Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ವಾರ್ತಾ ಭಾರತಿ ಅವಲೋಕನ
  5. ಹೊಸ ದಾಖಲೆ ನಿರ್ಮಿಸಲಿದ್ದಾರೆಯೇ ಸಿಎಂ...

ಹೊಸ ದಾಖಲೆ ನಿರ್ಮಿಸಲಿದ್ದಾರೆಯೇ ಸಿಎಂ ಸಿದ್ದರಾಮಯ್ಯ?

ಆರ್.ಜೀವಿಆರ್.ಜೀವಿ15 July 2025 12:45 PM IST
share
ಹೊಸ ದಾಖಲೆ ನಿರ್ಮಿಸಲಿದ್ದಾರೆಯೇ ಸಿಎಂ ಸಿದ್ದರಾಮಯ್ಯ?
ಕರ್ನಾಟಕದಲ್ಲಿ ಅಧಿಕಾರ ಹಂಚಿಕೆ ಸೂತ್ರ ವಿಚಾರ, ಸೆಪ್ಟಂಬರ್ ಕ್ರಾಂತಿಯ ಮಾತು ಇವೆಲ್ಲವೂ ಭಾರೀ ಚರ್ಚೆಯಲ್ಲಿರುವಾಗ, ಸಿದ್ದರಾಮಯ್ಯ ಅತ್ಯಂತ ದೀರ್ಘಾವಧಿಯ ಸಿಎಂ ಆಗಿ ದಾಖಲೆ ಬರೆಯುತ್ತಾರೆಯೇ ಇಲ್ಲವೇ ಎನ್ನುವ ಕುತೂಹಲವೂ ತೀವ್ರಗೊಂಡಿದೆ. ಈಗಾಗಲೇ ಒಂದು ಪೂರ್ಣಾವಧಿ ಮುಗಿಸಿರುವ ಸಿದ್ದರಾಮಯ್ಯ ಅವರು ಈ ಎರಡನೇ ಅವಧಿಯಲ್ಲಿ ಆಗಲೇ ಎರಡು ವರ್ಷಗಳನ್ನೂ ದಾಟಿ ಮುನ್ನಡೆದಿದ್ದಾರೆ. ಎರಡೂವರೆ ವರ್ಷದ ಗಡುವು ಹತ್ತಿರವಾಗುತ್ತಿರುವಾಗ, ಮುಂದೇನಾಗಬಹುದು ಎಂಬ ಊಹಾಪೋಹಗಳು ಸದ್ದು ಮಾಡುತ್ತಲೇ ಇವೆ. ಈ ನಡುವೆ, ಸಿದ್ದರಾಮಯ್ಯನವರು ಈ ಐದು ವರ್ಷವೂ ನಾನೇ ಸಿಎಂ ಎಂದು ದಿಲ್ಲಿಯಲ್ಲಿಯೂ ಮತ್ತೊಮ್ಮೆ ಹೇಳಿದ್ದಾರೆ. ರಾಜಕೀಯ ನಡೆಗಳು ಸುದ್ದಿಯಾಗುತ್ತಿರುವ ಈ ಹೊತ್ತಲ್ಲಿ, ಕರ್ನಾಟಕದ ಬಹುಪಾಲು ಮುಖ್ಯಮಂತ್ರಿಗಳು ಪೂರ್ಣಾವಧಿ ಪೂರೈಸದೆ ಇಳಿದುಹೋದವರಾಗಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳಬೇಕು. ೧೯೫೬ರಿಂದ ಈವರೆಗಿನ ಸುದೀರ್ಘ ಇತಿಹಾಸಲ್ಲಿ ಮೂವರು ಮುಖ್ಯಮಂತ್ರಿಗಳು ಮಾತ್ರವೇ ಪೂರ್ಣಾವಧಿ ಪೂರೈಸಿದವರು.

ಕರ್ನಾಟಕದಲ್ಲಿ ಈವರೆಗೆ ಮುಖ್ಯಮಂತ್ರಿ ಹುದ್ದೆಗೆ ಏರಿದವರು ಒಟ್ಟು 23 ನಾಯಕರು. ಅವರಲ್ಲಿ 9 ಮಂದಿ ಹೊರತುಪಡಿಸಿದರೆ ಉಳಿದವರೆಲ್ಲರೂ ಕಾಂಗ್ರೆಸ್‌ನವರು. ಹಾಗೆಯೇ ಪೂರ್ಣಾವಧಿ ಪೂರೈಸಿದ ಮೂವರು ಮುಖ್ಯಮಂತ್ರಿಗಳು ಕೂಡ ಕಾಂಗ್ರೆಸ್‌ನವರೇ ಆಗಿದ್ದಾರೆ.

ಇನ್ನು ದೀರ್ಘಾವಧಿ ಸಿಎಂ ಆಗಿದ್ದವರ ಪಟ್ಟಿ ನೋಡಿದರೆ, ಅಲ್ಲಿಯೂ ಕಾಂಗ್ರೆಸಿಗರೇ ಇದ್ದಾರೆ.

ಅತಿ ದೀರ್ಘಾವಧಿಗೆ ಸಿಎಂ ಆಗಿದ್ದವರಲ್ಲಿ ಮೊದಲನೆಯವರು ಡಿ. ದೇವರಾಜ ಅರಸು. ಎರಡನೆಯವರು ಎಸ್. ನಿಜಲಿಂಗಪ್ಪ. ಮೂರನೆಯವರಾಗಿರುವ ಸಿದ್ದರಾಮಯ್ಯ ಅವರು ಹುದ್ದೆಯಲ್ಲಿ ಮುಂದುವರಿದಿದ್ದು, ಅತಿ ದೀರ್ಘಾವಧಿಯ ಸಿಎಂ ಎಂಬ ಹೆಗ್ಗಳಿಕೆ ಗಳಿಸಲಿದ್ದಾರೆಯೇ ಎಂದು ನೋಡಬೇಕಿದೆ. ರಾಜ್ಯದ ಈವರೆಗಿನ ಅತಿ ದೀರ್ಘಾವಧಿಯ ಮುಖ್ಯಮಂತ್ರಿಯಾಗಿರುವ ದೇವರಾಜ ಅರಸು ಅವರ ದಾಖಲೆ ಸರಿಗಟ್ಟಲು ಸಿದ್ದರಾಮಯ್ಯ ಅವರು ಈಗಿನ ಸೆಪ್ಟಂಬರ್ ಕ್ರಾಂತಿ, ನವೆಂಬರ್ ಕಂಟಕಗಳನ್ನೆಲ್ಲ ಗೆದ್ದು ಮುಂದೆ ಹೋಗಬೇಕಿದೆ.

ಅರಸು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು ಮತ್ತು 2,792 ದಿನಗಳವರೆಗೆ, ಅಂದರೆ ಸುಮಾರು 7 ವರ್ಷ 7 ತಿಂಗಳುಗಳ ಕಾಲ ಸಿಎಂ ಹುದ್ದೆಯಲ್ಲಿದ್ದರು. ಸಿದ್ದರಾಮಯ್ಯ ಕೂಡ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾರೆ. ಈ ಎರಡನೇ ಅವಧಿಯಲ್ಲಿ ಈಗಾಗಲೇ ಎರಡು ವರ್ಷಗಳನ್ನು ಪೂರೈಸಿ ಮುನ್ನಡೆದಿದ್ದಾರೆ. ಅವರು ಮೇ ತಿಂಗಳಲ್ಲಿಯೇ 7 ವರ್ಷಗಳನ್ನು ಪೂರೈಸಿ ಆಗಿದೆ. ಎಲ್ಲವೂ ಸರಿಯಾಗಿ ನಡೆದರೆ, ಜನವರಿ 6, 2026ರಂದು ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಸರಿಗಟ್ಟುತ್ತಾರೆ.

ಆದರೆ, ಅದನ್ನೂ ಮೀರಿ, 10 ವರ್ಷಗಳನ್ನೇ ಅಧಿಕಾರದಲ್ಲಿ ಪೂರೈಸಿ ಹೊಸ ದಾಖಲೆ ಬರೆಯುವುದು ಸಿದ್ದರಾಮಯ್ಯ ಅವರ ಬಯಕೆಯಾಗಿದೆ. ಅಂಥ ವಿಶ್ವಾಸವನ್ನು ಕೂಡ ಅವರು ಈಗಾಗಲೇ ವ್ಯಕ್ತಪಡಿಸಿದ್ದಾರೆ. ಅವರ ಬೆಂಬಲಿಗ ಸಚಿವರು ಕೂಡ ಸಿದ್ದರಾಮಯ್ಯ ಅಂಥ ದಾಖಲೆ ಬರೆಯಲಿ ಎಂದು ಬಯಸುತ್ತಿದ್ದಾರೆ.

ಇನ್ನು, ಮುಖ್ಯಮಂತ್ರಿಗಳಾಗಿ ಪೂರ್ಣಾವಧಿ ಪೂರೈಸಿದ ಮತ್ತು ಪೂರೈಸಲಾರದೆ ಹೋದ ನಾಯಕರ ಏಳುಬೀಳಿನ ಕಥೆಯೂ ಕುತೂಹಲಕಾರಿಯಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಕೇವಲ ಮೂವರು ಮುಖ್ಯಮಂತ್ರಿಗಳು ಈವರೆಗೆ ಪೂರ್ಣಾವಧಿ ಪೂರೈಸಿದವರಾಗಿದ್ದಾರೆ ಮತ್ತು ಅವರೆಲ್ಲರೂ ಕಾಂಗ್ರೆಸ್‌ನಿಂದ ಬಂದವರು. ಈಗ ಎರಡನೇ ಅವಧಿಗೆ ಸಿಎಂ ಆಗಿ ಹುದ್ದೆಯಲ್ಲಿರುವ ಸಿದ್ದರಾಮಯ್ಯ ಹೊರತುಪಡಿಸಿದರೆ, ಪೂರ್ಣಾವಧಿ ಅಧಿಕಾರವನ್ನು ನಡೆಸಿದ ಇನ್ನಿಬ್ಬರು ಎಸ್. ನಿಜಲಿಂಗಪ್ಪ ಮತ್ತು ಡಿ. ದೇವರಾಜ ಅರಸು.

ಎಸ್. ನಿಜಲಿಂಗಪ್ಪ 1962ರಿಂದ 68ರವರೆಗೆ ಅಧಿಕಾರ ನಡೆಸುವ ಮೂಲಕ ಪೂರ್ಣಾವಧಿ ಮೀರಿ ಸಿಎಂ ಹುದ್ದೆಯಲ್ಲಿದ್ದರು. ಡಿ. ದೇವರಾಜ ಅರಸು 1972ರಿಂದ 77ರವರೆಗೆ ಹುದ್ದೆಯಲ್ಲಿರುವ ಮೂಲಕ ಪೂರ್ಣಾವಧಿ ಪೂರೈಸಿದ್ದರು. ಸಿದ್ದರಾಮಯ್ಯ ತಮ್ಮ ಮೊದಲ ಅವಧಿಯಾದ 2013ರಿಂದ 2018 ರವರೆಗೆ ಪೂರ್ಣಾವಧಿ ಪೂರ್ಣಗೊಳಿಸಿದ ಮುಖ್ಯಮಂತ್ರಿಯಾಗಿದ್ದಾರೆ. ಇನ್ನುಳಿದಂತೆ ಎಲ್ಲ ಮುಖ್ಯಮಂತ್ರಿಗಳು ಅವಧಿ ಮುಗಿಯುವುದಕ್ಕೂ ಮೊದಲೇ ಸ್ಥಾನ ಕಳೆದುಕೊಂಡಿದ್ದಾರೆ.

ಕರ್ನಾಟಕದ ಇತಿಹಾಸದುದ್ದಕ್ಕೂ ಹೆಚ್ಚಿನ ಮುಖ್ಯಮಂತ್ರಿಗಳು ಐದು ವರ್ಷಗಳ ಮೈಲಿಗಲ್ಲನ್ನು ತಲುಪುವಲ್ಲಿ ವಿಫಲರಾಗಿದ್ದಾರೆ. ಸಿದ್ದರಾಮಯ್ಯ ಪೂರ್ಣಾವಧಿ ಪೂರೈಸಿದಾಗ, ಕರ್ನಾಟಕದಲ್ಲಿ 40 ವರ್ಷಗಳ ನಂತರ ಪೂರ್ಣ ಐದು ವರ್ಷಗಳ ಅವಧಿ ಪೂರೈಸಿದ ಮೊದಲ ಮುಖ್ಯಮಂತ್ರಿ ಎನ್ನಿಸಿಕೊಂಡರು.

ಉಳಿದವರು ನಡುನಡುವೆಯೇ ಏಕೆ ಕುರ್ಚಿ ಬಿಟ್ಟು ಹೋಗಬೇಕಾಯಿತು? ಅನೇಕ ನಾಯಕರು ಇನ್ನೇನು ಕೆಲವೇ ದಿನಗಳಲ್ಲಿ ಐದು ವರ್ಷ ಪೂರೈಸುತ್ತಾರೆ ಎನ್ನುವ ಹಂತದಲ್ಲೇ ಅಧಿಕಾರ ಕಳೆದುಕೊಂಡದ್ದಿದೆ. ಹಲವರು ಅವಧಿ ಪೂರೈಸುವ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬೇಕಾದ ಅನಿವಾರ್ಯತೆ ಎದುರಾಯಿತು. ಮತ್ತೆ ಕೆಲವರು ಅವಧಿ ಪೂರೈಸುವುದಕ್ಕೂ ಮುನ್ನವೇ ಚುನಾವಣಾ ದಿನಾಂಕ ಘೋಷಣೆಯಾದ ಕಾರಣ ಈ ಅವಕಾಶದಿಂದ ವಂಚಿತರಾಗುವಂತಾಯಿತು.

ಆರ್. ಗುಂಡೂರಾವ್

1980 ರಿಂದ 83ರವರೆಗೆ 2 ವರ್ಷ 363 ದಿನಗಳು ಅವರು ಸಿಎಂ ಹುದ್ದೆಯಲ್ಲಿದ್ದರು. ತಮ್ಮ ಸರಕಾರವನ್ನು ಸ್ವತಃ ಅವರೇ ಇಂದಿರಾಪೋಷಿತ ನಾಟಕ ಕಂಪೆನಿ ಎಂದು ಕರೆದುಕೊಳ್ಳುತ್ತಿದ್ದರು ಎಂಬ ಉಲ್ಲೇಖಗಳಿವೆ. ಅವರ ಈ ಮನೋಧರ್ಮವೇ ಅವರ ರಾಜಕೀಯ ಅವನತಿಗೂ ಕಾರಣವಾಯಿತು ಎನ್ನಲಾಗುತ್ತದೆ. ಅವರ ಸಂಪುಟದ ಸಚಿವರ ಮೇಲಿನ ಭ್ರಷ್ಟಾಚಾರ ಆರೋಪಗಳು, ರೋಲರ್ ಫ್ಲೋರ್ ಮಿಲ್ ಲೈಸೆನ್ಸ್ ಹಗರಣ, ಬೆಂಗಳೂರಿನಲ್ಲಿ ಸಾರ್ವಜನಿಕ ವಲಯದ ಕೈಗಾರಿಕೆಗಳ ದೀರ್ಘ ಮುಷ್ಕರ, ಗೋಕಾಕ್ ಚಳವಳಿ, ಎಲ್ಲಕ್ಕಿಂತ ಹೆಚ್ಚಾಗಿ ನರಗುಂದ ಹಾಗೂ ನವಲಗುಂದಗಳಲ್ಲಿ ನಡೆದ ರೈತ ಚಳವಳಿ -ಇವು ಗುಂಡೂರಾಯರ ಅವನತಿಗೆ ಕಾರಣವಾದವು ಎನ್ನಲಾಗುತ್ತದೆ. 1983ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಗುಂಡೂರಾವ್ ಸೋಲುಂಡರು. ಅದರೊಂದಿಗೆ, ಅದೇ ಮೊದಲ ಬಾರಿಗೆ ರಾಜ್ಯದಲ್ಲಿ ಅಧಿಕಾರ ಕಾಂಗ್ರೆಸ್ ಕೈತಪ್ಪಿತು. ಜನತಾ ಪಕ್ಷದ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾದರು.

ರಾಮಕೃಷ್ಣ ಹೆಗಡೆ

1983ರಲ್ಲಿ ಹುದ್ದೆಗೇರಿದ ರಾಮಕೃಷ್ಣ ಹೆಗಡೆ ರಾಜ್ಯದ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಪಡೆದರು. 1983ರ ರಾಜ್ಯ ವಿಧಾನಸಸಭೆ ಚುನಾವಣೆಯಲ್ಲಿ ಜನತಾ ಪಕ್ಷ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಅಧಿಕಾರಕ್ಕೆ ಬಂತು. ರಾಮಕೃಷ್ಣ ಹೆಗಡೆ ಅವರು ಪ್ರಬಲ ಲಿಂಗಾಯತ ಮತ್ತು ಒಕ್ಕಲಿಗ ಲಾಬಿಗಳ ನಡುವೆ ಒಮ್ಮತದ ಬ್ರಾಹ್ಮಣ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಇತರ ಪಕ್ಷಗಳ ಬಾಹ್ಯ ಬೆಂಬಲದ ಮೂಲಕ ತಮ್ಮ ಸರಕಾರಕ್ಕೆ ಮೂರನೇ ಎರಡರಷ್ಟು ಬಹುಮತ ಗಳಿಸಿದರು. ಅವರ ಸರಕಾರ ಬಿಜೆಪಿ, ಎಡ ಪಕ್ಷಗಳು ಮತ್ತು 16 ಸ್ವತಂತ್ರ ಶಾಸಕರ ಬೆಂಬಲ ಪಡೆದಿತ್ತು. 1984ರ 8ನೇ ಲೋಕಸಭೆಯ ಚುನಾವಣೆಯಲ್ಲಿ ಜನತಾ ಪಕ್ಷದ ಪ್ರದರ್ಶನ ಕಳಪೆಯಾಗಿತ್ತು. ಕರ್ನಾಟಕದ 28 ಸ್ಥಾನಗಳಲ್ಲಿ ಕೇವಲ 4 ಸ್ಥಾನಗಳನ್ನು ಗೆದ್ದಿತು. ರಾಮಕೃಷ್ಣ ಹೆಗಡೆ ತಮ್ಮ ಪಕ್ಷ ತನ್ನ ಜನಪ್ರಿಯ ಜನಾದೇಶವನ್ನು ಕಳೆದುಕೊಂಡಿದೆ ಎಂಬ ಕಾರಣಕ್ಕೆ ವಿಧಾನಸಭೆ ವಿಸರ್ಜಿಸಿ, ತಮ್ಮ ಸರಕಾರಕ್ಕೆ ಹೊಸ ಜನಾದೇಶ ಕೋರಿದರು. 1985ರ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷ 139 ಸ್ಥಾನಗಳನ್ನು ಗೆದ್ದು ಬಹುಮತದೊಂದಿಗೆ ಸ್ವತಂತ್ರವಾಗಿ ಅಧಿಕಾರಕ್ಕೆ ಬಂತು.

ರಾಮಕೃಷ್ಣ ಹೆಗಡೆ ಮತ್ತೆ ಸಿಎಂ ಆದರು.

ನಂತರದ ಅವಧಿಯಲ್ಲಿ, 1988ರಲ್ಲಿ ದೂರವಾಣಿ ಕದ್ದಾಲಿಕೆ ಹಗರಣ ಭಾರೀ ವಿವಾದ ಎಬ್ಬಿಸಿದಾಗ ರಾಜೀನಾಮೆ ನೀಡಿದರು. ಹೀಗೆ, 1983ರಿಂದ 1985 ಮತ್ತು ಇನ್ನೊಮ್ಮೆ 1985ರಿಂದ 1988ರವರೆಗೆ ಕ್ರಮವಾಗಿ 7 ಮತ್ತು 8ನೇ ವಿಧಾನಸಭೆ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದರು. ಅವರ ನಂತರ ಎಸ್.ಆರ್. ಬೊಮ್ಮಾಯಿ ಸಿಎಂ ಆದರು.

ಎಸ್.ಆರ್. ಬೊಮ್ಮಾಯಿ

ಎಸ್.ಆರ್. ಬೊಮ್ಮಾಯಿ 1988ರಲ್ಲಿ ಮುಖ್ಯಮಂತ್ರಿಯಾದರು. ಆದರೆ 1989ರ ಎಪ್ರಿಲ್ ತಿಂಗಳಲ್ಲಿ, ಅಂದರೆ ಅವರು ಮುಖ್ಯಮಂತ್ರಿಯಾಗಿ 9 ತಿಂಗಳಾಗಿದ್ದಾಗ ಕೆಲ ಶಾಸಕರು ರಾಜ್ಯಪಾಲರನ್ನು ಭೇಟಿ ಮಾಡಿ ಬೊಮ್ಮಾಯಿ ಸರಕಾರಕ್ಕೆ ನೀಡಿದ ಬೆಂಬಲ ಹಿಂಪಡೆಯುವುದಾಗಿ ಹೇಳಿದರು. ಇದರ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿದ ಬೊಮ್ಮಾಯಿ, ಬಹುಮತ ಸಾಬೀತಿಗೆ ಸಮಯಾವಕಾಶ ಕೋರಿದ್ದರು. ಆದರೆ ಮರುದಿನವೇ ರಾಜ್ಯ ಸರಕಾರವನ್ನು ವಜಾ ಮಾಡಿ, ರಾಷ್ಟ್ರಪತಿ ಆಳ್ವಿಕೆಗೆ ರಾಜ್ಯಪಾಲ ವೆಂಕಟಸುಬ್ಬಯ್ಯ ಶಿಫಾರಸು ಮಾಡಿದ್ದರು ಮತ್ತು ರಾಷ್ಟ್ರಪತಿ ಆಳ್ವಿಕೆಯೂ ಘೋಷಣೆಯಾಗಿಯೇಬಿಟ್ಟಿತು. ಅಲ್ಲಿಗೆ ಎಸ್.ಆರ್. ಬೊಮ್ಮಾಯಿಯವರ ಸರಕಾರ ಒಂಭತ್ತೇ ತಿಂಗಳಲ್ಲಿ ಪತನವಾಗಿತ್ತು.

ಇದರ ವಿರುದ್ಧ ಹೈಕೋರ್ಟ್‌ನಲ್ಲಿಯೂ ಸೋಲು ಕಂಡ ಬೊಮ್ಮಾಯಿ, ಕಡೆಗೆ ಸುಪ್ರೀಂ ಕೋರ್ಟ್ ಕದ ತಟ್ಟಿದರು. ಪ್ರಕರಣವನ್ನು ಕೂಲಂಕಷವಾಗಿ ಪರಿಶೀಲಿಸಿದ ಸುಪ್ರೀಂಕೋರ್ಟ್, ಸರಕಾರವೊಂದು ಬಹುಮತ ಹೊಂದಿದೆಯೋ ಇಲ್ಲವೋ ಎಂಬುದನ್ನು ನಿರ್ಧರಿಸುವುದು ವಿಧಾನಸಭೆ ಅಧಿವೇಶನವೇ ಹೊರತು ರಾಜಭವನ ಅಲ್ಲ ಎಂದಿತು. ಸಂವಿಧಾನದ 356ನೇ ವಿಧಿ ರಾಷ್ಟ್ರಪತಿಗೆ ನೀಡಿರುವುದು ಷರತ್ತುಬದ್ಧ ಅಧಿಕಾರವನ್ನೇ ಹೊರತು ಪರಮಾಧಿಕಾರವನ್ನಲ್ಲ ಎಂಬ ಐತಿಹಾಸಿಕ ತೀರ್ಪನ್ನು ನೀಡಿತ್ತು. ಈ ಐತಿಹಾಸಿಕ ತೀರ್ಪು ‘ಬೊಮ್ಮಾಯಿ ಪ್ರಕರಣ’ ಎಂದೇ ಹೆಸರಾಗಿದೆ. ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ರಾಜ್ಯ ಸರಕಾರಗಳನ್ನು ಮಣಿಸುವ ಹುನ್ನಾರವನ್ನು ತಡೆಗಟ್ಟುವ ಸಂವಿಧಾನದ ಪರಿಚ್ಛೇದ 356ರ ದುರ್ಬಳಕೆ ವಿರುದ್ಧ ಸುಪ್ರೀಂ ಕೋರ್ಟ್ ಪ್ರಕಟಿಸಿದ ಐತಿಹಾಸಿಕ ತೀರ್ಪು ಅದಾಗಿದೆ.

ವೀರೇಂದ್ರ ಪಾಟೀಲ್

1989ರಲ್ಲಿ ಎರಡನೇ ಬಾರಿಗೆ ಸಿಎಂ ಹುದ್ದೆಗೇರಿದ್ದ ಪಾಟೀಲ್ ಅವರನ್ನು ರಾಜೀವ್ ಗಾಂಧಿ ಸೂಚನೆ ಮೇರೆಗೆ ಕಾಂಗ್ರೆಸ್ ಪಕ್ಷ ಏಕಾಏಕಿ ಸಿಎಂ ಹುದ್ದೆಯಿಂದ ಕಿತ್ತುಹಾಕಿತ್ತು. ಬೆಂಗಳೂರಿನಲ್ಲಿ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದ ಅದೇ ರಾಜೀವ್ ಗಾಂಧಿ ವಿಮಾನ ನಿಲ್ದಾಣದಿಂದ ದಿಲ್ಲಿಗೆ ಮರಳುವಾಗ ಬೇರೆಯದೇ ಸೂಚನೆ ಕೊಟ್ಟು ಪಾಟೀಲರಿಗೆ ಆಘಾತ ಉಂಟು ಮಾಡಿದ್ದರು. ಅವರಿಗೊಂದು ಮಾಹಿತಿಯನ್ನೂ ನೀಡದೆ, ಅನಾರೋಗ್ಯದ ನೆಪವೊಡ್ಡಿ ಸಿಎಂ ಹುದ್ದೆಯಿಂದ ಅವರನ್ನು ತೆಗೆದುಹಾಕಲಾಗಿತ್ತು. ಅವತ್ತಿನಿಂದಲೂ ಅಂಟಿಕೊಂಡ ಲಿಂಗಾಯತ ವಿರೋಧಿ ಆರೋಪದಿಂದ ಕಾಂಗ್ರೆಸ್ ಇವತ್ತಿಗೂ ಮುಕ್ತವಾಗಿಲ್ಲ.

ಎಸ್. ಬಂಗಾರಪ್ಪ

1990ರಲ್ಲಿ ರಾಜೀವ್ ಗಾಂಧಿ ಆದೇಶದ ಮೇರೆಗೆ ಪಾಟೀಲ್ ಅವರನ್ನು ಪದಚ್ಯುತಗೊಳಿಸಿದ ನಂತರ ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಲಾಯಿತು. ಆದರೆ 1992ರಲ್ಲಿ ಬಂಗಾರಪ್ಪ ಅವರ ಜಾಗಕ್ಕೆ ವೀರಪ್ಪ ಮೊಯ್ಲಿ ಅವರನ್ನು ತರಲಾಯಿತು. ಕ್ಲಾಸಿಕ್ ಕಂಪ್ಯೂಟರ್ಸ್ ಹಗರಣದ ಕಳಂಕ ಬಂಗಾರಪ್ಪ ಅವರ ಅಧಿಕಾರಾವಧಿಯನ್ನು ಕಾಡಿತ್ತು. ಕಡೆಗೆ ಅದರಿಂದ ಮುಕ್ತರಾದರು ಎಂಬುದು ಬೇರೆ. ಆದರೆ, ಕಾವೇರಿ ಗಲಭೆ ನಿರ್ವಹಿಸುವಲ್ಲಿ ಅವರ ಸರಕಾರ ವಿಫಲವಾದದ್ದು ಅವರ ಪದಚ್ಯುತಿಗೆ ಕಾರಣವಾಗಿತ್ತು.

ವೀರಪ್ಪ ಮೊಯ್ಲಿ

1992ರಲ್ಲಿ ಮೊಯ್ಲಿ ಸಿಎಂ ಹುದ್ದೆಗೇರಿದರು. 1994 ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾದಳ ಗೆಲ್ಲುವುದರೊಂದಿಗೆ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರ ಕಾಂಗ್ರೆಸ್ ಕೈತಪ್ಪಿತ್ತು.

ಎಚ್.ಡಿ. ದೇವೇಗೌಡ

1994ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ದೇವೇಗೌಡರ ಪಾಲಿಗೆ ಈ ದೇಶದ ಪ್ರಧಾನಿಯಾಗುವ ಭಾಗ್ಯ ಅವರು ಬಯಸದೆಯೇ ಬಂದಿತ್ತು. 1996ರಲ್ಲಿ ಯಾವುದೇ ಪಕ್ಷಕ್ಕೂ ಲೋಕಸಭೆಯಲ್ಲಿ ಸ್ಪಷ್ಟ ಬಹುಮತವಿರಲಿಲ್ಲ. ಆಗ, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿದ ಪಕ್ಷಗಳ ಯುನೈಟೆಡ್ ಫ್ರಂಟ್‌ಕಾಂಗ್ರೆಸ್ ಬೆಂಬಲದೊಂದಿಗೆ ಕೇಂದ್ರದಲ್ಲಿ ಸರಕಾರ ರಚಿಸಲು ನಿರ್ಧರಿಸಿತು. ಅನಿರೀಕ್ಷಿತವಾಗಿ ದೇವೇಗೌಡರು ಸರಕಾರದ ನೇತೃತ್ವ ವಹಿಸುವ ಅವಕಾಶ ಬಂದಿತ್ತು. ಭಾರತದ 11ನೇ ಪ್ರಧಾನಿಯಾಗಿ 1996ರ ಜೂನ್ 1ರಂದು ಅಧಿಕಾರ ವಹಿಸಿಕೊಂಡ ದೇವೇಗೌಡರು 1997ರ ಎಪ್ರಿಲ್ 21ರವರೆಗೆ ಅಧಿಕಾರದಲ್ಲಿದ್ದರು. ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಜೆ.ಎಚ್. ಪಟೇಲರು ಅಧಿಕಾರ ವಹಿಸಿಕೊಂಡು ಉಳಿದ ಅವಧಿ ಪೂರೈಸಿದ್ದರು.

ಎಸ್.ಎಂ. ಕೃಷ್ಣ

1999ರ ಅಕ್ಟೋಬರ್‌ನಲ್ಲಿ ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿ ಸರಕಾರ ರಚಿಸಿತ್ತು. ಆದರೆ, ಇನ್ನೇನು ಪೂರ್ಣಾವಧಿ ಮುಗಿಸಲು ಕೇವಲ 5 ತಿಂಗಳು ಇದೆ ಎನ್ನುವಾಗಲೇ ಲೋಕಸಭಾ ಚುನಾವಣೆ ಎದುರಾಗಿತ್ತು. ಹೀಗಾಗಿ ವಿಧಾನಸಭೆ ಚುನಾವಣೆಯೂ ಒಟ್ಟಿಗೇ ನಡೆಯಲಿ ಎನ್ನುವ ಉದ್ದೇಶದಿಂದ ಕೃಷ್ಣ ವಿಧಾನಸಭೆಯನ್ನು ವಿಸರ್ಜಿಸಿದ್ದರು.

ಹೀಗಾಗಿ ಪೂರ್ಣಾವಧಿ ಸಿಎಂ ಪಟ್ಟಿಗೆ ಅವರ ಹೆಸರು ಸೇರ್ಪಡೆಯಾಗುವುದು ತಪ್ಪಿಹೋಯಿತು.

ಧರಂ ಸಿಂಗ್

2004ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾದಾಗ ಧರಂ ಸಿಂಗ್ ಸಿಎಂ ಆದರು. ಆದರೆ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದಕ್ಕಾಗಿ ಧರಂ ಸಿಂಗ್ ಸರಕಾರಕ್ಕೆ ಕೈಕೊಟ್ಟು, ತಮ್ಮ ಪಕ್ಷದ 46 ಶಾಸಕರೊಡನೆ ಹೊರಬಂದಾಗ 2006ರ ಫೆಬ್ರವರಿಯಲ್ಲಿ ಧರಂ ಸಿಂಗ್ ಸರಕಾರ ಪತನವಾಯಿತು.

ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಪ್ರಾದೇಶಿಕ ಪಕ್ಷ ಜೆಡಿಎಸ್ ಹಲವು ಸಲ ಅಧಿಕಾರದ ಗದ್ದುಗೆ ಹಿಡಿದವು. ಆದರೂ, ಪೂರ್ಣಾವಧಿ ಪೂರೈಸಿದ ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದವರು ಮಾತ್ರ.

ಎಚ್.ಡಿ. ಕುಮಾರಸ್ವಾಮಿ

ಫೆಬ್ರವರಿ 2006ರಿಂದ 2007ರ ಅವಧಿಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರಕಾರದ ಅವಧಿಯಲ್ಲಿ ಕುಮಾರಸ್ವಾಮಿ ಮೊದಲಬಾರಿಗೆ ಮುಖ್ಯಮಂತ್ರಿ ಆಗಿದ್ದರು. ಅವರ ಮೊದಲ ಅವಧಿ 2 ವರ್ಷಗಳಿಗಿಂತಲೂ ಕಡಿಮೆಯಿತ್ತು. ಆದರೆ ಅಧಿಕಾರ ಹಂಚಿಕೆ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಮನಸ್ತಾಪ ಬಂದಾಗ, ಬಿಜೆಪಿ ಬೆಂಬಲ ವಾಪಸ್ ಪಡೆಯಿತು ಮತ್ತು ಮೈತ್ರಿ ಸರಕಾರ ಬಿದ್ದುಹೋಯಿತು.

ಅನಂತರ ಕುಮಾರಸ್ವಾಮಿ 2018ರಲ್ಲಿ ಮತ್ತೆ ಕಾಂಗ್ರೆಸ್ ಜೊತೆಗಿನ ಮೈತ್ರಿ ಸರಕಾರದಲ್ಲಿ ಸಿಎಂ ಆಗಿ 1 ವರ್ಷ 64 ದಿನಗಳವರೆಗೆ ಹುದ್ದೆಯಲ್ಲಿದ್ದರು. ಆಡಳಿತಾರೂಢ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರು ಆಪರೇಷನ್ ಕಮಲಕ್ಕೆ ಒಳಗಾದ ಪರಿಣಾಮವಾಗಿ ಸರಕಾರ ಪತನಗೊಂಡಿತ್ತು.

ಬಿ.ಎಸ್. ಯಡಿಯೂರಪ್ಪ

ಕುಮಾರಸ್ವಾಮಿ ಬಳಿಕ 2007ರಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಮೊತ್ತಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಆದರೆ ಜೆಡಿಎಸ್ ಬೆಂಬಲ ಹಿಂಪಡೆದ ಕಾರಣ 7 ದಿನಗಳಲ್ಲೇ ಬಿಎಸ್‌ವೈ ರಾಜೀನಾಮೆ ನೀಡಬೇಕಾಯಿತು. ಕಡೆಗೆ ರಾಷ್ಟ್ರಪತಿ ಆಡಳಿತ ಜಾರಿಗೆ ಬಂದಿತು.

2008ರಲ್ಲಿ ಬಿಜೆಪಿ ಜಯ ಸಾಧಿಸಿದ ನಂತರ ಯಡಿಯೂರಪ್ಪ ಮತ್ತೆ ಸಿಎಂ ಆದರು. ಆದರೆ, ಪಕ್ಷದಲ್ಲಿನ ಆಂತರಿಕ ಕಲಹ, ಭ್ರಷ್ಟಾಚಾರ ಆರೋಪಗಳ ಪರಿಣಾಮವಾಗಿ 2011ರ ಜುಲೈನಲ್ಲಿ ರಾಜೀನಾಮೆ ನೀಡಬೇಕಾಯಿತು. ಉಳಿದ ಅವಧಿಗೆ ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿದ್ದರು.

2018ರ ಚುನಾವಣೆಯಲ್ಲಿನ ಗೆಲುವಿನ ಬಳಿಕ ಮೈತ್ರಿ ಸರಕಾರ ಸ್ಥಾಪನೆಯಾಗುವುದಕ್ಕೂ ಮೊದಲೇ ಮತ್ತೆ ಬಿಎಸ್‌ವೈ ಸಿಎಂ ಆಗಿ ಪ್ರಮಾಣವಚನ ಕೂಡ ಸ್ವೀಕರಿಸಿದ್ದರು. ಆದರೆ ಬಹುಮತ ಸಾಬೀತುಪಡಿಲಾಗದ ಹಿನ್ನೆಲೆಯಲ್ಲಿ ಆರೇ ದಿನಗಳಲ್ಲಿ ಸಿಎಂ ಸ್ಥಾನದಿಂದ ಕೆಳಗಿಳಿದರು.

14 ತಿಂಗಳ ಬಳಿಕ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ 17 ಅತೃಪ್ತ ಶಾಸಕರನ್ನು ಬಿಜೆಪಿಎಗೆ ಸೆಳೆದು ಬಿಎಸ್‌ವೈ ನಾಲ್ಕನೇ ಬಾರಿ ಸಿಎಂ ಆಗಿ ಅಧಿಕಾರ ಸ್ವೀಕರಿಸಿದರು. ಆದರೆ ಎರಡು ವರ್ಷ ತುಂಬುತ್ತಲೇ ರಾಜೀನಾಮೆ ನೀಡಿದರು. ಅವರು ತಮ್ಮ ಭಾಷಣದಲ್ಲಿ ಬಿಜೆಪಿಯಲ್ಲಿನ 75 ವರ್ಷಗಳ ವಯೋಮಿತಿ ನಿಯಮವನ್ನು ಪ್ರಸ್ತಾಪಿಸಿದ್ದರು.

ಬಸವರಾಜ ಬೊಮ್ಮಾಯಿ

ಯಡಿಯೂರಪ್ಪ ಅವರು ಜುಲೈ 26, 2021ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಬಿಜೆಪಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿತು. ಅವರು ರಾಜ್ಯದಲ್ಲಿ ಬಿಜೆಪಿಯ ನಾಲ್ಕನೇ ಮುಖ್ಯಮಂತ್ರಿಯಾದರು. ಆದರೆ, 2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡಿತು. ಭಾರೀ ಬಹುಮತದೊಂದಿಗೆ ಗೆದ್ದ ಕಾಂಗ್ರೆಸ್ 2023ರ ಮೇ 20ರಂದು ಸರಕಾರ ರಚಿಸಿತು. ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು, ಮುಂದುವರಿದಿದ್ದಾರೆ.

ಕಡೆಯದಾಗಿ ಒಂದು ವಿಷಯ ಪ್ರಸ್ತಾಪಿಸುವುದಾದರೆ, ರಾಜ್ಯದ ಇತಿಹಾಸದಲ್ಲಿಯೇ ನಾಲ್ವರು ಮುಖ್ಯಮಂತ್ರಿಗಳನ್ನು ಕೊಟ್ಟ ಜಿಲ್ಲೆ ಶಿವಮೊಗ್ಗ. ಕಡಿದಾಳ್ ಮಂಜಪ್ಪ, ಎಸ್. ಬಂಗಾರಪ್ಪ, ಜೆ.ಎಚ್ ಪಟೇಲ್ ಮತ್ತು ಬಿ.ಎಸ್. ಯಡಿಯೂರಪ್ಪ ಈ ನಾಲ್ವರು. ಆದರೆ, ನಾಲ್ವರಲ್ಲಿ ಯಾರೂ ಪೂರ್ಣಾವಧಿ ಸಿಎಂ ಆಗುವುದು ಸಾಧ್ಯವಾಗಲೇ ಇಲ್ಲ.

share
ಆರ್.ಜೀವಿ
ಆರ್.ಜೀವಿ
Next Story
X