ಸಚಿವ ಸ್ಥಾನ ಸಿಗದವರು ತಾಳ್ಮೆಯಿಂದಿರಲಿ; ಮುಂದಿನ ದಿನಗಳಲ್ಲಿ ಅವಕಾಶ : ಡಾ.ಅಜಯ್ ಧರ್ಮಸಿಂಗ್

ರಾಯಚೂರು : ಎಲ್ಲರಿಗೂ ಸಚಿವ ಸ್ಥಾನ ಸಿಗುವುದು ಸಾಧ್ಯವಿಲ್ಲ. ಸಚಿವ ಸ್ಥಾನ ಸಿಗದ ಕಾರಣ ಅಸಮಾಧಾನ ವ್ಯಕ್ತವಾಗುವುದು ಕಾಂಗ್ರೆಸ್‌ನಲ್ಲಿ ಮಾತ್ರವಲ್ಲ, ಎಲ್ಲ ಪಕ್ಷಗಳಲ್ಲಿಯೂ ಸಹಜ. ಈ ಬಾರಿ ಹಿರಿಯರೊಂದಿಗೆ ಹೊಸಬರಿಗೂ ಸಚಿವ ಸ್ಥಾನ ನೀಡಲಾಗಿದ್ದು, ಆಯ್ಕೆಯಾದ ಎಲ್ಲರೂ ಅರ್ಹರು ಎಂದು ಸಚಿವ ಡಾ.ಅಜಯ್ ಧರ್ಮಸಿಂಗ್ ಹೇಳಿದರು.
ಶುಕ್ರವಾರ ಬರ ಅಧ್ಯಯನಕ್ಕಾಗಿ ರಾಯಚೂರು ತಾಲೂಕಿನ ಹುಣಿಸೆಹಾಳ ಹುಡಾ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಸಿಗದವರು ತಾಳ್ಮೆಯಿಂದ ಇರಬೇಕು. ಇನ್ನೂ ಅನೇಕ ಅರ್ಹ ನಾಯಕರು ಇದ್ದು, ಮುಂದಿನ ದಿನಗಳಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ದೊರೆಯಲಿದೆ ಎಂದು ಪಕ್ಷದ ನಾಯಕತ್ವ ಮನವರಿಕೆ ಮಾಡಿದೆ ಎಂದು ಹೇಳಿದರು.
ಫಸಲ್ ವಿಮಾ ಯೋಜನೆಯಡಿ ರೈತರಿಗೆ ಬೆಳೆ ನಷ್ಟ ಪರಿಹಾರ ಸಮರ್ಪಕವಾಗಿ ಸಿಗದಿರುವ ಹಿನ್ನೆಲೆಯಲ್ಲಿ ಅದರಲ್ಲಿನ ಲೋಪದೋಷಗಳನ್ನು ಸರಿಪಡಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಮಾ ಕಂಪನಿಗಳೊಂದಿಗೆ ಸಭೆ ನಡೆಸಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.
ಬರ ಅಧ್ಯಯನದ ಕುರಿತು ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 2.27 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದ್ದು, ಅದರಲ್ಲಿ ಸುಮಾರು 1.60 ಲಕ್ಷ ಹೆಕ್ಟೇರ್ ಹತ್ತಿ ಬೆಳೆ ಹಾನಿಗೀಡಾಗಿದೆ. ತೊಗರಿ ಹಾಗೂ ಸೂರ್ಯಕಾಂತಿ ಬೆಳೆಗಳು ಶೇ.90ರಷ್ಟು ಹಾನಿಗೊಳಗಾಗಿವೆ. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಬೆಳೆ ಹಾನಿ ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಕ್ರಮವಹಿಸಲಾಗುವುದು ಎಂದರು.
ನಮ್ಮ ಸರ್ಕಾರ ರೈತರ ಪರವಾಗಿದೆ. ಬೆಳೆ ಹಾನಿಗೆ ಹೆಚ್ಚಿನ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ ಎಂದು ಹೇಳಿದರು.
ರಾಯಚೂರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಕೆಕೆಆರ್‌ಡಿಬಿ ಅಧ್ಯಕ್ಷ ಸ್ಥಾನ ಹಾಗೂ ವಿವಿಧ ನಿಗಮ-ಮಂಡಳಿಗಳಲ್ಲಿ ಜಿಲ್ಲೆಗೆ ಆದ್ಯತೆ ನೀಡಬೇಕೆಂಬ ಬೇಡಿಕೆ ಕುರಿತು ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.






