ಹರಪನಹಳ್ಳಿ ಪಿಎಲ್‌ಡಿ ಬ್ಯಾಂಕ್‌ನ 71ನೇ ವಾರ್ಷಿಕ ಸರ್ವಸದಸ್ಯರ ಸಭೆ
2.42 ಕೋಟಿ ರೂ. ಸಮತೋಲಿತ ಬಜೆಟ್ ಮಂಡನೆ; ಸಾಲ ವಸೂಲಾತಿಗೆ ಆದ್ಯತೆ

ಹರಪನಹಳ್ಳಿ: ಪಟ್ಟಣದ ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ ಬ್ಯಾಂಕ್)ನ 2025-26ನೇ ಸಾಲಿನ 71ನೇ ವಾರ್ಷಿಕ ಸರ್ವಸದಸ್ಯರ ಸಭೆ ಬ್ಯಾಂಕ್ ಆವರಣದಲ್ಲಿ ಅಧ್ಯಕ್ಷ ಕಮ್ಮಾರ ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ 2025-26ನೇ ಸಾಲಿನ ವಾರ್ಷಿಕ ಲೆಕ್ಕಪತ್ರ, ಬ್ಯಾಂಕಿನ ಆರ್ಥಿಕ ಸ್ಥಿತಿಗತಿ, ಸಾಲ ವಿತರಣೆ ಹಾಗೂ ಸಾಲ ವಸೂಲಾತಿ ಕುರಿತು ಚರ್ಚಿಸಲಾಯಿತು. ಇದೇ ವೇಳೆ 2026-27ನೇ ಸಾಲಿಗೆ 2.42 ಕೋಟಿ ರೂ. ಆದಾಯ ಹಾಗೂ 2.42 ಕೋಟಿ ರೂ. ವೆಚ್ಚದ ಸಮತೋಲಿತ ಆಯ-ವ್ಯಯ ಬಜೆಟ್ ಮಂಡಿಸಿ ಅನುಮೋದಿಸಲಾಯಿತು.
ವಿವಿಧ ಸಾಲಗಳ ಮೇಲಿನ ಬಡ್ಡಿ, ಹೂಡಿಕೆಗಳ ಮೇಲಿನ ಬಡ್ಡಿ, ಸೇವಾ ಶುಲ್ಕ ಹಾಗೂ ಕಮಿಷನ್‌ಗಳಿಂದ ಆದಾಯ ನಿರೀಕ್ಷಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಬ್ಯಾಂಕಿನ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಸದೃಢಗೊಳಿಸಲು ಬಾಕಿ ಸಾಲಗಳ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಸದಸ್ಯರು ಪಡೆದಿರುವ ಸಾಲವನ್ನು ನಿಗದಿತ ಅವಧಿಯೊಳಗೆ ಮರುಪಾವತಿಸುವ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಲಾಯಿತು.
ರೈತರು ಹಾಗೂ ಗ್ರಾಮೀಣ ಭಾಗದ ಸದಸ್ಯರ ಅನುಕೂಲಕ್ಕಾಗಿ ಕೃಷಿ, ನೀರಾವರಿ, ಪಂಪ್‌ಸೆಟ್, ಕೃಷಿ ಉಪಕರಣಗಳ ಖರೀದಿ ಸೇರಿದಂತೆ ವಿವಿಧ ಗ್ರಾಮೀಣ ಅಭಿವೃದ್ಧಿ ಚಟುವಟಿಕೆಗಳಿಗೆ ಸಾಲ ಸೌಲಭ್ಯ ಮುಂದುವರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ಟಿ. ಶಕುಂತಲಾ, ನಿರ್ದೇಶಕರಾದ ಪಿ.ಎಲ್. ಪೋಮ್ಯನಾಯ್ಕ್, ಪಿ.ಬಿ. ಗೌಡ್ರು, ಬೇಲೂರು ಸಿದ್ದೇಶ್, ರೆಡ್ಡಿ ಶಾಂತಕುಮಾರ್, ಬಿ. ರಾಜಕುಮಾರ, ಲಾಟಿ ದಾದಾಪೀರ್, ಗೊಂಗಡಿ ನಾಗರಾಜ್, ಕೆ. ಭರಮಗೌಡ, ಎಸ್.ಎಂ. ಚಿದಾನಂದಸ್ವಾಮಿ, ಸಾಬಳ್ಳಿ ಜಂಬಣ್ಣ, ಡಿ. ಕಾಶೀನಾಥ್, ಕೆ. ಸೌಭಾಗ್ಯಮ್ಮ, ಹೆಚ್. ಭೀಮಪ್ಪ ಸೇರಿದಂತೆ ಬ್ಯಾಂಕಿನ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು.






