ಹಲವು ದುರಂತಗಳ ನಂತರವೂ ವಾಯುಯಾನ ಸುರಕ್ಷತೆಯನ್ನು ಯಾಕೆ ಕಡೆಗಣಿಸಲಾಗುತ್ತದೆ?

ಭಾರತದಲ್ಲಿನ ಭೀಕರ ವಿಮಾನ ದುರಂತಗಳ ಸಾಲಿಗೆ ಮತ್ತೊಂದು ಅವಘಡ ಸೇರಿದೆ. ಇನ್ನೊಂದು ಭೀಕರ ವಿಮಾನ ದುರಂತ ಅಹ್ಮದಾಬಾದ್‌ನಲ್ಲಿ ಸಂಭವಿಸಿದೆ. ಜೂನ್ 12ರಂದು ಮಧ್ಯಾಹ್ನ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ಲಂಡನ್‌ಗೆ ಹೊರಟಿದ್ದ ಈ ವಿಮಾನದಲ್ಲಿ 230 ಪ್ರಯಾಣಿಕರು, 10 ಸಿಬ್ಬಂದಿ ಮತ್ತು ಇಬ್ಬರು ಪೈಲಟ್‌ಗಳಿದ್ದರು. ಪ್ರಯಾಣಿಕರಲ್ಲಿ 11 ಮಕ್ಕಳೂ ಸೇರಿದ್ದರು. ಪ್ರಯಾಣಿಕರಲ್ಲಿ ಭಾರತದವರು 169, ಬ್ರಿಟನ್ 53, ಪೊರ್ಚುಗಲ್ 7 ಮತ್ತು ಕೆನಡಾದ ಒಬ್ಬ ಪ್ರಜೆ ಸೇರಿದ್ದರು.
ಅಹ್ಮದಾಬಾದ್‌ನ ಈ ಭೀಕರ ವಿಮಾನ ದುರಂತ ಈ ಹಿಂದೆ ಕೂಡ ಅಲ್ಲಿ ಸಂಭವಿಸಿದ್ದ ವಿಮಾನ ಅವಘಡವೊಂದನ್ನು ನೆನಪಿಸಿದೆ. 37 ವರ್ಷಗಳ ಹಿಂದೆ, 1988ರಲ್ಲಿ ಕೂಡ ಅಹ್ಮದಾಬಾದ್‌ನಲ್ಲಿ ವಿಮಾನ ದುರಂತ ಸಂಭವಿಸಿತ್ತು. ಆಗ ವಿಮಾನದಲ್ಲಿದ್ದ 135 ಜನರ ಪೈಕಿ 133 ಜನರು ಸಾವನ್ನಪ್ಪಿದ್ದರು. 17 ವರ್ಷ ಹಾರಾಟ ನಡೆಸಿದ್ದ ಬೋಯಿಂಗ್ 737-200 ವಿಮಾನ 1988ರ ಅಕ್ಟೋಬರ್ 19ರಂದು ಬೆಳಗ್ಗೆ 5:45ಕ್ಕೆ ಮುಂಬೈನಿಂದ ಅಹ್ಮದಾಬಾದ್‌ಗೆ ಹೊರಡಬೇಕಿತ್ತು. ಆದರೆ, ಪ್ರಯಾಣಿಕರೊಬ್ಬರು ಬರುವುದು ತಡವಾದ್ದರಿಂದ ನಿಗದಿತ ಸಮಯಕ್ಕಿಂತ 20 ನಿಮಿಷ ತಡವಾಗಿ, ಅಂದರೆ ಬೆಳಗ್ಗೆ 6:05ಕ್ಕೆ ಹಾರಾಟ ಆರಂಭಿಸಿತ್ತು. ಅಹ್ಮದಾಬಾದ್ ನಿಲ್ದಾಣದ ಸಮೀಪವೇ ಪೈಲಟ್ ನಿಯಂತ್ರಣ ಕಳೆದುಕೊಂಡದ್ದರಿಂದ ವಿಮಾನ ಮರಗಳು ಮತ್ತು ಹೈಟೆನ್ಷನ್ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿ, ಬಳಿಕ ಅಹ್ಮದಾಬಾದ್‌ನ ಹತ್ತಿರದ ಕೋಟರ್ಪುರ ಗ್ರಾಮದ ಹೊರವಲಯದಲ್ಲಿ ಬಿದ್ದಿತ್ತು. ರನ್‌ವೇಯಿಂದ ಕೇವಲ 2.5 ಕಿ.ಮೀ. ಅಂತರದಲ್ಲಿ ಆ ದುರಂತ ಸ್ಥಳವಿತ್ತು. 127 ಪ್ರಯಾಣಿಕರು ಮತ್ತು 6 ಸಿಬ್ಬಂದಿಯನ್ನು ಆ ದುರಂತ ಬಲಿ ತೆಗೆದುಕೊಂಡಿತ್ತು.
ಭಾರತದಲ್ಲಿ ಈವರೆಗೆ ಸಂಭವಿಸಿದ ವಿಮಾನ ದುರಂತಗಳಲ್ಲಿ ಪ್ರಮುಖವಾದವುಗಳೆಂದರೆ,
2020 ಆಗಸ್ಟ್ 7 -ಕೋಝಿಕ್ಕೋಡ್ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತ
2020ರ ಆಗಸ್ಟ್ 7ರಂದು ಕೋಝಿಕ್ಕೋಡ್ ಅಥವಾ (ಕ್ಯಾಲಿಕಟ್) ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ರನ್ವೇನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಫ್ಲೈಟ್ Iಘಿ-1344 ಭೀಕರ ಅಪಘಾತಕ್ಕೀಡಾಯಿತು. ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ 190 ಮಂದಿ ಇದ್ದರು. ಮಳೆ ಮತ್ತು ಕೆಟ್ಟ ಹವಾಮಾನ ಸ್ಥಿತಿ ನಡುವೆ ಟೇಬಲ್ ಟಾಪ್‌ರನ್‌ವೇನಲ್ಲಿ ಲ್ಯಾಂಡ್ ಆಗುತ್ತಿದ್ದಾಗ, ವಿಮಾನ ನಿಯಂತ್ರಣ ತಪ್ಪಿ 30 ಅಡಿ ಆಳದ ಕಂದಕಕ್ಕೆ ಜಾರಿತ್ತು. ತೀವ್ರ ಹೊಡೆತದಿಂದ ವಿಮಾನ ಎರಡು ಭಾಗಗಳಾಗಿ ಮುರಿದಿತ್ತು. ಈ ಭೀಕರ ಅಪಘಾತದಲ್ಲಿ ಇಬ್ಬರು ಪೈಲಟ್‌ಗಳು ಹಾಗೂ 19 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದರು.
2010 ಮೇ 22- ಮಂಗಳೂರು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ದುರಂತ
2010ರ ಮೇ 22ರಂದು ದುಬೈನಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಭೀಕರ ಅಪಘಾತಕ್ಕೆ ತುತ್ತಾಯಿತು. ಬೋಯಿಂಗ್ 737-800 ವಿಮಾನ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ರನ್‌ವೇ ದಾಟಿ, ತೀವ್ರ ಇಳಿಜಾರಿನಿಂದ ಆವೃತವಾದ ಟೇಬಲ್‌ಟಾಪ್ ಪರ್ವತದ ಬಯಲಿಗೆ ಬಿದ್ದು ಸ್ಫೋಟಗೊಂಡಿತು. ಒಟ್ಟು 166 ಪ್ರಯಾಣಿಕರಲ್ಲಿ 158 ಜನರು ಪ್ರಾಣ ಕಳೆದುಕೊಂಡಿದ್ದರು. 8 ಮಂದಿಯಷ್ಟೇ ಬದುಕುಳಿದಿದ್ದರು.
2000 ಜುಲೈ 17-ಪಾಟ್ನಾ ವಿಮಾನ ಅಪಘಾತ
2000 ಜುಲೈ 17ರಂದು ಬಿಹಾರದ ಪಾಟ್ನಾದಲ್ಲಿ ಅಲೈಯನ್ಸ್ ಏರ್ ಫ್ಲೈಟ್ 7412 ದುರಂತಕ್ಕೀಡಾಯಿತು. ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಇಳಿಯುವ ವೇಳೆ ಪೈಲಟ್ ನಿಯಂತ್ರಣ ತಪ್ಪಿ, ಹತ್ತಿರದ ಜನನಿಬಿಡ ಪ್ರದೇಶಕ್ಕೆ ಬಿದ್ದಿತ್ತು. ಈ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 55 ಜನರು ಮಾತ್ರವಲ್ಲದೆ, ನೆಲದಲ್ಲಿದ್ದ ಐವರು ಬಲಿಯಾಗಿದ್ದರು.
1996, ನವೆಂಬರ್ 12 - ಚರ್ಖಿ ದಾದ್ರಿ ವಿಮಾನ ದುರಂತ
1996ರ ನವೆಂಬರ್ 12ರಂದು ಭಾರತದ ಇತಿಹಾಸದಲ್ಲಿಯೇ ಅತ್ಯಂತ ಭೀಕರ ವಿಮಾನ ಅಪಘಾತ ಸಂಭವಿಸಿತ್ತು. ಹರ್ಯಾಣದ ಚರ್ಖಿ ದಾದ್ರಿ ಬಳಿ ನಡೆದ ಈ ದುರಂತದಲ್ಲಿ, ಸೌದಿ ಅರೇಬಿಯನ್ ಏರ್‌ಲೈನ್ಸ್ ನ ಬೋಯಿಂಗ್ 747 ಮತ್ತು ಕಝಕಿಸ್ತಾನ್ ಏರ್‌ಲೈನ್ಸ್‌ನ ಇಲ್ಯುಶಿನ್ ಐಎಲ್-76 ವಿಮಾನಗಳು ಆಕಾಶದ ಮಧ್ಯೆ ಢಿಕ್ಕಿಯಾಗಿ ಪತನಗೊಂಡವು. ಎರಡೂ ವಿಮಾನದಲ್ಲಿದ್ದ ಒಟ್ಟು 349 ಪ್ರಯಾಣಿಕರು ಮೃತಪಟ್ಟಿದ್ದರು. ಇದು ಆಕಾಶದಲ್ಲೇ ವಿಮಾನಗಳ ಮುಖಾಮುಖಿ ಢಿಕ್ಕಿಯಲ್ಲಿ ವಿಶ್ವದಲ್ಲೇ ಅತ್ಯಂತ ಭೀಕರ ಅಪಘಾತ ಹಾಗೂ ಸಾವಿನ ಸಂಖ್ಯೆ ಲೆಕ್ಕದಲ್ಲಿ ಭಾರತದ ಈವರೆಗಿನ ಅತಿದೊಡ್ಡ ವಿಮಾನ ದುರಂತ
1990 ಫೆಬ್ರವರಿ 14-ಬೆಂಗಳೂರು ಇಂಡಿಯನ್ ಏರ್‌ಲೈನ್ಸ್ ವಿಮಾನ ಅಪಘಾತ
1990ರ ಫೆಬ್ರವರಿ 14ರಂದು, ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 605 (ಏರ್‌ಬಸ್ ಎ320) ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುವ ಸಮಯದಲ್ಲಿ ಭೀಕರ ಅಪಘಾತಕ್ಕೀಡಾಯಿತು. ವಿಮಾನ ರನ್‌ವೇ ದಾಟಿ, ಆವರಣದ ಹೊರಗೆ ಹೋಗಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಒಟ್ಟು 146 ಮಂದಿಯಲ್ಲಿ 92 ಮಂದಿ ಸಾವನ್ನಪ್ಪಿದ್ದರು.
1988 ಅಕ್ಟೋಬರ್ 19-ಅಹ್ಮದಾಬಾದ್ ವಿಮಾನ ಅಪಘಾತ
ಈಗಾಗಲೇ ಉಲ್ಲೇಖಿಸಿದಂತೆ ಇದು ಅಹ್ಮದಾಬಾದ್‌ನಲ್ಲಿ 37 ವರ್ಷಗಳ ಹಿಂದೆ ಸಂಭವಿಸಿದ್ದ ವಿಮಾನ ದುರಂತ. ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗಲೇ ಪತನಗೊಂಡು, 133 ಮಂದಿ ಸಾವನ್ನಪ್ಪಿದ್ದರು.
1982 ಜೂನ್ 21-ಏರ್ ಇಂಡಿಯಾ ವಿಮಾನ ದುರಂತ
1982ರ ಜೂನ್ 21ರಂದು ಏರ್ ಇಂಡಿಯಾ ಫ್ಲೈಟ್ 403 ಬಾಂಬೆ ವಿಮಾನ ನಿಲ್ದಾಣದತ್ತ ಲ್ಯಾಂಡ್ ಆಗುತ್ತಿದ್ದ ಸಂದರ್ಭದಲ್ಲಿ ಭೀಕರ ಅಪಘಾತಕ್ಕೀಡಾಯಿತು. ಈ ವೇಳೆ ಭಾರೀ ಮಳೆಯಿದ್ದುದು ವಿಪತ್ತಿಗೆ ಕಾರಣವಾಗಿತ್ತು. ವಿಮಾನದಲ್ಲಿದ್ದ 111 ಪ್ರಯಾಣಿಕರು ಮತ್ತು ಸಿಬ್ಬಂದಿಯ ಪೈಕಿ 17 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು.
1978 ಜನವರಿ 1 -ಏರ್ ಇಂಡಿಯಾ ಅರಬಿ ಸಮುದ್ರ ದುರಂತ
1978ರ ಜನವರಿ 1ರಂದು ಏರ್ ಇಂಡಿಯಾ ಫ್ಲೈಟ್ 855 ಮುಂಬೈನಿಂದ ಹೊರಟ ಕೆಲವೇ ನಿಮಿಷಗಳಲ್ಲಿ ತಾಂತ್ರಿಕ ವೈಫಲ್ಯದಿಂದಾಗಿ ಅರಬಿ ಸಮುದ್ರದಲ್ಲಿ ಪತನಗೊಂಡಿತ್ತು. ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ 213 ಜನರೂ ಬಲಿಯಾಗಿದ್ದರು.
ವಿಮಾನ ಅಪಘಾತಗಳು ಸಾಮಾನ್ಯವಾಗಿ ಏಕಾಗುತ್ತವೆ?
ಪರಿಣಿತರು ಹಲವು ಕಾರಣಗಳನ್ನು ಪಟ್ಟಿ ಮಾಡುತ್ತಾರೆ.
1. ಪೈಲಟ್ ಸೇರಿದಂತೆ ವಿಮಾನ ಸಿಬ್ಬಂದಿ, ಎಟಿಸಿ ಸಿಬ್ಬಂದಿ ಮಾಡುವ ಪ್ರಮಾದ ಅವಘಡಕ್ಕೆ ಕಾರಣವಾಗಬಹುದು. ಪೈಲಟ್ ತೀರ್ಮಾನ ತಪ್ಪಾದರೆ ಅಪಘಾತ ಸಂಭವಿಸಬಹುದು.
2. ಒಂದು ಅಂದಾಜಿನ ಪ್ರಕಾರ, ಶೇ. 20ರಷ್ಟು ಅಪಘಾತಗಳಿಗೆ ತಾಂತ್ರಿಕ ವೈಫಲ್ಯ ಕಾರಣವಾಗುತ್ತದೆ. ಸಾಮಾನ್ಯವಾಗಿ ಇಂಜಿನ್ ವೈಫಲ್ಯ, ಲ್ಯಾಂಡಿಂಗ್ ಗೇರ್ ದೋಷ, ಹೈಡ್ರಾಲಿಕ್ ವ್ಯವಸ್ಥೆಯಲ್ಲಿನ ದೋಷ ಇವೆಲ್ಲ ಅಂಥ ಸಮಸ್ಯೆಗಳಾಗಿರುತ್ತವೆ.
3. ಮಳೆ, ಮಂಜು, ಭಾರೀ ಗಾಳಿ ಇಂತಹ ಪ್ರತಿಕೂಲ ವಾತಾವರಣ ಕೂಡ ಅವಘಡಕ್ಕೆ ಕಾರಣವಾಗಬಹುದು.
4. ರನ್‌ವೇನಲ್ಲಿಯೂ ಹೆಚ್ಚಿನ ಸಲ ವಿಮಾನ ಅವಘಡಗಳಾಗುತ್ತವೆ. ರನ್‌ವೇನಲ್ಲಿ ಮತ್ತಾವುದೋ ವಿಮಾನ ಅಡ್ಡ ಇರುವುದು, ವಿಮಾನದ ಬಾಲ ರನ್‌ವೇಗೆ ಉಜ್ಜುವುದು, ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರುವುದು, ಹಾರ್ಡ್ ಲ್ಯಾಂಡಿಂಗ್ ಇವೆಲ್ಲವೂ ದುರಂತಕ್ಕೆ ಕಾರಣವಾಗುತ್ತವೆ.
5. ಹಾರಾಟದ ವೇಳೆ ಸಣ್ಣ ಹಕ್ಕಿಗಳು ವಿಮಾನಕ್ಕೆ ಬಡಿದರೂ, ಇಂಜಿನ್ ವೈಫಲ್ಯವಾಗಿ ಅವಘಡವಾಗುವ ಅಪಾಯವಿರುತ್ತದೆ.
ಬೋಯಿಂಗ್ ಕಂಪೆನಿಯ 787 ಡ್ರೀಮ್ ಲೈನರ್ ವಿಮಾನ ಅಪಘಾತಕ್ಕೀಡಾಗಿರುವುದು ಇದೇ ಮೊದಲು. ಆದರೆ, ಬೋಯಿಂಗ್ 787 ಡ್ರೀಮ್‌ಲೈನರ್ ಜೋಡಣೆ ದೋಷಪೂರಿತವಾಗಿರುವ ಸೂಚನೆ ಒಂದು ವರ್ಷದ ಹಿಂದೆಯೇ ಇತ್ತು ಎಂದು ವರದಿಗಳು ಹೇಳುತ್ತಿವೆ. ವೈಡ್-ಬಾಡಿ ಜೆಟ್ ತಯಾರಿಕೆಯಲ್ಲಿ ರಚನಾತ್ಮಕ ದೋಷಗಳಿರುವ ಬಗ್ಗೆ, ಅಸುರಕ್ಷಿತ ಜೋಡಣೆಯ ಬಗ್ಗೆ ಆರೋಪ ಕೇಳಿಬಂದಿತ್ತು. ಬೋಯಿಂಗ್‌ನಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲ ಇಂಜಿನಿಯರ್ ಆಗಿದ್ದ ಸ್ಯಾಮ್ ಸಲೆಹ್‌ಪೋರ್, ಜೋಡಣೆಯಲ್ಲಿನ ಅಸಮರ್ಪಕತೆಯ ಬಗ್ಗೆ ಆರೋಪ ಮಾಡಿದ್ದರು. ಅವರು ಬೋಯಿಂಗ್ 787 ಡ್ರೀಮ್‌ಲೈನರ್‌ನ ಬಗ್ಗೆ ಕಳೆದ ವರ್ಷವೇ ಗಂಭೀರ ಕಳವಳ ವ್ಯಕ್ತಪಡಿಸಿದ್ದರು ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ದೋಷಪೂರಿತ ಜೋಡಣೆ, ಸಾವಿರಾರು ಟ್ರಿಪ್‌ಗಳ ನಂತರ ಹಾರಾಟದ ವೇಳೆಯೇ ಅದು ಒಡೆಯಲು ಕಾರಣವಾಗಬಹುದು ಎಂದು ಅವರು ಹೇಳಿದ್ದರು. ಅಮೆರಿಕದ ವಿಮಾನ ತಯಾರಕರು ಶಾರ್ಟ್‌ಕಟ್‌ಗಳನ್ನು ಅನುಸರಿಸಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದು ಕಾಲಕ್ರಮೇಣ ದುರಂತ ವೈಫಲ್ಯಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದ್ದರು. ಅದರ ನಂತರ, ಯುಎಸ್ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಇದರ ಬಗ್ಗೆ ತನಿಖೆ ಪ್ರಾರಂಭಿಸಿತ್ತು. ಅದಾಗಿ ಸುಮಾರು ಒಂದು ವರ್ಷದ ನಂತರ ಈಗ ಈ ದುರಂತ ಸಂಭವಿಸಿಯೇಬಿಟ್ಟಿದೆ. ಸಲೆಹ್‌ಪೋರ್ ಎತ್ತಿದ ಕಳವಳಗಳೇ ಈ ಅಪಘಾತಕ್ಕೆ ಕಾರಣ ಎಂಬುದರ ಬಗ್ಗೆ ಯಾವುದೇ ಆರಂಭಿಕ ಪುರಾವೆಗಳಿಲ್ಲ ಎನ್ನಲಾಗಿದೆ.
ಭಾರತದ ಅತ್ಯಂತ ಮಾರಕ ವಿಮಾನ ಅಪಘಾತಗಳಿಂದ ಏನಾದರೂ ಪಾಠ ಕಲಿಯಲಾಗಿದೆಯೇ ಅಥವಾ ದುರಂತದ ಕರಾಳತೆ ಮಸುಕಾಗುತ್ತಲೇ ಮರೆತುಬಿಡಲಾಗಿದೆಯೇ ಎಂಬ ಪ್ರಶ್ನೆಯೂ ಕಾಡುತ್ತದೆ. ವರದಿಯೊಂದರ ಪ್ರಕಾರ, ಸ್ವಾತಂತ್ರ್ಯದ ನಂತರ ಭಾರತ 50ಕ್ಕೂ ಹೆಚ್ಚು ಪ್ರಮುಖ ವಾಯುಯಾನ ವಿಪತ್ತುಗಳನ್ನು ಕಂಡಿದೆ. ಭೀಕರ ವಿಮಾನ ಅಪಘಾತಗಳಿಂದ ಹಿಡಿದು ವಿಮಾನ ಅಪಹರಣಗಳವರೆಗೆ ಇಂತಹ ಘಟನೆಗಳ ವ್ಯಾಪ್ತಿಯಿದೆ. ಇವೆಲ್ಲವೂ ವಾಯುಯಾನ ಸುರಕ್ಷತಾ ಪ್ರೋಟೋಕಾಲ್‌ಗಳು ಮತ್ತು ನಿಯಂತ್ರಕ ಜಾರಿ ಬಗ್ಗೆ ತುರ್ತು ಕಳವಳಗಳನ್ನು ಹುಟ್ಟುಹಾಕಿವೆ.
ಈಗ ಅಹ್ಮದಾಬಾದ್ ವಿಮಾನ ದುರಂತದ ಬಳಿಕ, ವ್ಯವಸ್ಥಿತ ಸುಧಾರಣೆಗೆ ವಾಯುಯಾನ ತಜ್ಞರು ಮತ್ತೊಮ್ಮೆ ಕರೆ ನೀಡಿದ್ದಾರೆ. ದಶಕಗಳಿಂದ ಭಾರತ ವಾಣಿಜ್ಯ ವಿಮಾನಗಳನ್ನೂ ಒಳಗೊಂಡಂತೆ ಹಲವಾರು ಭೀಕರ ಅಪಘಾತಗಳು ಮತ್ತು ಅಪಹರಣಗಳನ್ನು ಕಂಡಿದೆ. ಇವಕ್ಕೆಲ್ಲ ಪೈಲಟ್ ದೋಷ, ತಾಂತ್ರಿಕ ವೈಫಲ್ಯಗಳು ಮತ್ತು ಭದ್ರತಾ ಲೋಪಗಳು ಪ್ರಮುಖ ಕಾರಣಗಳಾಗಿವೆ.
ಭಾರತ ತನ್ನ ವಾಯುಯಾನ ಮೂಲಸೌಕರ್ಯ ವಿಸ್ತರಿಸುವುದನ್ನು ಮುಂದುವರಿಸುತ್ತಿದ್ದಂತೆ, ಜಾರಿ, ನಿರ್ವಹಣೆ ಮತ್ತು ತರಬೇತಿಯಲ್ಲಿನ ಲೋಪಗಳು ಪ್ರಗತಿಗೆ ಅಡ್ಡಿಯಾಗಬಹುದು ಮತ್ತು ಪ್ರಯಾಣಿಕರಿಗೆ ಅಪಾಯವನ್ನು ಉಂಟುಮಾಡಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗ ಅಹ್ಮದಾಬಾದ್ ವಿಮಾನ ದುರಂತದ ಬಳಿಕ ಮತ್ತೊಮ್ಮೆ ಭಾರತದ ವಾಯು ಸುರಕ್ಷತೆ ವಿಷಯ ಚರ್ಚೆಯಲ್ಲಿದೆ. ಈ ದುರಂತ, 1940ರ ದಶಕದಿಂದ ಭಾರತೀಯ ನಾಗರಿಕ ವಿಮಾನಯಾನವನ್ನು ಕಾಡುತ್ತಲೇ ಬಂದಿರುವ ಹಲವಾರು ಘಟನೆಗಳ ಕರಾಳ ನೆನಪು ಮತ್ತೆ ತೆರೆದುಕೊಳ್ಳುವುದಕ್ಕೆ ಕಾರಣವಾಗಿದೆ.
ಅದೇ ಹೊತ್ತಲ್ಲಿ, ಹಳೆಯ ದುರಂತಗಳಿಂದ ನಾವೇನನ್ನಾದರೂ ಕಲಿತಿದ್ದೇವೆಯೇ ಎಂಬುದನ್ನು ಕೂಡ ಕೇಳಿಕೊಳ್ಳಬೇಕಾಗಿದೆ. ಆಕಾಶದಲ್ಲಿಯೇ ಸಂಭವಿಸಿದ ಚರ್ಖಿ ದಾದ್ರಿ ಢಿಕ್ಕಿ, ಮಂಗಳೂರು ವಿಮಾನ ದುರಂತ, ಕೋಝಿಕ್ಕೋಡ್ ದುರಂತ ಇವೆಲ್ಲವೂ ಕಣ್ಣೆದುರೇ ಇವೆ. ಪೈಲಟ್‌ಗಳ ತಪ್ಪು ಸಂವಹನ ಮತ್ತು ವಾಯು ಸಂಚಾರ ನಿಯಂತ್ರಣ ವೈಫಲ್ಯಗಳೇ ಈ ದುರಂತಕ್ಕೆ ಕಾರಣಗಳೆಂದು ತಿಳಿದಿದೆ. ಕಳಪೆ ರನ್‌ವೇ ಮತ್ತು ಪ್ರತಿಕೂಲ ಹವಾಮಾನಗಳು ಈ ದುರಂತಗಳಿಗೆ ಕಾರಣಗಳಾಗಿವೆ ಎಂದು ತನಿಖೆಗಳು ಉಲ್ಲೇಖಿಸಿವೆ.
ಇನ್ನೊಂದೆಡೆ, ಭಾರತದ ವಾಯುಯಾನ ಹಲವಾರು ಅಪಹರಣ ಪ್ರಯತ್ನಗಳನ್ನು ಕೂಡ ಕಂಡಿದೆ. 1971ರಿಂದ 2000ದ ಅವಧಿಯಲ್ಲಿ 15ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1999ರಲ್ಲಿ ಇಂಡಿಯನ್ ಏರ್‌ಲೈನ್ಸ್ ಫ್ಲೈಟ್ 814ನ್ನು ಸಶಸ್ತ್ರ ಉಗ್ರರು ಕಂದಹಾರ್‌ಗೆ ಅಪಹರಿಸಿದ್ದ ಘಟನೆ ಕೂಡ ಅವುಗಳಲ್ಲಿ ಸೇರಿದೆ. ಅಂತರ್‌ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆ (ಐಸಿಎಒ) 2019ರ ವರದಿ, ಭಾರತದ ವಾಯು ಸಂಚಾರ ಸೇವೆಗಳು ಮತ್ತು ನಿಯಂತ್ರಕ ಮೇಲ್ವಿಚಾರಣೆ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು.
ವಾಯು ಸಂಚಾರ ವ್ಯವಸ್ಥೆಗಳ ಆಧುನೀಕರಣ ಮತ್ತು ನಾಗರಿಕ ವಿಮಾನಯಾನ ಸುರಕ್ಷತಾ ಮೇಲ್ವಿಚಾರಣಾ ಮಂಡಳಿ ಸ್ಥಾಪನೆಯಂಥ ಸುಧಾರಣೆಗಳನ್ನು ಮಾಡಲಾಗಿರುವುದೇನೋ ಹೌದು. ಆದರೂ, ಇನ್ನೂ ಪ್ರಮುಖ ಸುಧಾರಣೆಗಳು ಆಗಬೇಕಿದೆ ಎಂಬುದರ ಕಡೆಗೆ ತಜ್ಞರು ಗಮನ ಸೆಳೆಯುತ್ತಾರೆ. ವಿಶೇಷವಾಗಿ ಪೈಲಟ್ ತರಬೇತಿ, ಬಿಕ್ಕಟ್ಟು ನಿರ್ವಹಣೆ ಮತ್ತು ರನ್‌ವೇ ಮೂಲಸೌಕರ್ಯದ ಬಗ್ಗೆ ಹೆಚ್ಚು ಗಮನ ಹರಿಸಬೇಕಿರುವುದರ ಬಗ್ಗೆ ಅವರು ಹೇಳುತ್ತಾರೆ.
ಭಾರತದಲ್ಲಿ ವಾಯುಯಾನ ಪ್ರಮಾಣ ವೇಗವಾಗಿ ಬೆಳೆಯುತ್ತಿರುವಾಗ, ಸುರಕ್ಷತೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಭಾರತ ಈಗ ವಿಶ್ವದ ಮೂರನೇ ಅತಿದೊಡ್ಡ ದೇಶೀಯ ವಿಮಾನಯಾನ ಮಾರುಕಟ್ಟೆಯಾಗಿದೆ. ಆದರೆ ಅದರ ಅಪಘಾತಗಳ ದಾಖಲೆ ಸುರಕ್ಷತಾ ಮಾನದಂಡಗಳನ್ನು ಅದು ಅಷ್ಟೇ ವೇಗದಲ್ಲಿ ತೆಗೆದುಕೊಳ್ಳುತ್ತಿದೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.
ಇದಲ್ಲದೆ, ಹವಾಮಾನ ಪರಿಸ್ಥಿತಿಗಳು, ಸವಾಲೊಡ್ಡುವಂಥ ವಿನ್ಯಾಸದ ವಿಮಾನ ನಿಲ್ದಾಣಗಳು ಮತ್ತು ಮೂಲಸೌಕರ್ಯ ನಿರ್ಬಂಧ ಇವೆಲ್ಲವೂ ಕಾರ್ಯಾಚರಣೆಯಲ್ಲಿ ಅಡ್ಡಿಯಾಗುವ ಅಂಶಗಳಾಗಿವೆ. ಟೇಬಲ್ ಟಾಪ್ ರನ್‌ವೇಗಳಲ್ಲಿ ನೆಲೆಗೊಂಡಿರುವ ಮಂಗಳೂರು ಮತ್ತು ಕೋಝಿಕ್ಕೋಡ್ ವಿಮಾನ ನಿಲ್ದಾಣಗಳು ಅವುಗಳ ಅಪಾಯಕಾರಿ ವಿನ್ಯಾಸಗಳಿಗಾಗಿ ಪದೇ ಪದೇ ಚರ್ಚೆಯಾಗಿವೆ ಎಂಬುದನ್ನು ಗಮನಿಸಬೇಕು.
ವಾಯುಯಾನ ತಜ್ಞ ಮತ್ತು ಮಾಜಿ ಪೈಲಟ್ ಕ್ಯಾಪ್ಟನ್ ಮೋಹನ್ ರಂಗನಾಥನ್, ಭಾರತದಲ್ಲಿನ ಸುರಕ್ಷತಾ ಮೇಲ್ವಿಚಾರಣೆ ಬಗ್ಗೆ ಬಹಳ ಹಿಂದೆಯೇ ಟೀಕಿಸಿದ್ದರು ಎಂಬುದನ್ನು ವರದಿಯೊಂದು ಹೇಳುತ್ತದೆ. ಮುಂಚೆಯೇ ಎಚ್ಚರ ವಹಿಸಿ ಸುರಕ್ಷತೆಯನ್ನು ನಿಭಾಯಿಸುವ ರೂಢಿಯ ಬದಲು, ಅವಘಡವಾದ ಬಳಿಕ ತಡಬಡಾಯಿಸುವ ಪ್ರವೃತ್ತಿ ಇರುವುದರ ಬಗ್ಗೆ ಅವರು ಹೇಳಿದ್ದರು.
ದಿಲ್ಲಿಯಿಂದ ದುಬೈಗೆ ಹೋಗಿ ಉದ್ಯೋಗ ಪಡೆದುಕೊಂಡ ವಿಮಾನ ತಂತ್ರಜ್ಞ ಅಭಿರಾಂ ಸಿಂಗ್ ಅವರ ಪ್ರಕಾರ, ಭಾರತದಲ್ಲಿ ವಿಮಾನಗಳ ನಿರ್ವಹಣೆಯ ಗುಣಮಟ್ಟ ಕಳಪೆಯಾಗಿದೆ. ಇಲ್ಲಿ ದಿನಕ್ಕೆ 12 ಗಂಟೆಗಳವರೆಗೆ ದುಡಿಯಬೇಕಾಗುತ್ತದೆ, ಸಂಬಳ ಕಡಿಮೆ ಮತ್ತು ವಿಮಾನಗಳ ಸರಿಯಾದ ನಿರ್ವಹಣೆ ಇರುವುದಿಲ್ಲ ಎಂದು ಅವರು ಹೇಳುತ್ತಾರೆ. ದುಬೈನಲ್ಲಿ ಎಮಿರೇಟ್ಸ್‌ನೊಂದಿಗೆ ಕೆಲಸ ಮಾಡುತ್ತಿರುವ ಅವರು, ಭಾರತ ಮತ್ತು ದುಬೈನ ವಿಮಾನ ನಿರ್ವಹಣೆಯಲ್ಲಿ ರಾತ್ರಿ ಮತ್ತು ಹಗಲಿನ ವ್ಯತ್ಯಾಸವಿದೆ ಎನ್ನುತ್ತಾರೆ. ಭಾರತದಲ್ಲಿ ಕೇವಲ ಒಂದು ಸುತ್ತಿನ ತಪಾಸಣೆ ಮಾತ್ರ ನಡೆಯುತ್ತದೆ, ಆದರೆ ದುಬೈನಲ್ಲಿ ಮೂರರಿಂದ ನಾಲ್ಕು ಸುತ್ತಿನ ತಪಾಸಣೆ ಕಡ್ಡಾಯವಾಗಿದೆ. ಅಲ್ಲದೆ, ಭಾರತದಲ್ಲಿ ಇಂಜಿನಿಯರ್‌ಗಳು ತಪಾಸಣೆಗೆ ಹಾಜರಾಗುವ ಖಾತರಿಯೂ ಇಲ್ಲದ ಕಾರಣ ತಪಾಸಣೆಯ ಗುಣಮಟ್ಟ ತೀರಾ ಕೆಳಮಟ್ಟದಲ್ಲಿರುತ್ತದೆ ಎಂದು ಅವರು ಅಭಿಪ್ರಾಯಪಡುತ್ತಾರೆ.
ಮಾರ್ಚ್ 2025ರ ವೇಳೆಗೆ ಭಾರತದ ಸುಮಾರು ಶೇ. 16 ವಿಮಾನಗಳು, ಅಂದರೆ ಸುಮಾರು 133 ವಿಮಾನಗಳನ್ನು ಹಾರಾಟಕ್ಕೆ ಯೋಗ್ಯವಲ್ಲ ಎಂದು ನಿಲ್ಲಿಸಲಾಗಿದೆ. ಗೋ ಏರ್‌ಲೈನ್ಸ್ ಶೇ. 50ರಷ್ಟು ವಿಮಾನಗಳನ್ನು ದೋಷಪೂರಿತ ಇಂಜಿನ್‌ಗಳ ಕಾರಣದಿಂದಾಗಿ ನೆಲಕ್ಕೆ ಇಳಿಸಿದೆ. ಇಂಡಿಗೋ ಕೂಡ ಜನವರಿ 30, 2025ರವರೆಗೆ 60 ರಿಂದ 70 ವಿಮಾನಗಳನ್ನು ನಿಲ್ಲಿಸಿತ್ತು. ನೀತಿ ಆಯೋಗದ ವರದಿಯ ಪ್ರಕಾರ, ಭಾರತದ ಎಂಆರ್‌ಒ (ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ) ಉದ್ಯಮವು ಪೂರೈಕೆ ಸರಪಳಿ ಮತ್ತು ಇಂಜಿನ್ ವೈಫಲ್ಯಗಳಿಂದ ತೊಂದರೆಗೀಡಾಗಿದೆ.
ಪ್ರತೀ ಸಲ ಅವಘಡಗಳು ಸಂಭವಿಸಿದಾಗಲೂ, ತನಿಖೆ ಮಾಡಲಾಗುತ್ತದೆ. ಆದರೆ, ತಪ್ಪು ಸರಿಪಡಿಸಿಕೊಳ್ಳುವ ಕೆಲಸ, ಆ ನಿಟ್ಟಿನಲ್ಲಿನ ಅಗತ್ಯ ಕ್ರಮಗಳ ಜಾರಿ ಆಗುತ್ತದೆಯೆ? ಇದು ದೊಡ್ಡ ಪ್ರಶ್ನೆ. ಈಗ ಅಹ್ಮದಾಬಾದ್ ದುರಂತದ ಬಗ್ಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ತನಿಖೆ ಪ್ರಾರಂಭಿಸಿದೆ. ಈ ಮತ್ತೊಂದು ತನಿಖೆಯ ನಂತರ ಏನಾಗುತ್ತದೆ?
ಈಗ ತನಿಖೆ ಜೋರಾಗಿರುವಾಗ, ವಿಮಾನಯಾನ ವಲಯ ಪ್ರಯಾಣಿಕರು, ಪಾಲುದಾರರು ಮತ್ತು ಅಂತರ್‌ರಾಷ್ಟ್ರೀಯ ನದರಿನಡಿಯಲ್ಲಿ ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಹೆಚ್ಚಿಸುವ ಬಗ್ಗೆ ತೀವ್ರ ಒತ್ತಡ ಎದುರಿಸುತ್ತದೆ. ಕ್ರಮೇಣ ಎಲ್ಲವೂ ಎಲ್ಲರಿಗೂ ಮರೆತುಹೋಗುತ್ತದೆ.







