ರಾಜೀನಾಮೆ ನೀಡದ ವಿಜಯ್ ಶಾ: ಮೂರೂ ಬಿಟ್ಟವರು ಊರಿಗೆ ದೊಡ್ಡವರು!

PC: x.com/KrVijayShah
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಧ್ಯ ಪ್ರದೇಶ ಹೈಕೋರ್ಟ್ ಆದೇಶದ ಬಳಿಕವಾದರೂ, ಸಚಿವ ಕುನ್ವರ್ ವಿಜಯ್ ಶಾ ಪ್ರಕರಣವನ್ನು ಬಿಜೆಪಿಯು ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎನ್ನುವ ದೇಶದ ನಿರೀಕ್ಷೆ ಹುಸಿಯಾಗಿದೆ. ದೇಶ ಯುದ್ಧದಂತಹ ಸಂಕೀರ್ಣ ಸ್ಥಿತಿಯಲ್ಲಿ ಸಿಲುಕಿಕೊಂಡಿರುವಾಗ, ಆಪರೇಷನ್ ಸಿಂಧೂರದಲ್ಲಿ ಭಾಗವಹಿಸಿದ್ದ ‘ಕರ್ನಲ್ ಸೋಫಿಯಾ ಖುರೇಷಿ’ಯವರನ್ನು ‘ಭಯೋತ್ಪಾದಕರ ಸೋದರಿ’ ಎಂದು ಕರೆದ ವಿಜಯ್ ಶಾರನ್ನು ಬಿಜೆಪಿ ವರಿಷ್ಠರು ತಕ್ಷಣ ಸಚಿವ ಸ್ಥಾನದಿಂದ ಮಾತ್ರವಲ್ಲ ಪಕ್ಷದಿಂದಲೇ ವಜಾಗೊಳಿಸಬೇಕಾಗಿತ್ತು. ಅಷ್ಟೇ ಅಲ್ಲ, ಆತನ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಬೇಕಾಗಿತ್ತು. ಆದರೆ ಬಿಜೆಪಿಯು ಆತನನ್ನು ರಕ್ಷಿಸುವ ಮೂಲಕ ದೇಶದ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿಯೇ ಮುಖ್ಯ ಎನ್ನುವುದನ್ನು ಸಾಬೀತು ಪಡಿಸಿತು. ಆತ ಅಂತಹದೊಂದು ದೇಶ ವಿರೋಧಿ ಹೇಳಿಕೆ ನೀಡಿ ಒಂದು ದಿನ ಕಳೆದಿದ್ದರೂ ಪೊಲೀಸರು ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಯಾವಾಗ ವಿರೋಧ ಪಕ್ಷಗಳು ಅವರ ವಿರುದ್ಧ ಟೀಕೆಗಳ ಸುರಿಮಳೆಗೈಯತೊಡಗಿದವೋ ಆಗ ‘‘ನಾನು ಹತ್ತು ಬಾರಿ ಬೇಕಾದರೂ ಕ್ಷಮೆಯಾಚಿಸುತ್ತೇನೆ’’ ಎಂಬ ಹೇಳಿಕೆಯನ್ನು ನೀಡಿ, ಕಾನೂನು ಕ್ರಮದಿಂದ ಪಾರಾಗುವ ಪ್ರಯತ್ನವನ್ನು ಮಾಡಿದರು. ಈ ದೇಶದ ಸೇನೆಯ ಅತ್ಯುನ್ನತ ಸ್ಥಾನದಲ್ಲಿರುವ ವ್ಯಕ್ತಿಯನ್ನು ‘ಭಯೋತ್ಪಾದಕರ ಸೋದರಿ’ ಎಂದು ಕರೆಯುವುದು ದೇಶದ್ರೋಹಕ್ಕೆ ಸಮವಾಗಿದೆ. ಈ ಮೂಲಕ ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸವನ್ನು ಸಚಿವ ವಿಜಯ್ ಶಾ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಧರ್ಮದ ಹೆಸರಿನಲ್ಲಿ ದೇಶವನ್ನು ವಿಭಜಿಸುವ ಕೆಲಸವನ್ನು ಮಾಡಿದ್ದಾರೆ. ಹಿಂದೂಗಳು ಮತ್ತು ಮುಸ್ಲಿಮರು ಒಂದಾಗಿ ಪಾಕಿಸ್ತಾನಕ್ಕೆ ಪ್ರತಿಕ್ರಿಯೆಯನ್ನು ನೀಡಬೇಕಾಗಿರುವ ಹೊತ್ತಿನಲ್ಲಿ, ಭಾರತದ ಮುಸ್ಲಿಮರನ್ನೆಲ್ಲ ಭಯೋತ್ಪಾದಕರೊಂದಿಗೆ ನಿಲ್ಲಿಸಿ, ‘ಆಪರೇಷನ್ ಸಿಂಧೂರ’ಕ್ಕೆ ಕಳಂಕ ತಂದಿದ್ದಾರೆ. ಆಪರೇಷನ್ ಸಿಂಧೂರದ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಳ್ಳಲು ಗರಿಷ್ಠ ಪ್ರಯತ್ನ ನಡೆಸುತ್ತಿರುವ ಬಿಜೆಪಿಗೆ, ಶಾ ಹೇಳಿಕೆಯ ಕಳಂಕವನ್ನು ತೊಳೆದುಕೊಳ್ಳುವ ವಿಷಯದಲ್ಲಿ ಮಾತ್ರ ಈವರೆಗೆ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಬಿಜೆಪಿ ವರಿಷ್ಠರು ಕೂಡ ವಿಜಯ್ ಶಾ ಅವರ ಹೇಳಿಕೆಯೊಂದಿಗೆ ಸಹಮತಮವನ್ನು ಹೊಂದಿದ್ದಾರೆಯೇ ಎಂದು ದೇಶದ ಜನತೆೆ ಅನುಮಾನ ಪಡುವಂತಹ ಸ್ಥಿತಿ ಈಗ ನಿರ್ಮಾಣವಾಗಿದೆ.
ಮಧ್ಯಪ್ರದೇಶ ಸರಕಾರದಲ್ಲಿ ಉನ್ನತ ಸ್ಥಾನದಲ್ಲಿರುವುದರಿಂದ ಅವರ ವಿರುದ್ಧ ಸ್ವಯಂ ಕ್ರಮ ಕೈಗೊಳ್ಳಲು ಪೊಲೀಸರು ಹಿಂದೇಟು ಹಾಕಿದ್ದರು. ಇಂತಹ ಸಂದರ್ಭದಲ್ಲಿ ಆತನ ವಿರುದ್ಧ ತಕ್ಷಣ ಮೊಕದ್ದಮೆ ದಾಖಲಿಸುವಂತೆ ಮಧ್ಯಪ್ರದೇಶ ಹೈಕೋರ್ಟ್ ಆದೇಶ ನೀಡಿತು. ‘‘ಧರ್ಮದ ಆಧಾರದಲ್ಲಿ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಭಾಷಣಗಳು ಮತ್ತು ಕೃತ್ಯಗಳನ್ನು ದಂಡಿಸುವ ಭಾರತೀಯ ನ್ಯಾಯ ಸಂಹಿತೆಯ ೧೯೬ನೇ ವಿಧಿಯು ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಅನ್ವಯಿಸುತ್ತದೆ’’ ಎಂದು ಹೈಕೋರ್ಟ್ ತೀರ್ಪಿನ ಸಂದರ್ಭದಲ್ಲಿ ಹೇಳಿತ್ತು. ಹೈಕೋರ್ಟ್ ತೀರ್ಪಿನ ಬಳಿಕವಾದರೂ, ತಾನು ಎಸಗಿದ ಕೃತ್ಯದ ಗಂಭೀರತೆಯನ್ನು ಅರಿತು ಸಚಿವ ಕುನ್ವರ್ ವಿಜಯ್ ಶಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿತ್ತು. ಬದಲಿಗೆ ಸಚಿವ ವಿಜಯ್ ಶಾ ಅವರು, ತನ್ನ ಮೇಲೆ ಎಫ್ಐಆರ್ ದಾಖಲಿಸದಂತೆ ಸುಪ್ರೀಂಕೋರ್ಟ್ನ ಮೊರೆ ಹೊಕ್ಕರು. ಇದೀಗ ಸುಪ್ರೀಂಕೋರ್ಟ್ ಕೂಡ ಛೀಮಾರಿ ಹಾಕಿದೆ. ಸುಪ್ರೀಂಕೋರ್ಟ್ ಮುಂದೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ‘‘ಈ ಕುರಿತಂತೆ ನಾನು ಕ್ಷಮೆಯಾಚಿಸಿದ್ದೇನೆ. ನನ್ನ ಹೇಳಿಕೆಯನ್ನು ಮಾಧ್ಯಮಗಳು ಅತಿರಂಜಿತಗೊಳಿಸಿವೆೆ’’ ಎಂದು ಹೇಳಿಕೊಂಡಿದ್ದಾರೆ. ಕ್ಷಮೆ ಯಾಚಿಸುವುದರಿಂದ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದಾದರೆ, ಈ ದೇಶದ ಜನಸಾಮಾನ್ಯರಿಗೂ ಆ ಸೌಲಭ್ಯ ದೊರಕಬೇಕು. ಮೋದಿ ಸರಕಾರದ ವೈಫಲ್ಯದ ವಿರುದ್ಧ ಹೇಳಿಕೆಗಳನ್ನು ನೀಡಿದ ಕಾರಣಕ್ಕಾಗಿ, ದೇಶದ ಭದ್ರತೆಯನ್ನು ಮುಂದೊಡ್ಡಿ ಈಗಾಗಲೇ ಹಲವು ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಕಾಮಿಡಿಯನ್ಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ. ಕೆಲವರು ಜೈಲುಪಾಲಾಗಿದ್ದಾರೆ. ಅವರಿಗೆ ಇಲ್ಲದ ವಿಶೇಷ ಸೌಲಭ್ಯವನ್ನು ಈ ಸಚಿವರಿಗೆ ಯಾಕೆ ನೀಡಬೇಕು? ಸಚಿವ ಶಾ ಅವರ ಭಾಷಣದ ವೀಡಿಯೊ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊವನ್ನು ಆಧರಿಸಿಯೇ ಹೈಕೋರ್ಟ್ ತನ್ನ ಆದೇಶವನ್ನು ನೀಡಿದೆ. ವಿಜಯ್ ಶಾ ಅವರು ತಮ್ಮ ಮನವಿಯಲ್ಲಿ ಸುಪ್ರೀಂಕೋರ್ಟನ್ನೇ ದಾರಿ ತಪ್ಪಿಸಲು ಯತ್ನಿಸಿದ್ದರು. ಆದರೆ ಸುಪ್ರೀಂಕೋರ್ಟ್ ಯಾಮಾರದೆ ತನ್ನ ಚಾಟಿ ಬೀಸಿದೆ.
‘‘ಸಾಂವಿಧಾನಿಕ ಹುದ್ದೆಯನ್ನು ಹೊಂದಿದ ವ್ಯಕ್ತಿಯೊಬ್ಬರು ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನಿರೀಕ್ಷಿಸಲಾಗುತ್ತದೆ. ಇಂತಹ ಹೇಳಿಕೆಯನ್ನು ನೀಡುವುದು ಒಬ್ಬ ಸಚಿವರಿಗೆ ಯಾವ ರೀತಿಯಲ್ಲೂ ಭೂಷಣವಲ್ಲ’’ ಎಂದು ಸುಪ್ರೀಂಕೋರ್ಟ್ ಹೇಳಿದೆ. ಸರಕಾರದೊಳಗೆ ಉನ್ನತ ಸ್ಥಾನದಲ್ಲಿರುವ ಸಚಿವರು ರಾಜ್ಯದ ಇತರರಿಗೆ ಮಾದರಿಯಾಗಿರುತ್ತಾರೆ. ಸಚಿವನೇ ಸೇನೆಯೊಳಗಿರುವ ಯೋಧರನ್ನು ಧರ್ಮದ ಆಧಾರದಲ್ಲಿ ‘ಭಯೋತ್ಪಾದಕರ ಸಂಬಂಧಿಕರು’ ಎಂದು ಕರೆದರೆ, ಜನಸಾಮಾನ್ಯರ ಪಾಡೇನು? ಇವರ ಹಿಂಬಾಲಕರು ಇದನ್ನು ಮಾದರಿಯಾಗಿಟ್ಟುಕೊಂಡರೆ ದೇಶದ ಆಂತರಿಕ ಭದ್ರತೆಯ ಸ್ಥಿತಿಯೇನಾಗಬೇಕು? ಇದೇ ಸಂದರ್ಭದಲ್ಲಿ ಹೈಕೋರ್ಟ್ ಶಾ ಮೇಲೆ ದಾಖಲಿಸಿರುವ ಎಫ್ಐಆರ್ ದುರ್ಬಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ತನಿಖೆಯ ಮೇಲ್ವಿಚಾರಣೆಯನ್ನು ತಾನೇ ಹೊತ್ತುಕೊಂಡಿದೆ. ಇಷ್ಟೆಲ್ಲ ಆಗಿರುವಾಗ ಅವರು ಸಚಿವ ಸ್ಥಾನದಿಂದ ಇನ್ನಾದರೂ ಕೆಳಗಿಳಿಯಲೇಬೇಕು. ಇದೇ ಸಂದರ್ಭದಲ್ಲಿ ಬಿಜೆಪಿಯು ಅವರನ್ನು ತನ್ನ ಪಕ್ಷದಲ್ಲಿ ಉಳಿಸಿಕೊಳ್ಳುತ್ತದೆಯೇ ಎನ್ನುವುದು ಇನ್ನೊಂದು ಪ್ರಶ್ನೆ. ವಿಜಯ್ ಶಾ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳದ ಬಿಜೆಪಿಯ ಕೇಂದ್ರ ವರಿಷ್ಠರ ಮೇಲೂ ಸುಪ್ರೀಂಕೋರ್ಟ್ ಪರೋಕ್ಷವಾಗಿ ಚಾಟಿಯನ್ನು ಬೀಸಿದೆ. ದೇಶದ ಯೋಧರನ್ನು ಭಯೋತ್ಪಾದಕರ ಸಂಬಂಧಿಕರೆಂದು ಕರೆದ ವ್ಯಕ್ತಿಯ ಬಗ್ಗೆ ಪ್ರಧಾನಿ ಮೋದಿ ಈವರೆಗೆ ತುಟಿ ಬಿಚ್ಚಿಲ್ಲ. ವಿಜಯ್ ಶಾ ಅವರ ಹೇಳಿಕೆಯನ್ನು ಈಗಾಗಲೇ ಮಹಿಳಾ ಆಯೋಗ ಕೂಡ ಖಂಡಿಸಿದೆ. ಇದು ಸೇನೆಗೆ ಮಾತ್ರವಲ್ಲ, ದೇಶದ ಸಕಲ ಮಹಿಳೆಯರಿಗೂ ಮಾಡಿದ ಅವಮಾನ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಮೂರೂ ಬಿಟ್ಟವರು ಊರಿಗೆ ದೊಡ್ಡವರು ಎನ್ನುವ ಮಾತಿದೆ. ಸದ್ಯಕ್ಕೆ ಈ ಗಾದೆ ಮಾತು, ಬಿಜೆಪಿಯೊಳಗಿರುವ ನಾಯಕರಿಗೆ ಒಪ್ಪುವಂತಿದೆ. ಹೈಕೋರ್ಟ್, ಸುಪ್ರೀಂಕೋರ್ಟ್ ಜೊತೆಗೆ ಇಡೀ ದೇಶವೇ ಛೀಮಾರಿ ಹಾಕುತ್ತಿದ್ದರೂ ಇನ್ನೂ ತನ್ನ ಸ್ಥಾನಕ್ಕೆ ಅಂಟಿ ಕೂತಿರುವ ಬಿಜೆಪಿಯ ಈ ನಾಯಕ, ಹಾಗೆಯೇ ಇವರನ್ನು ಇನ್ನೂ ರಕ್ಷಿಸಲು ನೋಡುತ್ತಿರುವ ಬಿಜೆಪಿ ಕೇಂದ್ರ ವರಿಷ್ಠರು ಆಪರೇಷನ್ ಸಿಂಧೂರದ ಜೊತೆಗೆ ನಿಂತ ದೇಶದ ಜನತೆಯನ್ನ್ನೂ ಅವಮಾನಿಸಿದ್ದಾರೆ. ಒಂದೆಡೆ ಮಹಿಳೆಯ ಸಿಂಧೂರದ ಬಗ್ಗೆ ಭಾಷಣ ಮಾಡುವ ನಾಯಕರು, ಇನ್ನೊಂದೆಡೆ ಮಹಿಳೆಯನ್ನು ಅವಮಾನಿಸಿದ ಸಚಿವನನ್ನು ರಕ್ಷಿಸಲು ನೋಡುತ್ತಿರುವುದು ವಿಪರ್ಯಾಸವಾಗಿದೆ. ಗಡಿಯಾಚೆಗಿನ ಭಯೋತ್ಪಾದಕರನ್ನು ಪರಿಣಾಮಕಾರಿಯಾಗಿ ಎದುರಿಸುವುದಕ್ಕೆ ರಾಜಕೀಯ ನಾಯಕರ ಈ ದ್ವಂದ್ವ ನೀತಿಯೇ ಬಹುದೊಡ್ಡ ಅಡ್ಡಿಯಾಗಿದೆ.