ಹೊಸಪೇಟೆಯಲ್ಲಿ 20 ಕೊಠಡಿಗಳ ಹೈಟೆಕ್ ಪ್ರವಾಸಿ ಮಂದಿರ ಶೀಘ್ರ ನಿರ್ಮಾಣ : ಸಚಿವ ಸತೀಶ್ ಜಾರಕಿಹೊಳಿ
ಲೋಕೋಪಯೋಗಿ ಇಲಾಖೆಯಿಂದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ

ವಿಜಯನಗರ(ಹೊಸಪೇಟೆ) : ಹೊಸಪೇಟೆಯಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ನೂತನವಾಗಿ 20 ಕೊಠಡಿಗಳ ಹೈಟೆಕ್ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಶೀಘ್ರ ಕ್ರಮವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಕುರಿತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಂಗಳವಾರ ಅವರು ಮಾತನಾಡಿದರು.
ಪ್ರತಿ ಎರಡು ತಿಂಗಳಿಗೊಮ್ಮೆ ಪಿಡಬ್ಲೂಡಿ ಅಧಿಕಾರಿಗಳು ಅಯಾ ಶಾಸಕರ ನೇತೃತ್ವದಲ್ಲಿ ಕಾಮಗಾರಿಗಳ ಪ್ರಗತಿ, ಸ್ಥಳೀಯ ಸಮಸ್ಯೆಗಳ ಅವಲೋಕನ, ಅಗತ್ಯವಿರುವ ಕಾಮಗಾರಿಗಳ ಕ್ರಿಯಾಯೋಜನೆ ಕುರಿತು ಕಡ್ಡಾಯವಾಗಿ ಸಭೆ ನಡೆಸಿ ವರದಿ ಸಲ್ಲಿಸಬೇಕು. ಇಲಾಖೆಯ ಯಾವುದೇ ಕಾಮಗಾರಿಗಳು ಕಳಪೆ ಗುಣಮಟ್ಟ, ನಿರ್ಲಕ್ಷ್ಯತನ, ವಿಳಂಬ ಆಗದಂತೆ ಪೂರ್ಣಗೊಳಿಸಿ ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು ಎಂದರು.
ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ್, ಹಗರಿಬೊಮ್ಮನಹಳ್ಳಿ ಶಾಸಕ ಕೆ.ನೇಮಿರಾಜ ನಾಯ್ಕ ಮಾತನಾಡಿದರು.
ಈ ವೇಳೆ ಹರಪನಹಳ್ಳಿ ಶಾಸಕರಾದ ಲತಾ ಮಲ್ಲಿಕಾರ್ಜುನ್, ಹಡಗಲಿ ಶಾಸಕರಾದ ಕೃಷ್ಣನಾಯ್ಕ್ ಅವರು ರಾಜ್ಯ ಹಾಗೂ ಜಿಲ್ಲಾ ರಸ್ತೆಗಳು ಹಾಳಾಗಿದ್ದರಿಂದ ಹೆಚ್ಚಿನ ಅನುದಾನ ನೀಡಲು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಲೋಕೊಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಶರಣಪ್ಪ ಸೂಲಗುಂಟಿ, ಅಧೀಕ್ಷಕ ಇಂಜಿನಿಯರ್ ಅಮೀನ್ ಮುಕ್ತಾರ್, ಕಾರ್ಯನಿರ್ವಾಹಕ ಇಂಜಿನಿಯರ್ ದೇವದಾಸ್ ಹಾಗೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳು ಉಪಸ್ಥಿತರಿದ್ದರು.







