ಹಂಪಿಯ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಮಹಾಯೋಜನೆ ರೂಪಿಸಲಾಗಿದೆ : ಸಚಿವ ಕೆ.ಜೆ.ಜಾರ್ಜ್

ವಿಜಯನಗರ (ಹೊಸಪೇಟೆ) : ವಿಶ್ವವಿಖ್ಯಾತ ಹಂಪಿಯನ್ನು ಜಾಗತಿಕ ಮಟ್ಟದ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಸುಮಾರು 3 ಸಾವಿರ ಕೋಟಿ ರೂ. ಹೂಡಿಕೆಯ ಮಹತ್ವಾಕಾಂಕ್ಷಿ ಯೋಜನೆ ರೂಪಿಸಲಾಗಿದ್ದು, ನಗರಾಭಿವೃದ್ಧಿ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ (ಎಎಸ್‌ಐ) ಹಾಗೂ ರಾಜ್ಯ ಪುರಾತತ್ವ ಇಲಾಖೆ ಜಂಟಿಯಾಗಿ ಕಾರ್ಯನಿರ್ವಹಿಸಲಿವೆ ಎಂದು ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.
ಹೊಸ ಮಲಪನಗುಡಿಯ ಹಂಪಿ ಹೆರಿಟೇಜ್ ರೆಸಾರ್ಟ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಲೋಬಲ್ ಡೆಸ್ಟಿನೇಷನ್ ಡೆವಲಪ್‌ಮೆಂಟ್ ಯೋಜನೆಯ ಮೊದಲ ಹಂತದಲ್ಲಿ ಹಂಪಿಗೆ ಆದ್ಯತೆ ನೀಡಲಾಗಿದ್ದು, ಕಳೆದ ಎರಡು-ಮೂರು ವರ್ಷಗಳಿಂದ ಸಿದ್ಧಪಡಿಸಿರುವ ಮಾಸ್ಟರ್ ಪ್ಲಾನ್ ಹಾಗೂ ಜಿಐಎಸ್ ಆಧಾರಿತ ಮ್ಯಾಪಿಂಗ್ ಈಗಾಗಲೇ ಪೂರ್ಣಗೊಂಡಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ 1,400–1,500 ಕೋಟಿ ರೂ. ಅನುದಾನ ದೊರೆಯಲಿದ್ದು, ರಾಜ್ಯ ಸರ್ಕಾರ ಹಾಗೂ ಖಾಸಗಿ ಹೂಡಿಕೆದಾರರ ಸಹಭಾಗಿತ್ವದೊಂದಿಗೆ ಒಟ್ಟು ಹೂಡಿಕೆಯನ್ನು 2,500ರಿಂದ 3,000 ಕೋಟಿ ರೂ. ವರೆಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ. ಇದರಿಂದ ಜಾಗತಿಕ ಮಟ್ಟದ ಪ್ರವಾಸಿ ಸೌಲಭ್ಯಗಳು ನಿರ್ಮಾಣವಾಗುವುದರ ಜೊತೆಗೆ ಸ್ಥಳೀಯ ಮಟ್ಟದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದರು.
ಪ್ರವಾಸಿಗರ ಅನುಕೂಲಕ್ಕಾಗಿ ಹಂಪಿಯಲ್ಲಿ 20 ಪ್ರಮುಖ ಪ್ರವಾಸಿ ಮಾರ್ಗಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ ಐದು ಮಾರ್ಗಗಳನ್ನು ಅಭಿವೃದ್ಧಿಪಡಿಸಲಾಗಿದೆ. ಪರಿಸರ ಸ್ನೇಹಿ ಇ-ವಾಹನ ಸೇವೆಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು. ಅಲ್ಲದೆ ಮುಂಜಾನೆ 4 ಗಂಟೆಯಿಂದ ವಿಶೇಷ ಬಸ್ ಸೇವೆ ಆರಂಭಿಸುವ ಕುರಿತು ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಲಾಗುತ್ತಿದೆ ಎಂದು ಹೇಳಿದರು.
ಹಂಪಿಯ ಪಾರಂಪರಿಕ ಸ್ವರೂಪಕ್ಕೆ ಧಕ್ಕೆಯಾಗದಂತೆ ಎಎಸ್‌ಐ ನಿಯಮಗಳನ್ನು ಪಾಲಿಸಿ ಅಗತ್ಯ ಮೂಲಸೌಕರ್ಯ ಕಲ್ಪಿಸಲಾಗುವುದು. ನದಿಯ ಸ್ನಾನಘಟ್ಟ, ಕಲ್ಯಾಣಿ ಹಾಗೂ ಐತಿಹಾಸಿಕ ಸ್ಮಾರಕಗಳ ಪುನಶ್ಚೇತನ ಕಾಮಗಾರಿಗಳಿಗೆ ವೇಗ ನೀಡಲಾಗುವುದು ಎಂದು ತಿಳಿಸಿದರು.
ಮೈಸೂರು ದಸರೆಯ ಮಾದರಿಯಲ್ಲಿ ಹಂಪಿ ಉತ್ಸವವನ್ನು ವ್ಯವಸ್ಥಿತವಾಗಿ ಆಯೋಜಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ದಿನಾಂಕ ನಿಗದಿಪಡಿಸಲಾಗುವುದು. ಕೋವಿಡ್ ಬಳಿಕ ಚೇತರಿಸಿಕೊಳ್ಳುತ್ತಿರುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದರು.






