ಹಂಪಿ ಉತ್ಸವ ವಿಜೃಂಭಣೆಯ ವಿನೂತನವಾಗಿ ಆಚರಿಸಲು ಸಿದ್ಧತೆ ಕೈಗೊಳ್ಳಿ: ಅಧಿಕಾರಿಗಳಿಗೆ ಸಚಿವ ಝಮೀರ್ ಸೂಚನೆ

ವಿಜಯನಗರ (ಹೊಸಪೇಟೆ) ಜ.15: ವಿಶ್ವ ಪ್ರಸಿದ್ಧಿ ವಿಶ್ವಪಾರಂಪರಿಕ ತಾಣವಾದ ಹಂಪಿ ಉತ್ಸವವು ನಾಡ ಹಬ್ಬವಿದ್ದಂತೆ, ಎಲ್ಲರೂ ಸೇರಿ ವಿಜೃಂಭಣೆಯಿಂದ ಹಾಗೂ ವಿನೂತನವಾಗಿ ಆಚರಿಸಲು ಎಲ್ಲಾ ಸಿದ್ದತೆ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝೆಡ್. ಝಮೀರ್ ಅಹ್ಮದ್ ಖಾನ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಗುರುವಾರ ಹಂಪಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಹಂಪಿ ಉತ್ಸವವು ಮುಂಬರುವ ಫೆಬ್ರವರಿ 13, 14 ಹಾಗೂ 15 ರಂದು ಹಮ್ಮಿಕೊಳ್ಳಲಾಗಿದೆ. ಫೆಬ್ರವರಿ 13ರಂದು ಹಂಪಿ ಉತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುಕ್ತವಾಗಿ ಚಾಲನೆ ನೀಡುವರು. ಆದ್ದರಿಂದ ಅಧಿಕಾರಿಗಳು ಕಳೆದ ಬಾರಿಗಿಂತಲೂ ಈ ವರ್ಷ ಅಚ್ಚುಕಟ್ಟಾಗಿ ಆಯೋಜನೆ ಮಾಡುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ಕಳೆದ ಬಾರಿ ಉಂಟಾದ ಲೋಪದೋಷ, ಇನ್ನಿತರೆ ಸಮಸ್ಯೆಗಳು ಮರುಕಳಿಸದಂತೆ ಅಗತ್ಯ ಕ್ರಮ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಶಿಷ್ಟಾಚಾರದಂತೆ ವೇದಿಕೆ ಕಾರ್ಯಕ್ರಮ ಸಿದ್ಧತೆ ಮಾಡಿಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ವೈದ್ಯಕೀಯ ತಪಸಣೆ ಶಿಬಿರ ಆಯೋಜನೆ ಮಾಡುವಂತೆ ನಿರ್ದೇಶಿಸಿದರು.
ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕು ಎಂದು ಸೂಚಿಸಿದ ಸಚಿವರು, ಜಿಲ್ಲೆಯ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಿಂದ ಬರುವಂತಹ ಸಾರ್ವಜನಿಕರಿಗೆ ಕೆಎಸ್ಸಾರ್ಟಿಸಿ ವತಿಯಿಂದ ಸಾರಿಗೆ ವ್ಯವಸ್ಥೆ, ಅಗತ್ಯ ಮೂಲಭೂತ ಸೌಕರ್ಯ ಒದಗಿಸಲಾಗುವುದು ಎಂದರು.
ಉತ್ಸವದ ಅಂಗವಾಗಿ ಕಲೆ, ಚಿತ್ರಕಲೆ, ವಾಸ್ತುಶಿಲ್ಪ, ಫಲಪುಷ್ಪ ಪ್ರದರ್ಶನ, ಸಾಹಸ ಕ್ರೀಡೆ, ಸುಗಮ ಸಂಗೀತ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುವುದು. ಸ್ಥಳೀಯ ಕಲಾವಿದರಿಂದ ವಿಜಯನಗರ ಸಾಮ್ರಾಜ್ಯದ ಆಡಳಿತ ಗತವೈಭವ ಕುರಿತ ಧ್ವನಿ ಬೆಳಕು ಪ್ರದರ್ಶನ ಮಾಡಲಾಗುತ್ತದೆ. ಅದರಂತೆ ಖ್ಯಾತ ಕಲಾವಿದರು ಹಂಪಿ ಉತ್ಸವದಲ್ಲಿ ಭಾಗವಹಿಸಿ ನಾಡಹಬ್ಬ ಹಂಪಿ ಉತ್ಸವಕ್ಕೆ ಮತ್ತಷ್ಟು ಮೆರಗು ತುಂಬಲಿದ್ದಾರೆ ಎಂದು ತಿಳಿಸಿದರು.
ಡ್ರೋನ್ ಶೋ, ಗಾಳಿಪಟ ಉತ್ಸವ:
ಈ ಬಾರಿ ಉತ್ಸವದಲ್ಲಿ ವಿಶೇಷವಾಗಿ ಮುಂಬೈ ತಾಂತ್ರಿಕ ಕಲಾಬಳಗದಿಂದ ಮೂರು ಸಾವಿರ ಡ್ರೋನ್ ಬಳಸಿ ಡ್ರೋನ್ ಶೋ ಏರ್ಪಡಿಸಲಾಗಿದೆ. ಅದರಂತೆ ಗಾಳಿಪಟ ಉತ್ಸವ ಕೂಡ ಆಯೋಜಿಸಲಾಗಿದೆ. ಇವು ಈ ವರ್ಷದಲ್ಲಿನ ಹಂಪಿ ಉತ್ಸವದಲ್ಲಿ ಹೆಚ್ಚು ಆಕರ್ಷಣೀಯವಾಗಿದ್ದು, ಮತ್ತಷ್ಟು ರಂಗು ಹೆಚ್ಚಿಲಿವೆ ಎಂದರು.
ಇದೇ ಸಂದರ್ಭದಲ್ಲಿ ಹಂಪಿ ಉತ್ಸವದ ಲೋಗೋವನ್ನು ಸಚಿವರು ಬಿಡುಗಡೆಗೊಳಿಸಿದರು.
ಸಭೆಯಲ್ಲಿ ಹುಡಾ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಝಿ, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯತ್ ಸಿಇಒ ನೋಂಗ್ಜಾಯ್ ಅಹ್ಮದ್ ಅಲಿ ಅಕ್ರಂ ಷಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.







