬಲಾಬಲ: ಒಟ್ಟು ಸ್ಥಾನಗಳು 294. ಟಿಎಂಸಿ 213, ಬಿಜೆಪಿ 77, ಇತರರು 4.

ತಮಿಳುನಾಡು

ತಮಿಳುನಾಡು ರಾಜ್ಯ ಸಾಂಪ್ರದಾಯಿಕ ರಾಜಕೀಯ ಪ್ರತಿಸ್ಪರ್ಧಿಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ದ್ವಿಧ್ರುವಿ ಸ್ಪರ್ಧೆಗಳನ್ನು ಕಂಡಿದೆ. ಇದರ ನಡುವೆ, ದ್ರಾವಿಡ ತತ್ವದ ನೆಲೆಯಿಂದಾಗಿ ತನ್ನ ಪಾಲಿಗೆ ಅಭೇದ್ಯವಾಗಿ ಉಳಿದಿರುವ ಈ ರಾಜ್ಯದಲ್ಲಿ ಹಿಂದುತ್ವ ರಾಜಕೀಯದಾಟವಾಡಲು ಬಿಜೆಪಿ ನೋಡುತ್ತಿದೆ. ಅಲ್ಲದೆ ಇವೆರಡಕ್ಕೂ ಆಘಾತ ಕೊಡಲು ಈ ಬಾರಿ, ಹೊಸ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಕಣದಲ್ಲಿದೆ. ನಟ ವಿಜಯ್ ಆಡಳಿತಾರೂಢ ಡಿಎಂಕೆ ಸವಾಲಾಗಿರುವಂತಿದೆ. ಅವರು ಈಗಾಗಲೇ ಬಿಜೆಪಿಯನ್ನು ಸೈದ್ಧಾಂತಿಕ ಶತ್ರು ಮತ್ತು ಡಿಎಂಕೆಯನ್ನು ರಾಜಕೀಯ ಎದುರಾಳಿ ಎಂದು ಘೋಷಿಸಿದ್ದಾರೆ ಮತ್ತು ಸಮಾನತೆ, ಸಾಮಾಜಿಕ ನ್ಯಾಯ, ಮಹಿಳಾ ಸಬಲೀಕರಣ ಮತ್ತು ಜಾತಿ ಜನಗಣತಿ ಆಧಾರಿತ ನೀತಿಯನ್ನು ಪ್ರತಿಪಾದಿಸಿದ್ದು, ಭ್ರಷ್ಟಾಚಾರ ಮುಕ್ತ ರಾಜಕೀಯದ ಭರವಸೆ ನೀಡಿದ್ದಾರೆ. ಟಿವಿಕೆ ನಿಜವಾಗಿಯೂ ತಮಿಳುನಾಡಿನ ರಾಜಕೀಯ ಸಮೀಕರಣವನ್ನು ಬದಲಾಯಿಸಬಹುದೇ ಎಂಬುದು ಈಗಿನ ಕುತೂಹಲ. ಆದರೆ, ಕರೂರು ಕಾಲ್ತುಳಿತ ದುರಂತದಲ್ಲಿ 41 ಮಂದಿ ಸಾವು ಹಾಗೂ ಸಿಬಿಐ ತನಿಖೆ, ಕೊನೆಯ ಚಿತ್ರ ಜನನಾಯಕನ್ ಎದುರಿಸುತ್ತಿರುವ ಕಾನೂನು ಸಮಸ್ಯೆಗಳು, ಜನಸಂಪರ್ಕದ ಕೊರತೆ, ಎರಡನೇ ಹಂತದ ನಾಯಕರು ಮತ್ತು ತಳ ಮಟ್ಟದಲ್ಲಿ ಕಾರ್ಯಕರ್ತರ ಕೊರತೆ ಅವರಿಗೆ ಮುಳುವಾಗಿದೆ. ಪ್ರಸ್ತುತ, ಅವರು ಸೆಳೆಯುವ ದೊಡ್ಡ ಜನಸಮೂಹ ಅವರ ಮತದಾರರಾಗಿ ಬದಲಾಗುವ ಯಾವುದೇ ಖಾತರಿ ಇಲ್ಲವೆನ್ನಲಾಗುತ್ತಿದೆ.

ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಯಾವಾಗಲೂ ತಮಿಳುನಾಡಿನಲ್ಲಿ ಡಿಎಂಕೆ ಅಥವಾ ಎಐಎಡಿಎಂಕೆಗೆ ಸಾಥ್ ನೀಡುವುದಕ್ಕಷ್ಟೇ ಸೀಮಿತವಾಗಿವೆ. ಬಿಜೆಪಿ 1996ರಿಂದಲೂ ತಮಿಳುನಾಡಿನಲ್ಲಿ ಪರೀಕ್ಷೆಗೆ ಒಡ್ಡಿಕೊಳ್ಳುತ್ತಲೇ ಇದೆ. ಆದರೆ ದ್ರಾವಿಡ ತತ್ವದ ಮುಂದೆ ಬಿಜೆಪಿಯ ಹಿಂದುತ್ವದ ಅಸ್ತ್ರ ಪರಿಣಾಮ ಬೀರಿಲ್ಲ. ಕಟ್ಟರ್ ಭಾಷಾ ಪ್ರೇಮಿಗಳಾದ ತಮಿಳರು ಹಿಂದಿ ಹೇರಿಕೆ, ಒಕ್ಕೂಟ ವ್ಯವಸ್ಥೆಗೆ ಧಕ್ಕೆ, ಅಲ್ಪಸಂಖ್ಯಾತರ ವಿರುದ್ಧದ ದ್ವೇಷ ಹಾಗೂ ಕೋಮುವಾದಕ್ಕೆ ಸಮರ್ಥವಾಗಿ ಪ್ರತಿಕ್ರಿಯಿಸುತ್ತಲೇ ಬಂದಿದ್ದಾರೆ. ತಮಿಳುನಾಡಿನಲ್ಲಿ ಪ್ರಬಲ ನಾಯಕರಿಲ್ಲದಿರುವುದು ಕೂಡ ಬಿಜೆಪಿಯ ಬಲಹೀನತೆಯಾಗಿದೆ. ಡಿಎಂಕೆ ಅಥವಾ ಎಐಎಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ಹೆಚ್ಚಿನ ಸಂಖ್ಯೆಯ ಪ್ರಾದೇಶಿಕ ಪಕ್ಷಗಳಿವೆ. ರಾಜ್ಯದಲ್ಲಿನ ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶದಲ್ಲಿಯೇ ಅತಿ ಹೆಚ್ಚು, ಅಂದರೆ 97 ಲಕ್ಷಕ್ಕೂ ಹೆಚ್ಚು ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದ್ದು, ಇದು ಯಾವ್ಯಾವ ಪಕ್ಷಗಳಿಗೆ ಹೊಡೆತವಾಗಬಹುದು ಎಂಬುದನ್ನೂ ನೋಡಬೇಕಿದೆ. ಡಿಎಂಕೆ ಮತ್ತದರ ಮಿತ್ರಪಕ್ಷಗಳು ಮತ್ತೊಂದು ಗೆಲುವು ಸಾಧಿಸಬಹುದೇ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಎಐಎಡಿಎಂಕೆ ಆಟ ನಡೆಯುವುದೇ ಅಥವಾ ಹೊಸದಾಗಿ ಪ್ರವೇಶ ಪಡೆದ ಟಿವಿಕೆ ತಮಿಳುನಾಡಿನ ಸಮೀಕರಣಗಳನ್ನು ಬುಡಮೇಲು ಮಾಡುವುದು ಎಂಬುದು ಈಗಿನ ಕುತೂಹಲ.

ವಿಧಾನಸಭೆ ಈಗಿನ ಬಲಾಬಲ: ಒಟ್ಟು ಸ್ಥಾನಗಳು 234. ಡಿಎಂಕೆ 133, ಎಐಎಡಿಎಂಕೆ 66, ಕಾಂಗ್ರೆಸ್ 18, ಪಿಎಂಕೆ 5, ವಿಸಿಕೆ 4, ಬಿಜೆಪಿ 4, ಸಿಪಿಎಂ 2, ಸಿಪಿಐ 2.

ಕೇರಳ

ಎಲ್‌ಡಿಎಫ್ ಮತ್ತು ಯುಡಿಎಫ್ ನಡುವೆ ಸಾಂಪ್ರದಾಯಿಕ ಸ್ಪರ್ಧೆ ಇರುವ ಕೇರಳದಲ್ಲಿಯೂ ಬಿಜೆಪಿ ತುಂಬಾ ಶ್ರಮಿಸುತ್ತಿದೆ. ಪ್ರತೀ ಚುನಾವಣೆಯ ನಂತರ ಎರಡೂ ಮೈತ್ರಿಕೂಟಗಳ ನಡುವೆ ಅಧಿಕಾರ ಬದಲಾಗುತ್ತಿರುತ್ತದೆ. ಆದರೆ 2021ರ ವಿಧಾನಸಭಾ ಚುನಾವಣೆ ಇದಕ್ಕೆ ಒಂದು ಅಪವಾದವಾಗಿತ್ತು. ಆ ಚುನಾವಣೆ ಗೆದ್ದು, ಎಲ್‌ಡಿಎಫ್ ಸತತ ಎರಡನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಕೇರಳದಲ್ಲಿ ಪಕ್ಷದ ವಿಸ್ತರಣೆಗೆ ಬಿಜೆಪಿ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಅದು ಸ್ವಲ್ಪ ಚುನಾವಣಾ ಯಶಸ್ಸನ್ನು ಗಳಿಸಿತು ಮತ್ತು ಸುರೇಶ್ ಗೋಪಿ ತ್ರಿಶೂರ್ ಲೋಕಸಭಾ ಸ್ಥಾನ ಗೆಲ್ಲುವ ಮೂಲಕ ಅದು ತನ್ನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ನಂತರ, ಇತ್ತೀಚಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ 100 ಸದಸ್ಯರ ತಿರುವನಂತಪುರಂ ಮುನ್ಸಿಪಲ್ ಕಾರ್ಪೊರೇಷನ್‌ನಲ್ಲಿ ಬಿಜೆಪಿ 50 ವಾರ್ಡ್‌ಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಸಂಪೂರ್ಣ ಬಹುಮತಕ್ಕೆ ಕೇವಲ ಒಂದು ಸ್ಥಾನ ಕಡಿಮೆಯಾಗಿತ್ತು. ಎಲ್‌ಡಿಎಫ್ 29 ಸ್ಥಾನಗಳಿಗೆ ಮತ್ತು ಯುಡಿಎಫ್ 19 ಸ್ಥಾನಗಳಿಗೆ ಕುಸಿದವು. ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶಗಳು ಕೇರಳದಲ್ಲಿ ಬಿಜೆಪಿಗೆ ಹೆಚ್ಚುತ್ತಿರುವ ಬೆಂಬಲದ ಸೂಚನೆಯೋ ಅಥವಾ ಅದು ಕೇವಲ ಸ್ಥಳೀಯ ವಿದ್ಯಮಾನವೋ ಎಂಬುದು ಅಸ್ಪಷ್ಟ ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಆದರೆ 2019 ಮತ್ತು 2024ರ ಲೋಕಸಭಾ ಚುನಾವಣೆಗಳು, 2021ರ ವಿಧಾನಸಭಾ ಚುನಾವಣೆ ಮತ್ತು ಇತ್ತೀಚಿನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶಗಳು ಕೇರಳದಲ್ಲಿ ಬಿಜೆಪಿ ಬಲ ಏರುತ್ತಿದೆ ಎಂದು ಸೂಚಿಸುತ್ತವೆ. ಅದು ನಿಧಾನವಾಗಿ ಮತ್ತು ನಿಶ್ಚಿತವಾಗಿ ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳುತ್ತಿರುವುದಂತೂ ನಿಜ. ಹಾಗಾಗಿಯೇ ಈ ಸಲದ ಚುನಾವಣೆಯಲ್ಲಿ ಬಿಜೆಪಿಯನ್ನು ಗಮನಿಸಬೇಕಾಗುತ್ತದೆ.

ಯಾಕೆಂದರೆ, ಪಿಣರಾಯಿ ವಿಜಯನ್ ಸರಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಪಕ್ಷದೊಳಗೇ ಪಿಣರಾಯಿ ವಿರೋಧ ಎದುರಿಸುತ್ತಿದ್ಧಾರೆ ಎಂದು ಹೇಳಲಾಗುತ್ತಿದೆ. ಶಬರಿಮಲೆ ಚಿನ್ನದ ಕಳವು ಪ್ರಕರಣ ಸಿಪಿಐ(ಎಂ) ಮುಖಂಡರು ಮತ್ತು ಎಲ್‌ಡಿಎಫ್‌ಗೆ ಇರಿಸುಮುರಿಸು ಉಂಟುಮಾಡಿದೆ. ಇಡೀ ದೇಶದಲ್ಲಿ ಎಡಪಕ್ಷಗಳ ಪ್ರಾಬಲ್ಯ ಕೇರಳದಲ್ಲಿ ಮಾತ್ರ ಇರುವ ಈ ಹೊತ್ತಲ್ಲಿ ಗೆಲ್ಲಲೆಬೇಕಾದ ಅನಿವಾರ್ಯತೆ ಎದುರಿಸುತ್ತಿರುವ ಎಲ್‌ಡಿಎಫ್‌ಗೆ ಆಡಳಿತ ವಿರೋಧಿ ಅಲೆ ದೊಡ್ಡ ಸವಾಲಾಗಬಹುದು. ಇನ್ನೊಂದೆಡೆ ಕಾಂಗ್ರೆಸ್ ಹಾಲಿ ಮೂರು ರಾಜ್ಯಗಳಲ್ಲಿ ಮಾತ್ರ ಆಡಳಿತದಲ್ಲಿದ್ದು, ಕೇರಳದಲ್ಲಿ ಗೆಲ್ಲುವುದು ಅದಕ್ಕೆ ಮುಖ್ಯವಾಗಲಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿಸಿರುವ ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲೂ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಅಲ್ಲದೆ, ಆಡಳಿತ ವಿರೋಧಿ ಅಲೆಯೂ ಕಾಂಗ್ರೆಸ್‌ಗೆ ಲಾಭದಾಯಕವಾಗಬಹುದು ಎನ್ನಲಾಗಿದೆ.

ವಿಧಾನಸಭೆ ಈಗಿನ ಬಲಾಬಲ: ಒಟ್ಟು ಸ್ಥಾನಗಳು 140. ಎಲ್‌ಡಿ ಎಫ್ 95, ಯುಡಿಎಫ್ 42, ಖಾಲಿ ಸ್ಥಾನಗಳು 3.

ಅಸ್ಸಾಂ

2021ರ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು 75 ಸ್ಥಾನಗಳನ್ನು ಗೆದ್ದು ಸುಮಾರು ಶೇ.45 ಮತಗಳನ್ನು ಗಳಿಸಿದವು. ಅಸ್ಸಾಮಿನಲ್ಲಿ ಮಹಾಜೋತ್ ಎಂದು ಕರೆಯಲಾಗಿರುವ ಇಂಡಿಯಾ ಒಕ್ಕೂಟ 50 ಸ್ಥಾನಗಳನ್ನು ಗೆದ್ದು ಸುಮಾರು ಶೇ.41ರಷ್ಟು ಮತಗಳನ್ನು ಗಳಿಸಿತು. ಸ್ಥಾನಗಳ ವಿಷಯದಲ್ಲಿ ಎನ್‌ಡಿಎ ಮತ್ತು ಮಹಾಜೋತ್ ನಡುವೆ ದೊಡ್ಡ ವ್ಯತ್ಯಾಸವಿದ್ದರೂ, ಎರಡೂ ಮೈತ್ರಿಕೂಟಗಳ ನಡುವಿನ ಮತ ಹಂಚಿಕೆ ವ್ಯತ್ಯಾಸ ಸುಮಾರು ಶೇ. 4ರಷ್ಟಿತ್ತು ಎಂಬುದು ಮುಖ್ಯ. ಎರಡೂ ಮೈತ್ರಿಕೂಟಗಳ ಬೆಂಬಲ ನೆಲೆಯಲ್ಲಿನ ಸಣ್ಣ ಬದಲಾವಣೆ ಕೂಡ ಎನ್‌ಡಿಎ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಬಹುದು ಎನ್ನಲಾಗುತ್ತಿದೆ. ಎನ್‌ಡಿಎ ಈಗಾಗಲೇ ಎರಡು ಅವಧಿಗಳಿಂದ ಅಧಿಕಾರದಲ್ಲಿದ್ದು, ಮುಸ್ಲಿಮ್ ವಿರೋಧಿ ಅಜೆಂಡಾವನ್ನೇ ಅದು ತನ್ನ ಗೆಲುವಿಗಾಗಿ ಬಳಸುತ್ತಿದೆ. ಈಗ ಅದು ಸತತ ಮೂರನೇ ಗೆಲುವಿನ ವಿಶ್ವಾಸದಲ್ಲಿದೆ. ಕಳೆದ ಬಾರಿ ಅಸ್ಸಾಂ ಗಣ ಪರಿಷತ್ ಮತ್ತು ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದವು. ಈ ಬಾರಿ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಕೂಡ ಎನ್‌ಡಿಎ ಜೊತೆ ಕೈಜೋಡಿಸಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಅಸ್ಸಾಮಿನಲ್ಲಿ ಈಗ ಅದು ಬಲ ಕಳೆದುಕೊಂಡಿದೆ. ಅಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸುವ ಅದರ ಕನಸು ನನಸಾಗುವುದೇ ಎಂಬುದನ್ನು ನೋಡಬೇಕಿದೆ.

ವಿಧಾನಸಭೆ ಈಗಿನ ಬಲಾಬಲ: ಒಟ್ಟು ಸ್ಥಾನಗಳು 126. ಬಿಜೆಪಿ 60, ಅಸ್ಸಾಂ ಗಣ ಪರಿಷತ್ 9, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ 6, ಕಾಂಗ್ರೆಸ್ 29, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ 16, ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ 4, ಸಿಪಿಐಎಂ 1, ಪಕ್ಷೇತರ 1.

ಪುದುಚೇರಿ

30 ಶಾಸಕರ ಬಲದ ವಿಧಾನಸಭೆಯುಳ್ಳ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ಗೆಲುವು ಮತ್ತು ಸೋಲು ಕಡಿಮೆ ಅಂತರದಿಂದ ನಿರ್ಧಾರವಾಗುತ್ತದೆ. ಬಿಜೆಪಿ ಮತ್ತು ಆಲ್ ಇಂಡಿಯಾ ಎನ್ ಆರ್ ಕಾಂಗ್ರೆಸ್ ಮೈತ್ರಿಯ ಎನ್‌ಡಿಎ ಈ ಬಾರಿಯೂ ಮೈತ್ರಿ ಮುಂದುವರಿಸಲಿದ್ದು, ಅಧಿಕಾರ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಡಿಎಂಕೆ ಮತ್ತು ಕಾಂಗ್ರೆಸ್ ಕೂಡ ಅಧಿಕಾರ ಪಡೆಯುವ ಪ್ರಯತ್ನದಲ್ಲಿವೆ. ಪುದುಚೇರಿಯಲ್ಲಿ ಸ್ವತಂತ್ರರು ಸಹ ಪ್ರಮುಖ ಪಾತ್ರ ವಹಿಸುತ್ತಾರೆ.

ವಿಧಾನಸಭೆ ಈಗಿನ ಬಲಾಬಲ: ಒಟ್ಟು ಸ್ಥಾನಗಳು 30. ಆಲ್ ಇಂಡಿಯಾ ಎನ್‌ಆರ್ ಕಾಂಗ್ರೆಸ್ 10, ಬಿಜೆಪಿ 6, ಡಿಎಂಕೆ 6, ಕಾಂಗ್ರೆಸ್ 2, ಪಕ್ಷೇತರರು 6.

Tags

states
share
ವಾರ್ತಾಭಾರತಿ
ವಾರ್ತಾಭಾರತಿ
Next Story
X