ಆಕ್ಸಿಯಮ್ 4 ಮಿಷನ್ ಭಾರತಕ್ಕೆ ಮಹತ್ವದ ಹೆಜ್ಜೆಯಾಗಲಿದೆಯೇ?

ಭಾಗ- 1
ಆಕ್ಸಿಯಮ್ 4 ಮಿಷನ್ ಅಮೆರಿಕ, ಭಾರತ, ಪೋಲ್ಯಾಂಡ್ ಮತ್ತು ಹಂಗೇರಿಗಳ ಗಗನಯಾತ್ರಿಗಳನ್ನು ಒಳಗೊಂಡಿದೆ. ಈ ಮಿಷನ್ ಭಾಗವಾಗಿ ಭಾರತದ ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರವೇಶಿಸಿದ್ದಾರೆ. ಇದರೊಂದಿಗೆ ಭಾರತ 41 ವರ್ಷಗಳ ಬಳಿಕ ಬಾಹ್ಯಾಕಾಶಕ್ಕೆ ಮಾನವನನ್ನು ಕಳಿಸಿದಂತಾಗಿದೆ. ಹಾಗಾಗಿ, ಇದು ಭಾರತದ ಪಾಲಿಗೆ ಬಾಹ್ಯಾಕಾಶ ಕಾರ್ಯಕ್ರಮದಲ್ಲಿನ ಹೊಸ ಹಂತವಾಗಿದೆ.
ಶುಭಾಂಶು ಶುಕ್ಲಾ ಯಾರು?
ಭಾರತೀಯ ವಾಯುಪಡೆಯ (ಐಎಎಫ್) ಅನುಭವಿ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅಕ್ಟೋಬರ್ 10, 1985ರಂದು ಭಾರತದ ಉತ್ತರ ಪ್ರದೇಶದ ಲಕ್ನೊದಲ್ಲಿ ಜನಿಸಿದರು. ಜೂನ್ 2006ರಲ್ಲಿ ಐಎಎಫ್ ಫೈಟರ್ ವಿಂಗ್‌ಗೆ ನಿಯೋಜನೆಗೊಂಡರು. ಅವರು Su-30 MKI, MiG-21, MiG-29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು An-32 ಸೇರಿದಂತೆ ವಿವಿಧ ವಿಮಾನಗಳಲ್ಲಿ 2,000 ಗಂಟೆಗಳ ಹಾರಾಟದ ಅನುಭವ ಹೊಂದಿದ್ದಾರೆ. ಮಾರ್ಚ್ 2024ರಲ್ಲಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಏರಿದರು. ಇವರು ಫೈಟರ್ ಕಾಂಬ್ಯಾಟ್ ಲೀಡರ್ ಕೂಡ ಆಗಿದ್ದಾರೆ.
2019ರಲ್ಲಿ ಇಸ್ರೋ, ಶುಭಾಂಶು ಅವರನ್ನು ಗಗನಯಾನಕ್ಕೆ ಆಯ್ಕೆ ಮಾಡಿತ್ತು. ಅವರು ರಶ್ಯದ ಮಾಸ್ಕೊದ ಸ್ಟಾರ್ ಸಿಟಿಯಲ್ಲಿರುವ ಯೂರಿ ಗಗಾರಿನ್ ಗಗನಯಾತ್ರಿ ತರಬೇತಿ ಕೇಂದ್ರದಲ್ಲಿ ಕಠಿಣ ತರಬೇತಿ ಪ್ರಾರಂಭಿಸಿದರು. ಈಗ ಅವರು ಬಾಹ್ಯಾಕಾಶದಲ್ಲಿದ್ದು, ಬಹಳ ಪ್ರಮುಖವಾದ ಪ್ರಯೋಗಗಳಿಗೆ ಸಜ್ಜಾಗಿದ್ದಾರೆ.
ಇದಕ್ಕೂ ಮೊದಲು ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯರಾಗಿದ್ದರು. ರಾಕೇಶ್ ಶರ್ಮಾ ಕೂಡ ಭಾರತೀಯ ವಾಯುಪಡೆಯ ಪೈಲಟ್ ಆಗಿದ್ದರು. 1984ರಲ್ಲಿ ರಶ್ಯದ ಬಾಹ್ಯಾಕಾಶ ಯೋಜನೆಯ ಭಾಗವಾಗಿ ರಾಕೇಶ್ ಶರ್ಮಾ ಬಾಹ್ಯಾಕಾಶಕ್ಕೆ ತೆರಳಿದ್ದರು. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಪ್ರಯತ್ನದಿಂದಾಗಿ ಇದು ಸಾಧ್ಯವಾಗಿತ್ತು. ರಶ್ಯದ ಇಬ್ಬರು ಗಗನಯಾತ್ರಿಗಳೊಂದಿಗೆ ರಾಕೇಶ್ ಶರ್ಮಾ ಅಂತರಿಕ್ಷಕ್ಕೆ ಹೋಗಿದ್ದರು. ಆ ಯೋಜನೆ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆ ಮತ್ತು ಕನಸುಗಳಿಗೆ ನಾಂದಿ ಹಾಡಿತ್ತು. ಆಗಿನ್ನೂ ಭಾರತದ ಬಾಹ್ಯಾಕಾಶ ಯೋಜನೆಗಳು ತೀರಾ ಆರಂಭಿಕ ಹಂತದಲ್ಲಿದ್ದವು. ರಾಕೇಶ್ ಶರ್ಮಾ ಅವರ ಸಾಧನೆಯ ಪ್ರಯೋಜನ ಪಡೆದುಕೊಳ್ಳಲು ಭಾರತದ ಬಳಿ ಪೂರಕ ಮೂಲಭೂತ ಸೌಕರ್ಯಗಳಾಗಲಿ, ತಂತ್ರಜ್ಞಾನಗಳಾಗಲಿ ಇರಲಿಲ್ಲ. ಅಲ್ಲದೆ, ಭವಿಷ್ಯದಲ್ಲಿ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ನಡೆಸುವ ಬಗೆಗಿನ ಯಾವುದೇ ದೀರ್ಘಾವಧಿ ಯೋಜನೆಗಳೂ ಭಾರತದ ಬಳಿ ಇರಲಿಲ್ಲ. ಈ ದಿಕ್ಕಿನ ಸಾಧನೆ ಒಂದರ್ಥದಲ್ಲಿ ಅಲ್ಲಿಗೇ ನಿಂತುಬಿಟ್ಟಿತ್ತು. ಈಗ ಶುಕ್ಲಾ ಬಾಹ್ಯಾಕಾಶ ಪ್ರವೇಶದೊಂದಿಗೆ ಭಾರತದ ಸಾಧನೆಗೆ ಹೊಸ ದಿಕ್ಕು ಸಿಕ್ಕಂತಾಗಿದೆ.
ಈ ಯೋಜನೆ ಭಾರತಕ್ಕೆ ಹೇಗೆ ಉಪಯುಕ್ತವಾಗಲಿದೆ?
ಅಮೆರಿಕ, ರಶ್ಯ, ಚೀನಾ ನಂತರ ಗಗನಯಾನ ಕ್ಷೇತ್ರದಲ್ಲಿ ಮಹತ್ವದ ಯೋಜನೆಗಳನ್ನು ಹಾಕಿಕೊಂಡಿರುವ ಭಾರತಕ್ಕೆ ಶುಭಾಂಶು ಶುಕ್ಲಾ ಅವರ ಗಗನಯಾನ ಬಹಳ ಮಹತ್ವದ್ದಾಗಿದೆ. ಮಾನವ ಸಹಿತ ಗಗನಯಾನ ಮಾನವ ರಹಿತ ಗಗನಯಾನಗಳಿಗೆ ಹೋಲಿಸಿದರೆ ಬಹಳ ಸಂಕೀರ್ಣ. ಹಾಗಾಗಿ, ಶುಕ್ಲಾ ಅವರ ಅನುಭವ ಸುರಕ್ಷಿತ ಗಗನಯಾನ ಯೋಜನೆಗಳನ್ನು ರೂಪಿಸುವಲ್ಲಿ ಬಹಳ ಮುಖ್ಯವಾಗಿ ನೆರವಿಗೆ ಬರಲಿದೆ. ತನ್ನದೇ ಆದ ಬಾಹ್ಯಾಕಾಶ ನಿಲ್ದಾಣ ಸಜ್ಜುಗೊಳಿಸುವುದು, ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸುವುದು ಮೊದಲಾದ ಯೋಜನೆಗಳನ್ನು ಹಾಕಿಕೊಂಡಿರುವ ಭಾರತಕ್ಕೆ ಈ ಹೆಜ್ಜೆ ಬಹಳ ದೊಡ್ಡ ಎತ್ತರಕ್ಕೆ ತಲುಪಿಸುವಂಥದ್ದಾಗಿದೆ. ಶುಭಾಂಶು ಶುಕ್ಲಾ ಅವರ ಈ ಗಗನಯಾತ್ರೆಗಾಗಿ ಇಸ್ರೋ ಮಾಡಿರುವ ವೆಚ್ಚ 500 ಕೋಟಿ ರೂ. ಎನ್ನಲಾಗಿದೆ.
ಬಾಹ್ಯಾಕಾಶದಲ್ಲಿ ಶುಕ್ಲಾ ಕೈಗೊಳ್ಳಲಿರುವ ಪ್ರಯೋಗಗಳೇನು?
14 ದಿನ ಐಎಸ್‌ಎಸ್‌ನಲ್ಲೇ ಇರುವ ನಾಲ್ವರು ಗಗನಯಾತ್ರಿಗಳು, 60 ವಿವಿಧ ಪ್ರಯೋಗಗಳನ್ನು ನಡೆಸಲಿದ್ದಾರೆ. ಭಾರತದ ಪರವಾಗಿ ಶುಭಾಂಶು ಶುಕ್ಲಾ ಒಟ್ಟು 7 ಪ್ರಯೋಗಗಳನ್ನು ನಡೆಸಲಿದ್ದಾರೆ. ವಿಶೇಷವೆಂದರೆ, ಶುಕ್ಲಾ ನಡೆಸುವ 7 ಪ್ರಯೋಗಗಳ ಪೈಕಿ ಕರ್ನಾಟಕದ್ದೇ 4 ಇವೆ. ಕರ್ನಾಟಕದ ಅಧ್ಯಯನ ಸಂಸ್ಥೆಗಳು ರೂಪಿಸಿರುವ 4 ಪ್ರಯೋಗಗಳು, ದಿಲ್ಲಿಯ 2 ಮತ್ತು ಕೇರಳದ 1 ಪ್ರಯೋಗಗಳು ಅಲ್ಲಿ ನಡೆಯಲಿವೆೆ.
1. ಮಯೋಜೆನೆಸಿಸ್
ಭೂಮಿಯಲ್ಲಿ ಎಲ್ಲದರ ಮೇಲೂ ಗುರುತ್ವಾಕರ್ಷಣೆಯ ಪರಿಣಾಮ ಇರುವುದರಿಂದ, ಅದರಿಂದ ಪ್ರತ್ಯೇಕಿಸಿ ಪ್ರಯೋಗಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅತ್ಯಂತ ಕಡಿಮೆ ಗುರುತ್ವಾಕರ್ಷಣೆ ಶಕ್ತಿ (ಮೈಕ್ರೋಗ್ರ್ಯಾವಿಟಿ) ಇರುವ ಬಾಹ್ಯಾಕಾಶದಲ್ಲಿ, ಭೂಮಿಯಲ್ಲಿ ಕೈಗೊಳ್ಳಲಾಗದ ಪ್ರಯೋಗಗಳನ್ನು ನಡೆಸಲು ಅವಕಾಶವಿದೆ. ಬಾಹ್ಯಾಕಾಶದಲ್ಲಿ ಕೇವಲ ನೈಸರ್ಗಿಕ ಕಾರಣಗಳಿಂದ ಸ್ನಾಯುಗಳು ಹೇಗೆ ಬದಲಾಗುತ್ತವೆ ಎನ್ನುವುದನ್ನು ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಇಸ್ರೊ ದೇಹದ ತೂಕದ ಪರಿಣಾಮವಾಗಿ ಸ್ನಾಯುಗಳು ದುರ್ಬಲಗೊಳ್ಳುವುದರ ಬಗೆಗಿನ ಅಧ್ಯಯನ ನಡೆಸಲು ಮುಂದಾಗಿದೆ. ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಸ್ನಾಯು ಕ್ಷೀಣಗೊಳ್ಳುವುದಕ್ಕೆ ಕಾರಣವೇನು ಎಂಬುದರ ಬಗ್ಗೆ ಶುಕ್ಲಾ ಪ್ರಯೋಗ ನಡೆಸಲಿದ್ದಾರೆ. ಬೆಂಗಳೂರಿನ ಬ್ರಿಕ್ ಇನ್ ಸ್ಟೆಮ್ ಸಂಸ್ಥೆ ಈ ಪ್ರಯೋಗವನ್ನು ಸಿದ್ಧಪಡಿಸಿದೆ.
2. ಟಾರ್ಡಿಗ್ರೇಡ್‌ಗಳ ಪ್ರಯೋಗ
ಟಾರ್ಡಿಗ್ರೇಡ್ಸ್ ಎಂದು ಕರೆಯಲಾಗುವ ನೀರು ಕರಡಿಗಳು ಎಂಟು ಕಾಲುಗಳುಳ್ಳ ಅತಿ ಸಣ್ಣ ಜೀವಿಗಳಾಗಿದ್ದು, ಎಂಥದೇ ಕಠಿಣ ಸನ್ನಿವೇಶದಲ್ಲೂ ಬದುಕುಳಿಯುವ ಸಾಮರ್ಥ್ಯ ಹೊಂದಿವೆ. ಬಲವಾದ ವಿಕಿರಣ ನಿರ್ವಾತ ಮತ್ತು ಅತಿಯಾದ ತಣ್ಣಗಿನ ವಾತಾವರಣದಲ್ಲೂ ಇವು ಜೀವಿಸಬಲ್ಲವು. ಬಾಹ್ಯಾಕಾಶದಲ್ಲಿ ಇವು ಹೇಗೆ ಬದುಕುಳಿಯುತ್ತವೆ ಎಂಬ ಬಗ್ಗೆ ಸಂಶೋಧನೆ ಮಾಡಲಾಗುತ್ತದೆ. ಇದನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದೆ.
3. ಇಲೆಕ್ಟ್ರಾನಿಕ್ ಡಿಸ್ಪ್ಲೇ ಬಳಕೆ ಪರಿಣಾಮಗಳ ಪ್ರಯೋಗ
ಬಾಹ್ಯಾಕಾಶದಲ್ಲಿ ಸೂಕ್ಷ್ಮ ಗುರುತ್ವಾಕರ್ಷಣೆಯಲ್ಲಿ ಕಂಪ್ಯೂಟರ್ ಸೇರಿದಂತೆ ಇಲೆಕ್ಟ್ರಾನಿಕ್ ಪರದೆಗಳನ್ನು ಗಗನಯಾತ್ರಿಗಳು ಹೇಗೆ ಬಳಸುತ್ತಾರೆ ಮತ್ತು ಅವನ್ನು ಬಳಸುವುದರಿಂದ ಉಂಟಾಗುವ ಪರಿಣಾಮಗಳೇನು ಎಂಬುದನ್ನು ಇದರಲ್ಲಿ ಅಧ್ಯಯನಿಸಲಾಗುತ್ತದೆ. ಇದನ್ನು ಕೂಡ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದೆ.
4. ಬೀಜ ಮೊಳಕೆ ಪ್ರಯೋಗ
ಸೂಕ್ಷ್ಮ ಗುರುತ್ವಾಕರ್ಷಣೆಯಿರುವ ಬಾಹ್ಯಾಕಾಶದಲ್ಲಿ ಧಾನ್ಯಗಳು ಹೇಗೆ ಮೊಳಕೆಯೊಡೆಯುತ್ತವೆ ಎಂಬುದರ ಅಧ್ಯಯನ ನಡೆಯಲಿದೆ. ಈ ಪ್ರಯೋಗ ಬಾಹ್ಯಾಕಾಶದಲ್ಲಿ ಬೀಜಗಳು ಹೇಗೆ ಬೆಳೆಯುತ್ತವೆ ಎನ್ನುವುದನ್ನು ತಿಳಿಯಲು ವಿಜ್ಞಾನಿಗಳಿಗೆ ನೆರವಾಗಲಿದೆ. ಬಾಹ್ಯಾಕಾಶ ಆಧರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಹೆಸರುಕಾಳು ಮತ್ತು ಮೆಂತೆ ಬೀಜಗಳ ಮೊಳಕೆಯ ಅಧ್ಯಯನ ಮಾಡಲಾಗುತ್ತದೆ. ಹೆಸರು ಮತ್ತು ಮೆಂತೆಯಂತಹ ಬೆಳೆಗಳು ಆರೋಗ್ಯಕರ ಮತ್ತು ಭಾರತೀಯರಿಗೆ ಚಿರಪರಿಚಿತ. ಇವುಗಳನ್ನು ಆರಿಸುವ ಮೂಲಕ ಇಸ್ರೋ ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿ ತಾಜಾ ಆಹಾರ ಸೇವಿಸುವಂತೆ ಮಾಡುವ ಗುರಿ ಈ ಪ್ರಯೋಗದ್ದಾಗಿದೆ. ಧಾರವಾಡದ ಕೃಷಿ ವಿವಿ ಈ ಪ್ರಯೋಗದ ಹಿಂದೆ ಕೆಲಸ ಮಾಡಿದೆ.
5. ಆಹಾರ ಬೆಳೆಗಳ ಅಧ್ಯಯನ
ಬಾಹ್ಯಾಕಾಶದಲ್ಲಿ ವಿವಿಧ ಆಹಾರ ಬೆಳೆಗಳ ಬೆಳವಣಿಗೆ ಮತ್ತು ಆನುವಂಶಿಕ ವಿಶ್ಲೇಷಣೆ ಮಾಡಲಾಗುತ್ತದೆ. ಬಾಹ್ಯಾಕಾಶದಲ್ಲಿನ ವಾತಾವರಣ ಬಿತ್ತನೆ ಬೀಜಗಳ ಮೇಲೆ ಏನು ಪರಿಣಾಮ ಬೀರಲಿದೆ ಎನ್ನುವುದನ್ನು ತಿಳಿಯಲು ಈ ಪ್ರಯೋಗ ಮಹತ್ವದ್ದಾಗಿದೆ. ಇದಕ್ಕಾಗಿ ಆರು ಪ್ರಭೇದದ ಬಿತ್ತನೆ ಬೀಜಗಳನ್ನು ಕೊಂಡೊಯ್ಯಲಾಗಿದೆ. ಭೂಮಿಗೆ ಮರಳಿದ ಬಳಿಕ ವಿಜ್ಞಾನಿಗಳು ಅವುಗಳನ್ನು ಭೂಮಿಯಲ್ಲಿ ಬಿತ್ತನೆ ಮಾಡಿ, ಗಿಡಗಳನ್ನು ಬೆಳೆಸಿ ಪರಿಶೀಲಿಸಲಿದ್ದಾರೆ. ಕೇರಳದ ತಿರುವನಂತಪುರದ ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಇದನ್ನು ಸಿದ್ಧಪಡಿಸಿದೆ.
6. ಪಾಚಿಗಳ ಅಧ್ಯಯನ
ಗುರುತ್ವಾಕರ್ಷಣೆ ಇಲ್ಲದ ಜಾಗದಲ್ಲಿ ಸೂಕ್ಷ್ಮ ಪಾಚಿಗಳು (ಮೈಕ್ರೊ ಅಲ್ಗೆ) ಹೇಗೆ ಬೆಳೆಯುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯೋಗ ನಡೆಯಲಿದೆ. ಮೂರು ತಳಿಗಳ ಪಾಚಿಗಳ ಬೆಳವಣಿಗೆ, ಚಯಾಪಚಯ ಕ್ರಿಯೆ ಮತ್ತು ಆನುವಂಶಿಕ ಚಟುವಟಿಕೆಗಳ ಅಧ್ಯಯನ ಮಾಡಲಾಗುತ್ತದೆ. ಇದನ್ನು ದಿಲ್ಲಿಯ ಐಸಿಜಿಇಬಿಯ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.
7. ಸಯನೋಬ್ಯಾಕ್ಟೀರಿಯಾ ಅಧ್ಯಯನ
ನೀರಿನಲ್ಲಿ ಕಂಡುಬರುವ ಸಯನೋಬ್ಯಾಕ್ಟೀರಿಯಾಗಳು ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸುವ ಸಾಮರ್ಥ್ಯ ಹೊಂದಿವೆ. ಬಾಹ್ಯಾಕಾಶ ವಾತಾವರಣದಲ್ಲಿ ಇವುಗಳ ಮೇಲೆ ಏನು ಪರಿಣಾಮ ಉಂಟಾಗಲಿದೆ ಎಂಬುದರ ಪ್ರಯೋಗ ನಡೆಯಲಿದೆ. ಎರಡು ವಿಧದ ಸಯನೋಬ್ಯಾಕ್ಟೀರಿಯಾಗಳ ಬೆಳವಣಿಗೆಯ ಅಧ್ಯಯನ ಮಾಡಲಾಗುತ್ತದೆ. ಸೂಕ್ಷ್ಮ ಗುರುತ್ವದ ವಾತಾವರಣದಲ್ಲಿ ಅವುಗಳ ಜೈವಿಕ ಚಟುವಟಿಕೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಈ ಪ್ರಯೋಗವನ್ನು ಕೂಡ ದಿಲ್ಲಿಯ ಐಸಿಜಿಇಬಿಯ ವಿಜ್ಞಾನಿಗಳು ಸಿದ್ಧಪಡಿಸಿದ್ದಾರೆ.
ಬಾಹ್ಯಾಕಾಶ ಸಂಶೋಧನೆ ಮತ್ತು ಅಧ್ಯಯನದಲ್ಲಿ ಇಸ್ರೋ ಈಗಾಗಲೇ ಮಾಡಿರುವ ಸಾಧನೆಗಳು ಬಹಳ ಇವೆ. ಈ ದಿಸೆಯಲ್ಲಿನ ಇಸ್ರೊ ಪ್ರಯಾಣ ಅಸಾಧಾರಣವಾದದ್ದಾಗಿದೆ. ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮದ ಪಿತಾಮಹ ಎಂದೇ ಗುರುತಿಸಲಾಗುವ ಡಾ. ವಿಕ್ರಮ್ ಸಾರಾಭಾಯ್ ಅವರ ಕನಸಿನಿಂದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಹುಟ್ಟಿಕೊಂಡಿತು. 1960ರ ದಶಕದ ಆರಂಭದಲ್ಲಿ ಪ್ರಾರಂಭವಾದ ಇಸ್ರೋ ಪ್ರಯಾಣ ಇವತ್ತು ಗಮನಾರ್ಹವಾಗಿ ಬೆಳೆದಿದೆ. 1962ರಲ್ಲಿ ಸ್ಥಾಪನೆಗೊಂಡ ಇಂಕೋಸ್ಪಾರ್ ಸಂಸ್ಥೆಯಿಂದ ಆಗಸ್ಟ್ 15, 1969ರಂದು ಇಸ್ರೋ ಹುಟ್ಟಿತು.
1963ರಲ್ಲಿ ಕೇರಳದ ಒಂದು ಸಣ್ಣ ಹಳ್ಳಿಯಿಂದ ಭಾರತ ತನ್ನ ಮೊದಲ ಸೌಂಡಿಂಗ್ ರಾಕೆಟ್ ಅನ್ನು ಉಡಾವಣೆ ಮಾಡಿತು. ಅಲ್ಲಿಂದ ಮೊದಲಾಗಿ 2014ರಲ್ಲಿ ತನ್ನ ಮೊದಲ ಪ್ರಯತ್ನದಲ್ಲೇ ಮಂಗಳ ಗ್ರಹದ ಮೇಲೆ ಇಳಿಯುವವರೆಗೆ, ಭಾರತ ಬಾಹ್ಯಾಕಾಶದಲ್ಲಿ ಕಡಿಮೆ ವೆಚ್ಚದಲ್ಲಿಯೇ ಅಪ್ರತಿಮ ಸಾಧನೆಗಳನ್ನು ಮಾಡಿದೆ. ದೇಶದ ಬಾಹ್ಯಾಕಾಶ ಉದ್ಯಮ ಮತ್ತು ಆರ್ಥಿಕತೆಯನ್ನು ಇಸ್ರೋ ಮುನ್ನಡೆಸಿದೆ.







