ಯಾಕಾಯಿತು ಆರೇ ತಿಂಗಳಲ್ಲಿ ಕುಲದೀಪ್ ಕುಮಾರ್ ಜೈನ್ ವರ್ಗಾವಣೆ ?
► ತಾಂತ್ರಿಕ ಕಾರಣಗಳು ದಕ್ಷ ಅಧಿಕಾರಿಯನ್ನು ಕಳಿಸಲು ನೆಪವಾಯಿತೇ ? ► ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಐಪಿಎಸ್ ಅಧಿಕಾರಿಗೆ ಮುಳುವಾಯಿತೆ ?

ಮಂಗಳವಾರ ಸುಮಾರು 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಆದ ಆದೇಶ ರಾಜ್ಯ ಸರಕಾರದಿಂದ ಪ್ರಕಟವಾಯಿತು. ಅದರಲ್ಲಿದ್ದ ಒಂದು ಹೆಸರು ಈಗ ಮಂಗಳೂರು ಹಾಗು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ, ಊಹಾಪೋಹಗಳಿಗೆ ಕಾರಣವಾಗಿದೆ. ಹಾಗೆ ಭಾರೀ ಚರ್ಚೆಯ ವಿಷಯವಾಗಿರುವುದು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಆರ್. ಜೈನ್ ಅವರ ವರ್ಗಾವಣೆಯ ಆದೇಶ.
ಇದೇ ವರ್ಷ ಫೆಬ್ರವರಿ 24 ರಂದು 2011 ರ ಬ್ಯಾಚ್ ನ ಐಪಿಎಸ್ ಅಧಿಕಾರಿ ಕುಲದೀಪ್ ಜೈನ್ ಅವರು ಮಂಗಳೂರು ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡಿದ್ದರು. ಈಗ 6 ತಿಂಗಳಲ್ಲೇ ಅವರನ್ನು ಮಂಗಳೂರಿನಿಂದ ಎತ್ತಂಗಡಿ ಮಾಡಲಾಗಿದೆ. ವಿಶೇಷ ಕಾರಣಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಇಂತಹ ಹುದ್ದೆಗಳಲ್ಲಿ ಎರಡು ವರ್ಷ ಒಂದೇ ಕಡೆ ಕೆಲಸ ಮಾಡುವ ಅವಕಾಶ ನೀಡಲಾಗುತ್ತದೆ. ಆದರೆ ಕುಲದೀಪ್ ಅವರನ್ನು ಆರೇ ತಿಂಗಳಲ್ಲಿ ವರ್ಗಾವಣೆ ಮಾಡಿರುವುದು ಊಹಾಪೋಹಗಳಿಗೆ ಹಾಗೂ ಜನರ ವ್ಯಾಪಕ ಅಸಮಾಧಾನಕ್ಕೂ ಕಾರಣವಾಗಿದೆ.
ಇದಕ್ಕೆ ಮುಖ್ಯ ಕಾರಣ ಆರು ತಿಂಗಳಲ್ಲಿ ಕುಲದೀಪ್ ಅವರ ಕಾರ್ಯವೈಖರಿ. ನೋ ನಾನ್ ಸೆನ್ಸ್ ಪೊಲೀಸ್ ಅಧಿಕಾರಿಯಾಗಿ ಕುಲದೀಪ್ ಅವರು ಅತ್ಯಲ್ಪ ಅವಧಿಯಲ್ಲೇ ಮಂಗಳೂರಿನ ಪೊಲೀಸಿಂಗ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು. ಇಲ್ಲಿನ ಸಮಾಜ ವಿರೋಧಿ ಶಕ್ತಿಗಳನ್ನು ಒಂದೊಂದಾಗಿ ಮಟ್ಟ ಹಾಕಿದ್ದರು. ತಮ್ಮಷ್ಟಕ್ಕೆ ತಾವಿದ್ದು ತಮ್ಮ ಅಧೀನ ಅಧಿಕಾರಿಗಳು ಕಾನೂನು ಪ್ರಕಾರ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳತ್ತಿದ್ದರು. ಅಷ್ಟೇ ಸಾಕಿತ್ತು ಮಂಗಳೂರಿಗೆ. ಅವರು ಬಂದ ಮೇಲೆ ಇಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿತ್ತು. ಜನರಿಗೂ " ಪರವಾಗಿಲ್ಲ, ಈ ಅಧಿಕಾರಿ ಕೆಲಸ ಮಾಡುತ್ತಾರೆ, ಮಂಗಳೂರನ್ನು ಜೋಪಾನವಾಗಿ ನೋಡಿಕೊಳ್ತಾರೆ " ಎಂಬ ಭಾವನೆ ಬಂದಿತ್ತು. ಅಷ್ಟರಲ್ಲೇ ಅವರ ಎತ್ತಂಗಡಿ ಆದೇಶ ಬಂದಿರುವುದು ಮಂಗಳೂರಿನ ಬುದ್ಧಿವಂತರಿಗೆ ಜೀರ್ಣವಾಗಿಲ್ಲ.
ಇದ್ಯಾಕೆ ಹೀಗೆ ಸಡನ್ನಾಗಿ ಒಳ್ಳೆಯ ಪೊಲೀಸ್ ಅಧಿಕಾರಿಯನ್ನು ಇಲ್ಲಿಂದ ವಾಪಸ್ ಕರೆಸಿಕೊಂಡು ಬಿಟ್ಟರು ?. ಚೆನ್ನಾಗಿಯೇ ಕಾರ್ಯ ನಿರ್ವಹಿಸುತ್ತಿದ್ದವರನ್ನು ಒಂದೆರಡು ವರ್ಷ ಕೆಲಸ ಮಾಡಲು ಬಿಡದೆ ದಿಢೀರ್ ಆಗಿ ವರ್ಗಾವಣೆ ಮಾಡುವ ಅಗತ್ಯ ಏನಿತ್ತು ?
ಕುಲದೀಪ್ ಅವರ ದಿಟ್ಟ ನಡವಳಿಕೆ ಹಾಗು ಕಾರ್ಯವೈಖರಿಯೇ ಅವರ ಹಠಾತ್ ವರ್ಗಾವಣೆಗೆ ಕಾರಣವೇ ?. ಇದರ ಹಿಂದೆ ಯಾವುದಾದರೂ ಕಾಣದ ಕೈಗಳ ಕೈವಾಡ ಇದೆಯೇ ?. ಡ್ರಗ್ಸ್ ಮಾಫಿಯಾ ವಿರುದ್ಧ ಅವರು ಸಾರಿದ್ದ ಸಮರವೇ ಅವರಿಗೆ ಮುಳುವಾಯಿತೇ ?
ಹೀಗೆ ಮಂಗಳೂರಿಗರನ್ನು ಹಲವಾರು ಪ್ರಶ್ನೆಗಳು ಕಾಡುತ್ತಿವೆ. ಆದರೆ ಇದಕ್ಕೆ ಉತ್ತರಿಸುವುದು ಅಷ್ಟು ಸುಲಭವೂ ಅಲ್ಲ, ಸರಳವೂ ಅಲ್ಲ.
ಈ ವರ್ಗಾವಣೆಯನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಮೊದಲು ಎರಡು ವಿಷಯಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಒಂದು - ಕುಲದೀಪ್ ಜೈನ್ ಅವರನ್ನು ಕಮಿಷನರ್ ಆಗಿ ನೇಮಕ ಮಾಡಿದ್ದರಲ್ಲೇ ಆಗಿರುವ ಸಮಸ್ಯೆ.
ರಾಜಸ್ತಾನ ಮೂಲದ ಕುಲದೀಪ್ ಕುಮಾರ್ ಆರ್. ಜೈನ್ 2013ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ. ಮಂಗಳೂರು ಪೊಲೀಸ್ ಕಮಿಷನರ್ ಹುದ್ದೆ ಡಿಐಜಿ ಗ್ರೇಡ್ನದ್ದು. ಅಂದರೆ ಆ ಹುದ್ದೆಗೆ ಬರುವವರು ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ದರ್ಜೆಯ ಅಧಿಕಾರಿಯಾಗಿರಬೇಕು. ಆದರೆ ಕುಲದೀಪ್ ಜೈನ್ ಅವರು ಎಸ್ಪಿ ಸೆಲೆಕ್ಷನ್ ಗ್ರೇಡ್ ಪೊಲೀಸ್ ಅಧಿಕಾರಿ. ಅವರಿನ್ನೂ ಡಿಐಜಿ ಗ್ರೇಡ್ ಅಧಿಕಾರಿ ಅಲ್ಲ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಅಂದಿನ ಬೊಮ್ಮಾಯಿ ಸರಕಾರ ತರಾತುರಿಯಲ್ಲಿ ಮಂಗಳೂರು ಆಯುಕ್ತರಾಗಿ ಅವರನ್ನು ನೇಮಕಗೊಳಿಸಿತ್ತು. 2023ರ ಫೆಬ್ರವರಿ 24ರಂದು ಮಂಗಳೂರು ಪೊಲೀಸ್ ಆಯುಕ್ತರಾಗಿ ಕುಲದೀಪ್ ಆರ್. ಜೈನ್ ಅಧಿಕಾರ ಸ್ವೀಕರಿಸಿದ್ದರು. ಈಗ ಅವರನ್ನು ವರ್ಗಾವಣೆ ಮಾಡಿರುವುದಕ್ಕೂ ಅದಕ್ಕೂ ಸಂಬಂಧವಿದೆ ಎಂಬುದು ಸರಕಾರದ ವಲಯದಿಂದ ಕೇಳಿ ಬರುತ್ತಿರುವ ಸಮಜಾಯಿಷಿ.
ಮಂಗಳೂರು ನಗರದಲ್ಲಿ ಸಾಕಷ್ಟು ಪಿಎಸ್ಸೈ ಹುದ್ದೆಗಳು ಖಾಲಿಯಿವೆ. ಆ ಹುದ್ದೆಗಳನ್ನು ಭರ್ತಿಗೊಳಿಸಲು ಕೆಸಿಎಸ್ ನಿಯಮ 32ರಂತೆ ಎಎಸ್ಸೈ ಹುದ್ದೆಯಿಂದ ಸ್ವತಂತ್ರ ಪ್ರಭಾರದಲ್ಲಿರಿಸಲು ನಿಯಮಗಳಲ್ಲಿ ಅವಕಾಶವಿದೆ. ಇದರಿಂದಾಗಿ ಆಡಳಿತಾತ್ಮಕವಾಗಿ ಪೊಲೀಸ್ ಠಾಣೆಗಳ ಕೆಲಸ ಕಾರ್ಯ ಕ್ಲಪ್ತ ಸಮಯದಲ್ಲಿ ನಿರ್ವಹಿಸಲು ಸಾಧ್ಯ. ಇಲಾಖೆಯಲ್ಲಿ ಸುಮಾರು 30 ವರ್ಷಕ್ಕೂ ಮೀರಿ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಎಎಸ್ಸೈಗಳಿಗೆ ಪಿಎಸ್ಸೈ ಹುದ್ದೆಗೆ ಮುಂಭಡ್ತಿ ನೀಡಬಹುದಾಗಿದೆ.
ಆದರೆ ನಗರದ ಪೊಲೀಸ್ ಆಯುಕ್ತರು ಎಸ್ಪಿ ದರ್ಜೆ ಅಧಿಕಾರಿ ಆಗಿರುವುದರಿಂದ ಈ ಮುಂಭಡ್ತಿ ಆದೇಶ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಪಿಎಸ್ಸೈ ಹುದ್ದೆಗಳ ನೇಮಕಾತಿ ಅಥವಾ ಮುಂಭಡ್ತಿಗೆ ಡಿ ಐ ಜಿ ದರ್ಜೆಯ ಅಧಿಕಾರಿ ನೇಮಕಾತಿ ಅಥವಾ ಶಿಸ್ತು ಪ್ರಾಧಿಕಾರವಾಗಿರುತಾರೆ. ಎಸ್ಪಿ ದರ್ಜೆಯ ಅಧಿಕಾರಿ ಎ ಎಸ್ ಐ ಗಳಿಗೆ ಮುಂಬಡ್ತಿ ನೀಡಲು ಆಗೋದಿಲ್ಲ. ಹಾಗಾಗಿ ಬಿಜೆಪಿ ಸರಕಾರ ಆತುರದಲ್ಲಿ ಮಾಡಿರುವ ನೇಮಕಾತಿಯಿಂದ ಆಗಿರುವ ಈ ಸಮಸ್ಯೆ ನಿವಾರಿಸಲು ಕುಲದೀಪ್ ಅವರನ್ನು ವರ್ಗಾವಣೆ ಮಾಡಲಾಗಿದೆ . ಅಷ್ಟೇ. ಬೇರೇನೂ ಕಾರಣವಿಲ್ಲ ಎಂಬ ತಾಂತ್ರಿಕ ಅಂಶವನ್ನು ಈಗ ಮುನ್ನೆಲೆಗೆ ತರಲಾಗಿದೆ.
ಆದರೆ, ಸರಕಾರದ ಈ ಕಾರಣದಲ್ಲೂ ಒಂದು ಸಮಸ್ಯೆಯಿದೆ. ಸರಕಾರ ಹೇಳಿದಂತೆ ತಾಂತ್ರಿಕ ದೋಷ ಸರಿಪಡಿಸಲು ಈ ವರ್ಗಾವಣೆ ನಡೆದಿದ್ದೇ ಹೌದಾಗಿದ್ದಲ್ಲಿ ಇದೇ ಕಾರಣ, ಹುಬ್ಬಳ್ಳಿ ಧಾರವಾಡ, ಕಲಬುರಗಿಗೂ ಅನ್ವಯಾಗಬೇಕಾಗುತ್ತದೆ. ಅಲ್ಲಿಯೂ ಎಸ್ಪಿ ದರ್ಜೆಯ ಕಮಿಷನರ್ಗಳೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಅವರ ವರ್ಗಾವಣೆ ಆಗಿಲ್ಲ. ಅದು ಹೇಗೆ ಎಂದು ಸರಕಾರ ಉತ್ತರಿಸಬೇಕಾಗಿದೆ.
ಒಬ್ಬ ಪೊಲೀಸ್ ಆಯುಕ್ತರಾಗಿ ಯಾವ ರೀತಿ ಚೆನ್ನಾಗಿ ಕಾರ್ಯ ನಿರ್ವಹಿಸಬಹುದು ಎಂದು ಕಳೆದ ಆರು ತಿಂಗಳ ಅವಧಿಯಲ್ಲಿ ಕುಲದೀಪ್ ಅವರು ತೋರಿಸಿದ್ದಾರೆ. ಹಲವು ಗಂಭೀರ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಹಳೆ ಆರೋಪಿಗಳನ್ನು ಹುಡುಕಿ ನ್ಯಾಯಾಲಯಕ್ಕೆ ಹಾಜರುಪಡಿಸುವಲ್ಲಿ ಅವರು ವಹಿಸಿದ ನಾಯಕತ್ವ, ಸುಗಮ ಸಂಚಾರಕ್ಕೆ ಸಂಬಂಧಿಸಿ ಹಲವು ಆಕ್ಷೇಪಗಳ ಹೊರತಾಗಿಯೂ ಕೆಲವೊಂದು ನಿರ್ಧಾರಗಳು ಕುಲದೀಪ್ ಅವರ ಕಾರ್ಯದಕ್ಷತೆಗೆ ಸಾಕ್ಷಿ.
ಮಂಗಳೂರನ್ನು ಕಾಡುತ್ತಿರುವ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲೂ ತೀವ್ರ ಮುತುವರ್ಜಿ ತೋರಿದ್ದರು ಕುಲದೀಪ್ ಅವರು. ಅವರು ಅಧಿಕಾರ ಸ್ವೀಕರಿಸಿದ ಒಂದು ತಿಂಗಳ ಅವಧಿಯಲ್ಲೇ ಗೇಟ್ ವೇ ಡ್ರಗ್ಗಳ ಬಗ್ಗೆ ಅವರ ಗಮನ ಸೆಳೆಯಲಾಗಿತ್ತು. ಈ ಬಗ್ಗೆ ಪ್ರಸ್ತಾಪಿಸಿದ ನಾಲ್ಕೈದು ದಿನಗಳಲ್ಲೇ ನಗರದ ಪ್ರಮುಖ ಕಾಂಪ್ಲೆಕ್ಸ್ ಗೆ ಸಿಸಿಬಿ ಮೂಲಕ ಧಾಳಿ ನಡೆಸಲು ಸೂಚಿಸಿದ್ದ ಅವರು, ಅಲ್ಲಿನ ಅಂಗಡಿಗಳಿಂದ ಲಕ್ಷಾಂತರ ರೂ. ವೌಲ್ಯದ ಇ ಸಿಗರೇಟ್ ವಶಪಡಿಸಿಕೊಂಡಿದ್ದರು. ವಿಶೇಷವೆಂದರೆ ಇಂತಹ ಕಾರ್ಯಾಚರಣೆ ಈ ಹಿಂದೆ ನಡೆದಿರಲಿಲ್ಲ!
ಚುನಾವಣೆ ಬಳಿಕ ನೂತನ ಸರಕಾರ ಅಧಿಕಾರಕ್ಕೆ ಬಂದು ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರಿನ ಪ್ರಥಮ ಭೇಟಿಯಲ್ಲೇ ಡ್ರಗ್ಸ್ ಮುಕ್ತ ಮಂಗಳೂರು ಅಭಿಯಾನಕ್ಕೆ ಡಾ. ಜಿ ಪರಮೇಶ್ವರ್ ನಿರ್ದೇಶನ ನೀಡಿದ್ದರು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೂ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭ ಡ್ರಗ್ ಪೆಡ್ಲರ್ಗಳ ವಿರುದ್ಧ ಕ್ರಮ ಕೈಗೊಳ್ಳಿ, ಅವರ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ಎಂದು ಆದೇಶಿಸಿದ್ದರು.
ಅದಾಗಲೇ ಸಿಸಿಬಿ ನೇತೃತ್ವದಲ್ಲಿ ಡ್ರಗ್ಸ್ ವಿರುದ್ಧದ ಕಾರ್ಯಾಚರಣೆ ಚುರುಕುಗೊಳಿಸಿದ್ದ ಆಯುಕ್ತ ಕುಲದೀಪ್ ಜೈನ್ ಡ್ರಗ್ಸ್ ಮಾರಾಟಗಾರರು, ಪೂರೈಕೆದಾರರನ್ನು ಬಂಧಿಸಿ ಅವರ ವಿರುದ್ಧ ಪಿ ಐ ಟಿ ಎನ್ ಡಿ ಪಿ ಎಸ್ ಕಾಯ್ದೆಯಡಿ ಪ್ರಸ್ತಾವನೆಗಳನ್ನು ಸಿದ್ಧಗೊಳಿಸಿದರು. ಮಾರ್ಚ್ನಲ್ಲಿ ನಡೆಸಿದ ದಾಳಿಯಂತೆ ಮತ್ತೆ ಆಗಸ್ಟ್ನಲ್ಲಿ ಇ ಸಿಗರೇಟ್ ದೊರೆತಿದ್ದ ಶಾಪ್ಗಳಿಗೆ ಮರು ದಾಳಿ ನಡೆಸುವ ಧೈರ್ಯವನ್ನು ತೋರಿದ್ದ ಕುಲದೀಪ್ ಜೈನ್, ಮತ್ತೆ ಅದೇ ಅಂಗಡಿಯಲ್ಲಿ ನಿಷೇಧಿತ ಇ ಸಿಗರೇಟ್ ಪತ್ತೆಯಾದ ಹಿನ್ನೆಲೆಯಲ್ಲಿ ಮಾಲಕರ ವಿರುದ್ಧ ದಂಡ ವಿಧಿಸಿ, ಪರವಾನಿಗೆ ರದ್ದುಪಡಿಸಲು ಪಾಲಿಕೆಗೆ ಶಿಫಾರಸು ಮಾಡುವ ದಿಟ್ಟತನವನ್ನೂ ತೋರಿದ್ದರು.
ಇಷ್ಟು ಮಾತ್ರವಲ್ಲ. ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯ ವೇಳೆ ವಿದ್ಯಾರ್ಥಿಗಳ ಮಾಹಿತಿಯನ್ನು ಆಧರಿಸಿ ನಗರದ ದಿನಸಿ ಅಂಗಡಿಯೊಂದಕ್ಕೆ ದಾಳಿ ನಡೆಸಲು ಸೂಚನೆ ನೀಡಿದಾಗ ಅಲ್ಲಿ 200 ಕೆಜಿಯಷ್ಟು ಬಾಂಗ್ ಮಿಶ್ರಿತ ಚಾಕಲೇಟ್ ಪತ್ತೆಯಾಗಿತ್ತು. ಅದನ್ನು ವಶಪಡಿಸಿ ಅದರಲ್ಲಿನ ಮಾದಕ ದ್ರವ್ಯ ಅಂಶ ಪತ್ತೆ ಹಚ್ಚುವ ಸಲುವಾಗಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದ ಕಮಿಷನರ್ ಕುಲದೀಪ್, ಅದರಲ್ಲಿ ಮಾದಕ ಅಂಶ ಇರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಂಗಡಿ ಮಾಲಕರ ವಿರುದ್ಧ ಕ್ರಮ ಕೈಗೊಂಡು ವ್ಯಾಪಕ ಮೆಚ್ಚುಗೆ ಗಳಿಸಿದ್ದರು.
ಕೋಳಿ ಅಂಕ, ಮಟ್ಕಾ ದಂಧೆ, ಅನೈತಿಕ ಮಸಾಜ್ ಪಾರ್ಲರ್ಗಳ ವಿರುದ್ಧದ ಅವರ ಕ್ರಮಗಳೂ ಸಾರ್ವಜನಿಕರಿಂದ ಪ್ರಶಂಸೆಗೊಳಗಾಗಿವೆ. ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಸಂಬಂಧಿಸಿ ಸಾರ್ವಜನಿಕರು ಫೋನ್ ಇನ್ ಕಾರ್ಯಕ್ರಮದಲ್ಲಿ ಸಮಸ್ಯೆ ತೋಡಿಕೊಂಡಾಗಲೂ ಅಧಿಕಾರಿಗಳ ಮೂಲಕ ನೇರ ಕಾರ್ಯಾಚರಣೆಗೆ ಮುಂದಾಗುವ ಹುಮ್ಮಸ್ಸು ತೋರಿಸಿದರು ಕಮಿಷನರ್ ಕುಲದೀಪ್ ಜೈನ್ .
ಹೀಗೆ ಸಿಕ್ಕಿದ ಅವಕಾಶದಲ್ಲಿ ಚೆನ್ನಾಗಿ ಕೆಲಸ ಮಾಡಿ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡಿದ್ದ ಅಧಿಕಾರಿಗೆ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿರುವುದು ಸಾಮಾಜಿಕ ವಲಯದಲ್ಲಿ ಸಹಜವಾಗಿಯೇ ಅಸಮಾಧಾನಕ್ಕೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಸಾಮಾಜಿಕ ಹೋರಾಟಗಾರರು ಕಮಿಷನರ್ಗೆ ಯಾವುದೇ ಹುದ್ದೆ ತೋರಿಸದೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸುತ್ತಿದ್ದಾರೆ.
ಡ್ರಗ್ಸ್ ಮಾಫಿಯಾದ ಬುಡಕ್ಕೆ ಕೈ ಹಾಕಿದ ಕಾರಣಕ್ಕೇ ಅವರನ್ನು ಎತ್ತಂಗಡಿ ಮಾಡಲಾಗಿದೆ ಎಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬಂದಿದೆ. ಆದರೆ ಕಾಂಗ್ರೆಸ್ ಮುಖಂಡರು ಈ ಆರೋಪವನ್ನು ಸಾರಾಸಗಟಾಗಿ ನಿರಾಕರಿಸುತ್ತಿದ್ದಾರೆ. ನಮ್ಮ ಸರಕಾರ ಬಂದ ಮೇಲೆಯೇ ಡ್ರಗ್ಸ್ ವಿರುದ್ಧ ಸಮರ ಸಾರಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಹಾಗು ಗೃಹ ಸಚಿವರೇ ಡ್ರಗ್ಸ್ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು, ಅಭಿಯಾನ ನಡೆಸಲು ಸೂಚಿಸಿದ್ದಾರೆ. ಹೀಗಿರುವಾಗ ನಾವ್ಯಾಕೆ ಅವರನ್ನು ವರ್ಗಾವಣೆ ಮಾಡ್ತೀವಿ ಅನ್ನೋದು ಕಾಂಗ್ರೆಸಿಗರ ಮರು ಪ್ರಶ್ನೆ.
ಈ ಬಗ್ಗೆ ವಾರ್ತಾಭಾರತಿ ಜೊತೆ ಮಾತಾಡಿದ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ "ನಗರದಲ್ಲಿ ಸಾಕಷ್ಟು ಸಂಖ್ಯೆಯ ಎಎಸ್ಸೈಗಳು ಪಿಎಸ್ಸೈ ಹುದ್ದೆಗೆ ಮುಂಭಡ್ತಿಗೆ ಎದುರು ನೋಡುತ್ತಿದ್ದಾರೆ. ಪಿಎಸ್ಸೈ ಹುದ್ದೆಯೊಂದಿಗೆ ಗೌರವಯುತ ನಿವೃತ್ತಿಗಾಗಿ ಕೋರಿ ನಮ್ಮಲ್ಲಿಗೆ ಅಲೆದಾಡುತ್ತಿದ್ದಾರೆ. ಈ ಮುಂಭಡ್ತಿ ಅಧಿಕಾರವನ್ನು ಪ್ರಸಕ್ತ ಪೊಲೀಸ್ ಆಯುಕ್ತರಿಗೆ ಒದಗಿಸುವಂತೆ ನಾವು ಹಿರಿಯ ಅಧಿಕಾರಿಗಳು, ಸಚಿವರನ್ನು ಕೋರಿದ್ದೇವೆ. ಪೊಲೀಸ್ ಆಯುಕ್ತರೇ ಖುದ್ದು ಈ ಬಗ್ಗೆ ಅನುಮತಿ ಕೋರಿ ಡಿಜಿಪಿ ಹಾಗೂ ಐಜಿಪಿಗೆ ನಿರ್ದೇಶನ ಕೋರಿದ್ದರೂ ಆದೇಶವಾಗಿಲ್ಲ. ಈ ನಡುವೆ ಅವರ ವರ್ಗಾವಣೆಯಾಗಿದೆ. ಅವರ ವರ್ಗಾವಣೆಗೆ ತಾಂತ್ರಿಕ ಅಂಶವೇ ಕಾರಣ ಹೊರತು ಯಾವುದೇ ಒತ್ತಡದಿಂದ ಸರಕಾರ ವರ್ಗಾವಣೆ ಮಾಡಿಲ್ಲ. ಸರಕಾರದ ಮೇಲೆ ಇಂತಹ ತಪ್ಪು ಆರೋಪಗಳನ್ನು ಹೊರಿಸುವುದು ಸರಿಯಲ್ಲ.’’ ಎಂದು ಹೇಳಿದ್ದಾರೆ.
ಸ್ವತಃ ಕಮಿಷನರ್ ಕುಲದೀಪ್ ಜೈನ್ ಅವರ ಬಳಿಯೂ ವಾರ್ತಾಭಾರತಿ ಈ ಬಗ್ಗೆ ಮಾತಾಡಿದಾಗ ಅವರು ಹೇಳಿದ್ದು:
‘‘ನನ್ನ ಕೆಲಸ ಕಾರ್ಯದಲ್ಲಿ ಯಾವುದೇ ಒತ್ತಡವಿಲ್ಲದೆ ಸಂತಸದಿಂದ ಎಲ್ಲವನ್ನೂ ನಿಭಾಯಿಸಿದ್ದೇನೆ. ನನಗೆ ಯಾವ ಕೆಲಸ ಮಾಡಲು ಸಾಧ್ಯ ಅದನ್ನು ಚೆನ್ನಾಗಿ ನಿರ್ವಹಿಸಿದ್ದೇನೆ. ನನ್ನ ತಂಡ, ಅಧಿಕಾರಿಗಳು ಸಹಕಾರ ನೀಡಿದ್ದಾರೆ. ಜನರಿಂದಲೂ ಬೆಂಬಲ ದೊರಕಿದೆ. ವಿಜಯಪುರದಲ್ಲಿ ಎಸ್ಪಿ ಆಗಿದ್ದಾಗಲೂ, ಎಸಿಬಿಯಲ್ಲಿದ್ದಾಗಲೂ ಆರೇಳು ತಿಂಗಳಲ್ಲೇ ವರ್ಗಾವಣೆ ಆಗಿದ್ದೆ. ಇದು ನಮಗೆ ಸಹಜ. ನಾನು ನನ್ನ ಅಧಿಕಾರಿಗಳಿಗೂ ಹೇಳವುದಿಷ್ಟೇ, ಕಡಿಮೆ ಕಾಲಾವಕಾಶದಲ್ಲೂ ಒಳ್ಳೆ ಕೆಲಸ ಮಾಡಿ, ಸರಕಾರಕ್ಕೆ ಒಳ್ಳೆ ಹೆಸರು ತರುವ ಜತೆಗೆ ನಮ್ಮ ಮೇಲಿನ ಜನರ ನಂಬಿಕೆಯನ್ನೂ ಉಳಿಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ನಾನು ಕರ್ತವ್ಯ ನಿರ್ವಹಿಸಿರುವ ಖುಷಿ ಇದೆ. ಜನರ ಸೇವೆಗಾಗಿ ನಾವು ಬಂದಿರುವುದು. ಅದು ಅವರಿಗೆ ತಲುಪಿದೆ. ಅದರಿಂದ ಜನರಿಗೆ ಖುಷಿ ಆಗಿದೆ ಎಂದಾದರೆ ಅದು ನಮ್ಮ ಪ್ರೋತ್ಸಾಹ ಇಮ್ಮಡಿಯಾದಂತೆ.’’
ಸಹಜವಾಗಿಯೇ ಯಾವುದೇ ಐಪಿಎಸ್ , ಐಎಎಸ್ ಅಧಿಕಾರಿ ಸೇವೆಯಲ್ಲಿರುವಾಗ ತಮ್ಮ ವರ್ಗಾವಣೆ ಬಗ್ಗೆ ಇದಕ್ಕಿಂತ ಜಾಸ್ತಿ ಏನನ್ನೂ ಹೇಳೋದಿಲ್ಲ. ಆದರೆ ಪಬ್ಲಿಕ್ ಹೋಶಿಯಾರ್ ಹೈ , ವೊ ಸಬ್ ಕುಚ್ ಜಾಂತಿ ಹೈ. ಹಾಗಾಗಿ ಕುಲದೀಪ್ ಅವರ ವರ್ಗಾವಣೆ ಬಗ್ಗೆ ಮಂಗಳೂರಿನ ಪಬ್ಲಿಕ್ ಮಾತಾಡುತ್ತಿದ್ದಾರೆ.
ಇಲ್ಲಿ ಕೊನೆಗೂ ಉಳಿಯುವ ಪ್ರಶ್ನೆ. ಕುಲದೀಪ್ ಜೈನ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರಿಸಿ ಅವರಿಗೇ ಎ ಎಸ್ ಐ ಗಳಿಗೆ ಮುಂಭಡ್ತಿ ನೀಡುವ ಅಧಿಕಾರವನ್ನು ನೀಡುವ ಅವಕಾಶ ರಾಜ್ಯ ಸರಕಾರಕ್ಕಿತ್ತು.ಇಲ್ಲಿ ಅದರ ಅಗತ್ಯ ಇದ್ದಿದ್ದರಿಂದ ಅದನ್ನು ಕೋರಿ ಅವರು ಸರಕಾರಕ್ಕೆ ಪತ್ರವನ್ನೂ ಬರೆದಿದ್ದರು. ರಾಜ್ಯ ಸರಕಾರಕ್ಕೆ ಕುಲದೀಪ್ ಅವರನ್ನೇ ಇಲ್ಲಿ ಮುಂದುವರಿಸುವ ಇಚ್ಛಾಶಕ್ತಿ ಇದ್ದಿದ್ದರೆ ಅದು ಸಾಧ್ಯವೂ ಇತ್ತು. ಆದರೆ ಅದನ್ನು ಯಾಕೆ ನೀಡಲಾಗಿಲ್ಲ. ಅದಕ್ಕೂ ತಾಂತ್ರಿಕ ತೊಂದರೆ ಇತ್ತು ಎಂದು ಹೇಳೋದು ಸುಲಭ. ಆದರೆ ಎಲ್ಲರಿಗೂ ಗೊತ್ತಿರುವ ಸತ್ಯ ಏನೆಂದರೆ ಸರಕಾರಕ್ಕೆ ಮನಸ್ಸಿದ್ದರೆ ಅದೇನು ಅಸಾಧ್ಯ ಅಲ್ಲ. ಆದರೆ ಸರಕಾರ ಅಷ್ಟು ಮನಸ್ಸು ಮಾಡಲಿಲ್ಲ. ಅಷ್ಟೇ.







