ಉಪರಾಷ್ಟ್ರಪತಿ ಚುನಾವಣೆ ಇಂದು; ಅಂತಿಮ ಲೆಕ್ಕಾಚಾರ ಹೀಗಿದೆ...

PC: x.com/shaileshreddi
ಹೊಸದಿಲ್ಲಿ: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಜುಲೈ 21ರಂದು ದಿಢೀರ್ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿಯಾಗಿ ಕಣದಲ್ಲಿರುವ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ.ರಾಧಾಕೃಷ್ಣನ್ ಮತ್ತು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ.ಸುದರ್ಶನ್ ರೆಡ್ಡಿಯವರ ನಡುವೆ ತುರುಸಿನ ಪೈಪೋಟಿ ದೇಶದ ಕುತೂಹಲ ಕೆರಳಿಸಿದೆ.
ಮಂಗಳವಾರ ನಡೆಯುವ ಚುನಾವಣೆ ಎಲ್ಲ ಕುತೂಹಲಗಳಿಗೆ ಉತ್ತರವಾಗಲಿದ್ದು, ಎನ್ಡಿಎ ಅಭ್ಯರ್ಥಿಯ ಗೆಲುವು ನಿಶ್ಚಿತವಾಗಿದ್ದರೂ, ಕೊನೆ ಕ್ಷಣದ ರಾಜಕೀಯ ಬೆಳವಣಿಗೆಗಳಿಂದಾಗಿ ನಿರಾಯಾಸ ಎನ್ನುವ ಪರಿಸ್ಥಿತಿ ಬದಲಾಗಿದೆ. 781 ಮಂದಿ ಒಟ್ಟು ಮತದಾರರಿರುವ ಚುನಾವಣೆಯಲ್ಲಿ ಗೆಲುವಿಗೆ 391 ಮತಗಳ ಅಗತ್ಯವಿದೆ. ಎನ್ಡಿಎ ಬಹುಮತ ಹೊಂದಿರುವ ಜತೆಗೆ 11 ಸಂಸದರನ್ನು ಹೊಂದಿರುವ ವೈಎಸ್ಆರ್ ಕಾಂಗ್ರೆಸ್ ಪಾರ್ಟಿಯ ಬೆಂಬಲ ಎನ್ಡಿಎ ನಿರ್ಣಾಯಕ ಗೆಲುವು ತಂದುಕೊಡಲು ಸಹಕಾರಿಯಾಗಲಿದೆ. ಆದರೆ ಬಿಜು ಜನತಾ ದಳ (7) ಹಾಗೂ ಭಾರತ ರಾಷ್ಟ್ರೀಯ ಸಮಿತಿ (4) ಮತದಾನದಿಂದ ಹೊರಗುಳಿಯುವುದಾಗಿ ಘೋಷಿಸಿವೆ.
ಬೆಳಿಗ್ಗೆ 10 ರಿಂದ 5 ಗಂಟೆಯವರೆಗೆ ಮತದಾನ ಸಂಸತ್ ಭವನದಲ್ಲಿ ನಡೆಯಲಿದ್ದು, ಮತಗಳ ಎಣಿಕೆ ಸಂಜೆ 6ಕ್ಕೆ ಆರಂಭವಾಗಲಿದೆ.
ಸಂಸದರನ್ನು ಒಳಗೊಂಡ ಇತರ ಎಲ್ಲ ಚುನಾವಣೆಗಳಂತೆ ಇಲ್ಲಿ ಪಕ್ಷಗಳು ವಿಪ್ ಜಾರಿಗೊಳಿಸುವಂತಿಲ್ಲ. ರಹಸ್ಯ ಮತದಾನದ ಮೂಲಕ ತಮ್ಮ ಹಕ್ಕು ಚಲಾಯಿಸಬೇಕಾಗುತ್ತದೆ. ಪಕ್ಷದ ಯಾವುದೇ ಸೂಚನೆಗಳನ್ನು ಅನುಸರಿಸುವ ಅಗತ್ಯ ಇರುವುದಿಲ್ಲ. ಆದರೆ ಸಾಮಾನ್ಯವಾಗಿ ದೊಡ್ಡ ಪ್ರಮಾಣದಲ್ಲಿ ಎನ್ಡಿಎ ಸಂಸದರ ನಿಷ್ಠೆ ಬದಲಾಗದಿದ್ದರೆ ಎನ್ಡಿಎ ಗೆಲುವು ಖಚಿತ ಎಂಬ ಪರಿಸ್ಥಿತಿ ಇದೆ.
ಒಟ್ಟು 542 ಮಂದಿ ಲೋಕಸಭಾ ಸದಸ್ಯರು ಹಾಗೂ 239 ರಾಜ್ಯಸಭಾ ಸದಸ್ಯರು ಮತದಾನದ ಹಕ್ಕು ಹೊಂದಿದ್ದು, ಎನ್ಡಿಎ 427 ಹಾಗೂ ವಿರೋಧ ಪಕ್ಷಗಳು 354 ಸದಸ್ಯಬಲ ಹೊಂದಿವೆ. ಆದ್ದರಿಂದ ರಾಧಾಕೃಷ್ಣನ್ ಅವರಿಗೆ ಸಹಜವಾಗಿಯೇ ಅನುಕೂಲಕರ ವಾತಾವರಣ ಇದೆ. ಏಳು ಮಂದಿ ನಾಮನಿರ್ದೇಶಿತ ಸದಸ್ಯರು ಯಾವುದೇ ಪಕ್ಷಕ್ಕೆ ಸೇರದಿದ್ದರೂ ಆಡಳಿತಾರೂಢ ಪಕ್ಷದ ಕಡೆ ಒಲವು ವ್ಯಕ್ತಪಡಿಸುವ ಸಾಧ್ಯತೆ ಇದೆ.
ರಾಧಾಕೃಷ್ಣನ್ (76) ಮೂಲತ ತಮಿಳುನಾಡಿನ ಬಿಜೆಪಿ ಹಿರಿಯ ಮುಖಂಡರಾಗಿದ್ದರೆ, ರೆಡ್ಡಿ (79) ತೆಲಂಗಾಣದವರು ಹಾಗೂ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಹಲವು ಐತಿಹಾಸಿಕ ತೀರ್ಪುಗಳನ್ನು ನೀಡಿದವರು.







