Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ...

ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಹಿಂದ ಬಲ ಯಾಕೆ ನಿರ್ಣಾಯಕ?

ಆರ್.ಜೀವಿಆರ್.ಜೀವಿ11 Nov 2025 2:39 PM IST
share
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಅಹಿಂದ ಬಲ ಯಾಕೆ ನಿರ್ಣಾಯಕ?

ನವೆಂಬರ್ ಕ್ರಾಂತಿಯ ಮಾತು ರಾಜ್ಯ ರಾಜಕೀಯದಲ್ಲಿ ಒಂದು ವಿಚಿತ್ರ ತಳಮಳವನ್ನು ಹುಟ್ಟುಹಾಕಿದಂತೆ ಕಾಣುತ್ತಿದೆ. ಮುಖ್ಯಮಂತ್ರಿ ಬದಲಾವಣೆ ಆಗಲಿದೆಯೇ ಎಂಬ ಪ್ರಶ್ನೆ ಎದ್ದಿದೆ. ಹೀಗಿರುವಾಗಲೇ ಅಹಿಂದ ರಾಜಕೀಯದ ಶಕ್ತಿ ಕೂಡ ಮುನ್ನೆಲೆಯಲ್ಲಿ ಗೋಚರಿಸತೊಡಗಿದೆ. ಯಾವುದರ ಮೇಲೆ ನಿಜವಾಗಿಯೂ ಸಿದ್ದರಾಮಯ್ಯ ರಾಜಕೀಯ ನಿಂತಿದೆಯೋ ಅದೇ ಅಹಿಂದ ಚಳವಳಿಯ ಹಿನ್ನೆಲೆಯೇ ಸಿದ್ದರಾಮಯ್ಯ ಅವರ ಸ್ಥಾನವನ್ನು ಭದ್ರವಾಗಿಸಲಿದೆಯೆ? ಅಂಥ ಸುಳಿವುಗಳಿರುವಾಗ, ಸಿದ್ದರಾಮಯ್ಯ ರಾಜಕೀಯ ಮತ್ತು ಅಹಿಂದ ಚಳವಳಿ ನಡುವಿನ ಅವಿನಾಭಾವ ಸಂಬಂಧ ಕುತೂಹಲ ಮೂಡಿಸುತ್ತದೆ. ರಾಜ್ಯದ ಅತ್ಯಂತ ಪ್ರಮುಖ ಅಹಿಂದ ನಾಯಕರಾಗಿ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದು, ಈಗ ಅದೇ ಅಂಶ ನಾಯಕತ್ವ ಬದಲಾವಣೆ ವಿಷಯದಲ್ಲಿ ನಿರ್ಣಾಯಕವಾಗಿದೆ.

ಭಾಗ - 1

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾತು ಹಲವು ಬಗೆಯ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿರುವಾಗ, ಒಂದು ಮಹತ್ವದ ಬೆಳವಣಿಗೆಯಾಗಿದೆ. ಐದು ವರ್ಷವೂ ನಾನೇ ಸಿಎಂ ಎಂದು ಆತ್ಮವಿಶ್ವಾಸದಿಂದ ಹೇಳುತ್ತಿದ್ದ ಸಿದ್ದರಾಮಯ್ಯನವರು ಇದ್ದಕ್ಕಿದ್ದಂತೆ, ಹೈಕಮಾಂಡ್ ಬಯಸಿದರೆ ಎಂದು ಸೇರಿಸಿ ಮಾತಾಡಿದ ಬಳಿಕ, ನಿಜವಾಗಿಯೂ ಅಧಿಕಾರ ಹಸ್ತಾಂತರ ಸನ್ನಿಹಿತವಾಗಿದೆಯೇ ಎಂಬ ಅನುಮಾನ ಮೂಡಿತು. ಅದಾದ ಬಳಿಕ ಅಹಿಂದ ಸಂಘಟನೆಗಳ ಪ್ರವೇಶವಾಗಿದೆ. ಸಿದ್ದರಾಮಯ್ಯ ಅವರನ್ನೇ ಐದು ವರ್ಷವೂ ಸಿಎಂ ಎಂದು ಘೋಷಣೆ ಮಾಡಿ ಎಂದು ಮೈಸೂರಿನ ಅಹಿಂದ ಸಂಘಟನೆಗಳು ಪತ್ರ ಚಳವಳಿಗೆ ಮುಂದಾಗಿವೆ. ರಾಜ್ಯದಲ್ಲಿ ಎದ್ದಿರುವ ಮುಖ್ಯಮಂತ್ರಿ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯಬೇಕು ಎಂಬುದು ಅಹಿಂದ ಸಂಘಟನೆಗಳ ಆಗ್ರಹ. ಸಿದ್ದರಾಮಯ್ಯ ಅವರೇ ಐದು ವರ್ಷವೂ ಸಿಎಂ ಎಂದು ರಾಹುಲ್ ಗಾಂಧಿಯವರೇ ಘೋಷಣೆ ಮಾಡಬೇಕು ಎಂದು ಒತ್ತಾಯಿಸುವ ಬಗ್ಗೆ ಅವು ನಿರ್ಧರಿಸಿವೆ. ಅಹಿಂದ ಮತ್ತೊಮ್ಮೆ ಸಿದ್ದರಾಮಯ್ಯನವರ ರಾಜಕೀಯ ಬದುಕಿನಲ್ಲಿ ಮಹತ್ವದ ಪಾತ್ರ ವಹಿಸಬಹುದೇ ಎಂಬ ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಹಾಗೆ ನೋಡಿದರೆ, ಸಿದ್ದರಾಮಯ್ಯನವರ ರಾಜಕೀಯದ ಒಂದು ಅವಿನಾಭಾವ ಭಾಗವಾಗಿರುವುದು ಅಹಿಂದ ಚಳವಳಿ. ಜೆಡಿಎಸ್‌ನಲ್ಲಿದ್ದ ಸಿದ್ದರಾಮಯ್ಯ 2005ರಲ್ಲಿ ಅಹಿಂದ ಸಂಘಟನೆ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾಗ, ದೇವೇಗೌಡರು ವಿರೋಧಿಸಿದ್ದರು. ಅದಾದ ಬಳಿಕ ಜೆಡಿಎಸ್‌ನಿಂದ ಹೊರಬಂದ ಸಿದ್ದರಾಮಯ್ಯ ರಾಜಕೀಯವಾಗಿ ಪರ್ಯಾಯ ದಾರಿಯನ್ನೇ ಕಂಡುಕೊಂಡರೆಂಬುದು ಈಗ ಇತಿಹಾಸ. ಈಗ ಅವರನ್ನು ಬದಲಿಸದಂತೆ ಒತ್ತಾಯ ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ನೋಡಿದರೆ, ಈ ಹಿಂದೆಯೂ ಇಂಥದೇ ಸ್ಥಿತಿಯಲ್ಲಿ ಅಹಿಂದ ಅವರ ಬೆನ್ನಿಗೆ ನಿಂತದ್ದಿದೆ ಎಂಬುದನ್ನು ಗಮನಿಸಬಹುದು. ಕಳೆದ ವರ್ಷವೂ ಅಹಿಂದ ಸಿದ್ದರಾಮಯ್ಯನವರನ್ನು ಬದಲಿಸಹೊರಟರೆ ಹುಷಾರು ಎಂಬ ಎಚ್ಚರಿಕೆ ನೀಡಿದ್ದಿದೆ. ಇದೆಲ್ಲವೂ, ಅಹಿಂದದ ಜೊತೆಗೇ ಬೆಸೆದಿರುವ ಸಿದ್ದರಾಮಯ್ಯನವರ ರಾಜಕೀಯದ ಹೆಚ್ಚುಗಾರಿಕೆಯನ್ನು ಹೇಳುತ್ತದೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಾಲಿಗೆ ಮಾತ್ರವಲ್ಲ, ಸರಕಾರಕ್ಕೂ ಸಿದ್ದರಾಮಯ್ಯ ಅವರನ್ನು ಉಳಿಸಿಕೊಳ್ಳುವುದು ಅನಿವಾರ್ಯ ಎಂಬ ಮಾತು ಮತ್ತೆ ಮತ್ತೆ ಕೇಳಿಬಂದಿದೆ. ಮೂಲತಃ ಜನತಾ ಪರಿವಾರದ ಸಿದ್ದರಾಮಯ್ಯ ಕಾಂಗ್ರೆಸಿಗರಾಗಿ ಬದಲಾದದ್ದೇ ಒಂದು ಜಾದೂ ಎಂಬಂತಿದೆ. ಕಾಂಗ್ರೆಸ್ ಸಿದ್ಧಾಂತವನ್ನು ಮೂಲ ಕಾಂಗ್ರೆಸಿಗರಿಗಿಂತಲೂ ಬಹಳ ಸ್ಪಷ್ಟವಾಗಿ ಅವರು ರೂಢಿಸಿಕೊಂಡದ್ದು ಮತ್ತು ಬದ್ಧವಾಗಿರುವುದೇ ಒಂದು ವಿಶೇಷತೆ. ಎರಡೂವರೆ ದಶಕಗಳ ಕಾಲ ಜನತಾ ಪರಿವಾರದಲ್ಲಿ ರಾಜಕೀಯವಾಗಿ ಬೆಳೆದಿದ್ದ ಅವರು, ಕಟುವಾದ ಕಾಂಗ್ರೆಸ್ ವಿರೋಧಿ ನಿಲುವನ್ನು ತೋರಿಸಿದ್ದವರು ಬದಲಾದ ರೀತಿ ಸಾಮಾನ್ಯವಾದುದಲ್ಲ. ಕಾಂಗ್ರೆಸ್‌ಗೆ ಬರುತ್ತಿದ್ದಂತೆ ಅವರ ರಾಜಕೀಯ ಗಮನಾರ್ಹ ತಿರುವು ಪಡೆಯಿತು. ಕಾಂಗ್ರೆಸ್‌ನಲ್ಲಿ ಏನು ಹೇಳಿದರೂ ನಡೆಯುವಷ್ಟರ ಮಟ್ಟಿಗೆ ಅವರದು ಬಹಳ ಗಟ್ಟಿ ಸ್ಥಾನ. ಅವರದೇ ಆದ ದೊಡ್ಡ ಬೆಂಬಲಿಗರ ಪಡೆಯೊಂದು ಪಕ್ಷದೊಳಗೇ ಬೆಳೆದಿದೆ. ಕಾಂಗ್ರೆಸ್‌ಗೆ ಸಿದ್ದರಾಮಯ್ಯ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಅವರಿಗೆ ಪ್ರಾಮುಖ್ಯತೆಯಿದೆ.

ಅವರ ಅನುಭವ, ಅವರ ಪ್ರೌಢಿಮೆ, ಪಕ್ಷದ ಮುಖ್ಯ ಧ್ವನಿಯಾಗಿ, ಕೇಂದ್ರ ಸರಕಾರದ ವಿರುದ್ಧ ತೀಕ್ಷ್ಣವಾಗಿ ಅಭಿಪ್ರಾಯ ಮಂಡಿಸಬಲ್ಲ ಅವರ ಶಕ್ತಿಯನ್ನು ಯಾರೂ ನಿರಾಕರಿಸಲಿಕ್ಕಾಗದು. ರಾಜ್ಯದ ಮುಖ್ಯಮಂತ್ರಿಯಾಗಿ, ಕೇಂದ್ರದ ಜನವಿರೋಧಿ ನಿಲುವನ್ನು ಖಡಕ್ಕಾಗಿ ಟೀಕಿಸಬಲ್ಲ ಗಟ್ಟಿತನವುಳ್ಳವರು ಸಿದ್ದರಾಮಯ್ಯ. ಆರ್ಥಿಕ ವಿಚಾರ, ಕಾನೂನಿನ ತಿಳುವಳಿಕೆ ಇವೆಲ್ಲದರ ಮೂಲಕ ವಿಧಾನಸಭೆ ಅಧಿವೇಶನದಲ್ಲಿ ಸರಕಾರದ ವಿರುದ್ಧ ಪ್ರತಿಪಕ್ಷದ ನಾಯಕನ ಸ್ಥಾನದಲ್ಲಿದ್ದ ಹೊತ್ತಲ್ಲೂ ಸಮರ್ಥವಾಗಿ ವಾದಿಸಿದ್ದ ಚತುರತೆ ಮತ್ತು ಸಾಮರ್ಥ್ಯ ತೋರಿಸಿದ್ದವರು ಕಾಂಗ್ರೆಸ್‌ನಲ್ಲಿ ಅವರೊಬ್ಬರೇ.

1980ರ ದಶಕದ ಆರಂಭದಿಂದ 2005ರವರೆಗೆ ಜನತಾ ಪರಿವಾರದ ನಾಯಕರಾಗಿ ಸರಕಾರದಲ್ಲೂ ಮಹತ್ವದ ಪಾತ್ರ ವಹಿಸುತ್ತ ಬಂದಿದ್ದವರು 2006ರಲ್ಲಿ ಕಾಂಗ್ರೆಸ್ ಸೇರಿದರು. ಜೆಡಿಎಸ್‌ನ ಕುಟುಂಬ ರಾಜಕಾರಣ ಸಿದ್ದರಾಮಯ್ಯ ಅವರ ಬೆಳವಣಿಗೆಯನ್ನು ಸಹಿಸಲಿಲ್ಲ. ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಯನ್ನು ರಾಜಕೀಯದಲ್ಲಿ ಬೆಳೆಸುವ ಸಲುವಾಗಿ ಸಿದ್ದರಾಮಯ್ಯನವರನ್ನು ಹೊರಹಾಕಿದರೆಂಬ ಮಾತುಗಳೂ ಆಗ ಕೇಳಿಬಂದಿದ್ದವು. ಆ ಸಮಯದಲ್ಲಿ ಸಿದ್ದರಾಮಯ್ಯ ರಾಜಕೀಯ ಸನ್ಯಾಸದ ಮಾತಾಡಿದ್ದೂ ಇತ್ತು. ಮತ್ತೆ ತಮ್ಮ ವಕೀಲಿ ವೃತ್ತಿಗೇ ಮರಳುವ ಮಾತಾಡಿದ್ದೂ ಇತ್ತು. ಆದರೆ ಹಾಗಾಗಲಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಅವರನ್ನು ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದವು. ಆದರೆ ಸಿದ್ದರಾಮಯ್ಯ ಅವರು ಬಿಜೆಪಿ ಸಿದ್ಧಾಂತವನ್ನು ಒಪ್ಪದವರು. 2006ರಲ್ಲಿ ಅವರು ತಮ್ಮ ಜೊತೆಗಾರರೊಡನೆ ಕಾಂಗ್ರೆಸ್ ಸೇರಿದರು.

ಡಾ. ರಾಮ್ ಮನೋಹರ್ ಲೋಹಿಯಾ ಪ್ರತಿಪಾದಿಸಿದ ಸಮಾಜವಾದದಿಂದ ಪ್ರಭಾವಿತರಾದ ಸಿದ್ದರಾಮಯ್ಯ, ಎಲ್ಲ ರಾಜಕೀಯ ತಂತ್ರಗಾರಿಕೆಯನ್ನು ಬಲ್ಲವರಾಗಿಯೂ ಒಬ್ಬ ರಾಜಕಾರಣಿ ಮಾತ್ರವಾಗಿ ಕಾಣಿಸುವುದಿಲ್ಲ ಎಂಬುದೇ ಅವರ ನಾಯಕತ್ವದ ಹೆಚ್ಚುಗಾರಿಕೆ. ಹಾಗಾಗಿಯೇ ಅವರು ತಮ್ಮ ತವರು ಕ್ಷೇತ್ರ ಚಾಮುಂಡೇಶ್ವರಿಯಲ್ಲಿ, ವರುಣಾದಲ್ಲಿ ಸಲ್ಲುವಷ್ಟೇ ನಿಚ್ಚಳವಾಗಿ ಬಾದಾಮಿಯಂಥ ಉತ್ತರ ಕರ್ನಾಟಕದ ಕ್ಷೇತ್ರದ ಜನರ ಪ್ರೀತಿಪಾತ್ರರೂ ಆಗಬಲ್ಲರು. ಅದು ಎಲ್ಲ ನಾಯಕರಿಗೂ ಸಾಧ್ಯವಾಗುವಂಥದ್ದಲ್ಲ. ಇವತ್ತಿಗೂ ಕಾಂಗ್ರೆಸ್‌ನಲ್ಲಿ ಅಥವಾ ಬಿಜೆಪಿಯಲ್ಲಿ ಬಹುಪಾಲು ನಾಯಕರು ತಮ್ಮ ತಮ್ಮ ಕ್ಷೇತ್ರಕ್ಕಷ್ಟೇ ಸೀಮಿತ. ಕ್ಷೇತ್ರದಾಚೆಗೆ ಹೋದರೆ ಅವರ ಆಟ ನಡೆಯದ ಸ್ಥಿತಿಯಿದೆ. ಆದರೆ ಸಿದ್ದರಾಮಯ್ಯ ಹಾಗಲ್ಲ. ಅವರೊಬ್ಬ ಮಾಸ್ ಲೀಡರ್ ಆಗಿ ಬೆಳೆದವರು. ಕಾಂಗ್ರೆಸ್‌ನಿಂದ ಆಚೆಗೂ ಪಕ್ಷಾತೀತವಾಗಿ ಅವರನ್ನು ಗೌರವಿಸುವ ಅನೇಕರಿದ್ದಾರೆ. ರಾಜಕೀಯದಲ್ಲಿ ಸೋಲಿನ ಕಹಿಯನ್ನೂ ಕಂಡಿರುವವರು ಅವರು. ತಮ್ಮದೇ ಕ್ಷೇತ್ರದ ಜನರು ತಮ್ಮನ್ನು ಕೈಬಿಟ್ಟಿದ್ದ ಅನುಭವವೂ ಪಾಠವಾಗಿಯೇ ಅವರನ್ನು ಬೆಳೆಸಿದೆ. ಹಾಗೆಯೇ ಜನಬಲ ಇದ್ದರೆ ಎಲ್ಲವೂ ಇದೆ ಎಂಬ ಅರಿವೂ ಅವರ ರಾಜಕೀಯದಲ್ಲಿ ಜೊತೆಗಿದೆ. ಇವತ್ತಿಗೂ ಸಂಕಟದ ಸ್ಥಿತಿ ಬಂದಾಗೆಲ್ಲ, ಜನತೆಯ ಆಶೀರ್ವಾದ ಇರುವವರೆಗೂ ತಮ್ಮನ್ನು ಯಾರೂ ಮುಟ್ಟಲಾರರು ಎಂದು ಸಿದ್ದರಾಮಯ್ಯ ಹೇಳುತ್ತಿರುವುದುಂಟು.

ಈ ದೇಶದ ಪ್ರಬುದ್ಧ ಮತ್ತು ಮಹತ್ವದ ರಾಜಕಾರಣಿಗಳಲ್ಲಿ ನಿಸ್ಸಂದೇಹವಾಗಿಯೂ ಸಿದ್ದರಾಮಯ್ಯ ಒಬ್ಬರು. ‘‘ಸಂವಿಧಾನಕ್ಕೆ ಎದುರಾಗಿರುವ ಬೆದರಿಕೆಯ ವಿರುದ್ಧ ಹೋರಾಡುವುದೇ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ಅತ್ಯುನ್ನತ ಗೌರವ’’ ಎಂಬ ಅವರ ಮಾತು ರಾಜಕೀಯದಲ್ಲಿ ಅವರು ತೋರುತ್ತ ಬಂದ ತಾತ್ವಿಕತೆ ಮತ್ತು ಬದ್ಧತೆಯನ್ನು ನಿರೂಪಿಸುತ್ತದೆ. ಅದನ್ನು ಅವರು ತಮ್ಮ ಪ್ರತೀ ಹೆಜ್ಜೆಯಲ್ಲಿಯೂ ಮಾಡುತ್ತ ಬಂದಿದ್ದಾರೆಂಬುದನ್ನು ಅವರು ಮುಖ್ಯಮಂತ್ರಿಯಾಗಿರುವಾಗಲೂ, ಪ್ರತಿಪಕ್ಷ ನಾಯಕನಾಗಿ ಬಿಜೆಪಿ ಸರಕಾರವನ್ನು ಸಮರ್ಥವಾಗಿ ಎದುರಿಸಿದ್ದ ಹೊತ್ತಲ್ಲೂ ಈ ರಾಜ್ಯದ ಜನತೆ ಕಂಡಿದೆ. ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ ಸ್ಥಾಪನೆಯಾಗದೆ ರಾಜಕೀಯ ಪ್ರಜಾಪ್ರಭುತ್ವ ಬಾಳಲಾರದು ಎಂಬ ಅಂಬೇಡ್ಕರರ ಮಾತನ್ನು ಅವರು ಮತ್ತೆ ಮತ್ತೆ ನೆನೆಯುತ್ತಾರೆ. ಅದು, ರಾಜಕೀಯದಲ್ಲಿ ಅವರು ಕಾಯ್ದುಕೊಂಡು ಬಂದ ಸಾಮಾಜಿಕ ಕಾಳಜಿ ಮತ್ತು ಕಳಕಳಿ ಎಂಥದು ಎಂಬುದನ್ನು ಹೇಳುತ್ತದೆ.

2013ರಿಂದ 2018ರವರೆಗೆ ಪೂರ್ಣಾವಧಿ ಮುಖ್ಯಮಂತ್ರಿ, ಎರಡು ಬಾರಿ ಉಪ ಮುಖ್ಯಮಂತ್ರಿ. ಹಣಕಾಸು ಖಾತೆಯ ಯಶಸ್ವೀ ನಿರ್ವಹಣೆ. ಈಗ ಮತ್ತೆ ಮುಖ್ಯಮಂತ್ರಿ. ಇವೆಲ್ಲವೂ ಸಿದ್ದರಾಮಯ್ಯನವರ ಹಿರಿತನಕ್ಕೆ, ಪ್ರಬುದ್ಧತೆಗೆ ಸಾಕ್ಷಿ. ಅಹಿಂದ ನಾಯಕನೆಂದೇ ಗುರುತಾದ ಸಿದ್ದರಾಮಯ್ಯ, ಮುಖ್ಯಮಂತ್ರಿಯಾಗಿ ತಂದ ಅನ್ನಭಾಗ್ಯ, ಶಾದಿಭಾಗ್ಯ, ಕ್ಷೀರಭಾಗ್ಯಗಳಂತಹ ಜನಪ್ರಿಯ ಯೋಜನೆಗಳು ಈ ಸಮಾಜದ ದಮನಿತ ವರ್ಗಗಳ ಬಗ್ಗೆ ಅವರು ತೋರಿದ ಕಾಳಜಿಗೆ ಸಾಕ್ಷಿ. 2018ರ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ, ಚಾಮುಂಡೇಶ್ವರಿಯಲ್ಲಿ ಸೋತು, ಬಾದಾಮಿಯಲ್ಲಿ ಗೆದ್ದರು. ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದರು. ಮೈತ್ರಿ ಸರಕಾರ ಪತನದ ಬಳಿಕ ವಿಧಾನಸಭೆ ಪ್ರತಿಪಕ್ಷ ನಾಯಕನಾಗಿ ಸಮರ್ಥವಾಗಿ ಹೊಣೆ ನಿಭಾಯಿಸಿದವರು ಸಿದ್ದರಾಮಯ್ಯ. 2023ರ ಚುನಾವಣೆಯಲ್ಲಿ ಬಾದಾಮಿಯಿಂದ ಸ್ಪರ್ಧಿಸದಿರಲು ನಿರ್ಧರಿಸಿದ್ದ ಅವರು, ಕೋಲಾರದಿಂದ ಕಣಕ್ಕಿಳಿಯುವ ಮನಸ್ಸು ಮಾಡಿದ್ದರು. ಆದರೆ ಕಡೇ ಗಳಿಗೆಯಲ್ಲಿ ಅವರ ಪುತ್ರ ಯತೀಂದ್ರ ಅವರ ಕ್ಷೇತ್ರವಾದ ವರುಣಾದಿಂದ ಸ್ಪರ್ಧಿಸಿ, ಬಿಜೆಪಿಯ ಎಲ್ಲ ಆಟಗಳನ್ನೂ ಎದುರಿಸಿ ಗೆದ್ದರು.

ಸಾಂಸ್ಕೃತಿಕ ಎಚ್ಚರವೊಂದನ್ನು ಮೈಗೂಡಿಸಿಕೊಂಡೇ ಬಂದ ರಾಜಕಾರಣಿ ಅವರು. ಅದು ಅವರ ಸಮಾಜವಾದಿ ಹಿನ್ನೆಲೆಯಿಂದ ಬಂದದ್ದು. ಆನಂತರದ ರಾಜಕಾರಣದಲ್ಲೂ ಅದು ಅವರ ಜೊತೆಜೊತೆಗೇ ಉಳಿದಿದೆ. ಜಾತ್ಯತೀತ ಬದ್ಧತೆಯನ್ನು ಎಂದೂ ಬಿಟ್ಟುಕೊಡದವರು ಅವರೆಂಬುದು ಬಹಳ ಮುಖ್ಯ. ಖಡಕ್ ಮಾತಿನ ಸಿದ್ದರಾಮಯ್ಯ ನೇರವಂತಿಕೆ ಇಂದಿನ ಮಡಿಲ ಮೀಡಿಯಾಗಳಿಗೆ ಆಗಿಬರದ ಸಂಗತಿಯೂ ಹೌದು. ಅವರ ಮತ್ತು ಡಿ.ಕೆ. ಶಿವಕುಮಾರ್ ಮಧ್ಯೆ ಭಿನ್ನಾಭಿಪ್ರಾಯ ಇದೆಯೆಂಬ ವಿಚಾರವನ್ನು ಬೇಕೆಂತಲೇ ದೊಡ್ಡದು ಮಾಡುವ ಬಿಜೆಪಿಯ ಯತ್ನದಲ್ಲಿ ಈ ಮಾಧ್ಯಮಗಳ ಪಾಲೂ ಇಲ್ಲದೇ ಇಲ್ಲ. ಅದರ ಬಗ್ಗೆ ಕೂಡ ಒಮ್ಮೆ ಮಾತನಾಡಿದ್ದ ಅವರು, ‘‘ವಿರೋಧಪಕ್ಷಗಳ ಹುನ್ನಾರದಲ್ಲಿ ಮಾಧ್ಯಮಗಳು ಆಯುಧಗಳಾಗಿ ಬಳಕೆಯಾಗಬಾರದು’’ ಎಂದಿದ್ದರು.

ಸಿದ್ದರಾಮಯ್ಯ ಕರ್ನಾಟಕ ರಾಜಕಾರಣದಲ್ಲಿ ಸಾಕ್ಷಿಪ್ರಜ್ಞೆಯಂತೆ ಇರುವವರು. ಇದಕ್ಕೆ ಅವರ ರಾಜಕೀಯ ಅನುಭವ, ತಾತ್ವಿಕ ಬದ್ಧತೆಯ ಜೊತೆಗೆ ಸಾಂಸ್ಕೃತಿಕ ಪ್ರಜ್ಞೆಯೂ ಕಾರಣ. ಅವರು ಮೊದಲ ಸಲ ಸಿಎಂ ಆಗಿ ಪೂರ್ಣಾವಧಿ ಮುಗಿಸಿ, ಮತ್ತೊಮ್ಮೆ ಸಿಎಂ ಆದರೆಂಬುದು ಕೂಡ ಸಣ್ಣ ಸಂಗತಿಯಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಯಾರೂ ನಿರಾಕರಿಸಲಿಕ್ಕಾಗದ ನಾಯಕ ಎಂಬುದು ಸ್ಪಷ್ಟ. ತಮ್ಮ ಧೋರಣೆ ಮತ್ತು ರಾಜಕೀಯ ದಿಟ್ಟತನದಿಂದ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ನಾಯಕತ್ವಕ್ಕೆ ಆಪ್ತವಾಗಿರುವ ಮಟ್ಟಿಗೆ ಅವರ ಹೆಚ್ಚುಗಾರಿಕೆಯಿದೆ. ಮೋದಿಯನ್ನು ರಾಹುಲ್ ಅವರಷ್ಟೇ ಸಮರ್ಥವಾಗಿ ಎದುರಿಸಬಲ್ಲ ಮತ್ತೊಬ್ಬ ನಾಯಕನಾಗಿ ಕೂಡ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಗಮನ ಸೆಳೆಯುತ್ತಾರೆ. ಪಕ್ಷದ ಧೋರಣೆಯ ಪ್ರಬಲ ಪ್ರತಿಪಾದಕರಾಗಿ, ಅದೇ ವೇಳೆ ಸಾಮಾಜಿಕ ಕಾಳಜಿ ಹೊಂದಿರುವ ನಾಯಕತ್ವದ ಮೂಲಕ ಸಿದ್ದರಾಮಯ್ಯ ಕಾಂಗ್ರೆಸ್‌ನ ಅಗ್ರ ನಾಯಕರ ಸಾಲಿನಲ್ಲಿದ್ದಾರೆ. ರಾಜ್ಯದ ಪರ ನಿಂತು, ಕೇಂದ್ರದ ಜನವಿರೋಧಿ ನಿಲುವನ್ನು ತೀಕ್ಷ್ಣವಾಗಿ ಟೀಕಿಸಬಲ್ಲ ಅವರ ಗಟ್ಟಿತನವೂ ಕಾಂಗ್ರೆಸ್ ಪಾಲಿನ ಬಹುದೊಡ್ಡ ಶಕ್ತಿ. ಮುಖ್ಯಮಂತ್ರಿ ಸ್ಥಾನದ ಮೇಲೆ ಯಾರದೇ ಕಣ್ಣಿದ್ದರೂ ಆ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾರೆಂಬ ಕಾರಣಕ್ಕೇ ಯಾವುದೇ ಆಟಗಳೂ ಪರಿಣಾಮ ಬೀರಿಲ್ಲ. ಮತ್ತದಕ್ಕೆ ಸಿದ್ದರಾಮಯ್ಯನವರಿಗೆ ರಾಜಕೀಯದಲ್ಲಿ ಇರುವ ತಾತ್ವಿಕ ಬಲ ಕಾರಣ ಎಂಬುದು ಕೂಡ ಸ್ಪಷ್ಟ. ಸಿದ್ದರಾಮಯ್ಯನವರ ನಾಯಕತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ಮತ್ತು ಸರಕಾರ ಇದೆಯೆಂಬುದು ಹೈಕಮಾಂಡ್ ಪಾಲಿಗೂ ಅಭಿಮಾನ ವಿಚಾರ. ಹೀಗಿರುವಾಗ, ಸಿದ್ದರಾಮಯ್ಯನವರನ್ನು ದೂರವಿಟ್ಟು ನೋಡುವ ಆಲೋಚನೆಯನ್ನು ಅದು ಮಾಡಬಹುದೆ?

share
ಆರ್.ಜೀವಿ
ಆರ್.ಜೀವಿ
Next Story
X